ಹಣವಿಲ್ಲದಿದ್ದರೆ ಪಾಪರ್ ಆಗಿದ್ದೇವೆ ಎಂದು ಘೋಷಿಸಲಿ: ಆರ್ ಅಶೋಕ್ ಹೀಗೆ ಹೇಳಿದ್ಯಾಕೆ?
ಚಿಕ್ಕಬಳ್ಳಾಪುರ, ಡಿಸೆಂಬರ್ 02: ಹಿಂದೆ ನಮ್ಮ ಬಿಜೆಪಿ ಸರಕಾರ ಇದ್ದಾಗ ಕೇಂದ್ರ ಸರಕಾರದ ಹಣಕ್ಕಾಗಿ ಕಾಯದೇ ಒಂದೇ ತಿಂಗಳಲ್ಲಿ ಬರ ಪರಿಹಾರಕ್ಕಾಗಿ ಹಣ ಬಿಡುಗಡೆ ಮಾಡಿದ್ದೆವು. ಆದರೆ ಈಗಿನ ಸರಕಾರ ಹಣ ಬಿಡುಗಡೆ ಮಾಡದೇ ಕೇವಲ ಮೊಸಳೆ ಕಣ್ಣೀರು ಹಾಕುತ್ತಿದೆ. ಹಣವಿಲ್ಲದೆ ಇದ್ದರೆ ಪಾಪರ್ ಆಗಿದ್ದೇವೆ ಎಂದು ಘೋಷಿಸಲಿ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಕಿಡಿ ಕಾರಿದರು.
ಬರ ವೀಕ್ಷಣೆಗೆ ಆಗಮಿಸಿದ್ದ ಅವರು ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಕೇವಲ ಒಂದು ಸಾವಿರ ಮತ್ತು ಎರಡು ಸಾವಿರ ರೂ. ಬರ ಪರಿಹಾರ ಬಿಡುಗಡೆಗೆ ಹೇಳಿರುವುದು ನಾಚಿಕೆ ಗೇಡಿನ ಸಂಗತಿ. ಇದು ರೈತರಿಗೆ ಮಾಡುತ್ತಿರುವ ಅವಮಾನ. ಈ ರೀತಿಯ ಬೇಜವಾಬ್ದಾರಿ ಸರಕಾರಕ್ಕೆ ಕಿವಿ ಹಿಂಡಿವ ಕೆಲಸವನ್ನು ಶಾಸಕರು, ಮೈತ್ರಿ ಪಕ್ಷ ಜೆಡಿಎಸ್ ಅವರ ಜತೆ ಸಮಾಲೋಚಿಸಿ ಮಾಡುತ್ತೇನೆ ಎಂದು ಹೇಳಿದರು.

ಪಿಡಿ ಖಾತೆಯಿಂದ ರೈತರಿಗೆ ಪರಿಹಾರ ಕೊಡಲು ಸಾಧ್ಯವಿಲ್ಲ. ಆ ಅಕೌಂಟ್ ಇರೋದು ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಇರೋದು. ಬೋರ್‌ವೆಲ್ ಕೂಡಾ ಹಾಕಲು ಸಾಧ್ಯವಿಲ್ಲ. ಮಾತೆತ್ತಿದರೆ ಪಿಡಿ ಅಕೌಂಟ್ ಪಿಡಿ ಅಕೌಂಟ್ ಎನ್ನುತ್ತಾ ಮೊಸಳೆ ಕಣ್ಣು ಸುರಿಸುತ್ತಿದ್ದಾರೆ ಎಂದರು.
ರಾಜ್ಯದಲ್ಲಿ ಬರಗಾಲವಿದ್ದರೂ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರು ಸಿಎಂ ಖರ್ಚಿ ಜಗಳದಲ್ಲಿ ಇಡೀ ರಾಜ್ಯ ಸಂಕಷ್ಟಕ್ಕೆ ಅನುವಿಸುತ್ತಿದೆ. ಎತ್ತು ಏರಿಗೇಳೆದರೆ ಕೋಣ ನೀರಿಗೆಳೀತು ಎನ್ನುವಂತಿದೆ ಈ ಸರಕಾರದ ಪರಿಸ್ಥಿತಿ. ಯಾವುದೇ ಕಾಮಗಾರಿಗಳಿಗೂ ಅನುದಾನ ಬಿಡುಗಡೆ ಮಾಡುತ್ತಿಲ್ಲ. ಹೀಗಾಗಿ ರಾಜ್ಯದ ಅಭಿವೃದ್ಧಿಗೆ ಗ್ರಹಣ ಬಡಿದಿದೆ ಎಂದರು.

