Government Employee: ನಿವೃತ್ತ ಸರ್ಕಾರಿ ನೌಕರರ ಪಿಂಚಣಿ, ಮಹತ್ವದ ಮಾಹಿತಿ
ಬೆಂಗಳೂರು, ಏಪ್ರಿಲ್ 22: ಕರ್ನಾಟಕ ಸರ್ಕಾರ 7ನೇ ರಾಜ್ಯ ವೇತನ ಆಯೋಗದ ವರದಿ ಜಾರಿಗೊಳಿಸಿದ ಬಳಿಕ ನಿವೃತ್ತ ಸರ್ಕಾರಿ ನೌಕರರ ಬಗ್ಗೆ ಹೆಚ್ಚು ಗಮನಹರಿಸುತ್ತಿಲ್ಲ, ನೀಡಬೇಕಾದ ಸೌಲಭ್ಯಗಳನ್ನು ನೀಡುತ್ತಿಲ್ಲ ಎಂದು ಆರೋಪಿಸಲಾಗುತ್ತಿದೆ. ಈಗ ಆಡಳಿತ ವಿಭಾಗದ ಜಂಟಿ ನಿರ್ದೇಶಕರು ಜ್ಞಾಪನಾ ಪತ್ರವೊಂದನ್ನು ಹೊರಡಿಸಿದ್ದು, ಪಿಂಚಣಿ ಪ್ರಸ್ತಾವನೆಗಳನ್ನು ಮಹಾಲೇಖಪಾಲರ ಕಛೇರಿಗೆ ಸಲ್ಲಿಸುವ ಕುರಿತು ಮಾಹಿತಿಯನ್ನು ನೀಡಿದ್ದಾರೆ.
ವಿಜಯ ಈ ರವಿಕುಮಾರ್ ಜಂಟಿ ನಿರ್ದೇಶಕರು (ಆಡಳಿತ) ಜ್ಞಾಪನಾ ಪತ್ರವನ್ನು ಹೊರಡಿಸಿದ್ದಾರೆ. ಸರ್ಕಾರಿ ನೌಕರರು ನಿವೃತ್ತರಾಗುವ ಮೊದಲು ಪಿಂಚಣಿ ಪ್ರಸ್ತಾವನೆಗಳನ್ನು ಸಲ್ಲಿಕೆ ಮಾಡುವ ಕುರಿತು ಪತ್ರದಲ್ಲಿ ಮಾಹಿತಿ ನೀಡಿದ್ದಾರೆ. ಈ ಜ್ಞಾಪನಾ ಪತ್ರಕ್ಕೆ ಸರ್ಕಾರದ ಪತ್ರ ದಿನಾಂಕ 14/03/2025 ಉಲ್ಲೇಖ ಮಾಡಿದ್ದಾರೆ.

ಪತ್ರದ ವಿವರಗಳು: ಜ್ಞಾಪನಾ ಪತ್ರದಲ್ಲಿ ಈ ವಿಷಯಕ್ಕೆ ಸಂಬಂಧಿಸಿದಂತೆ ಉಲ್ಲೇಖಿತ ಸರ್ಕಾರದ ಪತ್ರದಲ್ಲಿ ಸ್ವೀಕೃತವಾಗಿರುವ ಮಹಾಲೇಖಪಾಲರ ಪತ್ರ ದಿನಾಂಕ 16/04/2024ರಲ್ಲಿ ಶಾಲಾ ಶಿಕ್ಷಣ ಇಲಾಖೆಯ ಗೆಜೆಟೆಡ್ ಅಧಿಕಾರಿಗಳು (ಗ್ರೂಪ್-ಎ ಮತ್ತು ಬಿ ಅಧಿಕಾರಿಗಳು) ಸರ್ಕಾರಿ ಸೇವೆಯಿಂದ ವಯೋನಿವೃತ್ತಿ ಹೊಂದಿದ್ದರೂ, ಸದರಿ ಅಧಿಕಾರಿಗಳ ಪಿಂಚಣಿ ಪ್ರಸ್ತಾವನೆಗಳು ಮಹಾಲೇಖಪಾಲರ ಕಛೇರಿಗೆ ಸ್ವೀಕೃತವಾಗಿಲ್ಲದ ಕಾರಣ ಈ ಸಂಬಂಧ ನಿಯಮಾನುಸಾರ ಪರಿಶೀಲಿಸಿ 117 ಅಧಿಕಾರಿಗಳ ಬಾಕಿ ಪಿಂಚಿಣಿ ಇತ್ಯರ್ಥಕ್ಕೆ ಕ್ರಮ ಕೈಗೊಳ್ಳಲು ಕೋರಲಾಗಿರುತ್ತದೆ ಎಂದು ಹೇಳಿದ್ದಾರೆ.
