Lok Sabha Election 2024: ಈ ಬಾರಿ ನಡೆಯೋದು ಬರೀ ಚುನಾವಣೆಯಲ್ಲ ಅದೊಂದು ಮಹಾಸಮರ..!

ಬೆಂಗಳೂರು, ಡಿಸೆಂಬರ್‌ 18: 2024ರಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆ ಎನ್‌ಡಿಎ ಮತ್ತು ಐಎನ್‌ಡಿಐಎ ನಾಯಕರ ನಡುವಿನ ಮಹಾ ಸಮರವಾಗಿ ಪರಿಣಮಿಸುವ ಎಲ್ಲ ಲಕ್ಷಣಗಳು ಕಂಡು ಬರುತ್ತಿವೆ. ಪ್ರಧಾನಿ ನರೇಂದ್ರ ಮೋದಿಯನ್ನು ವಿರೋಧಿಸುವ ನಾಯಕರೆಲ್ಲರೂ ಸೇರಿ ರಚಿಸಿಕೊಂಡಿರುವ ಐಎನ್‌ಡಿಐಎ ಒಕ್ಕೂಟ ಎನ್‌ಡಿಎಗೆ ಸರ್ವ ರೀತಿಯಲ್ಲಿಯೂ ಪೈಪೋಟಿ ನೀಡಲು ಸಿದ್ಧತೆಯನ್ನು ಮಾಡಿಕೊಳ್ಳಲಾರಂಭಿಸಿದೆ. ಹೀಗಾಗಿ ಈ ಬಾರಿಯ ಲೋಕಸಭಾ ಚುನಾವಣೆ ಒಂದಷ್ಟು ಭಿನ್ನವಾಗಿರಲಿದೆ.

ದೇಶದ ಮಹಾಹಬ್ಬ ಎಂದೇ ಕರೆಯಲಾಗುವ ಲೋಸಕಸಭಾ ಚುನಾವಣೆಗೆ ಕಾಲ ಹತ್ತಿರವಾಗುತ್ತಿದೆ. ಮೇ ತಿಂಗಳಲ್ಲಿ ಚುನಾವಣೆ ನಡೆಯಬಹುದು ಎಂದು ಹೇಳಲಾಗುತ್ತಿರುವುದರಿಂದ ಕೇವಲ ಐದಾರು ತಿಂಗಳಷ್ಟೆ ಬಾಕಿಯಿದೆ. ರಾಜಕೀಯದಲ್ಲಿ ಈ ಕಾಲಾವಧಿ ರಾಜಕಾರಣಿಗಳಿಗೆ ಸಾಲದಾಗಿದೆ. ಆದ್ದರಿಂದ ಎಲ್ಲ ವೈರುಧ್ಯಗಳ ನಡುವೆಯೂ ರಾಜಕೀಯ ಪಕ್ಷಗಳು ಮತ್ತು ನಾಯಕರು ಇರುವ ಸಮಯವನ್ನೇ ಬಳಸಿಕೊಂಡು ಚುನಾವಣೆಯತ್ತ ನಿಗಾ ವಹಿಸುತ್ತಿದ್ದಾರೆ.

ದೇಶದ ರಾಜಕೀಯ ಬೆಳವಣಿಗೆಯನ್ನು ಗಮನಿಸಿದರೆ ಐಎನ್‍ ಡಿಐಎ ಮತ್ತು ಎನ್ ಡಿಎ ಎರಡು ಪ್ರಬಲ ಶಕ್ತಿಗಳಾಗಿ ಚುನಾವಣೆಗೆ ಹೋಗುತ್ತಿರುವುದು ಈ ಬಾರಿಯ ಹೊಸ ಬೆಳವಣಿಗೆಯಾಗಿದೆ. ಹಿಂದೆಯೂ ಯುಪಿಎ ಮತ್ತು ಎನ್ ಡಿಎ ಪ್ರಬಲ ವಿರೋಧಿಗಳಾಗಿ ಚುನಾವಣೆಯನ್ನು ಎದುರಿಸಿದ್ದವು.

ಆದರೆ ಇದೆರಡು ಮೈತ್ರಿಗಳಿಂದ ದೂರವಾಗಿ ಪ್ರತ್ಯೇಕವಾಗಿ ಕೆಲವೊಂದು ಪಕ್ಷಗಳು ಚುನಾವಣೆಗೆ ಹೋಗಿದ್ದವು. ಆದರೆ ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಪ್ರಬಲವಾಗಿ ವಿರೋಧಿಸುವ ರಾಜಕೀಯ ಪಕ್ಷಗಳು ಕಾಂಗ್ರೆಸ್ ನ್ನು ಬೆಂಬಲಿಸಿದ್ದರಿಂದ ಮತ್ತು ಕಾಂಗ್ರೆಸ್ ಗೂ ಅದು ಅನಿವಾರ್ಯವಾಗಿರುವುದರಿಂದ ಐಎನ್‍ ಡಿಐಎ(ಇಂಡಿಯಾ) ಒಕ್ಕೂಟ ಜನ್ಮ ತಾಳಿದೆ.

