ಬಿಜೆಪಿ ಶಾಸಕ ಸಿ.ಟಿ.ರವಿಗೆ ಜೀವ ಬೆದರಿಕೆ, ದೂರು
ಚಿಕ್ಕಮಗಳೂರು, ಜನವರಿ 30 : ಚಿಕ್ಕಮಗಳೂರು ಶಾಸಕ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರಿಗೆ ಕೊಲೆ ಬೆದರಿಕೆ ಹಾಕಲಾಗಿದೆ. ಈ ಕುರಿತು ಅವರು ಎಸ್ಪಿ ಅಣ್ಣಾಮಲೈ ಅವರಿಗೆ ದೂರು ನೀಡಿದರು.
ಮಂಗಳವಾರ ಸಿ.ಟಿ.ರವಿ ಅವರು ಚಿಕ್ಕಮಗಳೂರು ಎಸ್ಪಿ ಅಣ್ಣಾಮಲೈ ಅವರಿಗೆ ದೂರು ನೀಡಿದರು. ರೌಡಿ ಪರ್ವೀಜ್ ಎಂಬ ಹೆಸರಲ್ಲಿ ಅಂಚೆ ಮೂಲಕ ಬಂದಿರುವ ಪತ್ರದಲ್ಲಿ ಸಿ.ಟಿ.ರವಿ ಅವರಿಗೆ ಜೀವ ಬೆದರಿಕೆ ಹಾಕಲಾಗಿದೆ.
'ಗೌರಿ ಲಂಕೇಶ್, ಎಂ.ಎಂ.ಕಲಬುರ್ಗಿ ಅವರ ಹತ್ಯೆ ಮಡಿರುವುದು ಆರ್‌ಎಸ್‌ಎಸ್ ಎಂಬುವುದು ಗೊತ್ತಿದೆ. ದೀಪಕ್ ರಾವ್ ಹತ್ಯೆಯ ಹಿಂದೆ ನಮ್ಮ ಕೈವಾಡ ಇದೆ' ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಟೈಪ್ ಮಾಡಲಾಗಿರುವ ಪತ್ರ ಬೆಂಗಳೂರಿನಿಂದ ಅಂಚೆ ಮೂಲಕ ಚಿಕ್ಕಮಗಳೂರಿನ ಸಿ.ಟಿ.ರವಿ ಅವರ ನಿವಾಸಕ್ಕೆ ತಲುಪಿದೆ. ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಸಂಸದೆ ಶೋಭಾ ಕರಂದ್ಲಾಜೆ ಅವರ ವಿರುದ್ಧ ಪತ್ರದಲ್ಲಿ ಆಕ್ರೋಶ ವ್ಯಕ್ತಪಡಿಸಲಾಗಿದೆ.
ಮಾಧ್ಯಮಗಳ ಜೊತೆ ಮಾತನಾಡಿದ ಸಿ.ಟಿ.ರವಿ ಅವರು, 'ದೀಪಕ್ ರಾವ್‌ಗೆ ಆದ ಗತಿ ನಿಮಗೂ ಬರುತ್ತೆ ಎಂದು ಪತ್ರದಲ್ಲಿ ಬೆದರಿಕೆ ಹಾಕಿದ್ದಾರೆ. ಪತ್ರದ ಜೊತೆಗೆ ಅಂಚೆ ಕವರ್ ಸೇರಿ ಎಸ್ಪಿ ಅಣ್ಣಾಮಲೈಗೆ ದೂರು ನೀಡಿದ್ದೇನೆ. ತನಿಖೆ ನಡೆಸಿ ಕ್ರಮ ಕೈಗೊಳ್ಳುತ್ತಾರೆ ಎಂಬ ವಿಶ್ವಾಸವಿದೆ' ಎಂದರು.
ಮಾಧ್ಯಮಗಳ ಜೊತೆ ಮಾತನಾಡಿದ ಎಸ್ಪಿ ಅಣ್ಣಾಮಲೈ ಅವರು, 'ಸರ್ಕಾರದಿಂದ ಈಗಾಗಲೇ ವೈ ಶ್ರೇಣಿಯ ಭದ್ರೆಯನ್ನು ಸಿ.ಟಿ.ರವಿ ಅವರಿಗೆ ನೀಡಲಾಗಿದೆ. ಇನ್ನಷ್ಟು ಭದ್ರತೆ ನೀಡುತ್ತೇವೆ. ದೂರಿನ ಬಗ್ಗೆ ತನಿಖೆಗಾಗಿ ವಿಶೇಷ ಪೊಲೀಸ್ ತಂಡವನ್ನು ರಚನೆ ಮಾಡಲಾಗಿದೆ' ಎಂದು ಹೇಳಿದರು












Click it and Unblock the Notifications