ಪ್ರಯೋಗವೋ..?ಎಡವಟ್ಟೋ? ಕಾಂಗ್ರೆಸ್ ಗೆಲುವಿಗೆ ದಾರಿಯಾಗುತ್ತಾ ರಾಜ್ಯ ಬಿಜೆಪಿ ಒಳಜಗಳ..?
ಬೆಂಗಳೂರು, ಮಾರ್ಚ್ 18: ರಾಜಕೀಯದಲ್ಲಿ ಗೆದ್ದ ಕುದುರೆಯ ಬಾಲ ಹಿಡಿಯುವವರೇ ಜಾಸ್ತಿ ಎನ್ನುವುದು ಬಹುತೇಕ ಸಂದರ್ಭದಲ್ಲಿ ಸಾಬೀತಾಗಿದೆ. ಸಮೀಕ್ಷೆಗಳು ಮತ್ತೆ ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟ ದೇಶದಲ್ಲಿ ಅಧಿಕಾರಕ್ಕೆ ಬರುವುದರೊಂದಿಗೆ ಮೂರನೇ ಬಾರಿಗೆ ನರೇಂದ್ರ ಮೋದಿ ಅವರು ಪ್ರಧಾನಿಯಾಗಲಿದ್ದಾರೆ ಎಂದು ಹೇಳುತ್ತಾ ಬಂದಿವೆ. ಹೀಗಾಗಿ ಬಿಜೆಪಿಯಲ್ಲಿ ರಣೋತ್ಸವ ಕಂಡು ಬರುತ್ತಿದೆಯಾದರೂ ರಾಜ್ಯದಲ್ಲಿ ಎದ್ದಿರುವ ಬಂಡಾಯ, ಭಿನ್ನಾಭಿಪ್ರಾಯಗಳು ಪಕ್ಷದ ವೇಗಕ್ಕೆ ಅಡ್ಡಿಯಾಗುತ್ತಾ? ಎಂಬ ಸಂಶಯ ಹುಟ್ಟಿಕೊಳ್ಳಲಾರಂಭಿಸಿದೆ.
ಎರಡು ಬಾರಿ ಯಶಸ್ವಿಯಾಗಿ ಸರ್ಕಾರ ನಡೆಸಿದ ಪ್ರಧಾನಿ ನರೇಂದ್ರಮೋದಿ ಸಚಿವ ಸಂಪುಟದಲ್ಲಿ ಭ್ರಷ್ಟಾಚಾರಕ್ಕೆ ಅವಕಾಶ ಕೊಡದೆ ತನ್ನದೇ ಆದ ಕಾರ್ಯಚಟುವಟಿಕೆ ಮೂಲಕ ಗಮನಸೆಳೆದಿದ್ದಾರೆ. ಎದುರಾಳಿ ಪಕ್ಷದವರಿಗೆ ಒಂದೇ ಒಂದು ಹಗರಣವನ್ನು ಹುಡುಕಲು ಸಾಧ್ಯತವಾಗಲಿಲ್ಲ. ಹೀಗಾಗಿ ವಿಪಕ್ಷಗಳು ಕೇವಲ ಆರೋಪಗಳನ್ನು ಮಾಡುತ್ತಾ ಬರುತ್ತಿದ್ದಾರಷ್ಟೆ. ಅದರಲ್ಲೂ ಬಹುತೇಕ ಕಡೆಗಳಲ್ಲಿ ಚುನಾವಣೆಗೆ ಸ್ಪರ್ಧಿಸಲು ವಿಪಕ್ಷ ನಾಯಕರು ನಿರಾಸಕ್ತಿ ತೋರುತ್ತಿರುವುದು ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟಕ್ಕೆ ಸಮಸ್ಯೆಯಾಗಿ ಪರಿಣಮಿಸಿದೆ.

