ಬಿಎಸ್‌ವೈ ಬಿಗ್ ಬಾಸ್: ರಾಜಾಹುಲಿ ಕೈಲಿದೆ ಟಿಕೆಟ್ ಆಕಾಂಕ್ಷಿಗಳ ಭವಿಷ್ಯ?
ಭಾರಿ ಕುತೂಹಲ ಕೆರಳಿಸಿದ 2024ರ ಲೋಕಸಭೆ ಚುನಾವಣೆಗೆ ಬಿಜೆಪಿ & ಕಾಂಗ್ರೆಸ್ ಮಧ್ಯೆ ಜಿದ್ದಾಜಿದ್ದಿ ಏರ್ಪಟ್ಟಿದೆ. ಗೆಲುವಿಗಾಗಿ ಎರಡೂ ಪಕ್ಷಗಳ ನಡುವೆ ಮಹಾಯುದ್ಧ ನಡೆದಿದೆ. ಅದ್ರಲ್ಲೂ ಕಾಂಗ್ರೆಸ್ ಅಧಿಕಾರದಲ್ಲಿ ಇರುವ ಕರ್ನಾಟಕದಲ್ಲಿ ಇದೀಗ ಅತಿಹೆಚ್ಚಿನ ಸ್ಥಾನಗಳ ಗೆಲ್ಲಬೇಕು ಎಂಬುದು ಬಿಜೆಪಿ ಲೆಕ್ಕಾಚಾರ. ಈ ಕಾರಣಕ್ಕೆ ಟಿಕೆಟ್ ನೀಡುವಲ್ಲಿ, ಕ್ರಾಂತಿಕಾರಿ ನಿರ್ಧಾರಗಳನ್ನು ಬಿಜೆಪಿ ತೆಗೆದುಕೊಳ್ಳುತ್ತಿದೆ. ಹೀಗಿದ್ದಾಗ ಪ್ರತಾಪ್ ಸಿಂಹ ಅವರ ರಾಜಕೀಯ ಭವಿಷ್ಯ ತೂಗುಯ್ಯಾಲೆಯಲ್ಲಿದೆ.
ಹೌದು, ಯಡಿಯೂರಪ್ಪ ಅವರ ಮಾತನ್ನು ಬಿಜೆಪಿ ಹೈಕಮಾಂಡ್ ಸಂಪೂರ್ಣವಾಗಿ ಕೇಳಿ ಟಿಕೆಟ್ ನೀಡುತ್ತಿದೆ ಎನ್ನುವ ಮಾತು ಕೇಳಿಬರುತ್ತಿದೆ. ಅದರಲ್ಲೂ ಕರ್ನಾಟಕದ 28 ಕ್ಕೆ 28 ಲೋಕಸಭೆ ಕ್ಷೇತ್ರಗಳಿಗೆ ಅಭ್ಯರ್ಥಿ ಆಯ್ಕೆಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಅವರಿಂದ ಸಲಹೆ ಇಲ್ಲದೆ ಒಂದೇ ಒಂದು ಹೆಜ್ಜೆಯನ್ನೂ ಬಿಜೆಪಿ ನಾಯಕರು ಮುಂದಿಡುತ್ತಿಲ್ಲ.

ಹೀಗೆ ಎಲ್ಲೆಲ್ಲೂ ಸಂದಿಗ್ಧ ಪರಿಸ್ಥಿತಿ ನಿರ್ಮಾಣವಾಗಿರುವ ಸಮಯದಲ್ಲೇ ಮೈಸೂರು & ಕೊಡಗು ಹಾಲಿ ಸಂಸದ ಪ್ರತಾಪ್ ಸಿಂಹಗೆ ಟಿಕೆಟ್ ಸಿಗುವುದು ಬಹುತೇಕ ಅನುಮಾನವಾಗಿದೆ. ಹೀಗೆ ಬಿಜೆಪಿ ಒಳಗೆ ಮತ್ತೊಂದು ಸುತ್ತಿನ ತಿಕ್ಕಾಟ ಪಕ್ಕಾ ಎಂಬ ಆರೋಪಗಳು ಕೇಳಿಬರುತ್ತಿವೆ.ಮೈಸೂರಿಗೆ ಯಾರು ಮುಂದಿನ 'ಸಿಂಹ'
ಪ್ರತಾಪ್ ಸಿಂಹ ಹಾಗೂ ಮಾಜಿ ಸಿಎಂ ಯಡಿಯೂರಪ್ಪ ಅವರ ನಡುವೆ ಮುನಿಸು ಇದ್ದೇ, ಇದೆ ಎನ್ನುವ ಆರೋಪ ಮೊದಲಿನಿಂದ ಕೂಡ ಕೇಳಿಬರುತ್ತಿದೆ. ಅದ್ರಲ್ಲೂ ಕರ್ನಾಟಕದಲ್ಲಿ 2023 ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಹೀನಾಯವಾಗಿ ಸೋತ ನಂತರ, ಪ್ರತಾಪ್ ಸಿಂಹ ಅವರು ಪರೋಕ್ಷವಾಗಿ ಬಿಎಸ್‌ವೈ ಅವರ ವಿರುದ್ಧ ಆಕ್ರೋಶ ಹೊರ ಹಾಕಿದ್ದರೆಂದು ಆರೋಪ ಕೇಳಿಬಂದಿತ್ತು. ಇದೆಲ್ಲಾ ಇಬ್ಬರ ನಡುವಿನ ಮುನಿಸಿಗೆ ಕಾರಣ ಎನ್ನಲಾಗುತ್ತಿದೆ. ಇದೆಲ್ಲಕ್ಕಿಂತ ಹೆಚ್ಚಾಗಿ ಪ್ರತಾಪ್ ಸಿಂಹ ಅವರ ಹೆಸರು ಕೆಟ್ಟಿದ್ದು ಲೋಕಸಭೆಗೆ, ಅನಾಮಿಕ ಆಗಂತುಕರು ನುಗ್ಗಿದ ನಂತರ!
