ಸಾರಿಗೆ ನೌಕರರ ಮುಷ್ಕರ : ಬುಧವಾರ ಏನಾಯ್ತು?
ಬೆಂಗಳೂರು, ಜುಲೈ 27 : ಸಾರಿಗೆ ನೌಕರರ ಮುಷ್ಕರ ಅಂತ್ಯಗೊಳ್ಳುವ ಸಾಧ್ಯತೆ ಇದೆ. ಶೇ 12ರಷ್ಟು ವೇತನ ಹೆಚ್ಚಳಕ್ಕೆ ಸರ್ಕಾರ ಒಪ್ಪಿಗೆ ನೀಡಿದ್ದು, ನೌಕರರು ಸಂಜೆಯಿಂದಲೇ ಕೆಲಸಕ್ಕೆ ಹಾಜರಾಗಲಿದ್ದಾರೆ. 5 ಗಂಟೆ ಬಳಿಕ ಅಂತಿಮ ತೀರ್ಮಾನವನ್ನು ನೌಕರರು ಪ್ರಕಟಿಸಲಿದ್ದಾರೆ. [ಸಾರಿಗೆ ನೌಕರರ ಮುಷ್ಕರ ವಾಪಸ್]
ನೌಕರರ ಜೊತೆ ಮಾತುಕತೆ ನಡೆಸಿದ ಬಳಿಕ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು. ಶೇ 12ರಷ್ಟು ವೇತನ ಹೆಚ್ಚಳ ಮಾಡಲು ಸಿದ್ದರಾಮಯ್ಯ ಅವರು ಒಪ್ಪಿಗೆ ನೀಡಿದರು.
ಸಚಿವರ ಜೊತೆ ಸಭೆ : ಬೆಂಗಳೂರಿನ ಶಾಂತಿನಗರದಲ್ಲಿರುವ ಕೆಎಸ್ಆರ್‌ಟಿಸಿ ಕೇಂದ್ರ ಕಚೇರಿಯಲ್ಲಿ ಸಾರಿಗೆ ಇಲಾಖೆ ನೌಕರರ ಜೊತೆ ಸಚಿವ ರಾಮಲಿಂಗಾ ರೆಡ್ಡಿ ಮಹತ್ವದ ಸಭೆ ನಡೆಸುತ್ತಿದ್ದಾರೆ.
ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಬುಧವಾರ ಬೆಳಗ್ಗೆ ಶಾಂತಿನಗರದ ಕೆಎಸ್ಆರ್‌ಟಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದರು. ಮುಷ್ಕರ ಕೈ ಬಿಟ್ಟು ಮಾತುಕತೆಗೆ ಬರುವಂತೆ ಮುಷ್ಕರ ನಿರತ ನೌಕರರಿಗೆ ಮನವಿ ಮಾಡಿದರು.[ರಾಮಲಿಂಗಾ ರೆಡ್ಡಿ ಹೇಳಿದ್ದೇನು?]
ಪೊಲೀಸ್ ಭದ್ರತೆ ಜೊತೆ ಬಸ್ ಸಂಚಾರ : ಮೆಜೆಸ್ಟಿಕ್‌ನಿಂದ ಶಾಂತಿನಗರಕ್ಕೆ ಬಿಎಂಟಿಸಿ ಬಸ್ ಸಂಚಾರ ಆರಂಭವಾಗಿದೆ. ಪ್ರಸ್ತುತ ಈ ಮಾರ್ಗದಲ್ಲಿ ಪೊಲೀಸರ ಭದ್ರತೆಯೊಂದಿಗೆ ಒಂದು ಬಸ್ ಓಡಿಸಲಾಗುತ್ತಿದೆ.