ಸರ್ಕಾರಿ ನೌಕರರು ಸರ್ಕಾರಿ ಸೇವೆಯಿಂದ ವಯೋನಿವೃತ್ತಿ ಹೊಂದುವ ಅಧಿಕಾರಿಗಳ ಮುಂಚಿತ ಮೂರು ತಿಂಗಳಲ್ಲಿ ಪಿಂಚಣಿ ಪ್ರಸ್ತಾವನೆಯನ್ನು ಮಹಾಲೇಖಪಾಲರಿಗೆ ಸಲ್ಲಿಸಬೇಕಾಗಿರುತ್ತದೆ. ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳು ಸರ್ಕಾರಿ ಸೇವೆಯಿಂದ ವಯೋನಿವೃತ್ತಿ ಹೊಂದಿದ್ದರೂ, ಮಹಾಲೇಖಪಾಲರ ಪತ್ರದಲ್ಲಿ ಲಗತ್ತಿಸಲಾದ ಪಟ್ಟಿಯಲ್ಲಿನ ಅಧಿಕಾರಿಗಳ ಪ್ರಸ್ತಾವನೆಗಳು ಮಹಾಲೇಖಪಾಲರ ಕಛೇರಿಗೆ ಸ್ವೀಕೃತವಾಗಿರುವುದಿಲ್ಲವೆಂದು ತಿಳಿಸಿ, ಸಂಬಂಧಪಟ್ಟ ನಿಯಂತ್ರಣಾಧಿಕಾರಿಗಳಿಗೆ ಪ್ರಕರಣಗಳ ಇತ್ಯರ್ಥ ಕುರಿತು ನಿರ್ದೇಶನ ನೀಡಲು ಸೂಚಿಸಿರುತ್ತಾರೆ.
ಈ ಪ್ರಯುಕ್ತ ಮಹಾಲೇಖಪಾಲರ ಪತ್ರದಲ್ಲಿ ಸೂಚಿಸಲಾದ ಬಾಕಿ ಪ್ರಕರಣಗಳ ಇತ್ಯರ್ಥಪಡಿಸುವ ಕುರಿತಂತೆ ಮಹಾಲೇಖಪಾಲರಿಗೆ ಕೂಡಲೇ ಸೂಕ್ತ ಪ್ರಸ್ತಾವನೆಯನ್ನು ಸಲ್ಲಿಸಲು ಸೂಚಿಸಿದೆ ಹಾಗೂ ತಮ್ಮ ವ್ಯಾಪ್ತಿಯ ಬಾಕಿ ಪಿಂಚಣಿ ಪ್ರಕರಣಗಳ ಇತ್ಯರ್ಥ ಕುರಿತು ತೆಗೆದುಕೊಂಡ ಕ್ರಮದ ವರದಿಯನ್ನು ತಪ್ಪದೇ ಸಲ್ಲಿಸಲು ಸೂಚಿಸಿದೆ.
ಮುಂದುವರೆದು, ತಮ್ಮ ವ್ಯಾಪ್ತಿಯಲ್ಲಿನ ನಿವೃತ್ತ/ ನಿವೃತ್ತಿ ಹೊಂದಲಿರುವ ಅಧಿಕಾರಿಗಳ ಪಿಂಚಣಿ ಪ್ರಸ್ತಾವನೆಯನ್ನು ನಿಗದಿತ ಅವಧಿಯೊಳಗೆ ಸಲ್ಲಿಸಲು ನಿಯಮಾನುಸಾರ ಕ್ರಮವಹಿಸುವುದು. ಸಂಬಂಧಪಟ್ಟ ನಿಯಂತ್ರಣಾಧಿಕಾರಿಗಳು ಪಿಂಚಣಿ ಪ್ರಕರಣಗಳ ಕುರಿತಂತೆ ತ್ರೈಮಾಸಿಕವಾಗಿ ಪರಿಶೀಲಿಸಿ ಕ್ರಮವಹಿಸಲು ಸಹ ಸೂಚಿಸಿದೆ ಎಂದು ಹೇಳಿದ್ದಾರೆ.
