ಪರಿಷತ್ ಫೈಟ್; ಕಾಂಗ್ರೆಸ್ ಅಭ್ಯರ್ಥಿ ತಿಪ್ಪಣ್ಣಪ್ಪ ಕಮಕನೂರ ಪರಿಚಯ
ಬೆಂಗಳೂರು, ಜೂನ್ 20; ಕರ್ನಾಟಕ ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ಮೂವರು ಸದಸ್ಯರನ್ನು ಆಯ್ಕೆ ಮಾಡಲು ಉಪ ಚುನಾವಣೆ ಜೂನ್ 30ರಂದು ನಡೆಯಲಿದೆ. ಕಾಂಗ್ರೆಸ್ ಪಕ್ಷ ಉಪ ಚುನಾವಣೆಗೆ ಮೂವರು ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ವಿಧಾನಸಭೆಯಲ್ಲಿ ಪೂರ್ಣ ಬಹುಮತ ಹೊಂದಿರುವ ಕಾರಣ ಮೂರು ಸ್ಥಾನಗಳು ಕಾಂಗ್ರೆಸ್ ಪಾಲಾಗುವುದು ಖಚಿತವಾಗಿದೆ.
ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಪರಿಷತ್ ಸದ್ಯತ್ವಕ್ಕೆ ರಾಜೀನಾಮೆಯನ್ನು ಲಕ್ಷ್ಮಣ ಸವದಿ, ಬಾಬೂರಾವ್ ಚಿಂಚನಸೂರು, ಆರ್. ಶಂಕರ್ ನೀಡಿದ ಕಾರಣ ಉಪ ಚುನಾವಣೆ ಎದುರಾಗಿದೆ. ಅವಿರೋಧವಾಗಿ ಮೂರು ಸ್ಥಾನಗಳಿಗೆ ಆಯ್ಕೆ ನಡೆಯಲಿದೆಯೇ? ಎಂದು ಕಾದು ನೋಡಬೇಕಿದೆ.

ಕರ್ನಾಟಕ ಕಾಂಗ್ರೆಸ್ ಉಪ ಚುನಾವಣೆಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ನಿರೀಕ್ಷೆಯಂತೆ ಒಂದು ಸ್ಥಾನಕ್ಕೆ ಸಿದ್ದರಾಮಯ್ಯ ಸಂಪುಟದಲ್ಲಿ ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಚಿವರಾದ ಎನ್. ಎಸ್. ಬೋಸರಾಜು ಅಭ್ಯರ್ಥಿ.
2023ರ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದ, ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ಸೋಲು ಕಂಡಿದ್ದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮತ್ತೊಬ್ಬ ಅಭ್ಯರ್ಥಿ. ಈ ಮೂಲಕ ಪಕ್ಷ ಮತ್ತೆ ಲಿಂಗಾಯತ ದಾಳವನ್ನು ಉರುಳಿಸಿದೆ.
ಮತ್ತೊಂದು ಸ್ಥಾನಕ್ಕೆ ವಿಧಾನ ಪರಿಷತ್ ಸದಸ್ಯರಾಗಿದ್ದ ಬಾಬೂರಾವ್ ಚಿಂಚನಸೂರು ಹೆಸರು ಕೇಳಿ ಬರುತ್ತಿತ್ತು. ಅವರ ಸದಸ್ಯತ್ವದ ಅವಧಿ 2024ರ ಜೂನ್ 17ರ ತನಕ ಇತ್ತು. ಆದರೆ ವಿಧಾನಸಭೆ ಚುನಾವಣೆಯಲ್ಲಿ ಗುರುಮಿಠಕಲ್ ಕ್ಷೇತ್ರದಿಂದ ಕಣಕ್ಕಿಳಿಯಲು ಅವರು ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ, ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದ್ದರು. ಚುನಾವಣೆಯಲ್ಲಿ 69718 ಮತಗಳನ್ನು ಪಡೆದು, ಜೆಡಿಎಸ್‌ನ ಶರಣ ಗೌಡ ಕುಂದನೂರ ವಿರುದ್ಧ ಸೋಲು ಕಂಡಿದ್ದರು.
ತಿಪ್ಪಣ್ಣಪ್ಪ ಕಮಕನೂರ ಪರಿಚಯ; ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೂಚನೆಯಂತೆ ಮತ್ತೊಂದು ಸ್ಥಾನಕ್ಕೆ ತಿಪ್ಪಣ್ಣಪ್ಪ ಕಮಕನೂರ ಅಭ್ಯರ್ಥಿ ಎಂದು ಘೋಷಣೆ ಮಾಡಲಾಗಿದೆ. ವಿಧಾನ ಪರಿಷತ್‌ನ ಮಾಜಿ ಸದಸ್ಯರೂ ಆಗಿರುವ ತಿಪ್ಪಣ್ಣಪ್ಪ ಕಮಕನೂರ ಮಲ್ಲಿಕಾರ್ಜುನ ಖರ್ಗೆ ತವರು ಜಿಲ್ಲೆ ಕಲಬುರಗಿಯವರು.
