ಅಬಕಾರಿ ಸುಂಕ ಹೆಚ್ಚಿಸಿದ್ದ ಸರ್ಕಾರಕ್ಕೆ ಶಾಕ್ ನೀಡಿದ ಮದ್ಯಪ್ರಿಯರು: ರಾಜ್ಯದಲ್ಲಿ ಮದ್ಯ ಮಾರಾಟ ಕುಸಿತ
ಬೆಂಗಳೂರು, ಆಗಸ್ಟ್ 21: ಗ್ಯಾರಂಟಿಗಳ ಜಾರಿ ಬಳಿಕ ಆದಾಯ ಹೆಚ್ಚಳಕ್ಕೆ ಅಬಕಾರಿ ಸುಂಕ ಹೆಚ್ಚಿಸಿದ್ದ ಸರ್ಕಾರಕ್ಕೆ ಇದೀಗ ಶಾಕ್ ಎದುರಾಗಿದೆ. ಬಜೆಟ್‌ನಲ್ಲಿ ಶೇಕಡ 10 ರಷ್ಟು ಅಬಕಾರಿ ಸುಂಕ ಏರಿಕೆ ಮಾಡಿದ್ದ ಸರ್ಕಾರಕ್ಕೆ ಮದ್ಯಪ್ರಿಯರು ಶಾಕ್ ನೀಡಿದ್ದಾರೆ. ಆದಾಯ ಹೆಚ್ಚಿಸಿಕೊಳ್ಳಲು ಪ್ಲಾನ್ ಮಾಡಿದ್ದ ಸರ್ಕಾರಕ್ಕೆ ಇದೀಗ ಮತ್ತೊಂದು ರೀತಿಯ ಸಂಕಷ್ಟ ಎದುರಾಗಿಬಿಟ್ಟಿದೆ.
ಗ್ಯಾರಂಟಿ ಮೇಲೆ ಗ್ಯಾರಂಟಿಗಳನ್ನು ಜಾರಿ ಮಾಡಿದ ರಾಜ್ಯ ಸರ್ಕಾರ, ತನ್ನ ಬೊಕ್ಕಸದ ಆದಾಯ ಹೆಚ್ಚಳಕ್ಕೆ ಬೇರೆ ಆದಾಯದ ಮೂಲಗಳ ಬಗ್ಗೆ ಗಮನಹರಿಸಿತ್ತು. 2023ರ ಬಜೆಟ್ ನಲ್ಲಿ ಸರ್ಕಾರದ ಬಹುದೊಡ್ಡ ಆದಾಯದ ಮೂಲವಾದ ಅಬಕಾರಿ ಸುಂಕವನ್ನ ಶೇಕಡ 10ರಿಂದ 20 ರಷ್ಟು ಹೆಚ್ಚಳ ಮಾಡಿತ್ತು. ಆದರೆ ಸುಂಕ ಹೆಚ್ಚಳ ಬಳಿಕ ಆದಾಯದ ನಿರೀಕ್ಷೆಯಲ್ಲಿದ್ದ ಸರ್ಕಾರಕ್ಕೆ ಶಾಕ್ ಎದುರಾಗಿದೆ.