Lok Sabha Election 2024: To Be Held In 2024 Will Be A Great Battle Between NDA And INDIA

ಮುಂದುವರೆದ ಮೋದಿ ನಾಗಾಲೋಟ

ಯುಪಿಎ ಆಡಳಿತಾವಧಿಯ ಭ್ರಷ್ಟಾಚಾರಗಳನ್ನು ವಿರೋಧಿಸುತ್ತಲೇ ಬಿಜೆಪಿ ನೇತೃತ್ವದ ಎನ್ ಡಿಎ 2014ರಲ್ಲಿ ಕೇಂದ್ರದಲ್ಲಿ ಅಧಿಕಾರ ಹಿಡಿದಿತ್ತು. ನರೇಂದ್ರ ಮೋದಿ ಮೊದಲ ಬಾರಿಗೆ ಸಂಸತ್ತಿಗೆ ಕಾಲಿಡುವ ಮೂಲಕ ಪ್ರಧಾನಿ ಪಟ್ಟವನ್ನು ಅಲಂಕರಿಸಿದರು. ಅಲ್ಲಿಂದ ಇಲ್ಲಿವರೆಗೆ ಅವರ ನಾಗಾಲೋಟ ಮುಂದುವರೆದಿದೆ. ಕಾಂಗ್ರೆಸ್ ಸೇರಿದಂತೆ ಇತರೆ ವಿಪಕ್ಷಗಳು ಎನ್ ಡಿಎ ಒಕ್ಕೂಟವನ್ನಾಗಲೀ, ಸರ್ಕಾರವನ್ನಾಗಲೀ ವಿರೋಧಿಸುವುದಕ್ಕಿಂತ ಹೆಚ್ಚಾಗಿ ಕೇವಲ ನರೇಂದ್ರಮೋದಿಯನ್ನೇ ವಿರೋಧ ಮಾಡುತ್ತಾ ಬರುತ್ತಿರುವುದು ಅದೊಂದು ರೀತಿಯಲ್ಲಿ ವೈಯಕ್ತಿಕ ದಾಳಿಯಂತೆ ಕಾಣುತ್ತಿದೆ ವಿನಃ ಬೇರೇನು ಇಲ್ಲ.

ಇನ್ನು ಬಿಜೆಪಿಗೆ ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್ ನ ನಾಯಕರು ಕೂಡ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ, ಭ್ರಷ್ಟಾಚಾರದ ಬಗ್ಗೆಯಾಗಲೀ ಮಾತನಾಡಲು ಅವಕಾಶವೇ ಸಿಗದಂತಾಗಿದೆ. ಎಲ್ಲೋ ಒಂದು ಕಡೆ ನಾಯಕರು ಪ್ರಧಾನಿಯನ್ನು ಟೀಕಿಸುವ ಭರದಲ್ಲಿ ತೇಜೋವಧೆ ಮಾಡಿ ತಾವೇ ಸಮಾಜದ ಮುಂದೆ ಸಣ್ಣವರಾಗುತ್ತಿದ್ದಾರೆ. ವಿರೋಧಪಕ್ಷದ ನಾಯಕರು ಮಾಡುವ ಟೀಕೆಗಳಿಗೆ ಸರಿಯಾದ ಸಮಯದಲ್ಲಿ ಉತ್ತರ ಕೊಡುವ ತಂತ್ರವನ್ನು ನರೇಂದ್ರಮೋದಿ ಅವರು ರೂಢಿಸಿಕೊಂಡಿರುವುದರಿಂದಾಗಿ ಅದು ಪರಿಣಾಮ ಬೀರುತ್ತಿದೆ.

