ಸ್ಥಳೀಯ ಸಂಸ್ಥೆಗಳ ಚುನಾವಣೆ : ಮೈತ್ರಿ ಸರ್ಕಾರಕ್ಕೆ ಮೊದಲ ಪರೀಕ್ಷೆ
ಬೆಂಗಳೂರು, ಆಗಸ್ಟ್ 29 : ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರಕ್ಕೆ ಮೊದಲ ಅಗ್ನಿ ಪರೀಕ್ಷೆ ಎದುರಾಗಿದೆ. ಆ.31ರಂದು 105 ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಯಲಿದೆ. ರಾಜ್ಯದಲ್ಲಿ ಒಟ್ಟಾಗಿ ಆಡಳಿತ ನಡೆಸುತ್ತಿರುವ ಪಕ್ಷಗಳು, ಸ್ಥಳೀಯ ಚುನಾವಣೆಯಲ್ಲಿ ಯಾವುದೇ ಮೈತ್ರಿ ಮಾಡಿಕೊಂಡಿಲ್ಲ.
21 ಜಿಲ್ಲೆಗಳ 105 ಸ್ಥಳೀಯ ಸಂಸ್ಥೆಗಳು, ಮೈಸೂರು, ಶಿವಮೊಗ್ಗ ಮತ್ತು ತುಮಕೂರು ಮಹಾನಗರ ಪಾಲಿಕೆಗಳಿಗೆ ಶುಕ್ರವಾರ ಚುನಾವಣೆ ನಡೆಯಲಿದೆ. ಸೆ.3ರಂದು ಚುನಾವಣೆ ಫಲಿತಾಂಶ ಪ್ರಕಟವಾಗಲಿದೆ. ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿದೆ.
ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಮುಗಿದ ಮೂರು ತಿಂಗಳ ಬಳಿಕ ಮತ್ತು ಲೋಕಸಭೆ ಚುನಾವಣೆ ಎದುರಾಗಿರುವಾಗ ನಡೆಯುತ್ತಿರುವ ಚುನಾವಣೆ ಇದಾಗಿದೆ. ಪಕ್ಷಗಳು ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆಯನ್ನು ಬಲಪಡಿಸಿಕೊಳ್ಳಲು ಚುನಾವಣೆ ಸಹಾಯಕವಾಗಲಿದೆ.
ಕಾಂಗ್ರೆಸ್ ಮತ್ತು ಜೆಡಿಎಸ್ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಮೈತ್ರಿ ಮಾಡಿಕೊಂಡಿಲ್ಲ. ಚುನಾವಣೆ ಮುಗಿದ ಮೇಲೆ ಅಗತ್ಯವಿದ್ದರೆ ಮೈತ್ರಿ ಮಾಡಿಕೊಳ್ಳಲು ಮುಂದಾಗಿವೆ. ವಿಧಾನಸಭೆ ಚುನಾವಣೆಯಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಬಿಜೆಪಿ ಸ್ಥಳೀಯ ಮಟ್ಟದಲ್ಲಿ ಪಕ್ಷಕ್ಕಿರುವ ಶಕ್ತಿ ಪ್ರದರ್ಶನ ಮಾಡಲು ಮುಂದಾಗಿದೆ.

ಎಷ್ಟು ಸ್ಥಾನಗಳಿಗೆ ಚುನಾವಣೆ
ಆಗಸ್ಟ್ 31ರಂದು 21 ಜಿಲ್ಲೆಗಳ 105 ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಯುತ್ತಿದೆ. 29 ನಗರ ಸಭೆ (927 ವಾರ್ಡ್), 53 ಪುರಸಭೆ (1247 ವಾರ್ಡ್), 23 ಪಟ್ಟಣ ಪಂಚಾಯಿತಿ (400 ವಾರ್ಡ್) ಗಳಿಗೆ ಶುಕ್ರವಾರ ಚುನಾವಣೆ ನಡೆಯಲಿದೆ.
ಮೈಸೂರು ಮಹಾನಗರ ಪಾಲಿಕೆಯ 65 ವಾರ್ಡ್, ಶಿವಮೊಗ್ಗ ಮಹಾನಗರ ಪಾಲಿಕೆಯ 35 ವಾರ್ಡ್ ಮತ್ತು ತುಮಕೂರು ಮಹಾನಗರ ಪಾಲಿಕೆಯ 35 ವಾರ್ಡ್‌ಗಳಿಗೂ ಶುಕ್ರವಾರ ಚುನಾವಣೆ ನಡೆಯಲಿದೆ.

