ಒಂದು ದಿನದ ಕಲಾಪಕ್ಕೆ ಲಕ್ಷ-ಲಕ್ಷ ವೆಚ್ಚ, ಚರ್ಚೆ ಶೂನ್ಯ

Posted By:
Subscribe to Oneindia Kannada

ಬೆಂಗಳೂರು, ಜುಲೈ 14 : ಒಂದು ದಿನದ ವಿಧಾನಸಭೆ ಕಲಾಪ ನಡೆಸಲು ಸುಮಾರು 30 ರಿಂದ 35 ಲಕ್ಷ ಬೇಕು. ಆದರೆ, ಇಂದು ಯಾವುದೇ ಚರ್ಚೆಗಳು ನಡೆಯದೇ ಕಲಾಪ ಗದ್ದಲಕ್ಕೆ ಬಲಿಯಾಗಿದೆ. ಪ್ರತಿಪಕ್ಷಗಳ ತೀವ್ರ ಗದ್ದಲದ ಕಾರಣದಿಂದಾಗಿ ಕಲಾಪವನ್ನು ಶುಕ್ರವಾರಕ್ಕೆ ಮುಂದೂಡಲಾಗಿದೆ.

'ಆತ್ಮಹತ್ಯೆ ಭಾಗ್ಯ ನೀಡಿದ ಸರ್ಕಾರಕ್ಕೆ ಧಿಕ್ಕಾರ', 'ಜಾರ್ಜ್ ರಾಜೀನಾಮೆ ಬೇಕು', 'ರಣಹೇಡಿ ಸರ್ಕಾರಕ್ಕೆ ಧಿಕ್ಕಾರ' ಎಂಬ ಬಿಜೆಪಿ, ಜೆಡಿಎಸ್ ಸದಸ್ಯರ ಘೋಷಣೆಗಳ ನಡುವೆಯೇ ಮೂರು ವಿಧೇಯಕಗಳಿಗೆ ವಿಧಾನಸಭೆಯಲ್ಲಿ ಅಂಗೀಕಾರ ನೀಡಲಾಗಿದೆ.

ಧರಣಿ ನಿರತ ಪ್ರತಿಪಕ್ಷಗಳ ಜೊತೆ ಸ್ಪೀಕರ್ ಕೆ.ಬಿ.ಕೋಳಿವಾಡ ಅವರು ನಡೆಸಿದ ಸಭೆ ವಿಫಲವಾಗಿದೆ. ಸಚಿವ ಕೆ.ಜೆ.ಜಾರ್ಜ್ ರಾಜೀನಾಮೆ ಪಡೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿರಾಕರಿಸಿದರು. ಆದರೆ, ಪ್ರತಿಪಕ್ಷಗಳು ತಮ್ಮ ಪಟ್ಟನ್ನು ಮುಂದುವರೆಸಿವೆ. [ಮುರಿದು ಬಿದ್ದ ಸಂಧಾನ ಸಭೆ]

ಸಮಯ 12.30 : ವಿಧಾನಸಭೆ ಕಲಾಪ ಪುನಃ ಆರಂಭಗೊಂಡ ಬಳಿಕ ಪ್ರತಿಪಕ್ಷದ ಸದಸ್ಯರು ಗದ್ದಲ ಮುಂದುವರೆಸಿದರು. 'ಸರ್ಕಾರ ಗೋವಿಂದ, ಸರ್ಕಾರ ಗೋವಿಂದ' ಎಂದು ಘೋಷಣೆಗಳನ್ನು ಕೂಗಿದರು. ಇದರಿಂದಾಗಿ ಸ್ಪೀಕರ್ ಕೆ.ಬಿ.ಕೋಳಿವಾಡ ಅವರು ಕಲಾಪವನ್ನು ಮಧ್ಯಾಹ್ನ 3 ಗಂಟೆಗೆ ಮುಂದೂಡಿದರು.

ಪರಿಷತ್ ಕಲಾಪ ಶುಕ್ರವಾರಕ್ಕೆ ಮುಂದೂಡಿಕೆ : ವಿಧಾನಪರಿಷತ್‌ನಲ್ಲಿ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಮತ್ತು ಇತರ ಸದಸ್ಯರು, 'ಮೊದಲು ಜಾರ್ಜ್ ರಾಜೀನಾಮೆ ಪಡೆಯಿರಿ' ನಂತರ ಉತ್ತರ ಕೊಡಿ ಎಂದು ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದರು. ಈ ಬಗ್ಗೆ ಗದ್ದಲ ನಡೆಯಿತು. ಇದರಿಂದಾಗಿ ಡಿ.ಎಚ್.ಶಂಕರಮೂರ್ತಿ ಅವರು ಕಲಾಪವನ್ನು ಶುಕ್ರವಾರ (ಜುಲೈ 15) ಬೆಳಗ್ಗೆ 11ಕ್ಕೆ ಮುಂದೂಡಿದರು.

