2 ದಿನ ಮದ್ಯದಂಗಡಿ ಬಂದ್; ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಉಂಟಾದ ನಷ್ಟವೆಷ್ಟು?
2023ರ ಕರ್ನಾಟಕ ವಿಧಾನಸಭೆ ಚುನಾವಣೆಗೆ ಬುಧವಾರ (ಮೇ 10)ರಂದು ಮತದಾನ ನಡೆದಿದ್ದು, ಶನಿವಾರದಂದು (ಮೇ 13) ಬಹು ನಿರೀಕ್ಷೆಯ ಮತ ಎಣಿಕೆ ಮತ್ತು ಫಲಿತಾಂಶ ಪ್ರಕಟಗೊಳ್ಳಲಿದೆ. ಫಲಿತಾಂಶಕ್ಕೂ ಮುನ್ನ ಅಭ್ಯರ್ಥಿಗಳು ರಿಲ್ಯಾಕ್ಸ್ ಮೂಡ್‌ನಲ್ಲಿದ್ದರೆ, ಕೆಲವರು ಸೋಲು-ಗೆಲುವಿನ ಲೆಕ್ಕಾಚಾರದಲ್ಲಿದ್ದಾರೆ.
ಇನ್ನು ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ 2 ದಿನ ಮದ್ಯದಂಗಡಿಗಳನ್ನು ಬಂದ್ ಮಾಡಲಾಗಿತ್ತು. ಈ ವೇಳೆ ರಾಜ್ಯದ ಬಾರ್, ರೆಸ್ಟೋರೆಂಟ್, ಎಂಆರ್‌ಪಿ ಅಂಗಡಿಗಳನ್ನು ಮುಚ್ಚಲಾಗಿತ್ತು. ಹೀಗಾಗಿ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ದೊಡ್ಡ ನಷ್ಟ ಉಂಟಾಗಿದೆ.

ಕರ್ನಾಟಕದಲ್ಲಿ ಸತತ ಎರಡು ದಿನ ಮದ್ಯದಂಗಡಿಗಳು ಬಂದ್ ಮಾಡಿದ್ದಕ್ಕೆ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಬರೋಬ್ಬರಿ 150 ಕೋಟಿ ರೂಪಾಯಿಗೂ ಹೆಚ್ಚು ನಷ್ಟವಾಗಿದೆ ಎಂದು ತಿಳಿದುಬಂದಿದೆ.
ರಾಜ್ಯದಲ್ಲಿ ಒಟ್ಟು 12,500 ಬಾರ್, ವೈನ್ ಶಾಪ್, ಎಂಆರ್‌ಪಿ ಅಂಗಡಿಗಳಿದ್ದು, ಪ್ರತಿ ದಿನ ಅಬಕಾರಿ ಇಲಾಖೆಯಿಂದ ರಾಜ್ಯ ಸರ್ಕಾರಕ್ಕೆ 80 ಕೋಟಿ ರೂಪಾಯಿಯಿಂದ 90 ಕೋಟಿ ರೂಪಾಯಿವರೆಗೆ ಆದಾಯ ಬರುತ್ತಿತ್ತು.

