Lok sabha election; ಮತದಾನದ ದಿನ ಪೊಲೀಸರ ಕರ್ತವ್ಯಗಳೇನು?
ಬೆಂಗಳೂರು, ಏಪ್ರಿಲ್ 22: ಕರ್ನಾಟಕದಲ್ಲಿ ಲೋಕಸಭೆ ಚುನಾವಣೆ 2024ರ ಮತದಾನಕ್ಕೆ ಅಂತಿಮ ಹಂತದ ಸಿದ್ಧತೆಗಳು ನಡೆಯುತ್ತಿವೆ. ಏಪ್ರಿಲ್ 26 ಮತ್ತು ಮೇ 7ರಂದು ಎರಡು ಹಂತದಲ್ಲಿ ಮತದಾನ ನಡೆಯಲಿದೆ. ಪೊಲೀಸರು ಈಗಾಗಲೇ ಚುನಾವಣಾ ಕಾರ್ಯಕ್ಕೆ ನಿಯೋಜನೆಗೊಂಡಿದ್ದಾರೆ.
ಕರ್ನಾಟಕದ ಪೊಲೀಸ್ ಇಲಾಖೆ ಲೋಕಸಭಾ ಚುನಾವಣೆ-2024ರ ಚುನಾವಣಾ ಕರ್ತವ್ಯ ನಿರತ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳ ಕರ್ತವ್ಯದ ಮಾರ್ಗಸೂಚಿಯ ಬಗ್ಗೆ ಕೈಪಿಡಿ ಮೂಲಕ ಮಾಹಿತಿ ನೀಡಿದೆ. ನೀತಿ ಸಂಹಿತೆ ಜಾರಿಯಲ್ಲಿರುವ ತನಕ ಪೊಲೀಸರು ಚುನಾವಣಾ ಆಯೋಗದ ಸೂಚನೆಯಂತೆ ಕಾರ್ಯ ನಿರ್ವಹಣೆ ಮಾಡಲಿದ್ದಾರೆ.

ಚುನಾವಣಾ ಕರ್ತವ್ಯ ನಿರ್ವಹಿಸುವ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಕಿರು ಕೈಪಿಡಿಯನ್ನು ವಿತರಿಸಿ ಸೂಕ್ತ ತಿಳುವಳಿಕೆಯನ್ನು ನೀಡಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ. ಮತದಾನದ ದಿನ ಪೊಲೀಸರ ಕರ್ತವ್ಯ, ಜವಾಬ್ದಾರಿಗಳು ಏನು? ಎಂದು ವಿವರ ನೀಡಲಾಗಿದೆ.
ಮತದಾನದ ದಿನ ಪೊಲೀಸರ ಕರ್ತವ್ಯಗಳು
* ಪಿಸೈಡಿಂಗ್ ಆಫೀಸರ್ (ಓಟು ಹಾಕುವ ಜಾಗದ ಮುಖ್ಯಾಧಿಕಾರಿ) ಮತಗಟ್ಟೆ ಒಳಗೆ
ಕರೆದಾಗ ಮಾತ್ರ ಹೋಗಬೇಕು.
* ಪ್ರಿಸೈಡಿಂಗ್ ಆಫೀಸರ್ ಮತಗಟ್ಟೆ ಒಳಗೆ ಕರೆದರೆ ಮಾತ್ರ ಓಟು ಹಾಕಲು ಬಂದ ಜನರನ್ನು ಸರಿಯಾದ ಸ್ಥಳದಲ್ಲಿಯೇ ಸಾಲಾಗಿ, ಶಾಂತ ರೀತಿಯಿಂದ ನಿಲ್ಲುವಂತೆ ತಿಳಿಸಿ
ಒಳಗೆ ಹೋಗಬೇಕು.
* ಓಟು ಹಾಕುವ ಜಾಗದಿಂದ 100 ಮೀಟರ್ ಒಳಗಿನ ಜಾಗದಲ್ಲಿ ಪ್ರಿಸೈಡಿಂಗ್ ಆಫೀಸರ್ ಹಾಕಿದ ಬೋರ್ಡ್‌ಗಳು ಮತ್ತು ಸೂಚನೆಗಳನ್ನು ಬಿಟ್ಟು ಬೇರೆ ಇನ್ಯಾವ ಸೂಚನೆಗಳು ಇರದಂತೆ ನೋಡಿಕೊಳ್ಳಬೇಕು. ಅಲ್ಲದೆ ಓಟು ಹಾಕುವ ಜಾಗದಿಂದ ಸುತ್ತಲೂ 100 ಮೀಟರ್ ಗುರುತು ಮಾಡಿಸಬೇಕು.
