ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪರಿಷತ್ ಫಲಿತಾಂಶ : ಕ್ಷಣ-ಕ್ಷಣದ ಮಾಹಿತಿ

|
Google Oneindia Kannada News

ಬೆಂಗಳೂರು, ಡಿಸೆಂಬರ್ 30 : ಭಾರೀ ಕುತೂಹಲ ಹುಟ್ಟಿಸಿದ್ದ ವಿಧಾನಪರಿಷತ್ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದೆ. ಸ್ಥಳೀಯ ಸಂಸ್ಥೆಗಳಿಂದ 25 ವಿಧಾನಪರಿಷತ್ ಸದಸ್ಯರ ಆಯ್ಕೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 13 ಸ್ಥಾನಗಳಲ್ಲಿ ಜಯಗಳಿಸಿದೆ.

ಬುಧವಾರ ಬೆಳಗ್ಗೆ 8 ಗಂಟೆಯಿಂದ ಮತಎಣಿಕೆ ಆರಂಭವಾಯಿತು. ಪರಿಷತ್‌ನಲ್ಲಿ ಬಹುಮತಗಳಿಸಲು ಚುನಾವಣೆ ಸಹಾಯಕವಾಗಲಿದೆ ಎಂಬ ಕಾಂಗ್ರೆಸ್ ಲೆಕ್ಕಾಚಾರ ಹೆಚ್ಚು ಫಲ ನೀಡಿಲ್ಲ. ಕೇವಲ 1 ಸ್ಥಾನವನ್ನು ಮಾತ್ರ ಪಕ್ಷ ಹೆಚ್ಚಾಗಿ ಪಡೆದುಕೊಂಡಿದೆ. ಬಿಜೆಪಿ ಮತ್ತು ಜೆಡಿಎಸ್‌ ಪಕ್ಷಗಳು ತಲಾ ಒಂದೊಂದು ಸ್ಥಾನಗಳನ್ನು ಕಳೆದುಕೊಂಡಿವೆ. [ಪರಿಷತ್ ಚುನಾವಣೆ : ಕಣದಲ್ಲಿರುವ ಅಭ್ಯರ್ಥಿಗಳ ಪಟ್ಟಿ]

ಕಾಂಗ್ರೆಸ್‌ನ 12, ಬಿಜೆಪಿಯ 7, ಜೆಡಿಎಸ್‌ 5, ಒಬ್ಬರು ಪಕ್ಷೇತರ ಸದಸ್ಯರು 2016ರ ಜನವರಿ 5ರಂದು ನಿವೃತ್ತರಾಗಲಿದ್ದು, ಇವರಿಂದ ತೆರವಾಗುವ ಸ್ಥಾನಕ್ಕೆ ಚುನಾವಣೆ ನಡೆದಿತ್ತು. ಮತ ಎಣಿಕೆಯ ಕ್ಷಣ-ಕ್ಷಣದ ಮಾಹಿತಿಗಳು ಇಲ್ಲಿವೆ...

election result

ಅಂತಿಮ ಫಲಿತಾಂಶ : ಪರಿಷತ್ ಚುನಾವಣೆ ಅಂತಿಮ ಫಲಿತಾಂಶ ಪ್ರಕಟಗೊಂಡಿದ್ದು, ಕಾಂಗ್ರೆಸ್ 13, ಬಿಜೆಪಿ 6, ಜೆಡಿಎಸ್ 4 ಸ್ಥಾನಗಳಲ್ಲಿ ಜಯಗಳಿಸಿದೆ. ಇಬ್ಬರು ಪಕ್ಷೇತರ ಅಭ್ಯರ್ಥಿಗಳು ಜಯಸಾಧಿಸಿದ್ದಾರೆ.

ಸಮಯ 6.30 : ತುಮಕೂರು, ಮಂಡ್ಯ, ಕೋಲಾರ, ಮೈಸೂರು ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳು ಜಯಗಳಿಸಿದ್ದಾರೆ.