ಮೇ 8ರ ಸಂಜೆಯಿಂದ ಮೇ 10ರ ರಾತ್ರಿವರೆಗೆ ಎರಡು ದಿನ ಬಂದ್ ಆದ ಕಾರಣ ರಾಜ್ಯ ಸರ್ಕಾರಕ್ಕೆ ಒಟ್ಟಾರೆ 150 ಕೋಟಿ ರೂಪಾಯಿಗೂ ಅಧಿಕ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.
ಎರಡು ದಿನ ಬಾರ್, ವೈನ್ ಶಾಪ್ ಬಂದ್ ಆದ ಕಾರಣ ರಾಜ್ಯ ಸರ್ಕಾರಕ್ಕೆ ಮಾತ್ರವಲ್ಲ, ಬಾರ್, ಮದ್ಯದಂಗಡಿ ಮಾಲೀಕರಿಗೂ ನಷ್ಟವಾಗಿದೆ. ಒಂದು ಬಾರ್ನಲ್ಲಿ ದಿನವೊಂದಕ್ಕೆ 1.5 ಲಕ್ಷ ರೂಪಾಯಿಗೂ ಹೆಚ್ಚು ವ್ಯವಹಾರವಾಗುತ್ತದೆ.
ಇನ್ನು ಒಂದು ಎಂಎಸ್ಐಎಲ್ ಅಥವಾ ಎಂಆರ್‌ಪಿ ಶಾಪ್‌ನಲ್ಲಿ 3 ಲಕ್ಷ ರೂಪಾಯಿಗಿಂತ ಹೆಚ್ಚು ಮದ್ಯ ಮಾರಾಟ ಆಗುತ್ತದೆ. 12,500 ಮದ್ಯದಂಗಡಿಯಿಂದ ಸರಾಸರಿ 187 ಕೋಟಿ ರೂ.ಗೂ ಅಧಿಕ ವಹಿವಾಟು ನಡೆಯುತ್ತದೆ.
ಇನ್ನು ಮೇ 13ರಂದು ಮತ ಎಣಿಕೆ ಮತ್ತು ಫಲಿತಾಂಶ ಹಿನ್ನೆಲೆ ನಾಳೆ (ಮೇ 12, ಶುಕ್ರವಾರ) ಮಧ್ಯರಾತ್ರಿಯಿಂದ ಮತ್ತೆ ಒಂದು ದಿನ ರಾಜ್ಯಾದ್ಯಂತ ಮದ್ಯದಂಗಡಿಗಳು ಕ್ಲೋಸ್ ಆಗಿರಲಿವೆ.
ವಿಧಾನಸಭೆ ಚುನಾವಣೆ ಹಿನ್ನೆಲೆ ಮದ್ಯದಂಗಡಿಗಳು ಬಂದ್ ಆಗುವ ವಿಚಾರ ಮೊದಲೇ ಗೊತ್ತಿದ್ದ ಕಾರಣ, ಮದ್ಯಪ್ರಿಯರು ಎರಡ್ಮೂರು ದಿನಕ್ಕೆ ಬೇಕಾಗುವಷ್ಟು ಮದ್ಯದ ಬಾಟಲಿಗಳನ್ನು ಮೊದಲೇ ಸ್ಟಾಕ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
2023ರ ವಿಧಾನಸಭೆ ಚುನಾವಣೆಯನ್ನು ಚುನಾವಣಾ ಆಯೋಗವು ಅತ್ಯಂತ ಶಾಂತಿಯುತವಾಗಿ ನಡೆಸಲು ನಿರ್ಧರಿಸಿದೆ. ಶಾಂತಿ ಪಾಲನೆ, ಕಾನೂನು ಸುವ್ಯವಸ್ಥೆ ಮತ್ತು ಸಾರ್ವಜನಿಕರ ಹಿತದೃಷ್ಟಿ ಕಾರಣ ರಾಜ್ಯದಲ್ಲಿ ಮದ್ಯ ಮಾರಾಟ ಹಾಗೂ ಸಾಗಾಟದ ಮೇಲೆ ನಿರ್ಬಂಧ ಹೇರಲಾಗಿದೆ.
ಹೀಗಿದ್ದರೂ ಅಕ್ರಮ ಮದ್ಯ ಮಾರಾಟದ ಕಹಿ ಘಟನೆ ನಡೆದರೆ ಕಠಿಣ ಕ್ರಮ ಕೈಗೊಳ್ಳಲು ಆದೇಶಿಸಲಾಗಿದೆ. ಅದರಲ್ಲೂ ನೆರೆ ರಾಜ್ಯದಿಂದ ಮದ್ಯ ತಂದರೂ ಶಿಕ್ಷೆ ವಿಧಿಸಲಾಗುತ್ತದೆ.












Click it and Unblock the Notifications