ಉಳಿದ ಮೂರು ಲೋಕಸಭೆ ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳ ಹೆಸರು ಪ್ರಕಟ
ಬೆಂಗಳೂರು, ಮಾರ್ಚ್ 29: ಬಾಕಿ ಉಳಿದಿದ್ದ ಮೂರು ಲೋಕಸಭೆ ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳನ್ನು ಪ್ರಕಟಿಸಿದೆ. ಇದರಿಂದ ಎಲ್ಲ 28 ಕ್ಷೇತ್ರಗಳಿಗೂ ಅಭ್ಯರ್ಥಿಗಳ ಹೆಸರು ಅಂತಿಮಗೊಂಡಂತಾಗಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ನಿರೀಕ್ಷೆಯಂತೆಯೇ ಕೊಪ್ಪಳ ಲೋಕಸಭೆ ಕ್ಷೇತ್ರದಲ್ಲಿ ಸಂಗಣ್ಣ ಕರಡಿ ಅವರು ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾರೆ. ಸಂಸದ ಸಂಗಣ್ಣ ಕರಡಿ ಅವರಿಗೇ ಟಿಕೆಟ್ ನಿಶ್ಚಯ ಎಂದು ಹೇಳಲಾಗಿದ್ದರೂ, ಅವರ ಹೆಸರನ್ನು ಕೊನೆಯವರೆಗೂ ಘೋಷಣೆ ಮಾಡದೆ ಇರುವುದು ಅಭ್ಯರ್ಥಿಯ ಬದಲಾವಣೆಯ ಸಾಧ್ಯತೆಗಳ ಅನುಮಾನ ಮೂಡಿಸಿತ್ತು. ಶಾಸಕ ಎಸ್. ಶ್ರೀರಾಮುಲು ಇಲ್ಲಿಂದ ಸ್ಪರ್ಧಿಸಲಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು.
ಚಿಕ್ಕೋಡಿ ಕ್ಷೇತ್ರದಲ್ಲಿ ಟಿಕೆಟ್ ಆಕಾಂಕ್ಷಿಯಾಗಿದ್ದ ಉಮೇಶ್ ಕತ್ತಿ ಅವರ ಸಹೋದರ ರಮೇಶ್ ಕತ್ತಿ ಅವರಿಗೆ ನಿರಾಶೆಯಾಗಿದೆ. ಚಿಕ್ಕೋಡಿಯಲ್ಲಿ ಮತ್ತೊಬ್ಬ ಪ್ರಬಲ ಆಕಾಂಕ್ಷಿ ಅಣ್ಣಾ ಸಾಹೇಬ್ ಜೊಲ್ಲೆ ಅವರಿಗೆ ಬಿಜೆಪಿ ಮಣೆ ಹಾಕಿದೆ.ರಾಜ್ಯಸಭೆ ಸದಸ್ಯ ಪ್ರಭಾಕರ ಕೋರೆ ಅವರ ಹೆಸರೂ ಈ ಕ್ಷೇತ್ರದಿಂದ ಕೇಳಿಬಂದಿತ್ತು.

ರಾಯಚೂರಿನಲ್ಲಿ ಮಾಜಿ ಸಚಿವ ರಾಜ ಅಮರೇಶ್ ನಾಯಕ್ ಅವರನ್ನು ಆಯ್ಕೆ ಮಾಡಲಾಗಿದೆ. ಇಲ್ಲಿ ಶಾಸಕ ಶಿವನಗೌಡ ನಾಯಕ್ ಅವರು ತಮ್ಮ ತಾಯಿಗೆ ಟಿಕೆಟ್ ನೀಡಬೇಕೆಂದು ವರಿಷ್ಠರ ಮುಂದೆ ಬೇಡಿಕೆ ಇರಿಸಿದ್ದರು ಎನ್ನಲಾಗಿದೆ. ಇಲ್ಲಿ ಅನಂತರಾಜ್ ನಾಯಕ್ ಮತ್ತು ಮಾಜಿ ಶಾಸಕ ತಿಪ್ಪರಾಜು ನಡುವೆ ಪೈಪೋಟಿ ಇತ್ತು.












Click it and Unblock the Notifications