Congress Ticket list: ಬಜೆಟ್ ಬಳಿಕ ಲೋಕಸಭಾ ಚುನಾವಣೆ 'ಕೈ' ಅಭ್ಯರ್ಥಿಗಳ ಮೊದಲ ಪಟ್ಟಿ ರಿಲೀಸ್?
ಬೆಂಗಳೂರು, ಫೆಬ್ರವರಿ 15: ಕರ್ನಾಟಕ ರಾಜ್ಯಸಭಾ ಚುನಾವಣೆಗೆ ಅಭ್ಯರ್ಥಿ ಘೊಷಿಸಿರುವ ಕಾಂಗ್ರೆಸ್ ಲೋಕಸಭಾ ಚುನಾವಣೆಯ ಸಿದ್ಧತೆಗೆ, ಟಿಕೆಟ್ ಅಂತಿಮಗೊಳಿಸುವ ಕೆಲಸಕ್ಕೆ ವೇಗ ನೀಡಲು ಮುಂದಾಗಿದೆ. ಇದೇ ಫೆಬ್ರವರಿ 16ರಂದು ಕರ್ನಾಟಕ ಬಜೆಟ್ ಮಂಡನೆ ಆಗಲಿದೆ. ನಂತರ ಯಾವ ಕ್ಷಣದಲ್ಲಾದರೂ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಆಗುವ ಸಾಧ್ಯತೆ ಇದೆ.
ಲೋಕಸಭಾ ಚುನಾವಣೆಗಳಿಗೆ ಅಭ್ಯರ್ಥಿಗಳನ್ನು ಫೈನಲ್ ಮಾಡಲು ರಾಜ್ಯ ನಾಯಕರು ಮತ್ತು ಕರ್ನಾಟಕ ಉಸ್ತುವಾರಿಗಳು ವಿವಿಧ ಸುತ್ತಿನ ಸಭೆ ನಡೆಸಿದ್ದಾರೆ. ಆಯಾ ಕ್ಷೇತ್ರಗಳ ಉಸ್ತುವಾರಿ ಸಚಿವರಿಂದ ಅಭ್ಯರ್ಥಿಗಳ ಅಭಿಪ್ರಾಯ ಸಂಗ್ರಹಿಸಿ, ಪರಿಶೀಲಿಸಿ ಅಭ್ಯರ್ಥಿಗಳನ್ನು ಫೈನಲ್ ಮಾಡಲು ಕಾಂಗ್ರೆಸ್ ಯೋಜಿಸಿದೆ.

ತ್ವರಿತ ಟಿಕೆಟ್ ಘೋಷಣೆ ಗೆಲುವಿಗೆ ದಾರಿ
ಸಿಎಂ ಸಿದ್ದರಾಮಯ್ಯ ಅವರು ಬಜೆಟ್ ಮಂಡನೆ ಮಾಡಿದ ಬಳಿಕ ಯಾವ ಕ್ಷಣದಲ್ಲಾದರೂ ಪಕ್ಷವು ಅಭ್ಯರ್ಥಿಗಳ ಮೊದಲ ಹಂತ ಪಟ್ಟಿ ಬಿಡುಗಡೆ ಮಾಡಲಿದೆ. ಇದರಿಂದ ಅಭ್ಯರ್ಥಿಗಳಿಗೆ ಹೆಚ್ಚು ಸಮಯ ಸಿಗಲಿದೆ. ಇದರಿಂದ ಗೆಲುವಿಗೆ ಹೆಚ್ಚಿನ ಅವಕಾಶಗಳು ಸಿಗುತ್ತಿದೆ ಎಂದು ಕಾಂಗ್ರೆಸ್ ಅಭಿಪ್ರಾಯಪಟ್ಟಿದೆ.