ಮೊದಲ ಬಿತ್ತನೆ ಮಾಡಿದ ಬೆಳೆಯಲ್ಲ ಹಾಳಾಗಿದೆ. ಸರಿಯಾದ ಸಮಯಕ್ಕೆ ಮಳೆ ಬಾರದೇ ಆನಂತರ ಬಿತ್ತನೆ ಮಾಡಿದ್ದ ಬೆಳೆಗಳೆಲ್ಲ ಹಾಳಾಗಿವೆ. ಇಷ್ಟಾದರೂ ಸರಕಾರಕ್ಕೆ ಏನೂ ಅನ್ನಿಸುತ್ತಲೇ ಇಲ್ಲ. ಏನಾದರೂ ಕೇಳಿದರೆ ಫ್ರೀ ಕೊಟ್ಟಿದ್ದೇವೆ ಎಂದು ಹೇಳುತ್ತಿದ್ದಾರೆ. ನೀವು ಮತಕ್ಕಾಗಿ ಕೊಟ್ಟ ಉಚಿತ ಕೊಡುಗೆಗಳು ಅವು. ಬರ ಪರಿಹಾರಕ್ಕೆ ಹಣ ಬಿಡುಗಡೆ ಮಾಡಿ. ಇಲ್ಲವಾದಲ್ಲಿ ನಾವು ಪಾಪರ್ ಆಗಿದ್ದೇವೆ ಎಂದು ಘೋಷಿಸಲಿ ಎಂದು ಹೇಳಿದರು.
ಮಾತು ಎತ್ತಿದರೆ ಸವಾಲು ಹಾಕುವ ಸಿಎಂ ಸಿದ್ದರಾಮಯ್ಯನವರಿಗೆ ಹಣ ಬಿಡುಗಡೆ ಮಾಡುವ ಯೋಗ್ಯತೆ ಇಲ್ಲ ವಿಧಾನಸಭೆ ಅವೇಶನದ ಮೊದಲ ದಿನವೇ ನಿಳುವಳಿ ಸೂಚನೆಯನ್ನು ಮಂಡಿಸುತ್ತೇವೆ. ರೈತರಿಗೆ ನ್ಯಾಯ ಸಿಗುವವರೆಗೂ ನಾವು ಹೋರಾಟ ನಡೆಸುತ್ತೇವೆ ಎಂದು ತಿಳಿಸಿದರು.
ಮಾಜಿ ಸಚಿವ ಡಾ.ಕೆ.ಸುಧಾಕರ್ ಮಾತನಾಡಿ, ಮುಖ್ಯಮಂತ್ರಿಗಳು 2 ಸಾವಿರ ರೂ. ಬರ ಪರಿಹಾರ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ. ಆದರೆ ಇದು ರೈತರಿಗೆ ಅನುಕೂಲವಾಗಲ್ಲ. ಇನ್ನೂ ಮೂರು ದಿನದಲ್ಲಿ ವಿಧಾನಸಭೆ ಅವೇಶನ ಇರುವುದರಿಂದ ಸಿಎಂ ಸಿದ್ದರಾಮಯ್ಯನವರು ಅವೇಶನದಲ್ಲಿ ಮುಜುಗರ ತಪ್ಪಿಸಿಕೊಳ್ಳಲು ಬರ ಪರಿಹಾರ ಘೋಷಣೆ ಮಾಡಿದ್ದಾರೆ. ಇದು ವಿಧಾನಸಭೆ ಅವೇಶನದ ಎಫೆಕ್ಟ್ ಎಂದರು.
ಶಾಶ್ವತ ನೀರಾವರಿ ಹೋರಾಟಕ್ಕೆ ನಮ್ಮ ಬೆಂಬಲವೂ ಇದೆ. ಎಲ್ಲ ಜಿಲ್ಲೆಗಳಿಗೂ ಶಾಶ್ವತ ನೀರಾವರಿ ಸಿಗುತ್ತಿದೆ. ಆದರೆ ನಮ್ಮ ಜಿಲ್ಲೆಗಳಿಗೆ ಸಿಗುತ್ತಿಲ್ಲ. ವೀರಪ್ಪ ಮೊಯ್ಲಿ ಅವರು 15 ವರ್ಷಗಳಿಂದ ಎತ್ತಿನಹೊಳೆ ಯೋಜನೆ ಬಗ್ಗೆ ಹೇಳುತ್ತಲೇ ಇದ್ದಾರೆ. ಆದರೆ ಇದುವರೆಗೂ ಜಾರಿಯಾಗಿಲ್ಲ. ಎಚ್ ಎನ್ ವ್ಯಾಲಿ ನೀರಿನ ಮೂರನೇ ಹಂತದ ಶುದ್ಧೀಕರಣದ ಬಗ್ಗೆ ಬಿಜೆಪಿ ಘೋಷಣೆ ಮಾಡಿತ್ತು. ಆದರೆ ಕಾಂಗ್ರೆಸ್ ಸರಕಾರ ತಲೆಕೆಡಿಸಿಕೊಳ್ಳುತ್ತಿಲ್ಲ. ವ್ಯಾಲಿ ನೀರಿನಿಂದ ಸಾಕಷ್ಟು ಸಮಸ್ಯೆಗಳಾಗುತ್ತಿವೆ. ಆದಷ್ಟು ಬೇಗ ಮೂರನೇ ಹಂತದ ಶುದ್ಧೀಕರಣ ಮಾಡುವ ಬಗ್ಗೆ ಘೋಷಣೆ ಮಾಡಲಿ ಎಂದರು.












Click it and Unblock the Notifications