ಸಮಯ 5 ಗಂಟೆ : ಬೆಳಗಾವಿ ದ್ವಿ ಸದದ್ಯ ಕ್ಷೇತ್ರದಲ್ಲಿ ಬಿಜೆಪಿಯ ಮಹಾಂತೇಶ ಕವಟಗಿಮಠ, ಪಕ್ಷೇತರ ಅಭ್ಯರ್ಥಿ ವಿವೇಕರಾವ್ ಅವರು ಜಯಗಳಿಸಿದ್ದಾರೆ.

ಸಮಯ 3.14 : ಶಿವಮೊಗ್ಗ ಕ್ಷೇತ್ರದಲ್ಲಿ ಯಡಿಯೂರಪ್ಪ ಮತ್ತು ಈಶ್ವರಪ್ಪ ಅವರ ನಡುವಿನ ಹೊಂದಾಣಿಕೆಯ ಕೊರತೆಯಿಂದಾಗಿ ಬಿಜೆಪಿ ಅಭ್ಯರ್ಥಿ ಸೋಲು ಅನುಭವಿಸಿದ್ದಾರೆ. ಕಾಂಗ್ರೆಸ್‌ನ ಆರ್.ಪ್ರಸನ್ನ ಕುಮಾರ್ ಅವರು ಗೆಲುವು ಸಾಧಿಸಿದ್ದಾರೆ. ಬಿಜೆಪಿಯ ಆರ್.ಕೆ.ಸಿದ್ದರಾಮಣ್ಣ ಅವರು ಸೋತಿದ್ದಾರೆ.

ಸಮಯ 3 ಗಂಟೆ : ಉತ್ತರ ಕನ್ನಡ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಎಸ್‌.ಎಲ್.ಘೋಟ್ನೇಕರ್ ಅವರು 1,742 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಬಿಜೆಪಿಯ ಗಣಪತಿ ಉಳ್ವೇಕರ್ ಅವರು 1005 ಮತಗಳನ್ನು ಪಡೆದು ಸೋಲು ಅನುಭವಿಸಿದ್ದಾರೆ. ಪಕ್ಷೇತರ ಅಭ್ಯರ್ಥಿ ರವೀಂದ್ರ ನಾಯಕ್ 179 ಮತಗಳನ್ನು ಪಡೆದಿದ್ದಾರೆ.

ಸಮಯ 2.42 : ಮಂಡ್ಯ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಅಪ್ಪಾಜಿ ಗೌಡ ಗೆಲುವು

ಸಮಯ 2.12 : ಬೆಳಗಾವಿ ದ್ವಿ ಸದಸ್ಯ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ವಿವೇಕರಾವ್ 3,951 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಬಿಜೆಪಿಯಿಂದ ಮಹಾಂತೇಶ ಕವಟಗಿಮಠ, ಕಾಂಗ್ರೆಸ್‌ನಿಂದ ವೀರಕುಮಾರ ಪಾಟೀಲ, ಜೆಡಿಎಸ್‌ನ ಡಿ.ಬಿ.ನಾಯ್ಕ ಕ್ಷೇತ್ರದಲ್ಲಿ ಕಣದಲ್ಲಿದ್ದರು.

ಸಮಯ 2 ಗಂಟೆ : ವಿಜಯಪುರ ದ್ವಿ ಸದಸ್ಯ ಕ್ಷೇತ್ರದಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿ ಬಸನಗೌಡ ಪಾಟೀಲ್ ಯತ್ನಾಳ್ ಜಯದ ಸನಿಹದಲ್ಲಿದ್ದಾರೆ.

