ವಿಧಾನಸೌಧದ ಮೆಟ್ಟಿಲ ಮೇಲೆ ಒಡೆದ ಮದ್ಯದ ಬಾಟಲಿ, ವ್ಯಕ್ತಿ ಪರಾರಿ
ಮಂಗಳವಾರ ವಿಧಾನಸೌಧಕ್ಕೆ ಬಂದ ವ್ಯಕ್ತಿಯೊಬ್ಬರು ಮೆಟ್ಟಿಲ ಮೇಲೆ ಜಾರಿ ಬಿದ್ದರು. ಆಗ ಮದ್ಯದ ಬಾಟಲಿಗಳು ಒಡೆದು ಮೆಟ್ಟಿಲ ಮೇಲೆ ಮದ್ಯ ಚೆಲ್ಲಿ ಹೋಗಿದೆ.
ಬೆಂಗಳೂರು, ಮಾರ್ಚ್ 08; ರಾಜ್ಯದ ಆಡಳಿತದ ಶಕ್ತಿ ಕೇಂದ್ರ ವಿಧಾನಸೌಧ. ಪ್ರತಿನಿತ್ಯ ಸಾವಿರಾರು ಜನರು ಇಲ್ಲಿಗೆ ಆಗಮಿಸುತ್ತಾರೆ. ಆದರೆ ಮಂಗಳವಾರ ಇಲ್ಲಿನ ಪ್ರವೇಶ ದ್ವಾರದ ಮೆಟ್ಟಿಗೆಲಿ ಮದ್ಯದ ಅಭಿಷೇಕವಾಗಿದೆ. ವಿಧಾನಸೌಧಕ್ಕೆ ಮದ್ಯ ತೆಗೆದುಕೊಂಡು ಹೋಗುತ್ತಿದ್ದ ವ್ಯಕ್ತಿ ಜಾರಿ ಬಿದ್ದು, ಮದ್ಯದ ಬಾಟಲಿ ಒಡೆದು ಚೆಲ್ಲಾಪಿಲ್ಲಿಯಾಗಿದೆ.
ಮಂಗಳವಾರ ನಡೆದ ಈ ಘಟನೆ ಬಗ್ಗೆ ವಿಧಾನಸೌಧದ ಭದ್ರತಾ ಸಿಬ್ಬಂದಿ ವಿಧಾನಸೌಧ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಆದರೆ ಮದ್ಯ ಸಾಗಿಸುತ್ತಿದ್ದ ವ್ಯಕ್ತಿ ಪರಾರಿಯಾಗಿದ್ದು, ಯಾರಿಗಾಗಿ ಮದ್ಯ ತೆಗೆದುಕೊಂಡು ಹೋಗುತ್ತಿದ್ದರು ಎಂಬುದು ತಿಳಿದುಬಂದಿಲ್ಲ. ಭದ್ರತಾ ಸಿಬ್ಬಂದಿ ಮೆಟ್ಟಿಲುಗಳ ಮೇಲೆ ಚೆಲ್ಲಿದ್ದ ಮದ್ಯದ ಬಾಟಲಿ ತೆರವುಗೊಳಿಸಿ ಸ್ಥಳ ಸ್ವಚ್ಛಗೊಳಿಸಿದ್ದಾರೆ.

ಪೊಲೀಸರ ಮಾಹಿತಿ ಪ್ರಕಾರ 30 ರಿಂದ 35ವರ್ಷದ ವ್ಯಕ್ತಿ ಚೀಲದಲ್ಲಿ ಮದ್ಯದ ಬಾಟಲಿ ಹಿಡಿದುಕೊಂಡು ಪಶ್ಚಿಮ ದ್ವಾರದ ಮೂಲಕ ವಿಧಾನಸೌಧದ ಒಳಗೆ ಹೊರಟಿದ್ದರು. ಪ್ರವೇಶ ದ್ವಾರದ ಮೆಟ್ಟಿಲ ಮೇಲೆ ಆತ ಜಾರಿ ಬಿದ್ದ ಪರಿಣಾಮ ಕೈ ಚೀಲವೂ ಬಿದ್ದು, ಮದ್ಯದ ಬಾಟಲಿ ಒಡೆದು ಹೋಗಿದೆ. ಆದರೆ ವ್ಯಕ್ತಿ ಭದ್ರತಾ ಸಿಬ್ಬಂದಿಗಳ ಕಣ್ಣು ತಪ್ಪಿಸಿ ಅಲ್ಲಿಂದ ಪರಾರಿಯಾಗಿದ್ದಾನೆ.
