ಪ್ರಜ್ವಲ್ ಸ್ಪರ್ಧಿಸಿದರೆ ಬೆಂಬಲ ನೀಡೊಲ್ಲ: ಎ ಮಂಜು
Recommended Video

ಬೆಂಗಳೂರು, ಜನವರಿ 30: ಹಾಸನ ಲೋಕಸಭೆ ಕ್ಷೇತ್ರದಿಂದ ಪ್ರಜ್ವಲ್ ರೇವಣ್ಣ ಅವರನ್ನು ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದರೆ ನಾವು ಯಾರೂ ಅವರ ಪರ ಪ್ರಚಾರಕ್ಕೆ ಹೋಗುವುದಿಲ್ಲ ಎಂದು ಮಾಜಿ ಸಚಿವ ಎ.ಮಂಜು ಹೇಳಿದ್ದಾರೆ.
ಪ್ರಜ್ವಲ್ ರೇವಣ್ಣ ಅವರು ಲೋಕಸಭೆ ಚುನಾವಣೆಯಲ್ಲಿ ಹಾಸನದಿಂದ ತಾವೇ ಅಭ್ಯರ್ಥಿ ಎಂದು ಕ್ಷೇತ್ರದಿಂದ ಪ್ರಚಾರ ನಡೆಸುತ್ತಿದ್ದಾರೆ. ಇದು ಸರಿಯಲ್ಲ. ಪ್ರಜ್ವಲ್ ಅವರನ್ನು ಕಾಂಗ್ರೆಸ್-ಜೆಡಿಎಸ್ ಮೈತ್ರಿಯ ಅಭ್ಯರ್ಥಿಯನ್ನಾಗಿ ಸ್ಪರ್ಧೆಗೆ ಇಳಿಸಿದರೆ ಅವರ ಪರವಾಗಿ ನಾವು ಕೆಲಸ ಮಾಡುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
ನಮ್ಮ ಕ್ಷೇತ್ರದಲ್ಲಿ ದೇವೇಗೌಡರು ಸ್ಪರ್ಧಿಸಿದರೆ ಯಾವುದೇ ತಕರಾರು ಇಲ್ಲ. ಅಲ್ಲದೆ, ಸೀಟು ಹೊಂದಾಣಿಕೆ ಬಗ್ಗೆ ಇನ್ನೂ ಅಂತಿಮ ತೀರ್ಮಾನವೇ ಆಗಿಲ್ಲ. ಈ ಬಗ್ಗೆ ಇನ್ನೂ ತೀರ್ಮಾನವೇ ಆಗದೆ ಇರುವಾಗ ಪ್ರಜ್ವಲ್ ಹೇಗೆ ತಾವೇ ಅಭ್ಯರ್ಥಿ ಎಂದು ಪ್ರಚಾರ ಮಾಡುತ್ತಾರೆ ಎಂದು ಮಂಜು ಪ್ರಶ್ನಿಸಿದ್ದಾರೆ.
ಜೆಡಿಎಸ್ ಪ್ರಧಾನ ಕಾರ್ಯದರ್ಶಿಯಾಗಿರುವ ಪ್ರಜ್ವಲ್ ರೇವಣ್ಣ, ಹಾಸನ ಕ್ಷೇತ್ರದೆಲ್ಲೆಡೆ ಸಭೆಗಳನ್ನು ನಡೆಸುತ್ತಿದ್ದಾರೆ.

ಬ್ಲಾಕ್ ಮೇಲ್ ಮಾಡುವುದು ಸರಿಯಲ್ಲ
ಕುಮಾರಸ್ವಾಮಿ ಅವರು ರಾಜೀನಾಮೆ ಕೊಡುತ್ತೇನೆ ಎಂದು ಹೇಳಿಕೆ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿದ ಮಂಜು, ಮುಖ್ಯಮಂತ್ರಿ ಸ್ಥಾನದಲ್ಲಿ ಇರುವವರು ಹೀಗೆ ಹೇಳಿಕೆ ನೀಡಬಾರದು. ಮಿತ್ರಪಕ್ಷವನ್ನು ಬ್ಲಾಕ್ ಮೇಲ್ ಮಾಡಲು ರಾಜೀನಾಮೆ ನೀಡುತ್ತೇನೆ ಎಂದು ಹೇಳಿಕೆ ನೀಡುವುದು ಸರಿಯಲ್ಲ. ರಾಜೀನಾಮೆ ನೀಡಿ ಎಂದು ನಮ್ಮ ಪಕ್ಷದ ನಾಯಕರು ಅಥವಾ ಶಾಸಕರೇನಾದರೂ ಕೇಳಿದ್ದಾರಾ? ಎಂದು ಖಾರವಾಗಿ ಪ್ರಶ್ನಿಸಿದರು.

