21 ರಾಜ್ಯ, 102 ಲೋಕಸಭಾ ಸ್ಥಾನ, 1625 ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸಲು ಮತದಾರ ಪ್ರಭು ಸಿದ್ಧ!
ಭಾರತ.. ಪ್ರಜಾಪ್ರಭುತ್ವದ ದೇಗುಲವೇ ನಮ್ಮ ಭಾರತ. ಹೀಗೆ ಭಾರತದಲ್ಲಿ ಲೋಕಸಭೆಯ ಚುನಾವಣೆ ನಡೆಯುತ್ತದೆ ಎಂದರೆ ಅದು, ಪ್ರಜಾಪ್ರಭುತ್ವದ ಹಬ್ಬವೇ ಸರಿ. ಜಾಗತಿಕವಾಗೂ ಭಾರತದ ಲೋಕಸಭೆ ಚುನಾವಣೆ ಗಮನ ಸೆಳೆಯುತ್ತದೆ. ಇಂದಿನಿಂದ, 2024ರ ಲೋಕಸಭೆ ಚುನಾವಣೆಗೆ ಅಧಿಕೃತ ಚಾಲನೆ ಸಿಗುತ್ತಿದ್ದು, 1ನೇ ಹಂತದ ಮತದಾನ ಆರಂಭ ಆಗುತ್ತಿದೆ.
ಭಾರತದಲ್ಲಿ ಒಟ್ಟಾರೆ 543 ಲೋಕಸಭಾ ಸ್ಥಾನ ಇದ್ದು ಈ ಪೈಕಿ ಇಂದು 102 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಸಲು ಸಕಲ ಸಿದ್ಧತೆ ಮಾಡಿಕೊಂಡಿದೆ ಭಾರತೀಯ ಚುನಾವಣಾ ಆಯೋಗ. ಇಂದು ಬೆಳಗ್ಗೆ 7 ರಿಂದ ಸಂಜೆ 6 ಗಂಟೆಯ ತನಕವೂ, ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಒಟ್ಟು 21 ರಾಜ್ಯದ 102 ಸ್ಥಾನಗಳಿಗೆ ಇಂದು ಮತದಾನ ನಡೆಯಲಿದ್ದು, ಒಟ್ಟು 1,625 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ತಮಿಳುನಾಡು, ರಾಜಸ್ಥಾನ, ಉತ್ತರ ಪ್ರದೇಶ ಸೇರಿ ಪ್ರಮುಖ ರಾಜ್ಯಗಳಲ್ಲಿ ಇಂದು ಮತದಾನ ನಡೆಸಲು ಸಕಲ ಸಿದ್ಧತೆ ಕೈಗೊಳ್ಳಲಾಗಿದ್ದು, ಯಾವ ಯಾವ ರಾಜ್ಯದಲ್ಲಿ ಎಷ್ಟು ಸ್ಥಾನಗಳಿಗೆ ಮತದಾನ ನಡೆಯಲಿದೆ? ಅನ್ನೋ ಕುರಿತು ತಿಳಿಯೋಣ ಬನ್ನಿ.

ಯಾವ ರಾಜ್ಯದಲ್ಲಿ ಎಷ್ಟು ಸ್ಥಾನಕ್ಕೆ ಮತದಾನ?