ಕೇಂದ್ರದಲ್ಲಿ ಅಧಿಕಾರದಲ್ಲಿರುವ ಕಾರಣ ಬಿಜೆಪಿಯ ಪ್ರಾಬಲ್ಯವಿರುವ ರಾಜ್ಯಗಳಲ್ಲಿ ನಾಯಕರು ಟಿಕೆಟ್ ಗಾಗಿ ಮುಗಿ ಬೀಳುತ್ತಿರುವುದು ಎದ್ದು ಕಾಣಿಸುತ್ತಿದೆ. ಅದರಲ್ಲೂ ಕರ್ನಾಟಕದಲ್ಲಿ ಈ ಬಾರಿ ಟಿಕೆಟ್‌ಗಾಗಿ ಜಿದ್ದಾ ಜಿದ್ದಿ ನಡೆದಿದ್ದು, ಚುನಾವಣೆಗೆ ಮುನ್ನವೇ ಭಿನ್ನಾಭಿಪ್ರಾಯಗಳು ಹೆಚ್ಚಾಗಿದೆ. ಟಿಕೆಟ್ ಸಿಗದ ನಾಯಕರ ಪೈಕಿ ಕೆಲವರು ಬಂಡಾಯ ಎದ್ದಿದ್ದಾರೆ. ಇದಕ್ಕೆ ಈ ಬಾರಿ ಬಿಜೆಪಿ ಅಧಿಕಾರ ಹಿಡಿಯುತ್ತದೆ ಎಂಬ ಸಮೀಕ್ಷೆಗಳ ವರದಿಗಳೇ ಕಾರಣ ಎಂದರೂ ತಪ್ಪಾಗಲಾರದು.
ಬಿಜೆಪಿಯ ಪ್ರಯೋಗವೋ.. ಎಡವಟ್ಟೋ?
ವಿಧಾನಸಭಾ ಚುನಾವಣೆಯಲ್ಲಿ ಮತದಾರರು ಕಾಂಗ್ರೆಸ್ ನ ಕೈ ಹಿಡಿದಿದ್ದರೂ ಲೋಕಸಭಾ ಚುನಾವಣೆ ವಿಚಾರ ಬಂದಾಗ ಮೋದಿಯತ್ತ ಒಲವು ತೋರುತ್ತಾರೆ ಎಂಬುದನ್ನು ಹಿಂದಿನ ಚುನಾವಣೆಗಳು ಸಾಬೀತು ಮಾಡಿವೆ. ಜತೆಗೆ ಹಿಂದುತ್ವವನ್ನು ಪ್ರತಿಪಾದಿಸುವವರು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಬಳಿಕ ಮೋದಿಗೆ ಜೈ ಎನ್ನುತ್ತಿದ್ದಾರೆ. ಹೀಗಾಗಿ ಮೋದಿಯನ್ನು ಮುಂದಿಟ್ಟುಕೊಂಡು ಗೆದ್ದು ಬಿಡಬಹುದು ಎಂಬುದು ಸ್ಥಳೀಯ ಬಿಜೆಪಿ ನಾಯಕರ ಲೆಕ್ಕಾಚಾರವಾಗಿದ್ದು, ಆ ಕಾರಣಕ್ಕಾಗಿಯೇ ಟಿಕೆಟ್ ಗಾಗಿ ದುಂಬಾಲು ಬೀಳುತ್ತಿದ್ದಾರೆ.
ದಕ್ಷಿಣಭಾರತದಲ್ಲಿ ಬಿಜೆಪಿಗೆ ಹೆಚ್ಚಿನ ಸ್ಥಾನವನ್ನು ಗೆದ್ದುಕೊಡಬಹುದಾದ ಯಾವುದಾದರೂ ರಾಜ್ಯವಿದ್ದರೆ ಅದು ಕರ್ನಾಟಕ ಮಾತ್ರ. ಹೀಗಾಗಿ ಪ್ರಧಾನಿ ನರೇಂದ್ರಮೋದಿ ಸೇರಿದಂತೆ ಬಿಜೆಪಿಯ ರಾಷ್ಟ್ರೀಯ ನಾಯಕರೆಲ್ಲರೂ ರಾಜ್ಯದತ್ತ ದೃಷ್ಟಿ ನೆಟ್ಟಿದ್ದಾರೆ. ಆದರೆ ಟಿಕೆಟ್ ಹಂಚಿಕೆ ವಿಚಾರದಲ್ಲಿ ನಡೆದಿರುವ ಪ್ರಯೋಗವೋ ಅಥವಾ ಒಂದಷ್ಟು ಎಡವಟ್ಟುಗಳೋ ಗೊತ್ತಿಲ್ಲ. ಎಲ್ಲೊ ಒಂದು ಕಡೆ ಪಕ್ಷಕ್ಕೆ ಡ್ಯಾಮೇಜ್ ಮಾಡುತ್ತಾ? ಎಂಬ ಪ್ರಶ್ನೆಗಳು ಹುಟ್ಟಿಕೊಂಡಿವೆ.

ಸಣ್ಣ ಕಿಡಿ ಹೊತ್ತಿ ಉರಿಯುತ್ತಿರುವುದೇಕೆ?
