ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ನಿಧನಕ್ಕೆ ಗಣ್ಯರ ಕಂಬನಿ
ಬೆಂಗಳೂರು, ಡಿ.10 : ಮೈಸೂರು ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ನಿಧನಕ್ಕೆ ಗಣ್ಯರು ಕಂಬನಿ ಮಿಡಿದಿದ್ದಾರೆ. ಕರ್ನಾಟಕದ ಅಭಿವೃದ್ಧಿಗಾಗಿ ಸಾಕಷ್ಟು ಕೆಲಸ ಮಾಡಿದ ರಾಜವಂಶದ ಕೊನೆಯ ಕುಡಿ ನಮ್ಮನ್ನು ಆಗಲಿರುವುದು ನಾಡಿಗೆ ಆಗಿರುವ ನಷ್ಟ ಎಂದು ಗಣ್ಯರು ಕಂಬನಿ ಮಿಡಿದಿದ್ದಾರೆ. ಒಡೆಯರ್ ಕುಟುಂಬಕ್ಕೆ ದುಖಃವನ್ನು ಬರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸಿದ್ದಾರೆ.
ಮಂಗಳವಾರ ಮಧ್ಯಾಹ್ನ ಹೃದಯಾಘಾತದಿಂದ ನರಸಿಂಹರಾಜ ಒಡೆಯರ್ (60) ಬೆಂಗಳೂರಿನ ವಿಕ್ರಂ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಒಡೆಯರ್ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಹಲವಾರು ಗಣ್ಯರು ವಿಕ್ರಂ ಆಸ್ಪತ್ರೆಗೆ ಭೇಟಿ ನೀಡಿ, ಮೃತರಿಗೆ ಅಂತಿಮ ಗೌರವ ಸಲ್ಲಿಸಿದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಪ್ರತಿಪಕ್ಷ ನಾಯಕ ಎಚ್.ಡಿ.ಕುಮಾರಸ್ವಾಮಿ, ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ, ಮಾಜಿ ಸಚಿವೆ ರಾಣಿ ಸತೀಶ್, ವಿ.ಸೋಮಣ್ಣ ಮುಂತಾದ ನಾಯಕರು ಆಸ್ಪತ್ರೆಗೆ ಭೇಟಿ ನೀಡಿ ಅಂತಿಮ ದರ್ಶನ ಪಡೆದರು. ಒಡೆಯರ್ ಕುಟುಂಬಕ್ಕೆ ದುಖಃವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸಿದರು.

ರಾಜ ಮನೆತನದ ಕೊನೆಯ ಕೊಂಡಿ ಕಳಚಿದೆ
ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ನಿಧನದಿಂದ ರಾಜಮನೆತನದ ಕೊನೆಯ ಕೊಂಡಿ ಕಳಚಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಯದು ವಂಶಕ್ಕೆ ಸೇರಿದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಪೂರ್ವಿಕರು ಮೈಸೂರು ಮತ್ತು ನಾಡಿನ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಕೈಗಾರಿಕೆ, ಕೃಷಿ, ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಕೊಡುಗೆ ನೀಡಿದ್ದಾರೆ ಎಂದು ಸಿಎಂ ಬಣ್ಣಿಸಿದ್ದಾರೆ. ಅವರ ಕುಟುಂಬಕ್ಕೆ ದುಖಃ ಬರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದರು.

ಒಡೆಯರ್ ಜನರ ವಿಶ್ವಾಸ ಗಳಿಸಿದ್ದರು
ರಾಜ ವಂಶಸ್ಥರಾದರು ಶ್ರೀಕಂಠದತ್ತ ಒಡೆಯರ್ ಜನಪರ ಕಾಳಜಿ ಹೊಂದಿದ್ದರು. ಲೋಕಸಭೆ ಚುನಾವಣೆಯಲ್ಲಿ ಜನರು ಗಳಿಸುವಲ್ಲಿ ಅವರು ಯಶಸ್ವಿಯಾಗಿದ್ದರು ಎಂದು ಮೈಸೂರು ಸಂಸದ ಎಚ್.ವಿಶ್ವನಾಥ್ ಹೇಳಿದ್ದಾರೆ. ಅರಮನೆಯಿಂದ ಕೆಳಗೆ ಬಂದು ಗ್ರಾಮಗಳಲ್ಲಿ ಚುನಾವಣಾ ಪ್ರಚಾರ ಮಾಡಿದ್ದರು. ಅನೇಕ ಸಂಘ ಸಂಸ್ಥೆಗಳೊಂದಿಗೆ ಸೇರಿಕೊಂಡು ಸಮಾಜ ಸೇವೆಯ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದರು ಎಂದು ಅವರು ತಿಳಿಸಿದ್ದಾರೆ.

ಸರಳ ಸಜ್ಜನಿಕೆಯ ವ್ಯಕ್ತಿ
ಶ್ರೀಕಂಠದತ್ತ ಒಡೆಯರ್ ಸರಳ ಸಜ್ಜನಿಕೆಯ ವ್ಯಕ್ತಿಯಾಗಿದ್ದರು. ಅಹಂಕಾರ ಅವರಲ್ಲಿ ಇರಲಿಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದ್ದಾರೆ. ಅವರ ಕುಟುಂಬಕ್ಕೆ ದುಖಃವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಅವರು ಪ್ರಾರ್ಥಿಸಿದ್ದಾರೆ. ಸಾಮಾನ್ಯ ಜನರೊಂದಿಗೆ ಅವರು ಬೆರೆಯುತ್ತಿದ್ದ ಕಾರಣ ಮೈಸೂರು ಜನರು ಅವರ ಮೇಲೆ ವಿಶ್ವಾಸವಿಟ್ಟು ಅವರನ್ನು ಚುನಾವಣೆಯಲ್ಲಿ ಗೆಲ್ಲಿಸಿದ್ದರು ಎಂದು ಗೌಡರು ಹೇಳಿದ್ದಾರೆ.

