ಲೋಕಸಭೆ ಚುನಾವಣೆ: ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಜೊತೆ ಸಭೆ
ಬೆಂಗಳೂರು, ಮಾರ್ಚ್ 23: ಲೋಕಸಭೆ ಚುನಾವಣೆ 2024ರ ವೇಳಾಪಟ್ಟಿ ಘೋಷಣೆಯಾಗಿದೆ. ಕರ್ನಾಟಕದ 28 ಕ್ಷೇತ್ರಗಳಿಗೆ ಏಪ್ರಿಲ್ 26 ಮತ್ತು ಮೇ 7ರಂದು ಎರಡು ಹಂತದಲ್ಲಿ ಮತದಾನ ನಡೆಯಲಿದೆ. ಈಗಾಗಲೇ ಚುನಾವಣಾ ಮಾದರಿ ನೀರಿ ಸಂಹಿತೆ ಜಾರಿಗೆ ಬಂದಿದೆ.
ಜಿಲ್ಲಾ ಚುನಾವಣಾಧಿಕಾರಿಗಳು ಚುನಾವಣಾ ಮಾದರಿ ನೀತಿ ಸಂಹಿತೆ ಕಟ್ಟುನಿಟ್ಟಾಗಿ ಜಾರಿಗೊಳಿಸಲು ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸುವ ನಿಟ್ಟಿನಲ್ಲಿ ಅಕ್ರಮ ಹಣ ಸಾಗಾಟ ಮತ್ತು ಉಚಿತ ಉಡುಗರೆಗಳ ವಿತರಣೆ ಮೇಲೆ ಕಣ್ಗಾವಲು ಇಟ್ಟಿದ್ದಾರೆ. ಈಗಾಗಲೇ ಮತದಾರರಿಗೆ ಹಂಚಲು ತಂದಿದ್ದ ಉಡುಗೊರೆಗಳನ್ನು ವಶಕ್ಕೆ ಪಡೆಯಲಾಗುತ್ತಿದೆ.

ಮಾದರಿ ಚುನಾವಣಾ ನೀತಿ ಸಂಹಿತೆ ಪಾಲನೆಗೆ ಆದಾಯ ತೆರಿಗೆ ಮತ್ತು ವಾಣಿಜ್ಯ ತೆರಿಗೆಗಳ ಇಲಾಖೆಯ ಅಧಿಕಾರಿಗಳ ಸಹಾಯವನ್ನು ಸಹ ಕೇಳಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಆದಾಯ, ವಾಣಿಜ್ಯ ತೆರಿಗೆ ಇಲಾಖೆಯಿಂದ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗುತ್ತಿದೆ.
ಅಕ್ರಮ ಹಣ ಸಾಗಟ: ಚುನಾವಣಾ ಕಾರ್ಯದ ತಪಾಸಣೆಗಾಗಿಯೇ ಚೆಕ್ ಪೋಸ್ಟ್‌ಗಳನ್ನು ಸ್ಥಾಪನೆ ಮಾಡಲಾಗಿದೆ. 10 ಲಕ್ಷ ರೂ. ಮತ್ತು ಅಧಿಕ ಮೊತ್ತದ ಹಣ ದೊರೆತಲ್ಲಿ ಮುಂದಿನ ತನಿಖೆಗೆ ಆದಾಯ ತೆರಿಗೆ ಇಲಾಖೆಗೆ ವಹಿಸಲಾಗುತ್ತದೆ. ಆದ್ದರಿಂದ ಆದಾಯ ತೆರಿಗೆ ಅಧಿಕಾರಿಗಳು ಇಂತಹ ಪ್ರಕರಣ ಕಂಡುಬಂದಲ್ಲಿ ಕೂಡಲೇ ಸ್ಥಳಕ್ಕೆ ಧಾವಿಸಬೇಕಿದೆ.
ಇನ್ನು ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ವೇರ್ ಹೌಸ್ ಪರಿಶೀಲನೆ ಮಾಡಬೇಕು. ನೂರಾರು, ಸಾವಿರಾರು ಸಂಖ್ಯೆಯಲ್ಲಿ ಮತದಾರರಿಗೆ ಆಮೀಷಕ್ಕಾಗಿ ನೀಡಲಾಗುವ ಉಚಿತ ಉಡುಗೊರೆ ವಸ್ತುಗಳ ಮೇಲೆ ನಿಗಾ ಇಡಬೇಕು. ಆದಾಯ ಮತ್ತು ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಜಿಲ್ಲಾಡಳಿತದ ಜೊತೆ ಸಹಕಾರ ನೀಡಬೇಕು ಎಂದು ಮನವಿ ಮಾಡಲಾಗಿದೆ.
ಖಾಸಗಿ ವಿಮಾನಗಳ ಮೇಲೆ ನಿಗಾ: ಆದಾಯ ತೆರಿಗೆ ಇಲಾಖೆಯ ತನಿಖಾ ವಿಭಾಗ ಜಿಲ್ಲೆಗಳಿಗೆ ಸ್ಟಾರ್ ಕ್ಯಾಂಪೇನರ್‌ಗಳು ಖಾಸಗಿ ವಿಮಾನದ ಮೂಲಕ ಆಗಮಿಸಿದಾಗ ನಮಗೆ ಮಾಹಿತಿ ನೀಡಿದಲ್ಲಿ ಏರ್‌ಪೋರ್ಟ್‌ನಲ್ಲಿಯೇ ತನಿಖೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ತಿಳಿಸಿದ್ದಾರೆ.
