ವಿಪಕ್ಷ ನಾಯಕ; ಕುರ್ಚಿ ಫೋಟೋದೊಂದಿಗೆ ಕಾಂಗ್ರೆಸ್ ಪ್ರಶ್ನೆ!
ಬೆಂಗಳೂರು, ಜುಲೈ 07; ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿರುವ ಬಿಜೆಪಿಗೆ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಲು ಸಹ ಆಗುತ್ತಿಲ್ಲವೇ?. ವಿಧಾನಸಭೆ ಬಜೆಟ್ ಅಧಿವೇಶನವಿದ್ದರೂ ಪಕ್ಷ ವಿಪಕ್ಷ ನಾಯಕನನ್ನು ಆಯ್ಕೆ ಮಾಡಲು ಹಿಂಜರಿಯುತ್ತಿರುವುದು ಏಕೆ? ಎಂಬುದು ಎಲ್ಲರ ಪ್ರಶ್ನೆ.
ಆಡಳಿತ ಪಕ್ಷ ಕಾಂಗ್ರೆಸ್ ಶುಕ್ರವಾರ ಖಾಲಿ ಕುರ್ಚಿಯ ಫೋಟೋ ಹಾಕಿ ಬಿಜೆಪಿಯನ್ನು ಕೇಳಿರುವ ಪ್ರಶ್ನೆ ಭಾರೀ ಚರ್ಚೆಗೆ ಕಾರಣವಾಗಿದೆ. ವಿರೋಧ ಪಕ್ಷದ ನಾಯಕರೇ ಇಲ್ಲದೇ ಅಧಿವೇಶನಕ್ಕೆ ಹೋಗುತ್ತಿರುವ ಬಿಜೆಪಿ ನಾಯಕರು ಈ ಟ್ವೀಟ್‌ಗೆ ಉತ್ತರ ನೀಡುವರೇ? ಕಾದು ನೋಡಬೇಕಿದೆ.

ವಿಧಾನಸೌಧದಲ್ಲಿರುವ ವಿರೋಧ ಪಕ್ಷದ ನಾಯಕರ ಕಚೇರಿಯ ಕುರ್ಚಿ ಖಾಲಿ ಇರುವ ಫೋಟೋವನ್ನು ಕಾಂಗ್ರೆಸ್ ಟ್ವೀಟ್ ಮಾಡಿದೆ. 'ವ್ಯವಹಾರ ಇನ್ನೂ ಕುದುರಲಿಲ್ಲವೇ? ಬಿಜೆಪಿ ಕರ್ನಾಟಕ' ಎಂದು ಕೇಳಿ ಟ್ವೀಟ್ ಬಾಣ ಬಿಟ್ಟಿದೆ.
ಕಾಂಗ್ರೆಸ್ ಟ್ವೀಟ್; 'ನಮ್ಮ ಸರ್ಕಾರ ರಚನೆಯಾಗಿ, ಗ್ಯಾರಂಟಿಗಳು ಜಾರಿಯಾಗಿ, ಅಧಿವೇಶನ ಶುರುವಾಗಿದೆ, ಬಜೆಟ್ ಮಂಡನೆಯೂ ಆರಂಭವಾಗಿದೆ. ವಿರೋಧ ಪಕ್ಷದ ನಾಯಕನ ಕುರ್ಚಿ ಮಾತ್ರ ಇನ್ನೂ ಖಾಲಿ ಇದೆ. ಬಿಜೆಪಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆಯೂ ಇಲ್ಲ, ಗೌರವವೂ ಇಲ್ಲ ಎನ್ನುವುದಕ್ಕೆ ಈ ಚಿತ್ರವೇ ಸಾಕ್ಷಿ ನುಡಿಯುತ್ತಿದೆ' ಎಂದು ಟೀಕಿಸಿದೆ.
'ಬಿಜೆಪಿ ವಿಪಕ್ಷ ನಾಯಕನ ಹುದ್ದೆಯನ್ನು ವ್ಯಾಪಾರಕ್ಕೆ ಇಟ್ಟಿರುವ ಅನುಮಾನವಿದೆ! ವ್ಯವಹಾರ ಇನ್ನೂ ಕುದುರಲಿಲ್ಲವೇ @BJP4Karnataka?' ಎಂದು ಪಕ್ಷ ಕೇಳಿದೆ.
ಸಿದ್ದರಾಮಯ್ಯ ಟೀಕೆ; ಕರ್ನಾಟಕ ವಿಧಾನಸಭೆಯ ಬಜೆಟ್ ಅಧಿವೇಶನ ಆರಂಭವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಸದನದಲ್ಲಿಯೇ ಬಿಜೆಪಿ ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದರು. "ಅಧಿವೇಶನ ಆರಂಭವಾಗಿ ಮೂರು ದಿನಗಳಾಗಿವೆ, ಇಲ್ಲಿಯವರೆಗೂ ಬಿಜೆಪಿಗೆ ವಿಪಕ್ಷ ನಾಯಕರನ್ನು ಆಯ್ಕೆ ಮಾಡಿಕೊಳ್ಳಲು ಆಗಿಲ್ಲ" ಎಂದು ಸದನದಲ್ಲಿಯೇ ಟೀಕೆ ಮಾಡಿದ್ದರು.
