ಕನ್ನಡಪ್ರಭ- ಸಿ ಫೋರ್ ಸಮೀಕ್ಷೆ ಫಲಿತಾಂಶ ಪ್ರಕಟ
ಬೆಂಗಳೂರು, ಫೆ.20: ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಳೆದ ವಾರ ರಾಷ್ಟ್ರಮಟ್ಟದ ಸಮೀಕ್ಷೆಯೊಂದು ಹೊರಬಿದ್ದಿತ್ತು. ಭಾರತೀಯ ಜನತಾ ಪಕ್ಷ ನೇತೃತ್ವದ ಎನ್ ಡಿಎ ಮೈತ್ರಿಕೂಟವು ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರುವುದು ತುಸ ಕಷ್ಟವೆನಿಸಿದರೂ ಕಾಂಗ್ರೆಸ್ಸಿಗೆ ತೀವ್ರ ಹಿನ್ನಡೆಯಾಗಲಿದೆ ಎಂಬುದು ಟೈಮ್ಸ್ ನೌ-ಸಿ ವೋಟರ್ಸ್ ಸಮೀಕ್ಷೆಯ ತಾತ್ಪರ್ಯವಾಗಿತ್ತು.
ಇದೀಗ ಕರ್ನಾಟಕಕ್ಕೆ ಅನ್ವಯವಾಗುವಂತೆ ಕನ್ನಡಪ್ರಭ ಸಿ-ಫೋರ್ ಸಮೀಕ್ಷೆಯ ಫಲಿತಾಂಶ ಹೊರಬಂದಿದೆ. ತಾಜಾ ಎರಡೂ ಸಮೀಕ್ಷೆಗಳನ್ನೂ ಮುಂದಿಟ್ಟುಕೊಂಡು ನೋಡಿದಾಗ ರಾಜ್ಯದಲ್ಲಿ ಬಿಜೆಪಿ, ಕಾಂಗ್ರೆಸ್ಸಿಗಿಂತ ಹಿಂದೆ ಬಿದ್ದಿರುವುದು ಸ್ಪಷ್ಟವಾಗುತ್ತದೆ. ಟೈಮ್ಸ್ ನೌ-ಸಿ ವೋಟರ್ಸ್ ಭವಿಷ್ಯದ ಪ್ರಕಾರ Congress 14, BJP 11, JDS 2 ಮತ್ತು AAP 1 ಸ್ಥಾನ ಗಳಿಸುವುದಿತ್ತು.
ಸಮೀಕ್ಷೆಯ ವಿವರ ಹೀಗಿದೆ: ಜನವರಿ 19 ರಿಂದ ಫೆ. 14ರವರೆಗೆ ರಾಜ್ಯದ 28 ಲೋಕಸಭೆ ಕ್ಷೇತ್ರಗಳಲ್ಲಿ ಈ ಸಮೀಕ್ಷೆ ನಡೆಸಲಾಗಿದೆ. ಎಲ್ಲ ಕ್ಷೇತ್ರಗಳಲ್ಲೂ ತಲಾ 1,000 ಮತದಾರರ ಅಭಿಪ್ರಾಯ ಸಂಗ್ರಹಿಸಲಾಗಿದೆ. ಇಡೀ ರಾಜ್ಯಾದ್ಯಂತ ಒಟ್ಟು 28,036 ಮತದಾರರ ಅಭಿಪ್ರಾಯದಿಂದ ಈ ಸಮೀಕ್ಷೆ ರೂಪಿಸಿಲಾಗಿದೆ.
ರಾಜ್ಯದ 383 ನಗರ- ಪಟ್ಟಣ, ಹಾಗೂ 928 ಗ್ರಾಮೀಣ ಪ್ರದೇಶಗಳಲ್ಲಿ ಸಮೀಕ್ಷೆ ನಡೆಸಲಾಗಿದೆ. ಎಲ್ಲ ಜಾತಿ, ವಯೋಮಾನದ ಮತದಾರರನ್ನು ಸಮೀಕ್ಷೆಯಲ್ಲಿ ಪರಿಗಣಿಸಲಾಗಿದೆ. ಈ ಸಮೀಕ್ಷೆಯು ಶೇ. 95ರಷ್ಟು ನಿಖರವಾಗಿದ್ದು, ಹಿಂದಿನ 3 ಸಮೀಕ್ಷೆಗಳಲ್ಲೂ ಇದು ನಿಜವಾಗಿದೆ ಎಂದು ಪತ್ರಿಕೆ ತಿಳಿಸಿದೆ.