ಅಬಕಾರಿ ಸುಂಕ ಏರಿಕೆ ಬಳಿಕ ಮದ್ಯ ಮಾರಾಟ ಕುಸಿತವಾಗಿದೆ ಅಂತಾ ರಾಜ್ಯ ಮದ್ಯ ಮಾರಾಟಗಾರರ ಒಕ್ಕೂಟ ಮಾಹಿತಿ ಹಂಚಿಕೊಂಡಿದೆ. ಮದ್ಯದ ದರ ಏರಿಕೆಯಿಂದಾಗಿ ರಾಜ್ಯದಲ್ಲಿ ಮದ್ಯ ಮಾರಾಟದಲ್ಲಿ ಕುಂಠಿತವಾಗಿದ್ದು, ಕಳೆದ ವರ್ಷದ ಈ ಅವಧಿಗೆ ಹೋಲಿಸಿದರೆ ಈ ವರ್ಷದ ಆಗಸ್ಟ್‌ನಲ್ಲಿ ಶೇ.10ರಿಂದ 15ರಷ್ಟು ಕಡಿಮೆ ಪ್ರಮಾಣದ ಮದ್ಯ ಮಾರಾಟವಾಗಿದೆ.
ಇನ್ನು ಲಿಕ್ಕರ್ ಮಾರಾಟ ಕುಸಿತ ಕಂಡಿದ್ದರೆ, ಬಿಯರ್ ಮಾರಾಟದಲ್ಲಿ ಯಾವುದೇ ವ್ಯತ್ಯಾಸ ಕಂಡುಬಂದಿಲ್ಲ. ಒಕ್ಕೂಟ ನೀಡಿರುವ ಮಾಹಿತಿಯಂತೆ ಜುಲೈ ತಿಂಗಳಲ್ಲಿ 3,556.25 ಕೋಟಿ ರೂ ಮೊತ್ತದ ಬಿಯರ್ ಸೇರಿದಂತೆ ಎಲ್ಲ ಬಗೆ ಮದ್ಯಗಳು ಮಾರಾಟವಾಗಿದ್ದವು. ಆಗಸ್ಟ್ ತಿಂಗಳ 15 ದಿನಗಳಲ್ಲಿ 1,302.90 ಕೋಟಿ ರೂ. ಮದ್ಯ ಮಾರಾಟವಾಗಿದೆ. ಅದರಲ್ಲಿ ಬಿಯರ್ 234.19 ಕೋಟಿ ರೂ. ಹಾಗೂ ಇತರ ಮದ್ಯ 1,068.71 ಕೋಟಿ ರೂಪಾಯಿಗೆ ಮಾರಾಟವಾಗಿದೆ.

2022-23ರಲ್ಲಿ ಆಗಸ್ಟ್‌ನ ಮೊದಲ 15 ದಿನಗಳ ಕಾಲ 25.80 ಲಕ್ಷ ಬಾಕ್ಸ್‌ಗಳಷ್ಟು ಮದ್ಯ ಹಾಗೂ 10.34 ಲಕ್ಷ ಬಾಕ್ಸ್ ಬಿಯರ್ ಮಾರಾಟವಾಗಿತ್ತು. ಅದೇ ಈ ವರ್ಷದ ಆಗಸ್ಟ್ 1ರಿಂದ 15ರವರೆಗೆ 21.87 ಲಕ್ಷ ಬಾಕ್ಸ್ ಮದ್ಯ ಹಾಗೂ 12.52 ಲಕ್ಷ ಬಾಕ್ಸ್ ಬಿಯರ್ ಮಾರಾಟವಾಗಿದೆ
ಇನ್ನು ಸ್ಕಾಚ್ ಮದ್ಯ ಕುಡಿಯುತ್ತಿದ್ದವರು ಪ್ರೀಮಿಯಂ ಬ್ರ್ಯಾಂಡ್‌ಂಗೆ ಹಾಗೂ ಪ್ರೀಮಿಯಂ ಬ್ರ್ಯಾಂಡ್ ಸೇವಿಸುತ್ತಿರುವವರು ಅದಕ್ಕಿಂತ ಕೆಳಗಿನ ಬ್ರ್ಯಾಂಡ್ ಸೇವಿಸುತ್ತಿದ್ದಾರೆ. ಇದರಿಂದ ಸರ್ಕಾರದ ಆದಾಯ ಕೂಡ ಇಳಿಕೆ ಕಂಡಿದೆ. ಇದರ ಮಧ್ಯೆ ನಕಲಿ ಮದ್ಯದ ಹಾವಳಿ ಕೂಡ ಹೆಚ್ಚಾಗಿದ್ದು, ಸದ್ಯ ಸರ್ಕಾರ ತನ್ನ ಆದಾಯದ ಮೂಲವನ್ನ ಹೇಗೆ ಸುಧಾರಿಸುತ್ತದೆ ಎನ್ನುವುದನ್ನು ಕಾದುನೋಡಬೇಕಿದೆ.












Click it and Unblock the Notifications