ಬಿಜೆಪಿ ವರಿಷ್ಠರಿಗೂ ಸಿಂಹ ಮೇಲೆ ಕೋಪ?
ಲೋಕಸಭೆಯ ಘಟನೆ ಬಳಿಕ, ಪ್ರತಾಪ್ ಸಿಂಹ ಅವರಿಗೆ ಸಾಕಷ್ಟು ಸವಾಲು ಎದುರಾಗಿವೆ. ಈಗಿನ ಬೆಳವಣಿಗೆ ಗಮನಿಸುತ್ತಿದ್ದರೆ ಬಿಜೆಪಿ ಕೇಂದ್ರದ ನಾಯಕರಿಗೆ ಕೂಡ ಪ್ರತಾಪ್ ಸಿಂಹ ಮೇಲೆ ಆಕ್ರೋಶ ಇದೆ ಎನ್ನುವ ಆರೋಪ ಕೂಡ ಕೇಳಿಬರುತ್ತಿದೆ. ಹೀಗಾಗಿ ಈ ಬಾರಿ ಮಾಜಿ ಪತ್ರಕರ್ತರ ಹಾಗೂ ಹಾಲಿ ಮೈಸೂರು & ಕೊಡಗು ಕ್ಷೇತ್ರದ ಲೋಕಸಭಾ ಸದಸ್ಯ ಪ್ರತಾಪ್ ಸಿಂಹ ಅವರಿಗೆ ಟಿಕೆಟ್ ಸಿಗೋದಿಲ್ಲ ಎನ್ನಲಾಗುತ್ತಿದೆ. ಹೀಗಾಗಿ ಬಿಜೆಪಿ ಕೇಂದ್ರ ನಾಯಕರು ಇದೀಗ ಸಿಂಹಗೆ ಟಿಕೆಟ್ ಕೊಡಬೇಕೋ? ಬೇಡವೋ? ಎಂಬ ಬಗ್ಗೆ ಮಾತುಕತೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ಈ ಮೂಲಕ ಹೊಸ ಆಟ ಈಗ ಶುರುವಾದಂತೆ ಕಾಣುತ್ತಿದೆ.
2014ರಲ್ಲಿ ಮೊದಲ ಬಾರಿಗೆ ಆಯ್ಕೆ
ಪ್ರತಾಪ್ ಸಿಂಹ ಕನ್ನಡದ ಪ್ರತಿಷ್ಠಿತ ದಿನಪತ್ರಿಕೆಯಲ್ಲಿ ಅಂಕಣಕಾರರಾಗಿ ವೃತ್ತಿ ಮಾಡುತ್ತಿದ್ದರು. ಆದರೆ 2014ರಲ್ಲಿ ಇಡೀ ದೇಶದಲ್ಲಿ ಪ್ರಧಾನಿ ಮೋದಿ ಅವರ ಹವಾ ಸೃಷ್ಟಿಯಾದ ನಂತರ, ಬಿಜೆಪಿ ಟಿಕೆಟ್ ಪಡೆದು ಮೈಸೂರು ಕ್ಷೇತ್ರದಲ್ಲಿ ಗೆದ್ದು ಬೀಗಿದರು. ಬರೋಬ್ಬರಿ 5,03,908 ಮತ ಪಡೆದಿದ್ದ ಪ್ರತಾಪ್ ಸಿಂಹ ಅವರು ಮೊದಲ ಬಾರಿಗೆ ಸಂಸದರಾಗಿ ಆಯ್ಕೆಯಾದರು. ಇವರ ಎದುರು ನಿಂತಿದ್ದ ಎಚ್. ವಿಶ್ವನಾಥ್ ಅವರು 4,72,300 ಮತಗಳನ್ನು ಪಡೆದಿದ್ದರು.
ಆ ನಂತರ 2019 ರಲ್ಲಿ 6,88,974 ಮತಗಳನ್ನು ಪಡೆದಿದ್ದರು ಪ್ರತಾಪ್ ಸಿಂಹ. ಎದುರಾಳಿ ಸಿ.ಎಚ್. ವಿಜಯಶಂಕರ್ 5,50,327 ಮತಗಳನ್ನು ಪಡೆದಿದ್ದರು. ಇದೀಗ ಪ್ರತಾಪ್ ಸಿಂಹ ಅವರಿಗೆ ಟಿಕೆಟ್ ಸಿಗುವುದು ಅನುಮಾನ ಎಂಬ ಮಾತು ಕೇಳಿಬರುತ್ತಿದೆ. ಹಾಗೇ ಮೈಸೂರಿನ ರಾಜವಂಶದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ, ಮೈಸೂರು ಹಾಗೂ ಕೊಡುಗು ಕ್ಷೇತ್ರದ ಬಿಜೆಪಿ ಟಿಕೆಟ್ ಸಿಗಲಿದೆ ಎಂಬ ಮಾತು ಬಲವಾಗಿ ಓಡಾಡುತ್ತಿದೆ.












Click it and Unblock the Notifications