Congress 14, BJP 12 ಮತ್ತು JDS 2
ಇದೀಗ ಕನ್ನಡಪ್ರಭ ಸಿ-ಫೋರ್ ಸಮೀಕ್ಷೆಯ ಫಲಿತಾಂಶದ ಪ್ರಕಾರ Congress 14, BJP 12 ಮತ್ತು JDS 2 ಸ್ಥಾನ ಗಳಿಸುವ ಅಂದಾಜಿದೆ. ಅಂದರೆ AAPಗೆ ನೋ ಛಾನ್ಸ್ ಎಂಬಂತಾಗಿದೆ. ಅಷ್ಟರಮಟ್ಟಿಗೆ ಎರಡೂ ಸಮೀಕ್ಷೆಗಳು ನಿಕಟ/ನಿಖರವಾಗಿವೆ. ಕಳೆದ ಲೋಕಸಭಾ ಚುನಾವಣೆಗೆ ಹೋಲಿಸಿದಲ್ಲಿ ಈಗಿನ ಆಡಳಿತಾರೂಢ ಕಾಂಗ್ರೆಸ್ ಎರಡು ಪಟ್ಟು ಹೆಚ್ಚು ಸ್ಥಾನ ಪಡೆಯಲಿದೆ. ಅದೇ ಬಿಜೆಪಿ ಅನಾಮತ್ತು 7 ಸೀಟುಗಳನ್ನು ಕಳೆದುಕೊಳ್ಳಲಿದೆ. ನಗರ ಪ್ರದೇಶಗಳಲ್ಲಿ ಹೆಚ್ಚು ಸದ್ದು ಮಾಡುತ್ತಿರುವ ಆಮ್ ಆದ್ಮಿ ಪಕ್ಷಕ್ಕೆ ಕೇವಲ ಶೇ. 10ರಷ್ಟು ಮತ ಪ್ರಾಪ್ತಿಯಾಗಲಿದ್ದು, ರಾಜ್ಯ ರಾಜಕಾರಣದಲ್ಲಿ ಯಾವುದೇ ಪ್ರಭಾವ ಬೀರುವುದಿಲ್ಲ ಎಂಬುದು ಮತದಾರ ಪ್ರಭುವಿನ ಸ್ಪಷ್ಟ ಅಭಿಪ್ರಾಯ.

ರಾಜ್ಯದ ಮತದಾರರ ಮನಸ್ಥಿತಿಯಲ್ಲಿ ಬದಲಾವಣೆ ಇಲ್ಲ
ಸಮೀಕ್ಷೆಯನ್ನು ಆಧರಿಸಿ ಹೇಳುವುದಾದರೆ ರಾಜ್ಯದ ಮತದಾರರ ಮನಸ್ಥಿತಿಯಲ್ಲಿ ಯಾವುದೇ ಬದಲಾವಣೆಯಾಗದೆ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ಪಕ್ಷಕ್ಕೆ (ಬಿಜೆಪಿ ಎಂದು ಪರಿಗಣಿಸಿದಾಗ) ವಿರುದ್ಧವಾಗಿ ಬೇರೊಂದು ಪಕ್ಷವನ್ನು (ಕಾಂಗ್ರೆಸ್) ಆಯ್ಕೆ ಮಾಡಿಕೊಳ್ಳುವ ಸಂಪ್ರದಾಯ ಮುಂದುವರಿದಿದೆ ಎನ್ನಬಹುದು. ವಿಧಾನಸಭೆ ಚುನಾವಣೆಯಲ್ಲಿ ಸಂಪೂರ್ಣ ನೆಲಕಚ್ಚಿದ್ದ ಬಿಜೆಪಿ, ಮೋದಿ ಅಲೆಯಲ್ಲಿ ಸ್ವಲ್ಪ ಮಟ್ಟಿಗೆ ಚೇತರಿಸಿಕೊಂಡಿರುವುದು ಸಮೀಕ್ಷೆಯಲ್ಲಿ ಎದ್ದು ಕಾಣುತ್ತದೆ.