ಸಮಯ 1.30 : ಮಂಡ್ಯ ಮತ್ತು ತುಮಕೂರಿನಲ್ಲಿ ಈಗ ಆರಂಭವಾದ ಮತ ಎಣಿಕೆ ಕಾರ್ಯ

ಸಮಯ 1.04 : ವಿಜಯಪುರ ದ್ವಿ ಸದಸ್ಯ ಕ್ಷೇತ್ರದಲ್ಲಿ ಸಚಿವ ಎಸ್‌.ಆರ್.ಪಾಟೀಲ್ ಅವರು ಜಯಗಳಿಸಿದ್ದಾರೆ.

ಸಮಯ 12.54 : 'ಕೆ.ಎಸ್.ಈಶ್ವರಪ್ಪ ಅವರು ರಾಜಕೀಯ ಸನ್ಯಾಸತ್ವ ತೆಗೆದುಕೊಳ್ಳಲಿ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. 'ಕಾಂಗ್ರೆಸ್ ಬಿಜೆಪಿಗಿಂತ ಒಂದು ಹೆಚ್ಚು ಸ್ಥಾನ ಪಡೆದರೆ ರಾಜಕೀಯ ಸನ್ಯಾಸತ್ವ ಪಡೆಯುತ್ತೇನೆ' ಎಂದು ಕೆ.ಎಸ್.ಈಶ್ವರಪ್ಪ ಅವರು ಹೇಳಿದ್ದರು. [ನಾನ್ಯಾಕೆ ರಾಜಕೀಯ ಸನ್ಯಾಸ ಸ್ವೀಕರಿಸಲಿ : ಈಶ್ವರಪ್ಪ]

ಸಮಯ 12.47 : ಮೈಸೂರು ದ್ವಿ ಸದಸ್ಯ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಆರ್.ಧರ್ಮಸೇನ ಮತ್ತು ಜೆಡಿಎಸ್‌ನ ಸಂದೇಶ್ ನಾಗರಾಜ್ ಗೆಲುವು ಸಾಧಿಸಿದ್ದಾರೆ. ಬಿಜೆಪಿಯ ಆರ್.ರಘು, ವಾಟಾಳ್ ನಾಗರಾಜ್ ಸೋಲು ಅನುಭವಿಸಿದ್ದಾರೆ.

ಸಮಯ 12.44 : ಜೆಡಿಎಸ್ ಭದ್ರಕೋಟೆ ಹಾಸನದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಂ.ಎ.ಗೋಪಾಲಸ್ವಾಮಿ ಅವರು 2037 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ಜೆಡಿಎಸ್‌ನ ಪಟೇಲ್ ಶಿವರಾಂ ಅವರು 1,823 ಮತಗಳನ್ನು ಪಡೆದು ಸೋಲು ಅನುಭವಿಸಿದ್ದಾರೆ. ಬಿಜೆಪಿಯ ಬಿ.ಎಚ್.ರೇಣುಕುಮಾರ್ ಅವರು 114 ಮತಗಳನ್ನು ಪಡೆದಿದ್ದಾರೆ.

ಸಮಯ 12.22 : ಬಳ್ಳಾರಿ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಕೆ.ಸಿ.ಕೊಂಡಯ್ಯ ಅವರು ಜಯಗಳಿಸಿದ್ದಾರೆ. ಚನ್ನಬಸನಗೌಡ ಕ್ಷೇತ್ರದಲ್ಲಿ ಬಿಜೆಪಿಯ ಅಭ್ಯರ್ಥಿಯಾಗಿದ್ದರು

ಸಮಯ 12.19 : ಚಿತ್ರದುರ್ಗ ಕ್ಷೇತ್ರದಲ್ಲಿ 2651 ಮತಗಳನ್ನು ಪಡೆದು ರಘು ಆಚಾರ್ ಗೆಲುವು ಸಾಧಿಸಿದ್ದಾರೆ. ಬಿಜೆಪಿಯ ಕೆ.ಎಸ್.ನವೀನ್ 2429 ಮತಗಳನ್ನು ಪಡೆದು ಸೋಲು ಅನುಭವಿಸಿದ್ದಾರೆ. ಜೆಡಿಎಸ್‌ನ ಎಲ್.ಸೋಮಣ್ಣ 11 ಮತಗಳನ್ನು ಪಡೆದಿದ್ದಾರೆ.