Lok Sabha Election 2024: To Be Held In 2024 Will Be A Great Battle Between NDA And INDIA

ಪ್ರಬಲ ವಿರೋಧ ಪಕ್ಷದ ಅಗತ್ಯವಿದೆ

ದೇಶಕ್ಕೆ ಆಡಳಿತ ಪಕ್ಷ ಎಷ್ಟು ಮುಖ್ಯವೋ ಅಷ್ಟೇ ವಿರೋಧ ಪಕ್ಷವೂ ಮುಖ್ಯವಾಗುತ್ತದೆ. ಆದರೆ ವಿರೋಧ ಪಕ್ಷದಲ್ಲಿರುವ ನಾಯಕರು ಕೂಡ ಜವಬ್ದಾರಿಯಿಂದ ವರ್ತಿಸಬೇಕಾಗುತ್ತದೆ. ಕೇವಲ ವಿರೋಧ ಮಾಡಬೇಕೆನ್ನುವ ಕಾರಣಕ್ಕೆ ವಿರೋಧ ಮಾಡುವುದನ್ನು ಬಿಟ್ಟು ಸಾಮಾಜಿಕ ನೆಲೆಗಟ್ಟಿನಲ್ಲೂ ಆಲೋಚಿಸಬೇಕಾಗಿದೆ. ಆಡಳಿತ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಿ ದೇಶದ ಅಭಿವೃದ್ಧಿಯತ್ತ ಕೊಂಡೊಯ್ಯುವ ಕೆಲಸವನ್ನು ಮಾಡಿಸುವಲ್ಲಿ ವಿರೋಧಪಕ್ಷಗಳ ಪಾತ್ರವಿದೆ. ಅವರು ಮನಸ್ಸು ಮಾಡಿದ್ದರೆ ಸಮಾಜದ ಕಟ್ಟಕಡೆಯ ಮತದಾರನ ಬಳಿಗೂ ಹೋಗಬಹುದಿತ್ತು. ಪಕ್ಷವನ್ನು ತಳಮಟ್ಟದಿಂದಲೂ ಗಟ್ಟಿಯಾಗಿಸಿಕೊಳ್ಳಬಹುದಿತ್ತು.

ಕಳೆದ ಐದು ವರ್ಷಗಳ ಅವಧಿಯಲ್ಲಿ ಕಾಂಗ್ರೆಸ್ ನಾಯಕರು ಮನಸ್ಸು ಮಾಡಿದ್ದರೆ ತಳಮಟ್ಟದಿಂದ ಪಕ್ಷವನ್ನು ಸಂ‍ಘಟಿಸಿ ಗಟ್ಟಿಗೊಳಿಸಬಹುದಿತ್ತು. ಆದರೆ ಆ ಕೆಲಸವನ್ನು ರಾಷ್ಟ್ರೀಯ ನಾಯಕರು ಮಾಡಿಲ್ಲವೆಂದೇ ಹೇಳಬೇಕು. ರಾಹುಲ್ ಗಾಂಧಿ ಅವರು 2022ರಲ್ಲಿ ಭಾರತ್ ಜೋಡೋ ಯಾತ್ರೆ ನಡೆಸಿದ್ದರು. ಅದು ಒಂದಷ್ಟು ರಾಜಕೀಯವಾಗಿ ಪ್ರಭಾವ ಬೀರಿತು ಎನ್ನುವುದರಲ್ಲಿ ಎರಡು ಮಾತಿಲ್ಲ. ಈ ಜೋಡೋ ಯಾತ್ರೆ ಬಳಿಕ ದಕ್ಷಿಣ ಭಾರತದಲ್ಲಿ ನಡೆದ ಕರ್ನಾಟಕ ಮತ್ತು ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದು ಬೀಗಿದೆ. ಇದು ಕಾಂಗ್ರೆಸ್ಸಿಗರು ಸಂತಸ ಪಡುವ ವಿಚಾರವೇ.

Lok Sabha Election 2024: To Be Held In 2024 Will Be A Great Battle Between NDA And INDIA