ಒಡೆಯರ್ ಯಾರಿಗೂ ವೈರಿಯಲ್ಲ
ಮೈಸೂರು ರಾಜರು ಮತ್ತು ನಾಡಿನ ಜನತೆಯ ನಡುವೆ ಉತ್ತಮ ಬಾಂಧವ್ಯವಿತ್ತು. ಅವರು ಯಾರಿಗೂ ವೈರಿಗಳಾಗಿರಲಿಲ್ಲ. ನಾಡಿನ ಅಭಿವೃದ್ಧಿಗೆ ಅವರ ಕೊಡುಗೆ ಅಪಾರ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರತಿಪಕ್ಷ ನಾಯಕ ಎಚ್.ಡಿ.ಕುಮಾರಸ್ವಾಮಿ ಸಂತಾಪ ಸೂಚಿಸಿದ್ದಾರೆ.

ರಾಜ್ಯಕ್ಕೆ ತುಂಬಲಾರದ ನಷ್ಟ
ಒಡೆಯರ್ ಸಾವು ರಾಜ್ಯಕ್ಕೆ ತುಂಬ ಲಾರದ ನಷ್ಟ ಎಂದು ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ ಹೇಳಿದ್ದಾರೆ. ವಿಕ್ರಂ ಆಸ್ಪತ್ರೆಗೆ ಭೇಟಿ ನೀಡಿ ಅವರು ಅಂತಿಮ ಗೌರವ ಸಲ್ಲಿಸಿದರು.

ಅತ್ಯಂತ ನೋವಿನ ಸಂಗತಿ
ಎಲ್ಲರಿಗೂ ಅಚ್ಚುಮೆಚ್ಚಿನ ವ್ಯಕ್ತಿಯಾಗಿದ್ದ ಶ್ರೀಕಂಠದತ್ತ ಒಡೆಯರ್ ನಿಧನ ನಾಡಿಗೆ ಅತ್ಯಂತ ನೋವಿನ ಸಂಗತಿ ಎಂದು ಕೆಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸಂತಾ ಸೂಚಿಸಿದ್ದಾರೆ. ವಿಕ್ರಂ ಆಸ್ಪತ್ರೆಗೆ ಭೇಟಿ ನೀಡಿದ ನಂತರ ಮಾತನಾಡಿದ ಅವರು, ಕರ್ನಾಟಕದ ಪಾಲಿಗೆ ಇದು ತುಂಬಲಾರದ ನಷ್ಟ ಎಂದರು.

ನನ್ನ ಮೊಮ್ಮಗನೆಂದು ಭಾವಿಸಿದ್ದೆ
ಮಹಾರಾಜರ ಸಾವಿನ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಪ್ರೊ.ನಂಜೆರಾಜ್ ಅರಸ್ ಅವರು, ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ನ್ನು ನನ್ನ ಮೊಮ್ಮಗನೆಂದು ಭಾವಿಸಿದ್ದೆ. ದಸರಾ ವೇಳೆ ಅವರ ಆರೋಗ್ಯ ಚೆನ್ನಾಗಿಯೇ ಇತ್ತು. 10 ದಿನಗಳ ಹಿಂದೆ ಬೆಂಗಳೂರಿನ ಅರಮನೆಯಲ್ಲಿ ಅವರನ್ನು ಭೇಟಿ ಮಾಡಿದ್ದೆ. ಅವರ ನಿಧನದಿಂದ ನನಗೆ ಅಪಾರ ದುಃಖವಾಗಿದೆ ಎಂದು ಹೇಳಿದ್ದಾರೆ.

ನಾಡಿಗೆ ದುಖಃದ ಸಂಗತಿ
ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ನಿಧನ ನಾಡಿಗೆ ದುಖಃದ ಸಂಗತಿ ಎಂದು ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮಿಗಳು ಕಂಬನಿ ಮಿಡಿದಿದ್ದಾರೆ. ಒಡೆಯರ್ ನಿಧನದಿಂದ ರಾಜಮನೆತನದ ಕೊನೆಯ ಕೊಂಡಿ ಕಳಚಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಶ್ರೀಗಳು ಪ್ರಾರ್ಥಿಸಿದ್ದಾರೆ.

ದುಖಃಕರ ವಿಷಯ
ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ ನಿಧನ ಅತ್ಯಂತ ದುಖಃಕರ ವಿಷಯ ಎಂದು ಮಾಜಿ ಕ್ರಿಕೆಟಿಗ ಅನಿಲ್ ಕು೦ಬ್ಳೆ ಹೇಳಿದ್ದಾರೆ. ಕೆಲವು ದಿನಗಳ ಹಿಂದೆ ಕೆಎಸ್ ಸಿಎ ಚುನಾವಣೆಯಲ್ಲಿ ಗೆಲುವು ಸಾಧಿಸಿದಾಗ ಅವರಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿದ್ದೇ. ಆದರೆ, ಅವರು ಇಂದು ನಮ್ಮೊಂದಿಗಿಲ್ಲ. ಅವರ ಕುಟುಂಬಕ್ಕೆ ಶಕ್ತಿಯನ್ನು ಭರಿಸಸುವ ಶಕ್ತಿಯನ್ನು ನೀಡಲಿ ಎಂದು ಹೇಳಿದರು.











Click it and Unblock the Notifications