ಕಾಂಗ್ರೆಸ್ ಪಕ್ಷ ಟ್ವೀಟ್ ಮೂಲಕ, 'ಅಧಿವೇಶನಕ್ಕೂ ಮೊದಲೇ ವಿರೋಧ ಪಕ್ಷದ ನಾಯಕನನ್ನು ಘೋಷಿಸುತ್ತೇವೆ ಎಂದಿತ್ತು BJP Karnataka, ಅಧಿವೇಶನ ಮೂರನೇ ದಿನಕ್ಕೆ ಕಾಲಿಟ್ಟರೂ ವಿಪಕ್ಷ ನಾಯಕನ ಸುಳಿವೇ ಇಲ್ಲ!. ಹೈಕಮಾಂಡ್ ನಾಯಕರು ಇಲ್ಲಿನ ನಾಯಕರಿಗೆ ಸದನದಲ್ಲಿ ಗಂಟಲು ಹರಿದುಕೊಳ್ಳುವ ಕಾಂಪಿಟೇಷನ್ ಇಟ್ಟಿರಬಹುದೇನೋ!. ಆ ಮೂಲಕವಾದರೂ ಬಿಜೆಪಿಗೆ ಒಬ್ಬ ವಿಪಕ್ಷ ನಾಯಕ ಸಿಗಲಿ ಎನ್ನುವುದು ನಮ್ಮ ಹಾರೈಕೆ!' ಎಂದು ಆಶಯ ವ್ಯಕ್ತಪಡಿಸಿತ್ತು.
ಹಲವು ಹೆಸರು ಕೇಳಿ ಬರುತ್ತಿದೆ; ಕರ್ನಾಟಕದ ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಹಲವು ಹೆಸರು ಕೇಳಿ ಬರುತ್ತಿದೆ. ಸೋಮವಾರ ಕೇಂದ್ರ ಬಿಜೆಪಿಯ ಇಬ್ಬರು ವೀಕ್ಷಕರು ರಾಜ್ಯಕ್ಕೆ ಆಗಮಿಸಿ ಶಾಸಕಾಂಗ ಪಕ್ಷದ ಸಭೆ ನಡೆಸಿ ವಿರೋಧ ಪಕ್ಷದ ನಾಯಕನ ಆಯ್ಕೆ ಕುರಿತು ಶಾಸಕರ ಅಭಿಪ್ರಾಯವನ್ನು ಸಂಗ್ರಹಣೆ ಮಾಡಿದ್ದರು. ಆದರೆ ಇನ್ನೂ ವಿರೋಧ ಪಕ್ಷದ ನಾಯಕನ ಹೆಸರು ಘೋಷಣೆಯಾಗಿಲ್ಲ.
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರೋಧ ಪಕ್ಷದ ನಾಯಕರಾಗಲಿ ಎಂಬ ವಾದವಿದೆ. ಮಾಜಿ ಸಚಿವರಾದ ಆರ್. ಅಶೋಕ, ಅಶ್ವತ್ಥ ನಾರಾಯಣ, ಆರಗ ಜ್ಞಾನೇಂದ್ರ ಹೆಸರು ಸಹ ಕೇಳಿ ಬರುತ್ತಿದೆ. ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಬಿ. ವೈ. ವಿಜಯೇಂದ್ರ ಹೆಸರನ್ನು ತೇಲಿ ಬಿಡಲಾಗಿದೆ. ಆದರೆ ಯಾರು ವಿಪಕ್ಷ ನಾಯಕ? ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ಬಿಜೆಪಿ ರಾಜ್ಯಾಧ್ಯಕ್ಷರನ್ನು ಸಹ ಬದಲಾವಣೆ ಮಾಡಲಿದೆ ಎಂಬ ಸುದ್ದಿ ಇದೆ. ಆದ್ದರಿಂದ ವಿಪಕ್ಷ ನಾಯಕ, ಬಿಜೆಪಿ ರಾಜ್ಯಾಧ್ಯಕ್ಷರ ಹುದ್ದೆಗೆ ಒಟ್ಟಿಗೆ ಹೆಸರು ಘೋಷಣೆ ಮಾಡಲಿದೆ ಎಂಬ ಮಾತಿದೆ. ಆದ್ದರಿಂದ ಪಕ್ಷದ ನಾಯಕರು ಜಾತಿ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.












Click it and Unblock the Notifications