ಸಿದ್ದರಾಮಯ್ಯ ನಮ್ಮ ಸಿಎಂ ಎಂದರೆ ತಪ್ಪೇನು?
ಕಾಂಗ್ರೆಸ್ಸಿಗರು ಸಿದ್ದರಾಮಯ್ಯ ಅವರು ನಮ್ಮ ನಾಯಕ ಎಂದು ಹೇಳಿಕೊಳ್ಳದೆ ದೇವೇಗೌಡ, ಕುಮಾರಸ್ವಾಮಿ ಅಥವಾ ರೇವಣ್ಣ ನಮ್ಮ ನಾಯಕ ಎಂದು ಹೇಳಿಕೊಳ್ಳಲು ಆಗುತ್ತದೆಯೇ. ಸಿದ್ದರಾಮಯ್ಯ ಅವರೇ ನಮಗೆ ಮುಖ್ಯಮಂತ್ರಿ ಎಂದು ಹೇಳಿಕೊಳ್ಳುವುದರಲ್ಲಿ ತಪ್ಪೇನಿದೆ ಎಂದು ಕೇಳಿದರು.

ಮೊದಲು ಅವರು ಕಂಟ್ರೋಲ್ ಇರಿಸಿಕೊಳ್ಳಲಿ
ಮುಖ್ಯಮಂತ್ರಿ ಕುಮಾರಸ್ವಾಮಿ ಅವರು, ನಿಮ್ಮ ಶಾಸಕರನ್ನು ಹಿಡಿತದಲ್ಲಿ ಇರಿಸಿಕೊಳ್ಳಿ ಎಂದು ನಮಗೆ ಏಕೆ ಹೇಳಬೇಕು? ಅವರು ಮೊದಲು ಸಿ.ಎಸ್. ಪುಟ್ಟರಾಜು ಅವರನ್ನು ಹಿಡಿತದಲ್ಲಿ ಇರಿಸಿಕೊಳ್ಳಲಿ. ಬಳಿಕ ಬೇಕಾದರೆ ನಮ್ಮ ಶಾಸಕರನ್ನು ಕಂಟ್ರೋಲ್‌ನಲ್ಲಿ ಇರಿಸಿಕೊಳ್ಳುವುದರ ಬಗ್ಗೆ ಮಾತನಾಡಲಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಭೂಕಬಳಿಕೆ ಆರೋಪ
ದೇವೇಗೌಡರ ಕುಟುಂಬದ ವಿರುದ್ಧ ನಿರಂತರ ವಾಗ್ದಾಳಿ ನಡೆಸುತ್ತಿರುವ ಮಾಜಿ ಸಚಿವ ಎ. ಮಂಜು, ಪ್ರಜ್ವಲ್ ರೇವಣ್ಣ ಭೂಕಬಳಿಕೆ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಹಾಸನ ತಾಲ್ಲೂಕಿನ ದುದ್ದ ಹೋಬಳಿಯ ಸೋಮಹಳ್ಳಿ ಕಾವಲಿನಲ್ಲಿರುವ 54.29 ಎಕರೆ ಸರ್ಕಾರಿ ಜಾಗವನ್ನು ಪ್ರಜ್ವಲ್ ರೇವಣ್ಣ ಮತ್ತು ಕುಟುಂದವರು ನಕಲಿ ದಾಖಲೆ ಸೃಷ್ಟಿಸಿ ಕಬಳಿಕೆ ಮಾಡಿದ್ದಾರೆ ಎಂದು ಆರೋಪ ಮಾಡಿದ್ದರು.












Click it and Unblock the Notifications