ಮಾಧ್ಯಮಗಳನ್ನು ನಾಯಿಗೆ ಹೋಲಿಸಿ ತಲೆಹರಟೆ ಮಾಡಿದ ಅನಂತ ಕುಮಾರ್ ಹೆಗಡೆ: ಚುನಾವಣೆ ಹೊತ್ತಲ್ಲಷ್ಟೇ ಸಕ್ರಿಯಗೊಂಡ ಸಂಸದ!
ಸಂಸದ ಅನಂತ್ ಕುಮಾರ್ ಹೆಗಡೆ ದಿನಬೆಳಗಾದರೆ ಸಾಕು ಸುದ್ದಿಯಲ್ಲಿ ಇರುತ್ತಾರೆ. ಹೀಗೆ, ಸಾಲು ಸಾಲು ಆರೋಪಗಳನ್ನ ಹೊತ್ತಿರುವ ಅವರು ಸಂವಿಧಾನ ಬದಲಾಯಿಸುವ ಮಾತು ಆಡಿದ್ದಾರೆ ಎಂಬ ಆರೋಪ ಕೂಡ ಇದೆ. ಈ ಆರೋಪಗಳ ನಡುವೆ ಇತ್ತೀಚೆಗೆ ಕೂಡ ಇದೇ ಅನಂತ್ ಕುಮಾರ್ ಹೆಗಡೆ ಬಿಜೆಪಿ 400ಕ್ಕೂ ಹೆಚ್ಚು ಸ್ಥಾನ ಗೆದ್ದರೆ ಸಂವಿಧಾನ ಬದಲಾವಣೆ ಪಕ್ಕಾ ಎಂದಿದ್ದರು ಎಂಬ ಆರೋಪ ಕೇಳಿಬಂದಿತ್ತು. ಈಗ ನೋಡಿದ್ರೆ ಮಾಧ್ಯಮಗಳನ್ನೇ ಈ ಸಂಸದ ನಾಯಿಗಳಿಗೆ ಹೋಲಿಸಿದ್ದಾರೆ ಅನ್ನೋ ಆರೋಪ ಕೂಡ ಕೇಳಿಬಂದಿದೆ.
ಅಷ್ಟಕ್ಕೂ ಈಗಿನ ಮಾಹಿತಿಗಳ ಪ್ರಕಾರ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಹಾಲಿ ಸಂಸದ ಅನಂತ ಕುಮಾರ್ ಹೆಗಡೆ ಅವರಿಗೆ ಬಿಜೆಪಿ ಟಿಕೆಟ್ ಸಿಗುವುದು ಬಹುತೇಕ ಅನುಮಾನ ಆಗಿದೆ. ಈ ಬಾರಿ ಉತ್ತರ ಕನ್ನಡ ಲೋಕಸಭಾ ಕ್ಷೇತ್ರಕ್ಕೆ ಹೊಸ ಮುಖವನ್ನು ಬಿಜೆಪಿ ಹೈಕಮಾಂಡ್ ಆಯ್ಕೆ ಮಾಡಲಿದೆ ಎಂಬ ನಿರೀಕ್ಷೆಯು ಕೂಡ ಇದೆ.

ಇದೇ ವೇಳೆ ಅನಂತ ಕುಮಾರ್ ಹೆಗಡೆ ಅವರ ಒಂದೊಂದು ಹೇಳಿಕೆ ಕೂಡ ಬಿಜೆಪಿ ನಾಯಕರಿಗೆ ದೊಡ್ಡ ತಲೆನೋವು ತರಿಸುತ್ತಿದೆ. ಇಷ್ಟುದಿನ ಸಂವಿಧಾನ ಬದಲಾವಣೆ ಬಗ್ಗೆ ಮಾತನಾಡುತ್ತಿದ್ದ ಈ ಸಂಸದ, ಈಗ ನೋಡಿದ್ರೆ ಪ್ರಜಾಪ್ರಭುತ್ವದ 4ನೇ ಅಂಗ ಮಾಧ್ಯಮಗಳನ್ನು ನಾಯಿಗೆ ಹೋಲಿಸಿರುವ ಆರೋಪ ಕೂಡ ಕೇಳಿಬಂದಿದೆ.
ಮಾಧ್ಯಮಗಳನ್ನು ನಾಯಿ ಅಂದ್ರಾ?
ಅಂಕೋಲಾ ತಾಲೂಕಿನಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ, ಈ ರೀತಿ ಅನಂತ ಕುಮಾರ್ ಹೆಗಡೆ ಅವರು ಮಾಧ್ಯಮಗಳ ವಿರುದ್ಧ ಮಾತನಾಡಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ. 'ವಿವಾದ ಸೃಷ್ಟಿಯಾದರೂ ದೃಢವಾಗಿ ನಿಲ್ಲುವುದು ನಿಜವಾದ ನಾಯಕತ್ವ. ಪತ್ರಿಕೆಗಳಲ್ಲಿ, ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿರುವ ಚರ್ಚೆಗೆ ಕಾರ್ಯಕರ್ತರು ಈಗ ತಲೆಕೆಡಿಸಿಕೊಳ್ಳಬಾರದು' ಎಂದಿದ್ದಾರೆ.