* ಓಟು ಹಾಕುವವರನ್ನು ವಾಹನಗಳಲ್ಲಿ ಕರೆತರುವುದನ್ನಾಗಲಿ ಅಥವಾ ಅವರಿಗೆ ಅಭ್ಯರ್ಥಿಗಳು ಹಣ, ಉಡುಗೊರೆ ಕೊಡುವುದನ್ನು ತಡೆಯಿರಿ. ಅಲ್ಲದೆ ಇದರ ಬಗ್ಗೆ ಪೂರ್ಣ ವಿವರಗಳನ್ನು ಮೊಬೈಲ್ ಪಾರ್ಟಿಯ ಮೂಲಕ ಠಾಣೆಗೆ ತಿಳಿಸಿ.
* ಓಟು ಹಾಕುವ ಸ್ಥಳದಲ್ಲಾಗಲಿ ಅಥವಾ ಅದರ ಸುತ್ತಮುತ್ತಲಿನ ಸ್ಥಳದಲ್ಲಾಗಲಿ ಯಾರೂ ಅಸಭ್ಯತನದಿಂದ ವರ್ತಿಸದಂತೆ ನೋಡಿಕೊಳ್ಳಬೇಕು. ಓಟು ಹಾಕಲಿಕ್ಕೆ ಹೋಗುವವರನ್ನು ಸಾಲಾಗಿ ನಿಲ್ಲಿಸಬೇಕು.
* ಪ್ರಿಸೈಡಿಂಗ್ ಆಫೀಸರ್ ಯಾರನ್ನಾದರೂ ಬಂಧಿಸಬೇಕೆಂಬ ಆದೇಶ ನೀಡಿದರೆ ಅವರನ್ನು ದಸ್ತಗಿರಿ ಮಾಡಬೇಕು.
* ಓಟು ಹಾಕುವ ಜಾಗದಲ್ಲಿ ನಡೆದ ಪ್ರತಿಯೊಂದು ವಿಷಯವನ್ನೂ ಅಲ್ಲಿಗೆ ಬರುವ ಮೊಬೈಲ್ ಪಾರ್ಟಿಗೂ ಮತ್ತು ಇತರ ಉನ್ನತ ಅಧಿಕಾರಿಗಳಿಗೂ ತಿಳಿಸಬೇಕು.
* ಗಲಾಟೆಯಾಗುವ ಸೂಚನೆಗಳು ಕಂಡು ಬಂದರೆ ತಕ್ಷಣವೇ ಪೊಲೀಸ್ ಠಾಣೆಗೆ ಅಥವಾ ಮೊಬೈಲ್ ಪಾರ್ಟಿ ಅಧಿಕಾರಿಗೆ ವರ್ತಮಾನ ಮುಟ್ಟಿಸಬೇಕು.
* ಮತದಾರರು ಯಾವುದೇ ತರಹದ ವಾಹನಗಳನ್ನು ಮತಗಟ್ಟೆಗಳವರೆಗೆ ತರದಂತೆ ನೋಡಿಕೊಳ್ಳಬೇಕು. ಆದರೆ ಚುನಾವಣೆ ಪರವಾನಗಿ ಇರುವ ವಾಹನ, ಅವಶ್ಯ ಸೇವೆಯಲ್ಲಿರುವ ವಾಹನ, ಪೊಲೀಸ್, ದುರ್ಬಲ ಹಾಗೂ ನಿಶ್ಯಕ್ತರಾದವರನ್ನು ಕರೆದೊಯ್ಯುವ ವಾಹನಗಳನ್ನು ಮತಗಟ್ಟೆಗಳವರೆಗೆ ಬಿಡಬಹುದು.
* ಓಟು ಹಾಕುವುದು ನಿಂತ ಮೇಲೆ ಓಟಿನ ಪೆಟ್ಟಿಗೆಗಳನ್ನು ಪ್ರಿಸೈಡಿಂಗ್ ಆಫೀಸರ್ ಅವರ ಕೇಂದ್ರ ಕಛೇರಿಯಲ್ಲಿ ಇಡುವವರೆಗೆ, ಅವರ ಜೊತೆಯಲ್ಲಿಯೇ ಇರಬೇಕು. ಓಟಿನ ಮತ ಪಟ್ಟಿಗೆಗಳ ರಕ್ಷಣೆಯೇ ನಿಮ್ಮ ಆದ್ಯ ಕರ್ತವ್ಯ ಎಂಬುದನ್ನು ಮರೆಯಬಾರದು.












Click it and Unblock the Notifications