ಕೋಲಿ ಸಮಾಜಕ್ಕೆ ಸೇರಿದ ತಿಪ್ಪಣ್ಣಪ್ಪ ಕಮಕನೂರ ರಾಜ್ಯ ಕೋಲಿ ಗಂಗಾಮತ ಸಮಾಜದ ಗೌರವಾಧ್ಯಕ್ಷರು. ಅನಾರೋಗ್ಯದ ಕಾರಣ ಬಾಬೂರಾವ್ ಚಿಂಚನಸೂರು ಬದಲು ಅದೇ ಸಮುದಾಯಕ್ಕೆ ಸೇರಿದ ತಿಪ್ಪಣ್ಣಪ್ಪ ಕಮಕನೂರ ಆಯ್ಕೆ ಮಾಡಲಾಗಿದೆ ಎಂಬುದು ಸದ್ಯದ ಮಾಹಿತಿ.
ತಿಪ್ಪಣ್ಣಪ್ಪ ಕಮಕನೂರ 2020ರ ತನಕ ವಿಧಾನ ಪರಿಷತ್ ಸದಸ್ಯರಾಗಿದ್ದರು. 2018ರಲ್ಲಿ ಡಿಸೆಂಬರ್‌ನಲ್ಲಿ ಬಳ್ಳಾರಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ವಿ. ಎಸ್. ಉಗ್ರಪ್ಪ ಕಣಕ್ಕಿಳಿದು ಆಯ್ಕೆಯಾಗಿದ್ದರು. ಆಗ ಅವರು ವಿಧಾನ ಪರಿಷತ್ ಸದ್ಯತ್ವಕ್ಕೆ ರಾಜೀನಾಮೆ ನೀಡಿದ್ದರು.
ಆಗ ಎದುರಾದ ವಿಧಾನ ಪರಿಷತ್ ಉಪ ಚುನಾವಣೆಗೆ ಕಾಂಗ್ರೆಸ್ ತಿಪ್ಪಣ್ಣಪ್ಪ ಕಮಕನೂರ ಅಭ್ಯರ್ಥಿಯನ್ನಾಗಿ ಮಾಡಿತ್ತು. ಅವರು ಆಯ್ಕೆಯಾಗಿದ್ದದರು, 2020ರ ತನಕ ಅವರು ಪರಿಷತ್ ಸದಸ್ಯರಾಗಿದ್ದರು. ಈಗ ಮತ್ತೊಮ್ಮೆ ಅವರಿಗೆ ವಿಧಾನ ಪರಿಷತ್ ಸದಸ್ಯರಾಗಲು ಪಕ್ಷ ಅವಕಾಶ ನೀಡಿದೆ.
ತಿಪ್ಪಣ್ಣಪ್ಪ ಕಮಕನೂರ ವಿಧಾನ ಪರಿಷತ್ ಉಪ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಂಗಳವಾರ ನಾಮಪತ್ರ ಸಲ್ಲಿಕೆ ಮಾಡಿದರು. ಇದಕ್ಕೂ ಮುನ್ನ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಲಿಗೆ ಬಿದ್ದು ಆಶೀರ್ವಾದ ಪಡೆದುಕೊಂಡರು.
ಪರಿಷತ್ ಉಪ ಚುನಾವಣೆಗೆ ನಾಮಪತ್ರ ಸಲ್ಲಿಕೆ ಮಾಡಲು ಇಂದೇ ಕೊನೆಯ ದಿನವಾಗಿದೆ. ಜೂನ್ 21ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಜೂನ್ 23 ನಾಮಪತ್ರ ವಾಪಸ್ ಪಡೆಯಲು ಕೊನೆ ದಿನ. ಅಗತ್ಯವಿದ್ದರೆ ಜೂನ್ 30ರಂದು ಬೆಳಗ್ಗೆ 9 ರಿಂದ ಸಂಜೆ 4 ಗಂಟೆಯ ತನಕ ಮತದಾನ ನಡೆಯಲಿದೆ. ಅಂದೇ ಫಲಿತಾಂಶ ಪ್ರಕಟವಾಗಲಿದೆ.












Click it and Unblock the Notifications