ಈ ಸಂಬಂಧ ಎಲ್ಲ ಸಚಿವರು ತಮ್ಮ ತಮ್ಮ ಉಸ್ತುವಾರಿ ಕ್ಷೇತ್ರಗಳಲ್ಲಿನ ಅಭ್ಯರ್ಥಿಗಳ ಕುರಿತಾದ ಅಭಿಪ್ರಾಯದ ವರದಿಯನ್ನು ಇನ್ನೆರಡು ದಿನದಲ್ಲಿ ವರಿಷ್ಠರಿಗೆ ಸಲ್ಲಿಸಬೇಕು ಎಂದು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಕಾಂಗ್ರೆಸ್ ಕರ್ನಾಟಕ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಸಚಿವರಿಗೆ ಸಮೀಕ್ಷಾ ವರದಿ ಸಲ್ಲಿಕೆಗೆ ತಾಕೀತು
ಈಗಾಗಲೇ ಸಚಿವರಿಗೆ ಸೂಚನೆ ನೀಡಲಾಗಿದೆ. ಆದರೆ ಬಹುತೇಕ ಸಚಿವರು ಸಂಭವನೀಯ ಲೋಕಸಭಾ ಚುನಾವಣೆಯ ಅಭ್ಯರ್ಥಿಗಳ ಬಗೆಗೆ ಅಭಿಪ್ರಾಯ ಸಂಗ್ರಹಿಸಿ ವರದಿ ಸಲ್ಲಿಸಿಲ್ಲ. ಹೀಗಾಗಿ ಬುಧವಾರ ಬೆಂಗಳೂರಿನಲ್ಲಿ ನಡೆದ ಕಾಂಗ್ರೆಸ್ ಸಭೆಯಲ್ಲಿ ಎರಡು ದಿನದಲ್ಲಿ ಅಭಿಪ್ರಾಯ ಸಲ್ಲಿಕೆಗೆ ಸೂಚಿಸಿದೆ.
ಇನ್ನೂ ಕೆಲವು ಸಚಿವರು ಸಲ್ಲಿಸಿದ ಶಿಫಾರಸುಗಳನ್ನು ಪರಿಶೀಲಿಸಲಾಗಿದೆ. ಸಲ್ಲಿಕೆಯಾಗುವ ಪಟ್ಟಿಯನ್ನು ಆಧರಿಸಿ ಮತ್ತೊಂದು ಸುತ್ತಿನ ಸಭೆ ನಡೆಸಿ ಅಭ್ಯರ್ತಿಗಳನ್ನು ನಾಯಕರು ಫೈನಲ್ ಮಾಡಲಿದ್ದಾರೆ. ಮೊದಲ ಹಂತದಲ್ಲಿ ಒಂದುಷ್ಟು ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಬಿಡುಗಡೆಗೊಳಿಸಲು ಕಾಂಗ್ರೆಸ್ ಸಜ್ಜಾಗಿದೆ.
ದೆಹಲಿಯಲ್ಲಿ ಮತ್ತೊಮ್ಮೆ ಸಭೆ: ಪಟ್ಟಿ ಫೈನಲ್
ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳ ಸಮೀಕ್ಷೆ ವರದಿ, ಶಿಫಾರಸು ಸಲ್ಲಿಕೆಯಾದ ಬಳಿಕ ದೆಹಲಿಯಲ್ಲಿ ಮತ್ತೊಮ್ಮೆ ಸಭೆ ನಡೆಸಲಾಗುವುದು. ಆಗ ಕರ್ನಾಟಕದ ಸಿಎಂ, ಡಿಸಿಎಂ, ರಾಜ್ಯ ಉಸ್ತುವಾರಿ ಹಾಗೂ ಕೆಲವು ಹೈಕಮಾಂಡ್ ನಾಯಕರು ಸಹ ಸಭೆಯಲ್ಲಿ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಿದ್ದಾರೆ.
ಟಿಕೆಟ್ ಅಂತಿಮಗೊಳಿಸುವ ಪ್ರಕ್ರಿಯೆಗಳ ಬಜೆಟ್ ಬಳಿಕ ಕೆಲವೇ ದಿನಗಳಲ್ಲಿ ಪೂರ್ಣಗೊಳ್ಳಲಿವೆ. ಸಂಭವನೀಯ ಅಭ್ಯರ್ಥಿಗಳ ಕುರಿತು ಮೇಲಿಂದ ಮೇಲೆ ಸಮೀಕ್ಷೆ ನಡೆಸಿ, ಅಭಿಪ್ರಾಯ ಸಂಗ್ರಹಿಸುತ್ತಿದೆ. ಇದು ಸಹ ಕಾಂಗ್ರೆಸ್ ಗೆಲುವಿನ ತಂತ್ರದ ಭಾಗವೇ ಆಗಿದೆ.
ವಿಧಾನಸಭಾ ಚುನಾವಣೆ ಗೆಲುವಿನ ಹುರುಪಿನಲ್ಲಿರುವ ಕಾಂಗ್ರೆಸ್ ಬಿಜೆಪಿ ವಿರುದ್ಧ ಪ್ರಭಾವಿ, ಸೂಕ್ತ ಮತ್ತು ಅರ್ಹ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ನಿರ್ಧರಿಸಿದೆ. ಹೀಗಾಗಿ ಮಹತ್ವದ ಹೆಜ್ಜೆ ಇಡುತ್ತಿದೆ ಎನ್ನಲಾಗಿದೆ.












Click it and Unblock the Notifications