ಕೊಪ್ಪಳದ 11 ಗ್ರಾಮಗಳು 'ಮದ್ಯ ಮಾರಾಟ ಮುಕ್ತ': ರಾಜ್ಯ ಸರ್ಕಾರದಿಂದ 'ಗಾಂಧಿ ಪುರಸ್ಕಾರ ಸ್ವೀಕಾರ'
ಬೆಂಗಳೂರು: ಗಾಂಧೀಜಿಯವರ ಗ್ರಾಮ ಸ್ವರಾಜ್ಯ ಹಾಗೂ ಸ್ವಸ್ಥ ಸಮಾಜದ ಕನಸಿಗೆ ಕೊಪ್ಪಳ ಜಿಲ್ಲೆಯ 11 ಗ್ರಾಮಗಳು ನೀರೆರೆದಿವೆ. ಈ ಗ್ರಾಮಗಳು ಮಹತ್ವದ ಹೆಜ್ಜೆ ಇಟ್ಟು 'ಮದ್ಯ ಮಾರಾಟ ಮುಕ್ತ' ಗ್ರಾಮಗಳಾಗಿ ಗುರುತಿಸಿಕೊಂಡಿರುವುದು ಹೆಮ್ಮೆಯ ಸಂಗತಿ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರು ಹೇಳಿದರು.
ಗಾಂಧಿ ಜಯಂತಿ ಪ್ರಯುಕ್ತ ಶುಕ್ರವಾರ (ಅಕ್ಟೋಬರ್ 2) ಈ ಎಲ್ಲ ಗ್ರಾಮಗಳಿಗೆ ರಾಜ್ಯ ಸರ್ಕಾರದ ವತಿಯಿಂದ 'ಗಾಂಧಿ ಪುರಸ್ಕಾರ' ನೀಡಲಾಯಿತು. ಈ ಕುರಿತು ಸಚಿವರು ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. 'ಸ್ವಯಂ ಪ್ರೇರಣೆಯಿಂದ ತಮ್ಮ ಗ್ರಾಮಗಳನ್ನು ಮದ್ಯ ಮಾರಾಟ ಮುಕ್ತಗೊಳಿಸಿದ್ದಾರೆ. ರಾಜ್ಯ ಮದ್ಯಪಾನ ಸಂಯಮ ಮಂಡಳಿಯಿಂದ 'ಮದ್ಯ ಮಾರಾಟ ಮುಕ್ತ ಗ್ರಾಮ' ಎಂದು ಮೊದಲು ಧ್ವನಿ ಎತ್ತಿದ್ದು ಕೊಪ್ಪಳ ತಾಲ್ಲೂಕಿನ ಹಟ್ಟಿ ಗ್ರಾಮ ಎಂದು ಅವರು ತಿಳಿಸಿದರು.

ಮದ್ಯ ಮುಕ್ತ ಗ್ರಾಮಗಳು ಯಾವುವು?
ತಾಲ್ಲೂಕಿನ ಲೇಬಗೇರಿ, ತಾಳಕನಕಾಪುರ, ಹನುಮನಹಳ್ಳಿ, ಕಾಮನೂರು, ಕುಕನೂರು ತಾಲ್ಲೂಕಿನ ಬಿನ್ನಾಳ, ಚಿಕ್ಕೇನಕೊಪ್ಪ, ಕುಷ್ಟಗಿ ತಾಲ್ಲೂಕಿನ ಮದ್ನಾಳ, ನಾಗರಾಳ, ಬೋದೂರು ತಾಂಡಾ ಹಾಗೂ ಹಿರೇಬನ್ನಿಗೋಳ ಗ್ರಾಮಗಳಲ್ಲಿ ಮದ್ಯ ಮಾರಾಟ ನಿಷೇಧ. ಈ ಗ್ರಾಮಗಳಲ್ಲಿ ಯಾರು ಮದ್ಯ ಮಾರಾಟ ಗ್ರಾಮಸ್ಥರು ಶ್ರಮಿಸಿದ್ದಾರೆ.
ಈ ಗ್ರಾಮಗಳಿಗೆ 'ಗಾಂಧಿ ಪುರಸ್ಕಾರ' ದೊರೆತಿರುವುದು ಗ್ರಾಮಸ್ಥರ ಒಗ್ಗಟ್ಟು ಮತ್ತು ಸಾಮಾಜಿಕ ಬದ್ಧತೆಗೆ ಸಿಕ್ಕ ಗೌರವ ಎಂದು ಶಿವರಾಜ್ ತಂಗಡಗಿ ಹೆಮ್ಮೆ ವ್ಯಕ್ತಪಡಿಸಿದರು.
ಮದ್ಯದಿಂದ ಜನರಕ್ಷಣೆ ಬರೀ ಸರ್ಕಾರದ ಜವಾಬ್ದಾರಿಯಲ್ಲ!