ಸಮಯ 12.13 : ಹಾಸನ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಎಂ.ಎ.ಗೋಪಾಲಸ್ವಾಮಿ ಅವರು 1656 ಮತಗಳನ್ನು ಪಡೆದು ಮುನ್ನಡೆ ಸಾಧಿಸಿದ್ದಾರೆ. ಬಿಜೆಪಿಯ ಬಿ.ಎಚ್.ರೇಣುಕುಮಾರ್ ಹಿನ್ನಡೆ ಅನುಭವಿಸಿದ್ದಾರೆ. ಜೆಡಿಎಸ್‌ನ ಪಟೇಲ್ ಶಿವರಾಂ 1288 ಮತಗಳನ್ನು ಪಡೆದು ಹಿನ್ನಡೆ ಅನುಭವಿಸಿದ್ದಾರೆ.

ಸಮಯ 12 ಗಂಟೆ : ರಾಯಚೂರು-ಕೊಪ್ಪಳ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಬಸವರಾಜ್ ಪಾಟೀಲ್ ಇಟಗಿ ಅವರು 3789 ಮತಗಳ ಅಂತರದಿಂದ ಜಯಗಳಿಸಿದ್ದಾರೆ. ಬಿಜೆಪಿಯ ಸಿ.ವಿ.ಚಂದ್ರಶೇಖರ್ ಕಣದಲ್ಲಿದ್ದರು.

ಸಮಯ 11.55 : ಬೀದರ್‌ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ವಿಜಯ್ ಸಿಂಗ್ 2,329 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಬಿಜೆಪಿಯ ಸಂಜಯ ಖೇಣಿ, ಜೆಡಿಎಸ್‌ನ ಸುಬ್ಬಾರೆಡ್ಡಿ ಅವರು ಸೋಲು ಅನುಭವಿಸಿದ್ದಾರೆ.

ಸಮಯ 11.51 : ಧಾರವಾಡ ದ್ವಿ ಸದಸ್ಯ ಕ್ಷೇತ್ರದಲ್ಲಿ ಬಿಜೆಪಿಯ ಪ್ರದೀಪ್ ಶೆಟ್ಟರ್, ಕಾಂಗ್ರೆಸ್‌ನ ಶ್ರೀನಿವಾಸ ಮಾನೆ ಅವರು ಗೆಲುವು ಸಾಧಿಸಿದ್ದಾರೆ

ಸಮಯ 11.42 : ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಬಿ.ರವಿ ಅವರು 2,292 ಮತಗಳನ್ನು ಪಡೆದು ಗೆಲವು ಸಾಧಿಸಿದ್ದಾರೆ. ಬಿಜೆಪಿಯ ಎನ್.ಹನುಮಂತೇಗೌಡ ಅವರು ಸೋಲು ಅನುಭವಿಸಿದ್ದಾರೆ. ಜೆಡಿಎಸ್‌ನ ಇ.ಕೃಷ್ಣಪ್ಪ ಅವರು 1,867 ಮತಗಳನ್ನು ಪಡೆದಿದ್ದಾರೆ.

ಸಮಯ 11.30 : ಚಿಕ್ಕಮಗಳೂರು ಕ್ಷೇತ್ರದಲ್ಲಿ ಬಿಜೆಪಿಯ ಎಂ.ಕೆ.ಪ್ರಾಣೇಶ್ 1238 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್‌ನ ಎ.ವಿ. ಗ್ರಾಯತ್ರಿ ಶಾಂತೇಗೌಡ ಅವರು 923 ಮತಗಳನ್ನು ಪಡೆದಿದ್ದು, ಜೆಡಿಎಸ್‌ನ ರಂಜನ್ ಅಜಿತ್ ಕುಮಾರ್ 425 ಮತಗಳನ್ನು ಪಡೆದಿದ್ದಾರೆ.