ಇವತ್ತು ಕರ್ನಾಟಕದಲ್ಲಿ ಬಿಜೆಪಿ ಬೃಹತ್ ಪಕ್ಷವಾಗಿ ಬೆಳೆದು ನಿಂತಿದ್ದರೆ ಅದಕ್ಕಾಗಿ ಹಲವಾರು ಮಂದಿ ನಾಯಕರು, ಕಾರ್ಯಕರ್ತರು ದುಡಿದಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಹೆಗಲಾಗಿ ಕೆ.ಎಸ್.ಈಶ್ವರಪ್ಪ ಅವರು ಆರಂಭದಿಂದಲೂ ನಿಂತಿದ್ದಾರೆ. ಅಂತಹ ಹಿರಿಯ ನಾಯಕ ಇವತ್ತು ಬಂಡಾಯ ಎದ್ದು ಪಕ್ಷದ ಅಭ್ಯರ್ಥಿ ವಿರುದ್ಧವೇ ಪಕ್ಷೇತರರಾಗಿ ಸ್ಪರ್ಧಿಸುವ ಘೋಷಣೆ ಮಾಡುತ್ತಾರೆ ಎನ್ನುವುದಾದರೆ ಪಕ್ಷದಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವುದು ಸ್ಪಷ್ಟವಾಗಿದೆ.
ಇದೆಲ್ಲದರ ನಡುವೆ ಪಕ್ಷಕ್ಕಾಗಿ ದುಡಿದ ಹಿರಿಯ ನಾಯಕರನ್ನು ಪಕ್ಷ ನಡೆಸಿಕೊಳ್ಳುವ ರೀತಿಯೂ ಸರಿಯಿಲ್ಲ ಎನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಯಾವುದೇ ಭಿನ್ನಾಭಿಪ್ರಾಯಗಳು ಕಾಣಿಸಿಕೊಂಡಾಗ ಅದನ್ನು ಆರಂಭದಲ್ಲಿಯೇ ಸರಿಪಡಿಸುವ ಕೆಲಸಕ್ಕೆ ನಾಯಕರು ಮುಂದಾಗುತ್ತಿಲ್ಲ. ಹೀಗಾಗಿ ಸಣ್ಣ ಕಿಡಿ ಕೂಡ ಬೆಂಕಿಯಾಗಿ ಹೊತ್ತಿ ಉರಿಯುತ್ತಿದೆ. ಇದರ ಪರಿಣಾಮಗಳೇನು? ಎನ್ನುವುದು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಗೊತ್ತಾಗಿದೆ. ಆದರೂ ಬುದ್ದಿಕಲಿತಂತೆ ಕಾಣಿಸುತ್ತಿಲ್ಲ. ಶಿಸ್ತಿನ ಪಕ್ಷ ಎಂದು ಡಂಗೂರ ಸಾರುತ್ತಿದ್ದ ನಾಯಕರ ಅಶಿಸ್ತಿನ ವರ್ತನೆಗಳು ಕಣ್ಣಿಗೆ ರಾಚುತ್ತಿದೆ.

ಪಕ್ಷದ ಮಾನ ಮರ್ಯಾದೆ ಹರಾಜು
ಟಿಕೆಟ್ ಹಂಚಿಕೆ ವಿಚಾರದಲ್ಲಿನ ಭಿನ್ನಾಭಿಪ್ರಾಯ ಮತ್ತು ಬಂಡಾಯವನ್ನು ಹೈಕಮಾಂಡ್ ಮಧ್ಯಪ್ರವೇಶಿಸಿ ಶಮನಗೊಳಿಸುವ ಪ್ರಯತ್ನ ಮಾಡಿದಂತೆ ಕಾಣಿಸುತ್ತಿಲ್ಲ. ಹೀಗಾಗಿ ಬಿಜೆಪಿ ಒಳಗಿನ ಒಳಜಗಳ ಬೀದಿಗೆ ಬಂದಿದೆ. ಆಕ್ರೋಶ ಮಾತುಗಳ ಜತೆ ಜತೆಯಲ್ಲಿಯೇ ಪಕ್ಷದ ಮಾನ ಮರ್ಯಾದೆಯೂ ಹರಾಜಾಗುತ್ತಿದೆ. ಸದ್ಯ ರಾಜ್ಯದಲ್ಲಿ ಇಪ್ಪತ್ತು ಸ್ಥಾನಗಳಿಗೆ ಟಿಕೆಟ್ ಘೋಷಣೆ ಮಾಡಲಾಗಿದೆ. ಇದರಲ್ಲಿ ಕೆಲವೊಂದು ಕ್ಷೇತ್ರಗಳಿಗೆ ಅಚ್ಚರಿಯ ಅಭ್ಯರ್ಥಿಗಳನ್ನು ತರಲಾಗಿದ್ದು, ಕೆಲವರನ್ನು ಕೈಬಿಡಲಾಗಿದೆ. ಈ ಪೈಕಿ ಹಾವೇರಿಯಿಂದ ಟಿಕೆಟ್ ಬಯಸಿದ್ದ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಅವರ ಪುತ್ರ ಕಾಂತೇಶ್ ಅವರಿಗೆ ಟಿಕೆಟ್ ದೊರೆಯದಿರುವುದು ಬಂಡಾಯ ಏಳಲು ದಾರಿ ಮಾಡಿಕೊಟ್ಟಿದೆ.