ವಿರೋಧಿ ಪಡೆ ಕಟ್ಟುವಲ್ಲಿ ಯಶಸ್ಸು

ಇದೆರಡು ರಾಜ್ಯಗಳಲ್ಲಿ ಕಾಂಗ್ರೆಸ್ ನಾಯಕರು ತಳಮಟ್ಟದಿಂದ ಪಕ್ಷವನ್ನು ಸಂಘಟಿಸಿ ಗೆಲುವಿಗೆ ಬೇಕಾದ ತಂತ್ರ ಮಾಡಿದ್ದರು ಎಂಬುದನ್ನು ಕೂಡ ಒಪ್ಪಿಕೊಳ್ಳಬೇಕಾಗುತ್ತದೆ. ಇಲ್ಲಿ ರಾಷ್ಟ್ರಮಟ್ಟದ ನಾಯಕರು ಪಕ್ಷ ಸಂಘಟನೆಗಿಂತ ಹೆಚ್ಚಾಗಿ ಕೇವಲ ಟೀಕೆ ಮಾಡುವುದರಲ್ಲಿಯೇ ಸಮಯ ಕಳೆದರು. ಇದರ ನಡುವೆ ಇತರೆ ಪಕ್ಷಗಳನ್ನು ತಮ್ಮೊಂದಿಗೆ ಸೇರಿಸಿ ಒಕ್ಕೂಟ ಮಾಡುವುದರಲ್ಲಿಯೇ ಹೆಚ್ಚಿನ ಸಮಯ ಕಳೆದಿದ್ದಾರೆ. ಸದ್ಯಕ್ಕೆ ಬಿಜೆಪಿ ನೇತೃತ್ವದ ಎನ್ ಡಿಎಗೆ ವಿರುದ್ಧವಾಗಿ ಕಾಂಗ್ರೆಸ್ ಸುಮಾರು ಇಪ್ಪತ್ತಾರಕ್ಕೂ ಹೆಚ್ಚಿನ ಪಕ್ಷಗಳ ನಾಯಕರನ್ನು ಸೇರಿಸಿ ಐಎನ್‍ ಡಿಐಎ ಒಕ್ಕೂಟ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.

ಲೋಕಸಭಾ ಚುನಾವಣೆ ಹತ್ತಿರವಾಗುತ್ತಿರುವ ಈ ಸಮಯದಲ್ಲಿ ಐಎನ್‍ ಡಿಐಎ ನಾಯಕರು ಒಟ್ಟಾಗಿ ಯಾವ ರೀತಿಯಲ್ಲಿ ಚುನಾವಣೆಗೆ ಹೋಗುತ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಇದ್ದೇ ಇದೆ. ಇದುವರೆಗೆ ಐಎನ್‍ ಡಿಐಎ ನಾಯಕರು ಒಂದೋ ಎರಡೋ ಸಭೆಗಳನ್ನು ನಡೆಸಿದ್ದಾರೆ. ಪಂಚರಾಜ್ಯ ಚುನಾವಣೆ ಬಳಿಕ ಇಷ್ಟರಲ್ಲೇ ನಡೆಯ ಬೇಕಾಗಿದ್ದ ಸಭೆಯನ್ನು ಮುಂದೂಡಲಾಗಿದೆ. ಮುಂದಿನ ದಿನಗಳಲ್ಲಿ ಚುನಾವಣೆಗೆ ಸ್ಪರ್ಧಿಸಲು ಅಭ್ಯರ್ಥಿಗಳಿಗೆ ಟಿಕೆಟ್ ಹಂಚಿಕೆ ವಿಚಾರದಲ್ಲಿ ನಾಯಕರು ಹೇಗೆ ಒಮ್ಮತಕ್ಕೆ ಬರುತ್ತಾರೆ ಎಂಬುದು ಕೂಡ ಇಲ್ಲಿ ಬಹುಮುಖ್ಯವಾಗಿದೆ.

ಮತದಾರರ ಪ್ರಶ್ನೆಗಳಿಗೆ ಉತ್ತರ ಸಿಗುತ್ತಾ?

ಒಟ್ಟಾರೆ ಈ ಬಾರಿಯ ಲೋಕಸಭಾ ಚುನಾವಣೆ ಐಎನ್‍ ಡಿಐಎ ಮತ್ತು ಎನ್ ಡಿಎ ನಡುವಿನ ಮಹಾಯುದ್ಧವಾಗಿ ಮಾರ್ಪಡುವ ಎಲ್ಲ ಲಕ್ಷಣಗಳಿದ್ದು, ಮುಂದಿನ ದಿನಗಳಲ್ಲಿ ಚುನಾವಣೆಗೆ ಬೇಕಾದ ತಂತ್ರಗಳನ್ನು ಎರಡು ಒಕ್ಕೂಟಗಳ ನಾಯಕರು ಹೇಗೆ ಮಾಡುತ್ತಾರೆ? ಕಾಂಗ್ರೆಸ್ ನೇತೃತ್ವದ ಐಎನ್‍ ಡಿಐಎ ಯಾರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡುತ್ತದೆ? ಯಾರ ನೇತೃತ್ವದಲ್ಲಿ ಚುನಾವಣೆಗೆ ಹೋಗುತ್ತಾರೆ ಎಂಬಿತ್ಯಾದಿ ಪ್ರಶ್ನೆಗಳು ಮತದಾರರ ಮನಪಟಲದಲ್ಲಿ ಹರಿದಾಡುತ್ತಿದ್ದು, ಈ ಪ್ರಶ್ನೆಗಳಿಗೆ ಉತ್ತರ ಸಿಗಲು ಇನ್ನೊಂದಷ್ಟು ದಿನ ಕಾಯಲೇಬೇಕಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+