17 ವಿಧಾನ ಪರಿಷತ್ ಸ್ಥಾನದ ಚುನಾವಣೆ: ಕಾಂಗ್ರೆಸ್ ಮೇಲುಗೈ
ಬೆಂಗಳೂರು, ಜೂನ್ 08; ಕರ್ನಾಟಕದಲ್ಲಿ ಲೋಕಸಭೆ ಚುನಾವಣೆ ಮುಗಿದ ಬಳಿಕ ಒಟ್ಟು 17 ವಿಧಾನ ಪರಿಷತ್ ಸ್ಥಾನಗಳ ಚುನಾವಣೆ ಘೋಷಣೆಯಾಯಿತು. ಫಲಿತಾಂಶ ಪ್ರಕಟವಾಗಿದ್ದು, ಆಡಳಿತ ಪಕ್ಷ ಕಾಂಗ್ರೆಸ್ 10 ಸ್ಥಾನಗಳಲ್ಲಿ ಜಯಗಳಿಸಿದೆ.
ವಿಧಾನ ಪರಿಷತ್‌ನ 3 ಶಿಕ್ಷಕ, 3 ಪದವೀಧರ ಕ್ಷೇತ್ರದ ಮತದಾನ ಜೂನ್ 3ರಂದು ನಡೆದು, ಫಲಿತಾಂಶ ಜೂನ್ 6ರಂದು ಪ್ರಕಟವಾಗಿದೆ. ವಿಧಾನಸಭೆಯಿಂದ 11 ವಿಧಾನ ಪರಿಷತ್ ಸದಸ್ಯರನ್ನು ಆಯ್ಕೆ ಮಾಡಲು ಘೋಷಣೆಯಾಗಿದ್ದ ಚುನಾವಣೆಯಲ್ಲಿ 11 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಒಟ್ಟು 17 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕರ್ನಾಟಕದ ಆಡಳಿತ ಪಕ್ಷ ಕಾಂಗ್ರೆಸ್ 10, ಪ್ರತಿಪಕ್ಷ ಬಿಜೆಪಿ 4 ಮತ್ತು ಜೆಡಿಎಸ್ 3 ಸ್ಥಾನಗಳಲ್ಲಿ ಜಯಗಳಿಸಿವೆ. ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡಿದ್ದ ಬಿಜೆಪಿ-ಜೆಡಿಎಸ್ ಪರಿಷತ್ ಚುನಾವಣೆಯಲ್ಲಿಯೂ ಮೈತ್ರಿ ಮುಂದುವರೆಸಿದ್ದವು.
ಪರಿಷತ್ ಬಲಾಬಲ: ಕರ್ನಾಟಕ ವಿಧಾನ ಪರಿಷತ್ ಒಟ್ಟು ಸದಸ್ಯ ಬಲ 75. ಒಟ್ಟು 17 ಸ್ಥಾನಗಳ ಚುನಾವಣೆ ಬಳಿಕ ವಿಧಾನ ಪರಿಷತ್ ಸದಸ್ಯ ಬಲದಲ್ಲಿ ಬದಲಾವಣೆಯಾಗಿದೆ. ಆದರೆ ಸಭಾಪತಿಯಾಗಿರುವ ಬಸವರಾಜ ಹೊರಟ್ಟಿ ಅವರ ಸ್ಥಾನ ಸದ್ಯಕ್ಕೆ ಭದ್ರವಾಗಿಯೇ ಇದೆ. ಕಾಂಗ್ರೆಸ್‌ಗೆ ಸಭಾಪತಿ ಸ್ಥಾನದ ಮೇಲೆ ಮೊದಲಿನಿಂದಲೂ ಕಣ್ಣಿದೆ.
ಸದ್ಯ ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್ 34, ಬಿಜೆಪಿ 30, ಜೆಡಿಎಸ್ 8. ಒಬ್ಬರು ಸಭಾಪತಿ, ಒಬ್ಬರು ಪಕ್ಷೇತರ (ಲಖನ್ ಜಾರಕಿಹೊಳಿ) ಇದ್ದಾರೆ. ಜಗದೀಶ್ ಶೆಟ್ಟರ್ ರಾಜೀನಾಮೆಯಿಂದ 1 ಸ್ಥಾನ ತೆರವಾಗಿದ್ದು, ಚುನಾವಣೆ ನಡೆಯಬೇಕಿದೆ. ಕೋಟ ಶ್ರೀನಿವಾಸ ಪೂಜಾರಿ ಲೋಕಸಭೆ ಚುನಾವಣೆಯಲ್ಲಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಗೆದ್ದಿದ್ದು, ಅವರು ರಾಜೀನಾಮೆ ನೀಡಿದ ಬಳಿಕ ತೆರವಾಗುವ ಸ್ಥಾನಕ್ಕೆ ಸಹ ಉಪ ಚುನಾವಣೆ ನಡೆಯಬೇಕಿದೆ.