ಈಶ್ವರಪ್ಪ ಅವರು ನೇರವಾಗಿ ಬಿ.ಎಸ್.ಯಡಿಯೂರಪ್ಪ ಅವರ ಮೇಲೆಯೇ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ. ವಾಗ್ಭಾಣಗಳು ಒಂದರ ಮೇಲೊಂದರಂತೆ ಹೊರ ಬರುತ್ತಿದೆ. ಅದು ಪಕ್ಷದ ಮೇಲೆಯೂ ಪರಿಣಾಮ ಬೀರಿದರೆ ಅಚ್ಚರಿಯಿಲ್ಲ. ಆದರೆ ಯಾರು ಏನೇ ಹಾರಾಡಲಿ, ಕೂಗಾಡಲಿ, ಪಕ್ಷ ಬಿಟ್ಟು ಹೋಗಲಿ ನಾವೇನು ಹೆದರಲ್ಲ ಎಂಬಂತಹ ಧೋರಣೆಗಳು ರಾಷ್ಟ್ರೀಯ ನಾಯಕರಲ್ಲಿ ಕಾಣಿಸುತ್ತಿದೆ. ಏಕೆಂದರೆ ಮೋದಿ ಅವರ ಹೆಸರಿನಲ್ಲಿ ಗೆದ್ದೇ ಗೆಲ್ಲುತ್ತೇವೆ ಎನ್ನುವ ವಿಶ್ವಾಸ ಈ ವರ್ತನೆಗೆ ಕಾರಣನಾ? ಗೊತ್ತಿಲ್ಲ.
ಬಿಜೆಪಿ ಜಗಳದಿಂದ ಕಾಂಗ್ರೆಸ್ಸಿಗೆ ಲಾಭ
ಈಗಾಗಲೇ ಚುನಾವಣೆಗೆ ದಿನಾಂಕ ಘೋಷಣೆಯಾಗಿದೆ. ಇನ್ನು ರಾಜ್ಯದ ಎಂಟು ಸ್ಥಾನಗಳಿಗೆ ಬಿಜೆಪಿ ಜೆಡಿಎಸ್ ಮೈತ್ರಿ ಟಿಕೆಟ್ ಘೋಷಣೆ ಮಾಡಬೇಕಿದೆ. ಅದು ಘೋಷಣೆಯಾದ ಬಳಿಕ ಇನ್ಯಾವ ಭಿನ್ನಾಭಿಪ್ರಾಯಗಳು ಪಕ್ಷದೊಳಗೆ ಹುಟ್ಟಿಕೊಳ್ಳುತ್ತೋ ಗೊತ್ತಿಲ್ಲ. ಆದರೆ ಬಿಜೆಪಿ ಒಳಗಿನ ಭಿನ್ನಾಭಿಪ್ರಾಯಗಳ ಲಾಭವನ್ನು ಕಾಂಗ್ರೆಸ್ ಪಡೆದುಕೊಳ್ಳಲು ಸದ್ದಿಲ್ಲದೆ ತಂತ್ರವನ್ನು ರೂಪಿಸುತ್ತಿದೆ. ರಾಜ್ಯದಲ್ಲಿನ ಪಂಚ ಗ್ಯಾರಂಟಿ ಕಾಂಗ್ರೆಸ್ ಗೆ ಶಕ್ತಿ ತುಂಬಿದೆ. ಅದು ವಿಧಾನಸಭಾ ಚುನಾವಣೆಯಲ್ಲಿ ಮಾಡಿದಂತೆ ಲೋಕಸಭಾ ಚುನಾವಣೆಯಲ್ಲೂ ಕಮಾಲ್ ಮಾಡಿದರೆ ಅದರ ಪರಿಣಾಮವನ್ನು ಬಿಜೆಪಿ ಎದುರಿಸಬೇಕಾಗುತ್ತದೆ. ಮುಂದೇನು? ಕಾದು ನೋಡೋಣ.












Click it and Unblock the Notifications