ಕಾಂಗ್ರೆಸ್ ಹೆಚ್ಚು ಸ್ಥಾನ ಗೆದ್ದಿತ್ತು
2013ರಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆದಾಗ ಕಾಂಗ್ರೆಸ್ ಪಕ್ಷ ಶೇ 40ರಷ್ಟು ಸ್ಥಾನಗಳಲ್ಲಿ ಜಯಗಳಿಸಿತ್ತು. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವೇ ಅಧಿಕಾರದಲ್ಲಿತ್ತು. ಈ ಬಾರಿ ಚುನಾವಣಾ ಚಿತ್ರಣ ಸ್ವಲ್ಪ ಬದಲಾವಣೆಯಾಗುವ ನಿರೀಕ್ಷೆ ಇದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದ್ದರೂ ಅದು ಮೈತ್ರಿ ಸರ್ಕಾರವಾಗಿದೆ.
ಈ ಚುನಾವಣೆ ಎಲ್ಲಾ ಪಕ್ಷಗಳಿಗೂ ಪ್ರಮುಖವಾಗಿದೆ. ಏಕೆಂದರೆ ತಳಮಟ್ಟದಲ್ಲಿ ಪಕ್ಷ ಗಟ್ಟಿಯಾಗಿದೆ ಎಂದು ಹೇಳಿಕೊಳ್ಳಬೇಕಾದರೆ ಪಕ್ಷದ ಅಭ್ಯರ್ಥಿಗಳು ಗೆದ್ದು ಬರಬೇಕು. ಆದರೆ, ಈ ಚುನಾವಣೆಯ ವಿಚಾರಗಳು ಸಹ ಭಿನ್ನವಾಗಿರುತ್ತದೆ. ಆದ್ದರಿಂದ, ಗೆಲುವು ಯಾರಿಗೆ ಎಂದು ಊಹಿಸುವುದು ಕಷ್ಟ.

ಶೇ 60ರಷ್ಟಲ್ಲಿ ಗೆಲುವು
2018ರ ವಿಧಾನಸಭೆ ಚುನಾವಣೆಯಲ್ಲಿ 104 ಸ್ಥಾನಗಳಲ್ಲಿ ಜಯಗಳಿಸಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಬಿಜೆಪಿಗೆ ಅಧಿಕಾರ ಸಿಗಲಿಲ್ಲ. ಆದರೆ, ಸ್ಥಳೀಯ ಸಂಸ್ಥೆಗಳಲ್ಲಿ ತಮ್ಮ ಹಿಡಿತ ಬಲವಾಗಿದೆ ಎಂದು ಬಿಜೆಪಿ ತೋರಿಸಲು ಚುನಾವಣೆ ಸಹಾಯಕವಾಗಲಿದೆ. ಶೇ 60ರಷ್ಟು ಸ್ಥಾನಗಳಲ್ಲಿ ಗೆಲುವು ಸಾಧಿಸುತ್ತೇವೆ ಎಂದು ಪಕ್ಷದ ನಾಯಕರು ಹೇಳುತ್ತಿದ್ದಾರೆ.
ಮೂರು ಮಹಾನಗರ ಪಾಲಿಕೆಗಳಿಗೂ ಚುನಾವಣೆ ನಡೆಯುತ್ತಿದೆ. ಇವುಗಳಲ್ಲಿ ಕನಿಷ್ಠ 2ರಲ್ಲಿ ಜಯಗಳಿಸುವುದು ಬಿಜೆಪಿಯ ತಂತ್ರವಾಗಿದೆ. ಯಾರಿಗೆ ಯಾವ ಪಾಲಿಕೆ ಸಿಗುತ್ತದೆ? ಎಂದು ತಿಳಿಯಲು ಸೆ.3ರ ತನಕ ಕಾಯಬೇಕಿದೆ.

ಜೆಡಿಎಸ್‌ಗೆ ಸೀಟು ಉಳಿಸಿಕೊಳ್ಳುವ ಸವಾಲು
ಜೆಡಿಎಸ್ ಕಳೆದ ಬಾರಿಯ ಚುನಾವಣೆಗಳಲ್ಲಿ ಗೆದ್ದ ಸ್ಥಳೀಯ ಸಂಸ್ಥೆಗಳನ್ನು ಉಳಿಸಿಕೊಳ್ಳಲು ಪ್ರಯತ್ನ ನಡೆಸಲಿದೆ. ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾರೆ. ಈ ಅಂಶ ಪಕ್ಷಕ್ಕೆ ಹೆಚ್ಚಿನ ಸ್ಥಾನಗಳಲ್ಲಿ ಜಯಗಳಿಸಲು ಸಹಕಾರಿಯಾಗಲಿದೆ ಎಂಬ ನಿರೀಕ್ಷೆಯಲ್ಲಿ ಪಕ್ಷದ ಕಾರ್ಯಕರ್ತರಿದ್ದಾರೆ.












Click it and Unblock the Notifications