ಮದರಸಾ ಬ್ಯಾನ್ ಮಾಡಬೇಕು ಎಂದಿದ್ದ MLA ರೇಣುಕಾಚಾರ್ಯಗೆ ಜೀವ ಬೆದರಿಕೆ
ಬೆಂಗಳೂರು, ಮಾ. 30: ಮದರಸಾಗಳ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ ಅವರಿಗೆ ಅಪರಿಚಿತ ವ್ಯಕ್ತಿ ಜೀವ ಬೆದರಿಕೆ ಹಾಕಿದ್ದಾರೆ.
ಬುಧವಾರ ಬೆಳಗ್ಗೆ ರೇಣುಕಾಚಾರ್ಯ ಅವರ ಮೊಬೈಲ್ ಗೆ ಕರೆ ಮಾಡಿದ ವ್ಯಕ್ತಿ, ನಿನ್ನನ್ನು ಕೊಲ್ಲುತ್ತೇನೆ, ಸುಮ್ಮನೆ ಬಿಡಲ್ಲ ಎಂದು ಬೆದರಿಕೆ ಹಾಕಿದ್ದು, ಈ ಸಂಬಂಧ ಸದಾಶಿವನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಈ ಕುರಿತು ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಸಚಿವ ಎಂ.ಪಿ. ರೇಣಕಾಚಾರ್ಯ, ನನಗೆ ಅಪರಿಚಿತ ವ್ಯಕ್ತಿಯಿಂದ ಬೆದರಿಕೆ ಕರೆ ಬಂದಿದೆ. ಹೀಗಾಗಿ ತನಿಖೆ ನಡೆಸುವಂತೆ ಸದಾಶಿವನಗರ ಪೊಲೀಸರಿಗೆ ದೂರು ನೀಡಿದ್ದೇನೆ. ಅಪರಿಚಿತನ ಕರೆಗೆ ಸಂಬಂಧಿಸಿದ ವಿವರಗಳನ್ನು ಪೊಲೀಸರಿಗೆ ತಿಳಿಸಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.

ವಿವಾದಾತ್ಮಕ ಹೇಳಿಕೆ:
ಕಳೆದ ಎರಡು ದಿನಗಳ ಹಿಂದೆ ರೇಣುಕಾಚಾರ್ಯ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಕರ್ನಾಟಕದಲ್ಲಿ ಮದರಸಾಗಳಲ್ಲಿ ದೇಶ ವಿರೋಧಿ ಚಟುವಟಿಕೆಗಳು ನಡೆಯುತ್ತಿವೆ. ಕರ್ನಾಟಕದಲ್ಲಿ ಎಲ್ಲ ಮದರಸಾಗಳನ್ನು ಬ್ಯಾನ್ ಮಾಡಬೇಕು ಎಂದು ಆಗ್ರಹಿಸಿದ್ದರು. ಮಕ್ಕಳಿಗೆ ಬೇಕಾದ ಶಿಕ್ಷಣವನ್ನು ಸರ್ಕಾರಿ ಶಾಲೆಗಳಲ್ಲಿ ನೀಡಲಾಗುತ್ತಿದೆ. ಮತ್ತೆ ಅವರಿಗೆ ಯಾಕೆ ಮದರಸಾ ಶಾಲೆಗಳು ಎಂದು ರೇಣುಕಾಚಾರ್ಯ ಪ್ರಶ್ನಿಸಿದ್ದರು.

ಮದರಸಾಗಳಲ್ಲಿ ದೇಶದ ಬಗ್ಗೆ ಬೋಧನೆ ಮಾಡಲ್ಲ. ದೇಶಕ್ಕಾಗಿ ತ್ಯಾಗ ಮಾಡಿದ ಮಹಾನ್ ತ್ಯಾಗಿಗಳ ಬಗ್ಗೆಯೂ ಹೇಳಲ್ಲ. ಕೇವಲ ಇಸ್ಲಾಮಿಕ್ ಧರ್ಮ ಬೋಧನೆ ಮಾಡಲಾಗುತ್ತಿದೆ. ಇದು ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀಳುತ್ತಿದೆ. ಹೀಗಾಗಿ ಮದರಸಾಗಳನ್ನು ಬ್ಯಾನ್ ಮಾಡಬೇಕು. ಅದನ್ನು ಮಾಡಿ ತೀರುತ್ತೇವೆ. ಈ ಹಿಂದೆ ಸಿದ್ದರಾಮಯ್ಯ ಸರ್ಕಾರ ಇದ್ದ ಹಣವನ್ನು ಮದರಸಾಗಳಿಗೆ ಸುರಿದಿದ್ದಾರೆ. ಹೀಗಾಗಿ ಹಿಂದೂ ದೇವಾಲಯಗಳಿಗೆ ಅನುದಾನ ಕೊಡಲು ಹಣವಿಲ್ಲದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ರೇಣುಕಾಚಾರ್ಯ ಅವರ ಈ ಹೇಳಿಕೆ ರಾಜ್ಯದಲ್ಲಿ ದೊಡ್ಡ ವಿವಾದಕ್ಕೆ ನಾಂದಿ ಹಾಡಿತ್ತು. ಇದೀಗ ಇದೇ ವಿಚಾರವಾಗಿ ಬೆದರಿಕೆ ಹಾಕಲಾಗಿದೆ ಎಂದು ಶಂಕಿಸಲಾಗಿದೆ.












Click it and Unblock the Notifications