ಬಸ್ ಸಂಚಾರ ಆರಂಭ : ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಸಂಚಾರವನ್ನು ಪೊಲೀಸರ ಭದ್ರತೆಯಲ್ಲಿ ಆರಂಭಿಸಲಾಗಿದೆ. ಶಾಂತಿನಗರದಿಂದ ಮೆಜೆಸ್ಟಿಕ್ ಮತ್ತು ಶಿವಾಜಿನಗರಕ್ಕೆ ಬಸ್ ಸಂಚಾರ ನಡೆಸುತ್ತಿದೆ.[ಸಾರಿಗೆ ಮುಷ್ಕರದ ಚಿತ್ರಗಳು]
ಹಿಂದಿನ ಸುದ್ದಿ : ಶೇ 35ರಷ್ಟು ವೇತನ ಪರಿಷ್ಕರಣೆ ಸೇರಿದಂತೆ 42 ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರ 3ನೇ ದಿನಕ್ಕೆ ಕಾಲಿಟ್ಟಿದ್ದೆ.
ಸೋಮವಾರದಿಂದ ಆರಂಭವಾದ ಮುಷ್ಕರಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸರ್ಕಾರಿ ಬಸ್ ಸಂಚಾರ ಸ್ಥಗಿತಗೊಂಡಿದೆ. ರಾಜಧಾನಿ ಬೆಂಗಳೂರಿನಲ್ಲಿಯೂ ಬಿಎಂಟಿಸಿ ಬಸ್ಸುಗಳು ರಸ್ತೆಗಿಳಿದಿಲ್ಲ.[ಹುಬ್ಬಳ್ಳಿಯಲ್ಲಿ ಖಾಸಗಿ ಬಸ್ ಬೆಂಕಿಗಾಹುತಿ, ಇಬ್ಬರ ಸಜೀವ ದಹನ]

ಮುಷ್ಕರ ಮುಂದುವರೆದಿರುವ ಹಿನ್ನಲೆಯಲ್ಲಿ ಸರ್ಕಾರ ಜುಲೈ 27ರಂದು ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದೆ. ಆಯಾ ಜಿಲ್ಲೆಗಳಲ್ಲಿ ರಜೆ ಘೋಷಣೆ ಮಾಡುವ ಅಧಿಕಾರವನ್ನು ಜಿಲ್ಲಾಧಿಕಾರಿಗಳಿಗೆ ನೀಡಲಾಗಿದೆ.
'ಶೇ 10ಕ್ಕಿಂತ ಹೆಚ್ಚು ವೇತನ ಪರಿಷ್ಕರಣೆ ಸಾಧ್ಯವೇ ಇಲ್ಲ. ಸಾರಿಗೆ ಇಲಾಖೆ ನೌಕರರು ತಮ್ಮ ಹಠಮಾರಿ ಧೋರಣೆಯನ್ನು ಕೈ ಬಿಟ್ಟು ಮಾತುಕತೆಗೆ ಬರಲಿ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪಷ್ಟಪಡಿಸಿದ್ದಾರೆ. ಆದ್ದರಿಂದ, ನೌಕರರ ನಡುವಿನ ಮಾತುಕತೆ ಮುರಿದು ಬೀಳುತ್ತಿದ್ದು, ಮುಷ್ಕರ ಅಂತ್ಯಗೊಂಡಿಲ್ಲ. [ಸಾರಿಗೆ ನೌಕರರಿಗೆ ಬುಧವಾರದ ಗಡುವು ಕೊಟ್ಟ ಸರ್ಕಾರ]
ಎಸ್ಮಾ ಜಾರಿ ಇಲ್ಲ : ಮುಷ್ಕರದ ಕುರಿತು ಪ್ರತಿಕ್ರಿಯೆ ನೀಡಿರುವ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು, 'ಮುಷ್ಕರ ನಿರತ ನೌಕರರ ಜೊತೆ ಬುಧವಾರ ಮತ್ತೊಂದು ಸುತ್ತಿನ ಮಾತುಕತೆ ನಡೆಸಲಾಗುವುದು. ಎಸ್ಮಾ ಜಾರಿಗೊಳಿಸುವ ಆಯ್ಕೆ ಇದೆ. ಆದರೆ, ಅದನ್ನು ಜಾರಿಗೆ ತರುವ ಪ್ರಸ್ತಾವನೆ ನಮ್ಮ ಮುಂದಿಲ್ಲ' ಎಂದು ಹೇಳಿದ್ದಾರೆ.











Click it and Unblock the Notifications