ಮಲೆ ಮಹದೇಶ್ವರ ಬೆಟ್ಟಕ್ಕೆ ಜ. 24ರವರೆಗೆ ಪಾದಯಾತ್ರೆ, ದ್ವಿಚಕ್ರ ವಾಹನ ಸಂಚಾರ ಬಂದ್
ಚಾಮರಾಜನಗರ: ಜಿಲ್ಲೆಯ ಪ್ರಸಿದ್ಧ ಯಾತ್ರಾಸ್ಥಳ ಮಲೆ ಮಹದೇಶ್ವರ ಬೆಟ್ಟದಲ್ಲಿ ಚಿರತೆ ಹಾವಳಿ ಮಿತಿ ಮೀರಿದ್ದು, ಭಕ್ತರ ಸುರಕ್ಷತೆಯ ದೃಷ್ಟಿಯಿಂದ ಜಿಲ್ಲಾಡಳಿತ ಮಹತ್ವದ ನಿರ್ಧಾರ ಕೈಗೊಂಡಿದೆ. ಇಂದಿನಿಂದ (ಜ. 22) ಜನವರಿ 24ರ ಮಧ್ಯರಾತ್ರಿಯವರೆಗೆ ಭಕ್ತರು ಕಾಲ್ನಡಿಗೆಯಲ್ಲಿ ಹಾಗೂ ದ್ವಿಚಕ್ರ ವಾಹನಗಳಲ್ಲಿ ಬೆಟ್ಟಕ್ಕೆ ತೆರಳುವುದನ್ನು ತಾತ್ಕಾಲಿಕವಾಗಿ ನಿರ್ಬಂಧಿಸಿ ಅಪರ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ತಪ್ಪಲಿನ ತಾಳುಬೆಟ್ಟದಲ್ಲಿ ಬುಧವಾರವಷ್ಟೇ ಪಾದಯಾತ್ರೆ ಮೂಲಕ ತೆರಳುತ್ತಿದ್ದ ಭಕ್ತರೊಬ್ಬರ ಮೇಲೆ ಚಿರತೆ ದಾಳಿ ನಡೆಸಿತ್ತು. ಈ ದುರ್ಘಟನೆಯಲ್ಲಿ ಯುವಕನೊಬ್ಬ ಮೃತಪಟ್ಟಿದ್ದನು. ಈ ಘಟನೆ ನಡೆದ ಬೆನ್ನಲ್ಲೇ ಅರಣ್ಯ ಇಲಾಖೆ ಎಚ್ಚೆತ್ತುಕೊಂಡಿದ್ದು, ಚಿರತೆಯನ್ನು ಸೆರೆಹಿಡಿಯಲು ತೀವ್ರ ಕಾರ್ಯಾಚರಣೆ ಆರಂಭಿಸಿದೆ. ಈ ಕಾರ್ಯಾಚರಣೆಗೆ ಅಡ್ಡಿಯಾಗಬಾರದು ಮತ್ತು ಭಕ್ತರ ಪ್ರಾಣಕ್ಕೆ ಅಪಾಯವಾಗಬಾರದು ಎಂಬ ಕಾರಣಕ್ಕೆ ಈ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಇಂದು ಸಂಜೆ 6 ಗಂಟೆಯಿಂದಲೇ ಈ ಆದೇಶ ಜಾರಿಗೆ ಬರಲಿದೆ.