ಸಮಯ 11.18 : ಶಿವಮೊಗ್ಗ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಆರ್.ಪ್ರಸನ್ನ ಕುಮಾರ್ 933 ಮತಗಳನ್ನು ಪಡೆದು ಮುನ್ನಡೆ ಸಾಧಿಸಿದ್ದಾರೆ. ಬಿಜೆಪಿಯ ಆರ್‌.ಕೆ.ಸಿದ್ರಾಮಣ್ಣ ಅವರು 707 ಮತಗಳನ್ನು ಪಡೆದಿದ್ದಾರೆ. ಜೆಡಿಎಸ್‌ನ ಎಚ್.ಎನ್.ನಿರಂಜನ್ 702 ಮತಗಳನ್ನು ಪಡೆದು ಹಿನ್ನಡೆ ಅನುಭವಿಸಿದ್ದಾರೆ. ['ಈಶ್ವರಪ್ಪ ಅವರೇ ಡಿ.30ರ ತನಕ ಕಾಯಿರಿ']

ಸಮಯ 11.12 : ಬೀದರ್‌ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಅವರ ಪುತ್ರ ಕಾಂಗ್ರೆಸ್‌ ಅಭ್ಯರ್ಥಿ ವಿಜಯ್ ಸಿಂಗ್ ಮುನ್ನಡೆ ಸಾಧಿಸಿದ್ದಾರೆ. ಚಿತ್ರದುರ್ಗದಲ್ಲಿಯೂ ಕಾಂಗ್ರೆಸ್ ಅಭ್ಯರ್ಥಿ ರಘು ಆಚಾರ್ ಮುನ್ನಡೆ ಸಾಧಿಸಿದ್ದಾರೆ.

ಸಮಯ 11.12 : ದಕ್ಷಿಣ ಕನ್ನಡ ದ್ವಿ ಸದಸ್ಯ ಕ್ಷೇತ್ರದಲ್ಲಿ ಬಿಜೆಪಿಯ ಕೋಟಾ ಶ್ರೀನಿವಾಸ ಪೂಜಾರಿ ಅವರು ಜಯಗಳಿಸಿದ್ದಾರೆ. 2,792 ಮತಗಳನ್ನು ಅವರು ಪಡೆದಿದ್ದಾರೆ. ಕ್ಷೇತ್ರದಲ್ಲಿ ಮತ್ತೊಬ್ಬ ಅಭ್ಯರ್ಥಿ ಆಯ್ಕೆಗೆ ಪಕ್ಷೇತರ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಮತ್ತು ಕಾಂಗ್ರೆಸ್‌ನ ಕೆ.ಪ್ರತಾಪ್ ಚಂದ್ರ ಶೆಟ್ಟಿ ಅವರ ನಡುವೆ ಸ್ಪರ್ಧೆ ನಡೆಯುತ್ತಿದೆ.

ಸಮಯ 11 ಗಂಟೆ : ಧಾರವಾಡ ದ್ವಿ ಸದಸ್ಯ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಶ್ರೀನಿವಾಸ್ ಮಾನೆ ಅವರು 1,521 ಮತಗಳನ್ನು ಪಡೆದು ಮುನ್ನಡೆ ಸಾಧಿಸಿದ್ದಾರೆ. ಬಿಜೆಪಿಯ ಪ್ರದೀಪ್ ಶೆಟ್ಟರ್ ಅವರು 1,439 ಮತಗಳನ್ನು ಪಡೆದಿದ್ದಾರೆ.

ಸಮಯ 10.54 : ಕೊಡಗು ಕ್ಷೇತ್ರದಲ್ಲಿ ಬಿಜೆಪಿಯ ಸುನೀಲ್ ಸುಬ್ರಮಣಿ ಅವರು 683, ಕಾಂಗ್ರೆಸ್‌ನ ಎಚ್‌.ಎಸ್.ಚಂದ್ರಮೌಳಿ ಅವರು 627, ಜೆಡಿಎಸ್‌ನ ಸಂಕೇತ್ ಪೂವಯ್ಯ 29 ಮತಗಳನ್ನು ಗಳಿಸಿದ್ದಾರೆ.