ಜೆಡಿಎಸ್ ಪಕ್ಷವನ್ನು ತೊರೆದ ಬಸವರಾಜ ಹೊರಟ್ಟಿ 2022ರಲ್ಲಿ ಬಿಜೆಪಿ ಸೇರಿದರು. ಬಳಿಕ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಗೆದ್ದು ಮತ್ತೆ ಪರಿಷತ್ ಸದಸ್ಯರಾದರು. ಬಿಜೆಪಿ ಮತ್ತು ಜೆಡಿಎಸ್ ನೆರವಿನಿಂದ ಅವರು ಸಭಾಪತಿಯಾದರು. ಈಗ ಸದಸ್ಯ ಬಲ ಹೆಚ್ಚು-ಕಡಿಮೆಯಾದರು ಸಹ ಅವರ ಸ್ಥಾನ ಭದ್ರವಾಗಿರಲಿದೆ.
ಯಾರು-ಯಾರು ಗೆಲುವು?: ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ಕಾಂಗ್ರೆಸ್‌ನ ಐವಾನ್ ಡಿಸೋಜಾ, ಕೆ. ಗೋವಿಂದರಾಜ್, ಜಗದೇವ ಗುತ್ತೇದಾರ್, ಬಲ್ಕೀಸ್ ಬಾನು, ಎನ್. ಎಸ್. ಬೋಸರಾಜು, ಡಾ. ಯತೀಂದ್ರ ಸಿದ್ದರಾಮಯ್ಯ, ಎ. ವಸಂತ ಕುಮಾರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಬಿಜೆಪಿಯಿಂದ ಮೂಳೆ ಮಾರುತಿರಾವ್, ಸಿ. ಟಿ. ರವಿ, ಎನ್. ರವಿಕುಮಾರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಜೆಡಿಎಸ್ ಪಕ್ಷದಿಂದ ಟಿ. ಎನ್. ಜವರಾಯಿ ಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ಡಾ. ಯತೀಂದ್ರ ಸಿದ್ದರಾಮಯ್ಯ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಿದ್ದರಾಮಯ್ಯ ರಾಜ್ಯದ ಮುಖ್ಯಮಂತ್ರಿಯಾಗಿದ್ದು, ಯತೀಂದ್ರ ವಿಧಾನ ಪರಿಷತ್ ಸದಸ್ಯರು. ಆದ್ದರಿಂದ ಅಪ್ಪ ಮತ್ತು ಮಗ ವಿಧಾನ ಪರಿಷತ್ ಕಲಾಪದಲ್ಲಿ ಒಂದಾಗಿ ಪಾಲ್ಗೊಳ್ಳಲಿದ್ದಾರೆ. 2023ರ ವಿಧಾನಸಭೆ ಚುನಾವಣೆಯಲ್ಲಿ ವರುಣದಿಂದ ಸ್ಪರ್ಧಿಸಲು ಯತೀಂದ್ರ ಕ್ಷೇತ್ರವನ್ನು ಸಿದ್ದರಾಮಯ್ಯಗೆ ಬಿಟ್ಟುಕೊಟ್ಟಿದ್ದರು.
* ಈಶಾನ್ಯ ಪದವೀಧರ ಕ್ಷೇತ್ರ- ಕಾಂಗ್ರೆಸ್‌ನ ಚಂದ್ರಶೇಖರ ಪಾಟೀಲ್ ಜಯ
* ಆಗ್ನೇಯ ಶಿಕ್ಷಕರ ಕ್ಷೇತ್ರದ- ಕಾಂಗ್ರೆಸ್‌ನ ಡಿ. ಟಿ. ಶ್ರೀನಿವಾಸ್ ಜಯ
* ನೈಋತ್ಯ ಪದವೀಧರ ಕ್ಷೆತ್ರ- ಬಿಜೆಪಿಯ ಡಾ. ಧನಂಜಯ ಸರ್ಜಿ ಜಯ
* ನೈಋತ್ಯ ಶಿಕ್ಷಕರ ಕ್ಷೇತ್ರ - ಜೆಡಿಎಸ್‌ನ ಎಸ್. ಎಲ್. ಬೋಜೇಗೌಡ ಜಯ
* ಬೆಂಗಳೂರು ಪದವೀಧರ ಕ್ಷೇತ್ರ - ಕಾಂಗ್ರೆಸ್‌ನ ರಾಮೋಜಿ ಗೌಡ ಜಯ
* ದಕ್ಷಿಣ ಶಿಕ್ಷಕರ ಕ್ಷೇತ್ರ- ಕಾಂಗ್ರೆಸ್‌ನ ಕೆ. ವಿವೇಕಾನಂದ ಜಯ












Click it and Unblock the Notifications