ದೊಡ್ಡಗೌಡರಿಂದ ಜೆಡಿಎಸ್ಸಿಗೆ ಕುಟುಕು ಜೀವ:
ಇಲ್ಲಿ ಜೆಡಿಎಸ್ ಬಗ್ಗೆಯೂ ಪ್ರಸ್ತಾಪ ಮಾಡಬೇಕಾಗುತ್ತದೆ. ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ಹಾಸನದಲ್ಲಿ ಪಕ್ಷಕ್ಕೆ ಮತ್ತೆ ಆಸರೆಯಾಗಲಿದ್ದಾರೆ. ಅದು ಬಿಟ್ಟರೆ ಉಳಿದೆಡೆ ಪಕ್ಷವು ಅಸ್ತಿತ್ವಕ್ಕಾಗಿ ಹೋರಾಡಬೇಕಿದೆ. ತುಮಕೂರಿನಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲವು ಪಡೆಯಬಹುದು ಎನ್ನುತ್ತದೆ ಸಮೀಕ್ಷೆ. ಆದರೆ ಪ್ರಮುಖ ಮೂರೂ ಪಕ್ಷಗಳಲ್ಲಿ ತೀವ್ರ ಜಿದ್ದಾಜಿದ್ದಿ ಏರ್ಪಡುವ ಅಂದಾಜಿದೆ.

ಹಳೆ ಮೈಸೂರು, ಹೈ- ಕ ಭಾಗದಲ್ಲಿ ಕಾಂಗ್ರೆಸ್ ಮೇಲು'ಗೈ'
ಹಳೆ ಮೈಸೂರು ಹಾಗೂ ಹೈದರಾಬಾದ್- ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸುವ ಸಾಧ್ಯತೆಯಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಆರ್ಟಿಕಲ್ 371-ಜೆ ವಿಶೇಷ ಮಾನ್ಯತೆ ಪ್ರಾಪ್ತಿಯಾಗಿರುವುದು ಚುನಾವಣೆ ಫಲಿತಾಂಶದ ಮೇಲೆ ಪ್ರಭಾವ ಬೀರುವ ಸಾಧ್ಯತೆ ನಿಚ್ಚಳವಾಗಿದೆ. ಹಳೆ ಮೈಸೂರು ಹಾಗೂ ಹೈದರಾಬಾದ್-ಕರ್ನಾಟಕದ 14 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ 11 ಸೀಟುಗಳು ದಕ್ಕಲಿವೆ.
ಹಳೆ ಮೈಸೂರು ಭಾಗ ಹೊರತುಪಡಿಸಿ ಬೇರೆಡೆ ಜೆಡಿಎಸ್ ಆಟಕ್ಕುಂಟು ಲೆಕ್ಕಕ್ಕಿಲ್ಲ. ಸುಮಾರು 13 ಲೋಕಸಭಾ ಕ್ಷೇತ್ರಗಳಲ್ಲಿ ಜೆಡಿಎಸ್‌ಗೆ ಎರಡಂಕಿ ಪ್ರಮಾಣದ ಮತದ ಪಾಲು ಸಿಗುವುದೂ ಕಷ್ಟ ಎನ್ನುತ್ತದೆ ಸಮೀಕ್ಷೆ.

ಬೆಂಗಳೂರು, ಮುಂ-ಕ, ಮಧ್ಯ ಕರ್ನಾಟಕದಲ್ಲಿ ಬಿಜೆಪಿ ಪ್ರಾಬಲ್ಯ
ಬೆಂಗಳೂರು, ಮುಂಬೈ- ಕರ್ನಾಟಕ, ಮಧ್ಯ ಕರ್ನಾಟಕದಲ್ಲಿ ಬಿಜೆಪಿಯ ಪ್ರಾಬಲ್ಯ ಮುಂದುವರಿದಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಪಕ್ಷ ತ್ಯಜಿಸಿದ ಪರಿಣಾಮ ಮುಂಬೈ-ಕರ್ನಾಟಕ ಹಾಗೂ ಮಧ್ಯ ಕರ್ನಾಟಕದಲ್ಲಿ ಬಿಜೆಪಿ ಹೀನಾಯ ಸೋಲು ಅನುಭವಿಸಿತ್ತು.
ಕಳೆದ ಚುನಾವಣೆಯಲ್ಲಿ ಬೆಂಗಳೂರಿನಲ್ಲಿ ಬಿಜೆಪಿ 3 ಸ್ಥಾನಗಳನ್ನು ತನ್ನ ಮಡಿಲಿಗೆ ಹಾಕಿಕೊಂಡಿತ್ತು. ಆದರೆ ಸದರಿ ಸಮೀಕ್ಷೆಯ ಬೆಂಗಳೂರು ಸೆಂಟ್ರಲ್ ಕ್ಷೇತ್ರವನ್ನು ಹೊರತುಪಡಿಸಿ ಮತ್ತೆರಡು ಕ್ಷೇತ್ರಗಳನ್ನು ಬಿಜೆಪಿ ಉಳಿಸಿಕೊಳ್ಳಲಿದೆ.