ಸಮಯ 10.50 : ಕೊಡಗು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸುನೀಲ್ ಸುಬ್ರಮಣಿ ಅವರು ಜಯಗಳಿಸಿದ್ದಾರೆ.

ಸಮಯ 10.45 : ಬೆಂಗಳೂರು ನಗರ ಕ್ಷೇತ್ರದಲ್ಲಿ ಎಂ.ನಾರಾಯಣ ಸ್ವಾಮಿ 1,394, ದೊಡ್ಡ ಬಸವರಾಜು 1,302, ದಯಾನಂದ ರೆಡ್ಡಿ 94 ಮತಗಳನ್ನು ಪಡೆದಿದ್ದಾರೆ.

ಸಮಯ 10.40 : ಬೆಂಗಳೂರು ನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ದಯಾನಂದ ರೆಡ್ಡಿ ಅವರು ಸೋಲು ಅನುಭವಿಸಿದ್ದಾರೆ. ಕಾಂಗ್ರೆಸ್ ಅಧಿಕೃತ ಅಭ್ಯರ್ಥಿ ಎಂ.ನಾರಾಯಣ ಸ್ವಾಮಿ ಗೆಲುವು ಸಾಧಿಸಿದ್ದಾರೆ

siddaramaiah

ಸಮಯ 10.30 : ಕೊಡಗಿನಲ್ಲಿ ಬಿಜೆಪಿ ಅಭ್ಯರ್ಥಿ ಸುನೀಲ್ ಸುಬ್ರಮಣಿ 669, ಕಾಂಗ್ರೆಸ್ ಅಭ್ಯರ್ಥಿ ಎಚ್.ಎಸ್.ಚಂದ್ರಮೌಳಿ 628 ಮತಗಳನ್ನು ಪಡೆದಿದ್ದಾರೆ.

ಸಮಯ 10.28 : ಬೆಂಗಳೂರು ನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ.ನಾರಾಯಣ ಸ್ವಾಮಿ 1384 ಮತಗಳನ್ನು ಪಡೆದಿದ್ದು, ಗೆಲುವು ಸಾಧಿಸುವುದು ಬಹುತೇಕ ಖಚಿತವಾಗಿದೆ.

ಸಮಯ 10.14 : ಚಿಕ್ಕಮಗಳೂರಿನಲ್ಲಿ ಬಿಜೆಪಿ ಎಂ.ಕೆ.ಪ್ರಾಣೇಶ್, ಕೊಡಗಿನಲ್ಲಿ ಬಿಜೆಪಿಯ ಸುನೀಲ್ ಸುಬ್ರಮಣಿ ಅವರು ಮುನ್ನಡೆ ಸಾಧಿಸಿದ್ದಾರೆ

ಸಮಯ 10.08 : ಕೊಡಗು ಕ್ಷೇತ್ರದಲ್ಲಿ ಚಲಾವಣೆಯಾದ 1406 ಮತಗಳ ಪೈಕಿ 55 ಮತಗಳು ಅಸಿಂಧು. ಉಳಿದ ಮತಗಳ ಎಣಿಕೆ ಆರಂಭಿಸಿದ ಸಿಬ್ಬಂದಿ

ಸಮಯ 10 ಗಂಟೆ : ಬೆಂಗಳೂರು ನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಂ.ನಾರಾಯಣ ಸ್ವಾಮಿ ಅವರು ಮುನ್ನಡೆ ಸಾಧಿಸಿದ್ದಾರೆ.