ತಮಿಳುನಾಡು ರಾಜ್ಯದ ಎಲ್ಲಾ 39 ಲೋಕಸಭೆ ಕ್ಷೇತ್ರಗಳಿಗೂ ಚುನಾವಣೆ ಇಂದು ನಡೆಯಲಿದೆ. ರಾಜಸ್ಥಾನದಲ್ಲಿನ 25 ಸ್ಥಾನಗಳ ಪೈಕಿ 12, ಉತ್ತರ ಪ್ರದೇಶದಲ್ಲಿ 80 ಸ್ಥಾನಗಳ ಪೈಕಿ 8 ಸ್ಥಾನಕ್ಕೆ, ಮಧ್ಯಪ್ರದೇಶದ 29 ಸ್ಥಾನ ಪೈಕಿ 6 ಸ್ಥಾನ, ಮಹಾರಾಷ್ಟ್ರದಲ್ಲಿ 48 ಸ್ಥಾನಗಳ ಪೈಕಿ 5 ಸ್ಥಾನಕ್ಕೆ, ಉತ್ತರಾಖಂಡದ ಎಲ್ಲಾ 5 ಸ್ಥಾನಕ್ಕೆ, ಅಸ್ಸಾಂನ 14 ಸ್ಥಾನಗಳ ಪೈಕಿ 5 ಸ್ಥಾನಗಳಿಗೆ & ಬಿಹಾರ ರಾಜ್ಯದಲ್ಲಿ ಒಟ್ಟು 40 ಸ್ಥಾನಗಳ ಪೈಕಿ 4 ಸ್ಥಾನಗಳಿಗೆ ಇಂದು ಮತದಾನ ನಡೆಯಲಿದೆ.
ಪಶ್ಚಿಮ ಬಂಗಾಳದ 42 ಸ್ಥಾನಗಳಲ್ಲಿ 3 ಸ್ಥಾನಗಳಿಗೆ ಮತ್ತು ಅರುಣಾಚಲ ಪ್ರದೇಶದ 2 ಸ್ಥಾನಗಳ ಪೈಕಿ ಎಲ್ಲಾ 2 ಸ್ಥಾನಕ್ಕೆ, ಮಣಿಪುರದಲ್ಲಿ 2 ಸ್ಥಾನದ ಪೈಕಿ ಎಲ್ಲಾ 2 ಸ್ಥಾನಕ್ಕೆ ಚುನಾವಣೆ ಇಂದು ನಡೆಯಲಿದೆ. ಹಾಗೆ ಮೇಘಾಲಯದ 2 ಸ್ಥಾನಗಳ ಪೈಕಿ ಎಲ್ಲಾ 2, ಛತ್ತೀಸ್‌ಘಡದ 11 ಸ್ಥಾನಗಳ ಪೈಕಿ 1 ಸ್ಥಾನಕ್ಕೆ, ಮಿಜೋರಾಂ ರಾಜ್ಯದ ಎಲ್ಲಾ 1 ಸ್ಥಾನಕ್ಕೆ, ನಾಗಾಲ್ಯಾಂಡ್ ರಾಜ್ಯದ ಎಲ್ಲಾ 1 ಸ್ಥಾನಕ್ಕೆ, ಸಿಕ್ಕಿಂನ ಎಲ್ಲಾ 1 ಸ್ಥಾನ, ತ್ರಿಪುರದ 2 ಸ್ಥಾನ ಪೈಕಿ 1 ಸ್ಥಾನಕ್ಕೆ ಇಂದು ಮತದಾನ ನಡೆಯಲಿದೆ. ಜಮ್ಮು & ಕಾಶ್ಮೀರದಲ್ಲಿ 5 ಸ್ಥಾನಗಳ ಪೈಕಿ 1 ಸ್ಥಾನಕ್ಕೆ ಮತದಾನವು ನಡೆಯಲಿದೆ. ಇನ್ನು ಅಂಡಮಾನ್ & ನಿಕೋಬಾರ್ ದ್ವೀಪದ ಎಲ್ಲಾ 1 ಸ್ಥಾನ, ಲಕ್ಷದ್ವೀಪದ ಎಲ್ಲಾ 1 ಸ್ಥಾನಕ್ಕೆ ಹಾಗೂ ಪುದುಚೇರಿಯ ಒಂದು ಕ್ಷೇತ್ರಕ್ಕೆ ಇಂದು ಚುನಾವಣೆ ನಡೆಯಲಿದೆ.












Click it and Unblock the Notifications