ಮತ್ತೆ ಪ್ರತ್ಯಕ್ಷವಾಯ್ತು ಚಿರತೆ: ಚಿರತೆ ದಾಳಿಯ ಆತಂಕದ ನಡುವೆಯೇ, ಬುಧವಾರ ರಾತ್ರಿ ಮತ್ತೆ ಅದೇ ಸ್ಥಳದಲ್ಲಿ ಚಿರತೆ ಪ್ರತ್ಯಕ್ಷವಾಗಿರುವುದು ಭಕ್ತರಲ್ಲಿ ನಡುಕ ಹುಟ್ಟಿಸಿದೆ. ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುತ್ತಿದ್ದ ಭಕ್ತರ ಕಾರಿನ ಕ್ಯಾಮೆರಾದಲ್ಲಿ ಚಿರತೆ ರಸ್ತೆಯ ತಡೆಗೋಡೆಯ ಮೇಲೆ ನಿರಾತಂಕವಾಗಿ ಕುಳಿತು ವಿಶ್ರಮಿಸುತ್ತಿರುವ ದೃಶ್ಯ ಸೆರೆಯಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಬೆಟ್ಟಕ್ಕೆ ಹೋಗುವ ಭಕ್ತರಲ್ಲಿ ಮತ್ತಷ್ಟು ಆತಂಕ ಸೃಷ್ಟಿಸಿದೆ. ಕೇವಲ ಪಾದಯಾತ್ರಿಗಳು ಮಾತ್ರವಲ್ಲದೆ, ಕಾರು ಮತ್ತು ಬಸ್‌ಗಳಲ್ಲಿ ಸಂಚರಿಸುವವರಿಗೂ ಭಯ ಶುರುವಾಗಿದೆ.
ಅರಣ್ಯ ಇಲಾಖೆಯ ಸಿಬ್ಬಂದಿ ಮತ್ತು ಪೊಲೀಸರು ತಾಳುಬೆಟ್ಟದ ಬಳಿ ಬೀಡುಬಿಟ್ಟಿದ್ದು, ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಭಕ್ತರನ್ನು ತಡೆದು, ಅವರನ್ನು ಸುರಕ್ಷಿತವಾಗಿ ಬಸ್‌ಗಳಿಗೆ ಹತ್ತಿಸಿ ಕಳುಹಿಸುತ್ತಿದ್ದಾರೆ. ಚಿರತೆ ಹೊಂಚು ಹಾಕುತ್ತಿರುವ ಹಿನ್ನೆಲೆಯಲ್ಲಿ ಯಾವುದೇ ಕಾರಣಕ್ಕೂ ರಸ್ತೆಯಲ್ಲಿ ಇಳಿಯದಂತೆ ಭಕ್ತರಿಗೆ ಎಚ್ಚರಿಕೆ ನೀಡಲಾಗುತ್ತಿದೆ.
ತಾಳುಬೆಟ್ಟದಿಂದ ಮಹದೇಶ್ವರ ಬೆಟ್ಟಕ್ಕೆ ತೆರಳುವ ರಸ್ತೆಯ ಅಕ್ಕಪಕ್ಕ ದಟ್ಟವಾದ ಕಾಡು ಇರುವುದರಿಂದ, ಪ್ರಾಣಿಗಳು ರಸ್ತೆಗೆ ಬರುವುದು ಸಾಮಾನ್ಯವಾಗಿದೆ. ಆದರೆ ನರಭಕ್ಷಕ ಚಿರತೆಯ ಓಡಾಟ ಹೆಚ್ಚಾಗಿರುವುದರಿಂದ, ಅದು ಸೆರೆಯಾಗುವವರೆಗೂ ಭಕ್ತರು ಜಿಲ್ಲಾಡಳಿತದ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಿದೆ. ಕಾರ್ಯಾಚರಣೆ ಮುಗಿಯುವವರೆಗೂ ಖಾಸಗಿ ವಾಹನಗಳಲ್ಲಿ ತೆರಳುವವರು ಕೂಡ ಕಿಟಕಿಗಳನ್ನು ಮುಚ್ಚಿಕೊಂಡು ಎಚ್ಚರಿಕೆಯಿಂದ ಪ್ರಯಾಣಿಸುವಂತೆ ಸೂಚಿಸಲಾಗಿದೆ. ಸದ್ಯಕ್ಕೆ ಪರಿಸ್ಥಿತಿ ಬೂದಿಮುಚ್ಚಿದ ಕೆಂಡದಂತಿದ್ದು, ಅರಣ್ಯ ಇಲಾಖೆ ಚಿರತೆ ಸೆರೆಗೆ ಬಲೆ ಬೀಸಿದೆ.












Click it and Unblock the Notifications