ಸಮಯ 9.52 : ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಮತ ವಿಂಗಡನೆ ಕಾರ್ಯ ಪೂರ್ಣ, ಮತ ಎಣಿಕೆ ಕಾರ್ಯ ಆರಂಭಿಸಿದ ಸಿಬ್ಬಂದಿ

ಸಮಯ 9.40 : ಬೆಂಗಳೂರು ನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ದಯಾನಂದ ರೆಡ್ಡಿಗೆ ಹಿನ್ನಡೆ

ಸಮಯ 9.30 : ಕಾಂಗ್ರೆಸ್ 3, ಬಿಜೆಪಿ 2 ಮತ್ತು ಜೆಡಿಎಸ್ 1 ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದೆ

ಸಮಯ 9.20 : ಬೆಂಗಳೂರು ನಗರ ಕ್ಷೇತ್ರದ ಮತ ಎಣಿಕೆ ವೇಳೆ 7 ಮಾದರಿ ಪತ್ರಗಳು ಸಿಕ್ಕಿವೆ. ಅಭ್ಯರ್ಥಿಗಳು ಹಂಚಿದ್ದ ಮಾದರಿ ಮತ ಪತ್ರಗಳನ್ನು ಅಸಿಂಧು ಎಂದು ಚುನಾವಣಾಧಿಕಾರಿಗಳು ಘೋಷಿಸಿದ್ದಾರೆ.

ಸಮಯ 9 ಗಂಟೆ : ರಾಯಚೂರಿನಲ್ಲಿ ಕಾಂಗ್ರೆಸ್‌ನ ಬಸವರಾಜ್ ಪಾಟೀಲ್ ಇಟಗಿ ಮುನ್ನಡೆ ಸಾಧಿಸಿದ್ದಾರೆ.

ಸಮಯ 8.50 : ಚಿತ್ರದುರ್ಗದಲ್ಲಿ ಮತ ಎಣಿಕೆ ಕಾರ್ಯ ವಿಳಂಬ, ಮತ ಪೆಟ್ಟಿಗೆಗಳನ್ನು ಈಗ ತೆರೆದು ಅಸಿಂಧು ಮತಗಳ ವಿಭಜನೆ ಆರಂಭಿಸಿದ ಸಿಬ್ಬಂದಿ

ಸಮಯ 8.30 : ಮಾಹಿತಿ ತಂತ್ರಜ್ಞಾನ ಸಚಿವ ಎಸ್.ಆರ್ ಪಾಟೀಲ್, ಕನ್ನಡ ಚಳವಳಿ ವಾಟಾಳ್ ಪಕ್ಷದ ನಾಯಕ ವಾಟಾಳ್ ನಾಗರಾಜ್, ಮಾಜಿ ಸಂಸದ ಜಯಪ್ರಕಾಶ್‌ ಹೆಗ್ಡೆ, ಜಗದೀಶ್ ಶೆಟ್ಟರ್ ಸಹೋದರ ಪ್ರದೀಪ್ ಶೆಟ್ಟರ್, ಕೆ.ಸಿ.ಕೊಂಡಯ್ಯ ಮುಂತಾದವರು ಚುನಾವಣಾ ಕಣದಲ್ಲಿರುವ ಪ್ರಮುಖರು.

ಸಮಯ 8.15 : ವಿಧಾನಪರಿಷತ್ ಚುನಾವಣೆ ಮತ ಎಣಿಕೆ ವಿಭಿನ್ನವಾಗಿ ನಡೆಯಲಿದೆ. ಮೊದಲು ಎಲ್ಲಾ ಮತಪತ್ರಗಳನ್ನು ಒಗ್ಗೂಡಿಸಿ ನಂತರ ಅಸಿಂಧುವಾದ ಮತಗಳನ್ನು ತೆರವುಗೊಳಿಸಿ ಎಣಿಕೆ ಆರಂಭಿಸಲಾಗುತ್ತದೆ. ಒಬ್ಬ ಸದಸ್ಯರನ್ನು ಮಾತ್ರ ಆಯ್ಕೆ ಮಾಡಬೇಕಾದ ಕ್ಷೇತ್ರಗಳಲ್ಲಿ ಕ್ರಮಬದ್ಧ ಮತಗಳಲ್ಲಿ ಶೇ 50ಕ್ಕಿಂತ ಹೆಚ್ಚು ಪ್ರಥಮ ಪ್ರಾಶಸ್ತ್ಯದ ಮತಗಳನ್ನು ಗಳಿಸುವ ಅಭ್ಯರ್ಥಿಯನ್ನು ವಿಜೇತ ಎಂದು ಘೋಷಿಸಲಾಗುತ್ತದೆ.