ಸಮಯ 11.30 : ವಿಧಾನಪರಿಷತ್ತಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉತ್ತರ ಕೊಡಲು ಎದ್ದು ನಿಲ್ಲುತ್ತಿದ್ದಂತೆ ಬಿಜೆಪಿ ಸದಸ್ಯರು 'ಇದು ಕೊಲೆಗಡುಕ ಸರ್ಕಾರ' ಎಂದು ಘೋಷಣೆ ಕೂಗಿದರು. ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಅವರು, 'ಮೊದಲು ಜಾರ್ಜ್ ರಾಜೀನಾಮೆ ಪಡೆಯಿರಿ' ನಂತರ ಉತ್ತರ ಕೊಡಿ ಎಂದು ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಈಶ್ವರಪ್ಪ-ಸಿದ್ದರಾಮಯ್ಯ ನಡುವೆ ಮಾತಿನ ಚಕಮಕಿ ನಡೆಯಿತು. 'ಈಶ್ವರಪ್ಪ ಅವರನ್ನು ಸದನದಿಂದ ಹೊರಹಾಕಿ' ಎಂದು ಸಿದ್ದರಾಮಯ್ಯ ಹೇಳಿದರು. 'ನನ್ನನ್ನು ಹೊರಹಾಕಲು ಹೇಳಲು ನೀವು ಯಾರು?, ಅದನ್ನು ಸಭಾಪತಿಗಳು ಹೇಳಲಿ' ಎಂದು ಈಶ್ವರಪ್ಪ ತಿರುಗೇಟು ಕೊಟ್ಟರು. [ಸಿದ್ದರಾಮಯ್ಯ ವಿಧಾನಸಭೆಯಲ್ಲಿ ಕೊಟ್ಟ ಉತ್ತರ]

siddaramaiah

ವಿಪಕ್ಷಗಳ ಗದ್ದಲ ತೀವ್ರಗೊಂಡಿತು. ಸದನದ ಬಾವಿಗಿಳಿದು ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಘೋಷಣೆಗಳನ್ನು ಕೂಗಿದರು . ಇದರಿಂದಾಗಿ ಸಭಾಪತಿ ಡಿ.ಎಚ್.ಶಂಕರಮೂರ್ತಿ ಅವರ ಕಲಾಪವನ್ನು 20 ನಿಮಿಷಗಳ ಕಾಲ ಮುಂದೂಡಿದರು. [ನ್ಯಾಯಾಂಗ ತನಿಖೆಗೆ ವಿರೋಧವೇಕೆ?]

ವಿಧಾನಸಭೆ ಕಲಾಪ : ಗುರುವಾರದ ವಿಧಾನಸಭೆ ಕಲಾಪ ಆರಂಭವಾಗಿದ್ದು, ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಧರಣಿ ಮುಂದುವರೆಸಿದರು. ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐಗೆ ನೀಡಬೇಕು ಎಂದು ಸದಸ್ಯರು ಒತ್ತಾಯಿಸಿದರು.

ಕಲಾಪ ಆರಂಭವಾಗುತ್ತಿದ್ದಂತೆ ಕರ್ನಾಟಕ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ, ಪ್ರತಿಪಕ್ಷಗಳ ಸದಸ್ಯರು ಗದ್ದಲ ಎಬ್ಬಿಸಿದ್ದರಿಂದ ಸ್ಪೀಕರ್ ಕೆ.ಬಿ.ಕೋಳಿವಾಡ ಅವರು ಕಲಾಪವನ್ನು 15 ನಿಮಿಷಗಳ ಕಾಲ ಮುಂದೂಡಿದರು.

'ನ್ಯಾಯಾಂಗ ತನಿಖೆಯಿಂದ ಹೊಸ ಮಾಹಿತಿ ಹೊರಬರುವುದಿಲ್ಲ. ಗಣಪತಿ ಅವರ ಪತ್ನಿ ಮತ್ತು ಪುತ್ರರು ಸಿಬಿಐ ತನಿಖೆಗೆ ಒತ್ತಾಯಿಸುತ್ತಿದ್ದಾರೆ. ಡಿ.ಕೆ.ರವಿ ಅವರ ಪ್ರಕರಣದಂತೆ ಇದನ್ನು ಮುಚ್ಚಿ ಹಾಕಲು ಯತ್ನಿಸುತ್ತಿದ್ದಾರೆ. ಆದ್ದಿಂದ ಸಿಬಿಐ ತನಿಖೆಗೆ ಒತ್ತಾಯಿಸುತ್ತಿದ್ದೇವೆ' ಎಂದು ಬಿಜೆಪಿ ನಾಯಕ ಆರ್.ಅಶೋಕ್ ಹೇಳಿದರು.