ಚುನಾವಣಾ ಸಂದರ್ಭದಲ್ಲಿ ಕರ್ನಾಟಕಕ್ಕೆ ಅಕ್ಕಪಕ್ಕದ ತೆಲಂಗಾಣಾ, ಮಹಾರಾಷ್ಟ್ರ ಸೇರಿದಂತೆ ಗಡಿಯಿಂದ ಬರುವ ವಾಹನಗಳ ಮೇಲೆ ವಿಶೇಷ ಗಮನವನ್ನು ಆದಾಯ ತೆರಿಗೆ ಇಲಾಖೆ ಇಟ್ಟಿದೆ. ಅಧಿಕಾರಿಗಳನ್ನು ತಪಾಸಣಾ ಕೆಲಸಕ್ಕೆ ನಿಯೋಜಿಸಲಾಗಿದೆ.
ಅಬಕಾರಿ ಇಲಾಖೆ ಹಾಗೂ ಬ್ಯಾಂಕರ್ಸ್‍ಗಳ ಜೊತೆಯೂ ಸಭೆ ನಡೆಸಲಾಗಿದೆ. ಅಕ್ರಮ ಮದ್ಯ ವಶಕ್ಕೆ ಪಡೆದು ಎಫ್ಐಆರ್ ದಾಖಲಿಸಬೇಕು. ಅಕ್ರಮವಾಗಿ ಯಾರಾದರು ಮದ್ಯ ಶೇಖರಣೆ ಮಾಡಿಟ್ಟುಕೊಂಡಿರುವ ಬಗ್ಗೆ ಮಾಹಿತಿ ದೊರೆತಲ್ಲಿ ದಾಳಿ ನಡೆಸಬೇಕು. ಅಬಕಾರಿ ಇಲಾಖೆಯ ಗುಪ್ತಚರ ವಿಭಾಗ ಚುರುಕುಗೊಳಿಸಬೇಕು. ಪ್ರತಿ ದಿನ ಅಕ್ರಮ ಮದ್ಯ ಸೀಜ್ ಮಾಡಿದ ವರದಿ ನೀಡಬೇಕು ಎಂದು ಸೂಚನೆ ನೀಡಲಾಗಿದೆ.
ಅಕ್ರಮ ಹಣ ವರ್ಗಾವಣೆ ತಡೆಗಟ್ಟುವ ನಿಟ್ಟಿನಲಿ ಒಬ್ಬ ವ್ಯಕ್ತಿ ಹಲವಾರು ಜನರಿಗೆ ಒಂದೇ ಸಮಯದಲ್ಲಿ 500 ರೂ. ಮತ್ತು ಮೇಲ್ಪಟ್ಟ ಯುಪಿಐ ವಹಿವಾಟು ಮಾಡಿದಲ್ಲಿ, 1 ಲಕ್ಷ ರೂ. ಮೇಲ್ಪಟ್ಟ ವಹಿವಾಟು ಸಂಶಯಾಸ್ಪದ ರೂಪದಲ್ಲಿ ಕಂಡುಬಂದಲ್ಲಿ ಜಿಲ್ಲಾ ಚುನಾವಣಾಧಿಕಾರಿಗಳ ಗಮನಕ್ಕೆ ಮತ್ತು ಎಂಸಿಸಿ ನೋಡಲ್ ಅಧಿಕಾರಿಗಳಿಗೆ ಮಾಹಿತಿ ನೀಡಬೇಕಿದೆ.
10 ಲಕ್ಷ ರೂ. ಮೇಲ್ಪಟ್ಟ ವಹಿವಾಟಿನ ಪ್ರತಿ ಪ್ರಕರಣದ ಬಗ್ಗೆ ಮಾಹಿತಿಯನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳೊಂದಿಗೆ ಹಂಚಿಕೊಳ್ಳಬೇಕೆಂದು ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಬ್ಯಾಂಕ್ ಸಿಬ್ಬಂದಿಗಳಿಗೆ ನಿರ್ದೇಶನವನ್ನು ನೀಡಿದ್ದಾರೆ.
ಜಿಲ್ಲಾ ಲೀಡ್ ಬ್ಯಾಂಕ್ ಅಧಿಕಾರಿಗಳು ಎಲ್ಲಾ ಬ್ಯಾಂಕರ್ಸ್‌ಗಳೊಂದಿಗೆ ಸಮನ್ವಯ ಸಾಧಿಸಿ ಚುನಾವಣೆ ಮಾದರಿ ನೀತಿ ಸಂಹಿತೆಯಲ್ಲಿ ಪಾಲಿಸುವಲ್ಲಿ ಎಲ್ಲಿಯೂ ಲೋಪವಾಗದಂತೆ ಕಾರ್ಯ ನಿರ್ವಹಣೆ ಮಾಡಬೇಕು. ಆದಾಯ ತೆರಿಗೆ ಇಲಾಖೆಯೊಂದಿಗೆ ಸಂಪರ್ಕ ಹೊಂದಿರಬೇಕು ಎಂದು ತಿಳಿಸಲಾಗಿದೆ.












Click it and Unblock the Notifications