ಮಹಿಮಾ ಪಟೇಲರದ್ದು ವೇದಾಂತಿಯ ಲೆಕ್ಕಾಚಾರ
ಬಿಜಿಪಿಯ ಸಿದ್ಧೇಶರಿಗೆ ಹತ್ತು ತಿಂಗಳ ವಿಧಾನಸಭೆಯ ಫಲಿತಾಂಶದ ಗೊಡವೆಯೇ ಬೇಡ. ಬೆಳ್ಳಂಬೆಳಿಗ್ಗೆ ಎದ್ದು ಕ್ಷೇತ್ರದ ಪ್ರತಿ ಹಳ್ಳಿ ಹಳ್ಳಿಗೂ ನುಗ್ಗಿ ಪ್ರಚಾರ ಮಾಡುವುದಲ್ಲದೇ, ಮೋದಿಯ ಜಪವೇ ಸಾಕು ಮುಕ್ತಿಗೆ ಅನ್ನುವಂತೆ ಹೆಂಡತಿ, ತಮ್ಮಂದಿರನ್ನ ಕರೆದುಕೊಂಡು ಊರೂರು ತಿರುಗಿ ಪ್ರಚಾರಕ್ಕೆ ನಿಂತಿದ್ದಾರೆ. ದಾವಣಗೆರೆಯ ಉಸ್ತುವಾರಿಗೆ, ವಿಧಾನ ಪರಿಷತ್ತಿನ ಸಚೇತಕ ಡಾ. ಶಿವಯೋಗಿಸ್ವಾಮಿ, ಯಶವಂತರಾವ್ ಜಾಧವರನ್ನು ಮುಂದೆ ಬಿಟ್ಟಿರುವ ಸಿದ್ದೇಶ್ ಗೆ ದಾವಣಗೆರೆಯಲ್ಲಿ ಕೊಂಡಜ್ಜಿ ಜಯಪ್ರಕಾಶ ನೇತೃತ್ವದ ಯುವಪಡೆಯದ್ದೇ ನೆಚ್ಚಿಕೆ.
ಕಾಲಿಗೆ ಚಕ್ರ ಕಟ್ಟಿಕೊಂಡು ತಿರುಗುತ್ತಿರುವ ಈ ಯುವಪಡೆಗೆ ಮೋದಿಯ ಗುಣಗಾನದ ಭಜನೆಯೇ ದಿನಂಪ್ರತಿ ಕಾರ್ಯ. ರೆಕಾರ್ಡೆಡ್ ಫೋನು, ಎಸ್ಸೆಮ್ಮೆಸ್ಸು ಮೆಸೇಜು, ಈಮೇಲು, ಫೇಸುಬುಕ್ಕುಗಳ ಮುಖಾಂತರವೂ ಸುಶಿಕ್ಷಿತ ಮತದಾರರನ್ನ ಸೆಳೆಯುವ ಯತ್ನ ಬಿಜೆಪಿಯಲ್ಲಿ ಹೆಚ್ಚು. ದಾವಣಗೆರೆ ಮತ್ತು ಸುತ್ತಲಿನ ಲೋಕಸಭಾ ಕ್ಷೇತ್ರಗಳಲ್ಲಿ ಐಟಿ ಸೆಲ್ ಸ್ಥಾಪಿಸಿಕೊಂಡು ಲಕ್ಷಾಂತರ ಜನರಿಗೆ ಮೆಸೇಜು, ರೆಕಾರ್ಡ್ ಮಾಡಿರೋ ಫೋನ್, ಫೇಸ್ಬುಕ್ ಮುಖಾಂತರ ಬಿಜೆಪಿಯ ಚುನಾವಣಾ ಪ್ರಚಾರ ಮಾಡಿಸ್ತಿರೋದು ದಾವಣಗೆರೆಯ ಇಂಜಿನಿಯರ್ ಆರ್. ಟಿ ಅರುಣ್ ಕುಮಾರ್.