ಹಾಗೇ ತಮ್ಮ ಮಾತು ಮುಂದುವರಿಸಿರುವ ಅವರು 'ಆನೆ ನಡೆದು ಹೋಗುವಾಗ ನಾಯಿಗಳು ಬೊಗಳುವುದು ಸಹಜ, ಅವು ಬೊಗಳಿದರೆ ಮಾತ್ರ ಆನೆಗೆ ಒಂದು ಗತ್ತು ಬರುತ್ತದೆ' ಎಂದಿದ್ದಾರೆ. ಈ ಮೂಲಕವಾಗಿ ಅನಂತ ಕುಮಾರ್ ಹೆಗಡೆ ಅವರು ಮಾಧ್ಯಮಗಳನ್ನು ನಾಯಿಗೆ ಹೋಲಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
2014 & 2019ರಲ್ಲಿ ಭರ್ಜರಿ ಗೆಲುವು
ಅನಂತ ಕುಮಾರ್ ಹೆಗಡೆ ಉತ್ತರ ಕನ್ನಡ ಕ್ಷೇತ್ರದಿಂದ ಸತತವಾಗಿ ಆರಿಸಿ ಬಂದಿದ್ದಾರೆ. ಈ ನಡುವೆ 2014 ಹಾಗೂ 2019ರಲ್ಲಿ ಅವರು ದೊಡ್ಡ ಅಂತರದ ಗೆಲುವು ಸಾಧಿಸಿದ್ದಾರೆ. ಈಗ ಮತ್ತೊಮ್ಮೆ ಬಿಜೆಪಿ ಟಿಕೆಟ್ ಪಡೆಯಲು ಕಾಯುತ್ತಿದ್ದಾರೆ. ಆದ್ರೆ ಈ ಬಾರಿ ಹೊಸ ಮುಖಕ್ಕೆ ಬಿಜೆಪಿ ಹೈಕಮಾಂಡ್ ಅವಕಾಶ ಕೊಡುವ ಸಾಧ್ಯತೆ ಇದೆ ಎನ್ನಲಾಗಿದೆ. 2014 ರಲ್ಲಿ ಒಟ್ಟು 5,46,939 ಮತ ಪಡೆದಿದ್ದರು ಅನಂತ ಕುಮಾರ್ ಹೆಗಡೆ. ಮತ್ತು 2019 ರಲ್ಲಿ ಬರೋಬ್ಬರಿ 7,86,042 ಮತಗಳನ್ನು ಅವರು ಪಡೆದಿದ್ದರು.
ಒಟ್ನಲ್ಲಿ ಬಿಜೆಪಿ ನಾಯಕರಿಗೆ ಕೂಡ ಈಗ ಅನಂತ ಕುಮಾರ್ ಹೆಗಡೆ ನೀಡುತ್ತಿರುವ ಹೇಳಿಕೆ ದೊಡ್ಡ ತಲೆನೋವಾಗಿದೆ. ಹೀಗಾಗಿ ಬಿಜೆಪಿ ಕೇಂದ್ರ ನಾಯಕರು ಶಿಸ್ತು ಕ್ರಮ ಕೈಗೊಂಡು, ಖಡಕ್ ವಾರ್ನಿಂಗ್ ಕೊಡ್ತಾರಾ? ಅಥವಾ ಅನಂತ ಕುಮಾರ್ ಹೆಗಡೆ ಮಾತುಗಳು ಹೀಗೆಯೇ ಮುಂದುವರಿಯುತ್ತವಾ? ಅನ್ನೋದನ್ನ ಕಾದು ನೋಡಬೇಕಿದೆ. ಅಲ್ಲಿಯವರೆಗೂ ಫೈಟಿಂಗ್ ಮಾತ್ರ ಇದ್ದೇ ಇರಲಿದೆ, ಈ ರೀತಿ ಅನಂತ ಕುಮಾರ್ ಹೆಗಡೆ ನೀಡುತ್ತಿರುವ ಹೇಳಿಕೆ ಇದೀಗ ಕರ್ನಾಟಕದ ಕಾಂಗ್ರೆಸ್ ನಾಯಕರಿಗೆ ದೊಡ್ಡ ಅಸ್ತ್ರ ನೀಡಿದಂತೆ ಆಗುತ್ತಿದೆ.












Click it and Unblock the Notifications