ರಾಜ್ಯದಲ್ಲಿ ಸರಣಿ ಕೊನೆ; ಕರ್ನಾಟಕದಲ್ಲಿ ಜಂಗಲ್ ರಾಜ್ ಶುರುವಾಗಿದೆ : ಬಸವರಾಜ ಬೊಮ್ಮಾಯಿ
ಬೆಂಗಳೂರು, ಜುಲೈ 12: ಕರ್ನಾಟಕದಲ್ಲಿ ಜಂಗಲ್ ರಾಜ್ಯ ಶುರುವಾಗಿದೆ. ಸಾಮಾನ್ಯರು ಭಯ ಭೀತಿ ಇಲ್ಲದೆ ಓಡಾಡುವಂತಿಲ್ಲ. ಜೈನ ಮುನಿ ಕೊಲೆಯಾಗಿದೆ ನಮ್ಮಕಾರ್ಯಕರ್ತರ ಕೊಲೆಯಾಗಿದೆ. ಜನ ಸಾಮಾನ್ಯರ ಕೊಲೆಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆತಂಕ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದನ್ನು ಖಂಡಿಸಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಬಿಜೆಪಿ ಶಾಸಕರು ವಿಧಾನಸೌಧದ ಬಳಿ ಇರುವ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿ, ರಾಜ್ಯ ಸರ್ಕಾರಕ್ಕೆ ಸೂಚನೆ ನೀಡುವಂತೆ ರಾಜ್ಯಪಾಲರಿಗೆ ಮನವಿ ಮಾಡಿದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಇಬ್ಬರು ಟೆಕ್ಕಿಗಳ ಕೊಲೆಯಾಗಿದೆ. ಕೊಲೆ ಮಾಡಿ ಆ ವ್ಯಕ್ತಿ ತನ್ನ ಇನ್ ಸ್ಟಾ ಗ್ರಾಂನಲ್ಲಿ ಹಾಕುತ್ತಾನೆ.

ರಾಜ್ಯದಲ್ಲಿ ಕೊಲೆಗಡುಕರಿಗೆ ಯಾವುದೇ ಭಯ ಇಲ್ಲ. ಪೊಲಿಸರ ಮೇಲೆ ಒತ್ತಡ ಹೇರಲಾಗುತ್ತಿದೆ. ಅವ್ಯವಹಾರ ತಡೆಯಲು ಹೋಗಿದ್ದ ಪೊಲಿಸ್ ಅಧಿಕಾರಿಯನ್ನೆ ಕೊಲೆ ಮಾಡಲಾಗಿದೆ. ಹಿರಿಯ ಅಧಿಕಾರಿಗಳು ಸರ್ಕಾರದ ಮುಂದೆ ತಲೆವಾಗಿ ಅವರ ಮುಂದೆ ನಿಂತಿದ್ದಾರೆ. ಹೀಗಾಗಿ ಕೊಲೆಗಡುಕರಿಗೆ ಯಾವುದೇ ಭಯವಿಲ್ಲದಂತಾಗಿದೆ. ದಪ್ಪ ಚರ್ಮದ ಸರ್ಕಾರ ನಮ್ಮಮನವಿಗೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.
ಕಾನೂನು ಸುವ್ಯವಸ್ಥೆ ಕಲ್ಪಿಸಲು ಡಿಜಿ ಐಜಿಯನ್ನು ಕರೆಸಿಕೊಂಡು ಸೂಚನೆ ನೀಡುವಂತೆ ರಾಜ್ಯಪಾಲರಿಗೆ ಮನವಿ ಮಾಡಿದ್ದೇವೆ. ಹಾಗೂ ಇಲ್ಲಿನ ಪರಿಸ್ಥಿತಿಯನ್ನು ಕೇಂದ್ರ ಸರ್ಕಾರದ ಗಮನಕ್ಕೆ ತರುವಂತೆ ಮನವಿ ಮಾಡಿದ್ದೇವೆ. ಅವರು ಹಿರಿಯ ಅಧಿಕಾರಿಗಳನ್ನು ಕರೆಯಿಸಿಕೊಂಡು ಮಾತನಾಡುವುದಾಗಿ ಹೇಳಿದ್ದಾರೆ. ರಾಜ್ಯಪಾಲರು ರೀತಿಯ ಸೂಚನೆ ನೀಡುತ್ತಾರೆ ನೊಡಿಕೊಂಡು ಜನರ ಬಳಿಗೆ ತೆಗೆದುಕೊಂಡು ಹೋಗುತ್ತೇವೆ ಎಂದು ಹೇಳಿದರು.
ಈ ವೇಳೆ ಮಾಜಿ ಸಚಿವ ಸುನೀಲ್ ಕುಮಾರ್ ಮಾತನಾಡಿ, ರಾಜ್ಯ ಸರ್ಕಾರ ಬಂದು ಎರಡೇ ತಿಂಗಳಲ್ಲಿ ಹತ್ತು ಹದಿನೈದು ಘಟನೆಗಳು ನಡೆದಿವೆ. ಕಾನೂನು ಸುವ್ಯವಸ್ಥೆ ಹದಗೆಡುವ ಮಟ್ಟಿಗೆ ಘಟನೆಗಳು ನಡೆಯುತ್ತಿವೆ, ರಾಜ್ಯದಲ್ಲಿ ಗುಂಡಾಗಿರಿ ವರ್ತನೆ ಹೆಚ್ಚಾಗಿದೆ. ರಾಷ್ಟ್ರೀಯ ವಿಚಾರ ಹೇಳುವ ವ್ಯಕ್ತಿಗಳ ವಿರುದ್ಧ ಹಲ್ಲೆ, ಕೊಲೆ, ದೌರ್ಜನ್ಯ ಮಾಡಲಾಗುತ್ತಿದೆ.