r ashok

'ಕೆಜೆ ಜಾರ್ಜ್ ಅವರು ಸಿದ್ದರಾಮಯ್ಯ ಅವರ ಪರಮಾಪ್ತರು. ಅವರು ಹೇಳಿದ ತಕ್ಷಣ ಜಾರ್ಜ್ ನಿರಪರಾಧಿ ಆಗುವುದಿಲ್ಲ. ಒಂದು ವೇಳೆ ನಮ್ಮ ಬೇಡಿಕೆಗೆ ಸ್ಪಂದಿಸದಿದ್ದರೆ ಪ್ರತಿ ಜಿಲ್ಲೆಯಲ್ಲಿ ಬಂದ್ ಮಾಡಲಾಗುತ್ತದೆ. ಕರ್ನಾಟಕ ಬಂದ್ ಆದರೂ ಆಶ್ಚರ್ಯವಿಲ್ಲ' ಎಂದು ಆರ್.ಅಶೋಕ್ ತಿಳಿಸಿದರು.

kb koliwad

ಹಿಂದಿನ ಸುದ್ದಿ : ಡಿವೈಎಸ್‌ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು, ಸಚಿವ ಕೆ.ಜೆ.ಜಾರ್ಜ್ ರಾಜೀನಾಮೆ ಪಡೆಯಬೇಕು ಎಂದು ಒತ್ತಾಯಿಸಿ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ವಿಧಾನಸೌಧದಲ್ಲಿ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ.

ರಾತ್ರಿ 10.30ಕ್ಕೆ ಧರಣಿ ಸ್ಥಳಕ್ಕೆ ಆಗಮಿಸಿದ ಗೃಹ ಸಚಿವ ಜಿ.ಪರಮೇಶ್ವರ ಅವರ ಮುಂದೆ ಹಾಡು ಹೇಳಿ ಬಿಜೆಪಿ ಸದಸ್ಯರು ಅವರನ್ನು ಕೆಣಕಿದರು. 'ಆಗದು ಎಂದು, ಕೈಲಾಗದು ಎಂದು ಕೈಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ' ಎಂದು ಶಾಸಕ ಸುನೀಲ್ ಕುಮಾರ್, ಜೀವರಾಜ್ ಹಾಡು ಹೇಳಿದರು. 'ನಾವು ಇದೇ ರೀತಿ ಹಿಂದೆ ಧರಣಿ ಮಾಡಿದ್ದೆವು. ಈಗ ನೀವು ಮಾಡಿ' ಎಂದು ಹೇಳಿ ಪರಮೇಶ್ವರ ಅವರು ಅಲ್ಲಿಂದ ನಿರ್ಗಮಿಸಿದರು.

ಗುರುವಾರ ಬೆಳಗ್ಗೆ ಶಾಸಕರ ಉಪಹಾರಕ್ಕೆ ಇಡ್ಲಿ, ವಡೆ, ಖಾರಬಾತ್ ತರಿಸಲಾಗಿತ್ತು. ಉಪಹಾರ ಸೇವಿಸಿದ ಸದಸ್ಯರು ಇಂದಿನ ಕಲಾಪಕ್ಕೆ ಸಿದ್ಧರಾಗಿದ್ದಾರೆ. ಸಚಿವ ಕೆ.ಜೆ.ಜಾರ್ಜ್ ಅವರು ವಿಧಾನಸೌಧಕ್ಕೆ ಆಗಮಿಸಿದ್ದಾರೆ.

ಡಿವೈಎಸ್‌ಪಿ ಎಂ.ಕೆ.ಗಣಪತಿ ಅವರ ಆತ್ಮಹತ್ಯೆ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಆದೇಶ ಹೊರಡಿಸಿದ್ದಾರೆ. ಆದರೆ, ಪ್ರತಿಪಕ್ಷಗಳು ಇದನ್ನು ವಿರೋಧಿಸುತ್ತಿದ್ದು, ಸಿಬಿಐ ತನಿಖೆಗೆ ಒತ್ತಾಯಿಸಿ ಅಹೋರಾತ್ರಿ ಧರಣಿ ಆರಂಭಿಸಿವೆ.

ಪ್ರತಿಪಕ್ಷಗಳ ಬೇಡಿಕೆಗಳು

* ಸಚಿವ ಕೆ.ಜೆ.ಜಾರ್ಜ್ ರಾಜೀನಾಮೆ ಪಡೆಯಬೇಕು
* ಎಂಕೆ ಗಣಪತಿ ಆತ್ಮಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು
* ಇಬ್ಬರು ಐಪಿಎಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು

jagadeesh shetter

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Karnataka Budget session 2016 : Thursday,July 14 highlights. What happened in the Assembly today?.
Please Wait while comments are loading...