ಜಯಮಾಲಾ ವಿರುದ್ಧ ಅಸಮಾಧಾನ, ಸಹಿ ಸಂಗ್ರಹಕ್ಕೆ ಮುಂದಾದ ನಾಯಕರು
ಬೆಂಗಳೂರು, ಜೂನ್ 16: ಸಚಿವೆ ಜಯಮಾಲಾ ವಿರುದ್ಧ ಕಾಂಗ್ರೆಸ್ ಪಕ್ಷದ ಹಿರಿಯರ ಅಸಮಾಧಾನ ನಿಲ್ಲುತ್ತಿಲ್ಲ. ಜಯಮಾಲಾರನ್ನು ಮೇಲ್ಮನೆಯ ಸಭಾನಾಯಕಿ ಮಾಡುವ ನಿರ್ಣಯಕ್ಕೆ ಪರಿಷತ್‌ನ ಕಾಂಗ್ರೆಸ್ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದಾರೆ.
ಪರಿಷತ್‌ನ ಹಿರಿಯ ಕಾಂಗ್ರೆಸ್ ನಾಯಕರಾದ ವಿ.ಎಸ್.ಉಗ್ರಪ್ಪ, ಎಸ್.ಆರ್.ಪಾಟೀಲ್, ಕೆ.ಸಿ.ಕೊಂಡಯ್ಯ ಸೇರಿದಂತೆ ಇನ್ನೂ ಹಲವರು ಜಯಮಾಲಾರನ್ನು ಮೇಲ್ಮನೆಯ ಸಭಾ ನಾಯಕಿ ಮಾಡುವ ನಿರ್ಣಯಕ್ಕೆ ಬೇಸರ ವ್ಯಕ್ತಪಡಿಸಿದ್ದು, ಜಯಮಾಲಾ ವಿರುದ್ಧ ಸಹಿ ಸಂಗ್ರಹಿಸುತ್ತಿದ್ದಾರೆ ಎನ್ನಲಾಗಿದೆ.
ಸಭಾ ನಾಯಕರಾಗಲು ಅನುಭವ ಬೇಕಿರುತ್ತದೆ. ವಿರೋಧ ಪಕ್ಷಗಳನ್ನು ಹದ್ದುಬಸ್ತಿನಿಡಲು ಛಾತಿ ಬೇಕಾಗಿರುತ್ತದೆ, ಅಪಾರ ರಾಜಕೀಯ ಜ್ಞಾನ, ಸಭಾ ನಡವಳಿಗಳ ಮಾಹಿತಿ ಎಲ್ಲವೂ ಅತ್ಯವಶ್ಯ ಆದರೆ ಇದಾವುದೂ ಜಯಮಾಲಾ ಅವರಿಗೆ ಇಲ್ಲ ಎಂಬುದು ಹಿರಿಯ ಪರಿಷತ್ ಸದಸ್ಯರ ವಾದ.

ಇದೇ ಮೊದಲ ಬಾರಿಗೆ ಕಲಾವಿದರ ಕ್ಷೇತ್ರದಿಂದ ಪರಿಷತ್‌ಗೆ ಆಯ್ಕೆಯಾಗಿರುವ ಜಯಮಾಲಾ ಅವರಿಗೆ ಅನುಭವ ಹಾಗೂ ರಾಜಕೀಯ ಜ್ಞಾನದ ಕೊರತೆ ಇದೆ. ಅವರು ಪಕ್ಷದಲ್ಲಿಯೂ ಕೂಡ ಯಾವುದೇ ಜವಾಬ್ದಾರಿ ನಿಭಾಯಿಸಿಲ್ಲ ಹಾಗಾಗಿ ಅವರನ್ನು ಸಭಾ ನಾಯಕಿ ಮಾಡುವ ನಿರ್ಣಯ ಸರಿಯಲ್ಲ ಎಂದು ಅಸಮಾಧಾನಗೊಂಡಿರುವ ಸದಸ್ಯರು ಕಾಂಗ್ರೆಸ್ ಹಿರಿಯರಲ್ಲಿ ವಾದ ಮಂಡಿಸಿದ್ದಾರೆ.
ಜಯಮಾಲಾ ಅವರಿಗೆ ಸಚಿವೆ ಸ್ಥಾನವನ್ನೂ ನೀಡಲಾಗಿದ್ದು, ಇದೂ ಸಹ ಹಲವು ಶಾಸಕರಲ್ಲಿ ಅಸಮಾಧಾನ ಮೂಡಿಸಿತ್ತು. ಮಹಿಳಾ ಶಾಕರಿಯರು ಇರುವಾಗಲೂ ಕೂಡ ಚುನಾವಣೆಯನ್ನೇ ಎದುರಿಸದ ಜಯಮಾಲಾ ಅವರಿಗೆ ಸಚಿವ ಸ್ಥಾನ ನೀಡಿರುವುದನ್ನು ಲಕ್ಷ್ಮಿ ಹೆಬ್ಬಾಳ್ಕರ್ ಅವರು ವಿರೋಧಿಸಿದ್ದರು.












Click it and Unblock the Notifications