ವಿಧಾನಸೌಧದ ಒಳಗೆ ಮದ್ಯವನ್ನು ತೆಗೆದುಕೊಂಡು ಹೋಗುವಂತಿಲ್ಲ. ಆದರೆ ಭದ್ರತಾ ಸಿಬ್ಬಂದಿ ಚೀಲವನ್ನು ಪರಿಶೀಲನೆ ಮಾಡದೇ ವ್ಯಕ್ತಿಯನ್ನು ಒಳಬಿಟ್ಟಿದ್ದಾರೆ. ಆತ ವಿಧಾನಸೌಧ ಪ್ರವೇಶಿಸುವಾಗ ಜಾರಿ ಬಿದ್ದಿದ್ದಾನೆ. ಆಗ ಚೀಲವನ್ನು ಬಿಟ್ಟು ಪರಾರಿಯಾಗಿದ್ದಾನೆ. ಭದ್ರತಾ ಸಿಬ್ಬಂದಿ ಚೀಲವನ್ನು ತೆರವುಗೊಳಿಸಿ ಸ್ಥಳವನ್ನು ಸ್ವಚ್ಛಗೊಳಿಸಿದ್ದು, ಈ ಕುರಿತು ವಿಧಾನಸೌಧ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ವಿಧಾನಸೌಧ ಭದ್ರತೆ; ವಿಧಾನಸೌಧ ರಾಜ್ಯದ ಆಡಳಿತ ಶಕ್ತಿ ಕೇಂದ್ರ ಮತ್ತು ಅತಿ ನಿರ್ಬಂಧಿತ ಪ್ರದೇಶ. ಉಗ್ರರ ಬೆದರಿಕೆ ಹಿನ್ನಲೆಯಲ್ಲಿ ಅತಿ ಸೂಕ್ಷ್ಮ ಕಟ್ಟಡ ಎಂದು ಗುರುತಿಸಿ ಮೂರು ಪ್ರವೇಶ ದ್ವಾರಗಳಲ್ಲಿ ಭದ್ರತೆ ಕಲ್ಪಿಸಲಾಗಿದೆ. ಮೆಟಲ್ ಡಿಟೆಕ್ಟರ್ ಹಾಕಲಾಗಿದೆ. ಅಧಿಕೃತ ಪಾಸ್ ಇದ್ದವರು ಮಾತ್ರ ಒಳಗೆ ಪ್ರವೇಶ ಪಡೆಯಬಹುದಾಗಿದೆ. ವಿಧಾನಸೌಧ ಠಾಣೆಯಲ್ಲಿಯೇ 169ಕ್ಕೂ ಹೆಚ್ಚು ಸಿಬ್ಬಂದಿಗಳಿದ್ದಾರೆ. ಇವರು ಭದ್ರತೆಯ ಉಸ್ತುವಾರಿ ನೋಡಿಕೊಳ್ಳುತ್ತಾರೆ.
ಪ್ರವೇಶ ದ್ವಾರಗಳಲ್ಲಿ ಮೆಟಲ್ ಡಿಟೆಕ್ಟರ್ ಮೂಲಕ ಎಲ್ಲರನ್ನು ತಪಾಸಣೆ ಮಾಡಿ, ಬ್ಯಾಗ್‌ಗಳನ್ನು ಪರಿಶೀಲನೆ ಮಾಡಿ ಜನರನ್ನು ಒಳಬಿಡಲಾಗುತ್ತದೆ. ಅಪಾಯಕಾರಿ ವಸ್ತು, ಸೂಕ್ತ ದಾಖಲೆ ಇಲ್ಲದ ಹಣ, ಮದ್ಯದ ಬಾಟಲಿಗಳನ್ನು ಒಳಗೆ ತೆಗೆದುಕೊಂಡು ಹೋಗುವಂತಿಲ್ಲ.












Click it and Unblock the Notifications