ಮದ್ಯದ ದುಷ್ಪರಿಣಾಮಗಳಿಂದ ಕುಟುಂಬಗಳನ್ನು ರಕ್ಷಿಸುವುದು ಕೇವಲ ಸರ್ಕಾರದ ಜವಾಬ್ದಾರಿಯಲ್ಲ. ಜನರ ಸಹಭಾಗಿತ್ವ, ಯುವಕರ ಸಂಕಲ್ಪ, ಮಹಿಳೆಯರ ಸಹಕಾರ ಹಾಗೂ ಗ್ರಾಮಸ್ಥರ ಒಗ್ಗಟ್ಟಿನಿಂದ ಮಾತ್ರ ಬದಲಾವಣೆ ಸಾಧ್ಯ. ಇದು ಈಗ ಇಷ್ಟು ಗ್ರಾಮಗಳಲ್ಲಿ ಸಾಬೀತಾಗಿದೆ ಎಂದು ತಿಳಿಸಿದರು.
ಇತರ ಗ್ರಾಮಗಳಿಗೆ ಪ್ರೇರಣೆ ಆಗಲಿ
ಈ ನಿಟ್ಟಿನಲ್ಲಿ ಮದ್ಯ ಮಾರಾಟ ಮುಕ್ತ ಗ್ರಾಮಗಳಿಗೆ ಪಾದಯಾತ್ರೆ ನಡೆಸಿ ನೈತಿಕ ಬಲ ತುಂಬುತ್ತಿರುವ 'ಕೊಪ್ಪಳ ಗಾಂಧಿ ಬಳಗ'ದ ಕಾರ್ಯವೂ ಅಭಿನಂದನಾರ್ಹ. ಈ 11 ಗ್ರಾಮಗಳ ಸಾಧನೆ. ಇತರೆ ಗ್ರಾಮಗಳಿಗೂ ಪ್ರೇರಣೆ ಆಗಬೇಕು. ಈ ನಿಟ್ಟಿನಲ್ಲಿ ಮದ್ಯದ ವಿರುದ್ಧ ಜನಜಾಗೃತಿ ಮೂಡಿಸೋಣ. ಕುಟುಂಬಗಳ ಆರೋಗ್ಯ ಮತ್ತು ನೆಮ್ಮದಿಗಾಗಿ ಒಂದಾಗೋಣ. ಯುವಜನತೆಯ ಭವಿಷ್ಯವನ್ನು ಕಾಪಾಡಲು ಸಂಕಲ್ಪ ಮಾಡೋಣ. ನಮ್ಮ ಗ್ರಾಮಗಳನ್ನು ಆರೋಗ್ಯಕರ, ಸುರಕ್ಷಿತ ಮತ್ತು ಸ್ವಸ್ಥ ಗ್ರಾಮಗಳನ್ನಾಗಿ ರೂಪಿಸೋಣ ಎಂದು ಸಚಿವರು ಕರೆ ನೀಡಿದರು.
ಬಾಪುವಿನ ತತ್ವ ಮೈಗೂಡಿಸಿಕೊಳ್ಳಲು ಡಿಕೆಶಿ ಕರೆ
ಗಾಂಧಿ ಜಯಂತಿ ಪ್ರಯುಕ್ತ 1915ರಲ್ಲಿ ಗಾಂಧೀಜಿ ಅವರು ಭೇಟಿ ನೀಡಿದ್ದ ಐತಿಹಾಸಿಕ ಸರ್ಕಾರಿ ಕಲಾ ಕಾಲೇಜು ಆವರಣದಲ್ಲಿ, ಮೈಸೂರಿನ ಪ್ರಸಿದ್ಧ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತಿರುವ ಭವ್ಯ 'ಗಾಂಧಿ ಸ್ಮಾರಕ ಸ್ತಂಭ'ವನ್ನು ಇಂದು ಅನಾವರಣಗೊಳಿಸಲಾಯಿತು. ತ್ಯಾಗ ಮತ್ತು ಅಹಿಂಸೆಯ ಪ್ರತಿರೂಪವಾದ ಮಹಾತ್ಮರ ವಿಚಾರಧಾರೆಗಳನ್ನು ಜೀವಂತವಾಗಿಡುವ ನಮ್ಮ ಸರ್ಕಾರದ ಮಹತ್ವದ ಹೆಜ್ಜೆಯಿದು ಎಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಡಿಕೆ ಶಿವಕುಮಾರ್ ಹೇಳಿದರು.
ಗಾಂಧೀಜಿ ಹೆಜ್ಜೆಗುರುತು ಮೂಡಿರುವ ನಾಡಿನ 87 ಸ್ಥಳಗಳಲ್ಲಿ ಸ್ಮಾರಕ ನಿರ್ಮಿಸುವ ನಮ್ಮ ಸರ್ಕಾರದ ಈ ಕಾರ್ಯ, ಯುವಪೀಳಿಗೆಗೆ ಸತ್ಯ-ಶಾಂತಿಯ ಸಂದೇಶ ಸಾರಲಿದೆ. ಗಾಂಧಿ ಜಯಂತಿಯ ಈ ಶುಭದಿನದಂದು ಬಾಪುವಿನ ತತ್ವಗಳನ್ನು ಮೈಗೂಡಿಸಿಕೊಳ್ಳೋಣ ಎಂದು ಅವರು ಕರೆ ನೀಡಿದರು.


Click it and Unblock the Notifications