ಪ್ರಕರಣಗಳ ಇತ್ಯರ್ಥ: ಸರ್ಕಾರಿ ಸೇವೆಯಲ್ಲಿ ಇರುವವರು ದುರ್ನಡತೆ, ಕರ್ತವ್ಯ ಲೋಪದಂತಹ ಆರೋಪಗಳನ್ನು ಎದುರಿಸುತ್ತಿರುತ್ತಾರೆ. ಆದರೆ ನಿವೃತ್ತರಾಗುವ ಮೊದಲು ಅಂತಹ ನೌಕರ ಇಂತಹ ಪ್ರಕರಣಗಳಿಂದ ಇತ್ಯರ್ಥವನ್ನು ಪಡೆಯಬೇಕು. ಇಲ್ಲವಾದಲ್ಲಿ ಸಂಬಂಧ ಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕರ್ನಾಟಕ ಸರ್ಕಾರ ಹೇಳಿದೆ.
ಸರ್ಕಾರಿ ನೌಕರರ ವಿರುದ್ಧದ ದುರ್ನಡತೆ, ಕರ್ತವ್ಯ ಲೋಪದಂತಹ ಆರೋಪಗಳನ್ನು ಬೇಗ ಇತ್ಯರ್ಥಪಡಿಸಬೇಕು ಎಂದು ಈ ಹಿಂದೆ ಹಲವು ಸುತ್ತೋಲೆಗಳಲ್ಲಿ ಸೂಚಿಸಲಾಗಿದೆ. ನೌಕರರು ನಿವೃತ್ತಿ ಹೊಂದುವ ತನಕ ಅವುಗಳನ್ನು ಮುಂದುವರೆಸಿಕೊಂಡು ಹೋಗಬಾರದು. ಈ ಹಿಂದೆ ಹೊರಡಿಸಿದ ಸುತ್ತೋಲೆಗಳನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಸರ್ಕಾರ ತಿಳಿಸಿದೆ.
ಸರ್ಕಾರಿ ನೌಕರ ನಿವೃತ್ತನಾದ ಮೇಲೆ ಆತನ ವಿರುದ್ಧದ ಆರೋಪದಿಂದ ಸರ್ಕಾರಕ್ಕೆ ಆರ್ಥಿಕ ಹಾನಿಯಾಗಿಲ್ಲ ಎಂಬ ವರದಿ ಸರ್ಕಾರಕ್ಕೆ ಬರುತ್ತಿದೆ. ಸರ್ಕಾರಿ ನೌಕರ ನಿವೃತ್ತಿ ಹೊಂದುವ ಕೆಲವು ದಿನಗಳ ಮೊದಲು ಈ ಆರೋಪಗಳ ಕುರಿತು ಇಲಾಖಾ ವಿಚಾರಣೆ ವರದಿ ಸಲ್ಲಿಕೆಯಾಗುತ್ತಿದೆ.
ನಿವೃತ್ತಿ ಹೊಂದಿದ ಬಳಿಕ ಇಲಾಖಾ ವಿಚಾರಣೆಯನ್ನು ಸಲ್ಲಿಕೆ ಮಾಡಬಾರದು. ಕಾಲಮಿತಿಯಲ್ಲಿ ಇಂತಹ ಪ್ರಕರಣಗಳನ್ನು ಇತ್ಯರ್ಥಗೊಳಿಸಬೇಕು. ಈ ಹಿಂದೆ ನೀಡಿದ ಸೂಚನೆಯಂತೆ ಇವುಗಳನ್ನು ಆದ್ಯತೆಯ ಮೇಲೆ ಪರಿಗಣಿಸಿ ಇಲಾಖಾ ವಿಚಾರಣೆ ಪೂರ್ಣಗೊಳಿಸಿ ವರದಿ ಸಲ್ಲಿಸಬೇಕು ಎಂದು ಸರ್ಕಾರ ತಿಳಿಸಿದೆ.












Click it and Unblock the Notifications