ಏಳು ಹಾಲಿ ಸಂಸದರಿಗೆ ಗಂಡಾಂತರ:
ಹಾಲಿ ಸಂಸದರ ಪೈಕಿ ಏಳು ಮಂದಿಯ ಕಾರ್ಯವೈಖರಿ ಬಗ್ಗೆ ಮತದಾರರು ಬೇಸರವ್ಯಕ್ತಪಡಿಸಿದ್ದಾರೆ. ಮುಂದೆ ನಡೆಯುವ ಚುನಾವಣೆಯಲ್ಲಿ ಇವರಿಂದ ಮುಕ್ತಿ ಬಯಸಿದ್ದಾರೆ. ಯಾರವರು ಅಂದರೆ ಬೆಂಗಳೂರು ಸೆಂಟ್ರಲ್, ಬಳ್ಳಾರಿ, ಬೀದರ್, ರಾಯಚೂರು, ದಕ್ಷಿಣ ಕನ್ನಡ, ಚಿತ್ರದುರ್ಗ ಹಾಗೂ ತುಮಕೂರು ಕ್ಷೇತ್ರಗಳ ಹಾಲಿ ಸಂಸದರು.
ಇದರಲ್ಲಿ ಆರು ಕ್ಷೇತ್ರಗಳಲ್ಲಿ ಬಿಜೆಪಿ ಸಂಸದರಿದ್ದಾರೆ. ಬೀದರಿನಲ್ಲಿ ಕಾಂಗ್ರೆಸ್ ವಿರೋಧಿ ಅಲೆ ಬೀಸುತ್ತಿದೆ.

ಪರಮೇಶ್ವರ್ ಬಗ್ಗೆ ಮೃಧು ಧೋರಣೆ:
ಲೋಕಸಭೆ ಚುನಾವಣೆಗೂ ಮುಂಚೆ ಕೆಪಿಸಿಸಿ ಅಧ್ಯಕ್ಷ ಡಾ. ಜಿ ಪರಮೇಶ್ವರ್ ಅವರಿಗೆ ಉಪಮುಖ್ಯಮಂತ್ರಿ ಹುದ್ದೆ ನೀಡಿದರೆ ಹೆಚ್ಚು ಲಾಭವಾಗುತ್ತದೆ ಎನ್ನುತ್ತಿದೆ ಸಮೀಕ್ಷೆ. ಅಂದರೆ ಪರಮೇಶ್ವರ್ ಅವರು ಡಿಸಿಎಂ ಆದರೆ ಲೋಕ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಹೆಚ್ಚು ಮತ ಹಾಕುತ್ತೇವೆ ಎಂದು ಶೇ. 72ರಷ್ಟು ಮತದಾರರು ತಿಳಿಸಿದ್ದಾರೆ. ಇದರಿಂದ ಕಾಂಗ್ರೆಸ್ಸಿನ ಮತ ಹಂಚಿಕೆ ಹೆಚ್ಚಾಗಿ, ಪಕ್ಷ ಒಂದಷ್ಟು ಹೆಚ್ಚಿಗೆ (14 ಸ್ಥಾನಕ್ಕಿಂತ) ಸೀಟು ಗಳಿಸುತ್ತದಾ? ಕಾದುನೋಡಬೇಕಿದೆ.

ಪ್ರಧಾನಿ ಯಾರಾಗಬಹುದು?
ನರೇಂದ್ರ ಮೋದಿ 40 %
ರಾಹುಲ್ ಗಾಂಧಿ 30 %
ಅರವಿಂದ್ ಕೇಜ್ರಿವಾಲ್ 3 %
ಏನನ್ನೂ ಹೇಳೋಲ್ಲ, ಇನ್ನಿತರೆ 27 %
-
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video











Click it and Unblock the Notifications