ಸರ್ಕಾರದ ವಿರುದ್ಧ ಪರಿಷತ್ ಸದಸ್ಯರಿಂದ ಆಹೋರಾತ್ರಿ ಧರಣಿ
ಬೆಂಗಳೂರು, ಸೆಪ್ಟೆಂಬರ್ 07 : ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ವಿಧಾನಪರಿಷತ್ ಸದಸ್ಯರು ಸರ್ಕಾರದ ವಿರುದ್ಧ ಪ್ರತಿಭಟನೆ ಆರಂಭಿಸಿದ್ದಾರೆ. ಸರ್ಕಾರ ಬೇಡಿಕೆಗಳನ್ನು ಈಡೇರಿಸದಿದ್ದರೆ ಸೆ.14ರಂದು ಶಾಲಾ-ಕಾಲೇಜು ಬಂದ್ ಮಾಡುವುದಾಗಿ ಎಚ್ಚರಿಸಿದ್ದಾರೆ.
ಶಿಕ್ಷಕ ಮತ್ತು ಪದವೀಧರ ಕ್ಷೇತ್ರದಿಂದ ಪರಿಷತ್ತಿಗೆ ಆಯ್ಕೆಯಾದ ಸದಸ್ಯರು ವಿಧಾನಸೌಧ ಬಳಿಕ ಗಾಂಧಿ ಪ್ರತಿಮೆ ಮುಂಭಾಗ ಬುಧವಾರದಿಂದ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದಾರೆ. 13 ಪರಿಷತ್ ಸದಸ್ಯರು ಪಕ್ಷಭೇಧ ಮರೆತು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.

ಪ್ರತಿಭಟನಾನಿರತರನ್ನು ಭೇಟಿ ಮಾಡಿದ್ದ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ, '15 ದಿನಗಳ ಕಾಲಾವಕಾಶ ನೀಡಬೇಕು. ಮುಖ್ಯಮಂತ್ರಿಗಳ ಜೊತೆ ಮಾತುಕತೆ ನಡೆಸುತ್ತೇನೆ. ಬೇಡಿಕೆ ಈಡೇರಿಸುತ್ತೇನೆ, ಧರಣಿ ವಾಪಸ್ ಪಡೆಯಿರಿ' ಎಂದು ಮನವಿ ಮಾಡಿದರು. ಆದರೆ, ಪ್ರತಿಭಟನಾನಿರತರು ಇದಕ್ಕೆ ಒಪ್ಪಿಲ್ಲ.
ವಿಧಾನಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ಧರಣಿ ಕೈ ಬಿಡುವಂತೆ ಮಾಡಿದ ಮನವಿಗೆ ವಿಧಾನಪರಿಷತ್ ಸದಸ್ಯರು ಸ್ಪಂದಿಸಿಲ್ಲ. ಗುರುವಾರವೂ ಧರಣಿಯನ್ನು ಮುಂದುವರೆಸಿದ್ದಾರೆ.
ಬೇಡಿಕೆಗಳು
* ಕೇಂದ್ರ ಮತ್ತು ರಾಜ್ಯ ಸರ್ಕಾರದ ನಡುವಿನ ವೇತನ ತಾರತಮ್ಯ ಬಗೆಹರಿಸಬೇಕು
* ಶಿಕ್ಷಕರ ಕಡ್ಡಾಯ ವರ್ಗಾವಣೆ ನಿಯಮ ಕೈಬಿಡಬೇಕು
* ಸರ್ಕಾರಿ ಮತ್ತು ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರ ಮಧ್ಯೆ ಇರುವ ವೇತನ, ಸೌಲಭ್ಯದ ತಾರತಮ್ಯ ನಿವಾರಣೆ ಮಾಡಬೇಕು
* ಪದವಿಪೂರ್ವ ಉಪನ್ಯಾಸಕರಿಗೆ ನೀಡುವ ವಿಶೇಷ 500 ರೂ. ಭತ್ಯೆಯನ್ನು ಪ್ರೌಢಶಾಲೆಯ ತತ್ಸಮಾನ ಶಿಕ್ಷಕರಿಗೂ ನೀಡಬೇಕು.
* 1995ರ ನಂತರ ಆರಂಭವಾದ ಶಾಲಾ-ಕಾಲೇಜುಗಳಿಗೆ ವೇತನಾನುದಾನ ನೀಡಬೇಕು
ಸರ್ಕಾರ ಬೇಡಿಕೆಗಳನ್ನು ಈಡೇರಿಸಲು ಸೆ.13ರ ತನಕ ಗಡುವು ನೀಡಲಾಗಿದೆ. ಒಂದು ವೇಳೆ ಬೇಡಿಕೆ ಈಡೇರದಿದ್ದರೆ ಸೆ.14ರಂದು ರಾಜ್ಯಾದ್ಯಂತ ಶಾಲಾ ಕಾಲೇಜುಗಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಲು ಪರಿಷತ್ ಸದಸ್ಯರು ನಿರ್ಧರಿಸಿದ್ದಾರೆ.












Click it and Unblock the Notifications