ಶೇ 50 ಮತ ಬರದಿದ್ದರೆ ಎರಡನೇ ಪ್ರಾಶಸ್ತ್ಯದ ಮತ ಎಣಿಸಬೇಕಾಗುತ್ತದೆ. ಹೀಗೆ ಶೇ 50 ದಾಟುವ ವರೆಗೂ ಕ್ರಮಾನುಸಾರ ಪ್ರಾಶಸ್ತ್ಯದ ಮತಗಳನ್ನು ಎಣಿಕೆ ಮಾಡಲಾಗುತ್ತದೆ. ಇಬ್ಬರು ಸದಸ್ಯರನ್ನು ಆಯ್ಕೆ ಮಾಡಬೇಕಾದ ಕ್ಷೇತ್ರಗಳಲ್ಲಿ ಆಯ್ಕೆಯಾಗುವ ವ್ಯಕ್ತಿ ಮೊದಲ ಪ್ರಾಶಸ್ತ್ಯದ ಶೇ 33ಕ್ಕಿಂತ ಹೆಚ್ಚು ಮತ ಪಡೆಯಬೇಕಾಗುತ್ತದೆ.

ಸಮಯ 8 ಗಂಟೆ : ವಿಧಾನಪರಿಷತ್ ಚುನಾವಣೆ ಮತ ಎಣಿಕೆ ಆರಂಭ

election

ಸಮಯ 7.50 : 75 ಸದಸ್ಯ ಬಲದ ವಿಧಾನಪರಿಷತ್‌ನಲ್ಲಿ ಸದ್ಯ, ಕಾಂಗ್ರೆಸ್ 28, ಬಿಜೆಪಿ 30, ಜೆಡಿಎಸ್ 12 ಮತ್ತು ನಾಲ್ವರು ಪಕ್ಷೇತರರು ಮತ್ತು ಒಬ್ಬರು ಸಭಾಪತಿಗಳಿದ್ದಾರೆ. ಇಂದು ಪ್ರಕಟವಾಗಲಿರುವ ಫಲಿತಾಂಶ ಪರಿಷತ್‌ನಲ್ಲಿ ಪಕ್ಷಗಳ ಬಲಾಬಲವನ್ನು ಬದಲಿಸಲಿದೆ.

ಎಲ್ಲೆಲ್ಲಿ ಮತ ಎಣಿಕೆ : ಬೆಂಗಳೂರಿನಲ್ಲಿ ಆರ್‌ಸಿ ಕಾಲೇಜು, ಮಹಾರಾಣಿ ಕಾಲೇಜಿನಲ್ಲಿ ಮತಎಣಿಕೆಗೆ ನಡೆಯಲಿದೆ. ಉಳಿದಂತೆ ಧಾರವಾಡ, ಹಾಸನ, ಶಿವಮೊಗ್ಗ, ಮೈಸೂರು ಸೇರಿದಂತೆ 20 ಜಿಲ್ಲೆಗಳಲ್ಲಿ ಮತ ಎಣಿಕೆ ನಡೆಯುತ್ತಿದ್ದು, ಎಣಿಕೆ ಕೇಂದ್ರದ 1 ಕಿ.ಮೀ.ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

English summary
The ruling Congress led in 13 of the 25 Karnataka legislative council seats for which elections were held and counting of votes was in progress on Wednesday. Polling for the council was held in 20 districts on December 27.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X