ಇನ್ನು ಮಹಿಮಾ ಪಟೇಲರದ್ದು ವೇದಾಂತಿಯ ಲೆಕ್ಕಾಚಾರ. ನಾನು ಜನರನ್ನ ಪ್ರೀತಿಸಬೇಕು, ನನ್ನ ಜನ ನನ್ನನ್ನ ಪ್ರೀತಿಸಬೇಕು, ದ್ವೇಷ ಸಾಧನೆಯಾಗಬಾರದು ಅನ್ನುತ್ತಲೇ ಮಾತಿಗೆ ಶುರುವಿಡುವ ಮಹಿಮಾ ಪಟೇಲ್ ಹಿಂದೆ ಹಿಂಬಾಲಕರ ಸಂಖ್ಯೆ ಕಡಿಮೆ. ಬಿರುಗಾಳಿಯಂತೆ ನುಗ್ಗಿ ಪ್ರಚಾರ ಮಾಡೋ ಮನಸ್ಸು ಕೂಡ ಮಹಿಮಾಗೆ ಇಲ್ಲ. ತಮ್ಮ ಪರವಾಗಿ ಗುಪ್ತಗಾಮಿನಿಯಂತೆ ಅಲೆಯಿದೆ. ಶಾಮನೂರು ಮಲ್ಲಿ ಮತ್ತು ಸಿದ್ಧೇಶ್ ಹಾಗೆ ನಾನು ಹಣಬಲ, ತೋಳ್ಬಲ ನೆಚ್ಚಿಕೊಂಡಿಲ್ಲ, ಆದರೂ ನಾನು ಗೆಲ್ತೀನಿ ಅನ್ನೋದು ಮಹಿಮಾ ಪಟೇಲ್ ಅಭಿಮತ. [ಮಹಿಮಾ ಪಟೇಲ್ ಜೆಡಿಎಸ್ ಸೇರ್ಪಡೆ]
ಜೆಡಿಎಸ್ ನ ಹಳೇಹುಲಿಗಳಾದ ದಾಸಕರಿಯಪ್ಪ, ಬಾವಿ ಬೆಟ್ಟಪ್ಪ ಮುಂತಾದವರು ಮಡಚಿಟ್ಟ ಬಿಳಿಪಂಚೆ ತೆಗೆದು, ಗಂಜಿ ಹಾಕಿ ಇಸ್ತ್ರಿ ಮಾಡಿಕೊಂಡು ಮಹಿಮನ ಜೊತೆಗೆ ಹೆಜ್ಜೆಯಿಡುತ್ತಿದ್ದಾರಾದರೂ, ಕತ್ತೆ ಚಾಕರಿ ಮಾಡುತ್ತಿರೋರು ಪಟೇಲ್ ಮನೆತನದ ಮಕ್ಕಳೇ. ಹಳೇ ಹುಲಿ ಕಾನೂನು ತಜ್ಞ ಎಸ್.ಎಚ್ ಪಟೇಲರು ಮನೆಯಲ್ಲಿಯೇ ಕೂತು ಸ್ಟ್ರಾಟಜಿ ಮಾಡುತ್ತಿದ್ದರೆ, ತೇಜಸ್ವಿ ಪಟೇಲ್ ನೇತೃತ್ವದಲ್ಲಿ ಮನೆ ಮಕ್ಕಳೆಲ್ಲಾ ಪಟೇಲ್ ಕುಡಿಯ ಗೆಲುವಿಗೆ ಊರೂರು ತಿರುಗಿ ಮತಯಾಚಿಸುತ್ತಿದ್ದಾರೆ. ವಾಣಿ ಗುರು, ಹೊದಿಗೆರೆ ರಮೇಶ್, ಎನ್.ಎಚ್ ಮೂರ್ತಿ, ರಾಮಚಂದ್ರ ಮೂರ್ತಿ, ಕದರನಹಳ್ಳಿ ಮುರುಗೇಶ್, ನಲ್ಲೂರು ಉಮೇಶ್. ದೇವರಹಳ್ಳಿ ಭೋಜಣ್ಣ. ಕೆ.ಜಿ.ಆರ್ ನಾಯಕ್ ನಂತಹ ಹಳೆಯ ಗೆಳೆಯರು, ಜೆ.ಎಚ್ ಪಟೇಲ್ ಹಿಂಬಾಲಕರು ಮಹಿಮಾ ಪಟೇಲ್ ಗಾಗಿ ಮನೆಮನೆ ಎಡತಾಕುತ್ತಿದ್ದಾರೆ.
ಪತ್ರಿಕೆ, ದಾವಣಗೆರೆಯ ಮತದಾರನ ಅಂತರಾಳ ಅರಿಯಲು, ಕ್ಷೇತ್ರದ ಉದ್ದಗಲಕ್ಕೂ ಅಡ್ಡಾಡಿ ಬಂದಿದೆ. ಸಾವಿರಾರು ಮತದಾರರನ್ನ ಮಾತಿಗೆಳೆದಿದೆ. ಪ್ರತಿ ವಿಧಾನಸಭೆ ಕ್ಷೇತ್ರದ ವಿವಿಧ ಪಕ್ಷದ ನಾಯಕರೊಂದಿಗೆ ಮಾತಿಗೆ ಕುಳಿತಿದೆ. ಎಲ್ಲಾ ಪ್ರಮುಖ ಅಭ್ಯರ್ಥಿಗಳ ಸಂದರ್ಶನಗಳನ್ನೂ ಮಾಡಿದೆ. ಆದರೂ ಈ ಕ್ಷೇತ್ರ ಯಾರಿಗೆ ಒಲಿಯಬಹುದೆಂಬ ಅಂದಾಜೇ ಸಿಗುತ್ತಿಲ್ಲ.












Click it and Unblock the Notifications