ರಾಜ್ಯದಲ್ಲಿ ಭಯದ ವಾತಾವರಣ ನೆಲೆಸಿದೆ. ಕಾನೂನಿನ ಸುವ್ಯವಸ್ಥೆ ಹದಗೆಟ್ಟಿದೆ, ಪೊಲೀಸರ ಮೇಲೆ ಭಯ ಇಲ್ಲದಂತಾಗಿದೆ, ರಾಜ್ಯದಲ್ಲಿ ಜನ ದೊಡ್ಡ ಪ್ರಮಾಣದಲ್ಲಿ ಭಯಭೀತರಾಗಿದ್ದಾರೆ ರಾಜ್ಯಪಾಲರಿಗೂ ದೂರು ನೀಡಿದ್ದೇವೆ.ರಾಜ್ಯಪಾಲರು ಮಧ್ಯಪ್ರವೇಶಿಸಿ ಸರ್ಕಾರಕ್ಕೆ ಎಚ್ಚರಿಕೆ ಕೊಡುವಂತೆ ಮನವಿ ಮಾಡಿದ್ದೇವೆ ಎಂದ ಅವರು, ಜೈನ ಮುನಿ ಪ್ರಕರಣ ಸಿಬಿಐಗೆ ವಹಿಸದಿದ್ದರೆ ಮುಂದೆ ನಮ್ಮ ನಾಯಕರೆಲ್ಲ ಚರ್ಚೆ ಮಾಡಿ ಮುಂದಿನ ಹೋರಾಟ ರೂಪಿಸುತ್ತೇವೆ ಎಂದು ಹೇಳಿದರು.
ಆಡಳಿತದಲ್ಲಿ ಬದಲಾವಣೆ ಆಗಿದೆ. ಆಡಳಿತವರ್ಗದಿಂದ ನಮಗೆ ರಕ್ಷಣೆ ಸಿಗುತ್ತದೆ ಎಂದು ಎಲ್ಲ ಸಮಾಜಘಾತುಕ ವ್ಯಕ್ತಿಗಳು ಇವತ್ತು ಕರ್ನಾಟಕದ ಎಲ್ಲೆಡೆ ದೊಂಬಿ, ಗಲಾಟೆ, ಹತ್ಯೆಗಳಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದರು. ಕೆಳಹಂತದ ಪೊಲೀಸರು ಮತ್ತು ಪೊಲೀಸ್ ಅಧಿಕಾರಿಗಳ ಮೇಲೆ ಒತ್ತಡ ಹೇರಲಾಗುತ್ತಿದೆ ಎಂದು ನುಡಿದರು. ಪ್ರಾಮಾಣಿಕ ಪೊಲೀಸ್ ಒಬ್ಬರು ಮರಳು ಮಾಫಿಯಾ ತಡೆಯಲು ಹೋದಾಗ ಅವರ ಹತ್ಯೆ ಆಗಿದೆ ಎಂದು ವಿವರಿಸಿದರು.
ಪೊಲೀಸರ ನೈತಿಕತೆ ಕುಸಿಯುವಂತೆ ಮಾಡಿದ್ದಾರೆ. ಇನ್ನೊಂದೆಡೆ ಹಿರಿಯ ಪೊಲೀಸ್ ಅಧಿಕಾರಿಗಳು ಬಗ್ಗಿನಿಂತು ಈ ಸರಕಾರದ ಮುಂದೆ ಆದೇಶಗಳನ್ನು ಪಾಲಿಸುವಂತೆ ಮಾಡಲಾಗುತ್ತಿದೆ. ಇದರಿಂದ ನ್ಯಾಯನಿಷ್ಠುರ ತನಿಖೆ ಆಗುತ್ತಿಲ್ಲ ಎಂದು ಆಕ್ಷೇಪಿಸಿದರು. ತಪ್ಪಿತಸ್ಥರಿಗೆ ಶಿಕ್ಷೆ ಆಗುವ ಲಕ್ಷಣ ಇಲ್ಲವಾಗಿದೆ ಎಂದರು.
ಈಗಲೇ ಇದನ್ನು ಹದ್ದುಬಸ್ತಿನಲ್ಲಿ ಇಡದಿದ್ದರೆ ಜನಸಾಮಾನ್ಯರು ನಿರ್ಭಯವಾಗಿ ಓಡಾಡಲು ಕಷ್ಟ. ಅದಕ್ಕಾಗಿ ಸದನದ ಒಳಗೆ ಹೋರಾಟ ಮಾಡಿದ್ದೇವೆ. ಹೊರಗಡೆಯೂ ಹೋರಾಟ ನಡೆಸಲಾಗುತ್ತಿದೆ. ಈ ದಪ್ಪ ಚರ್ಮದ ಸರಕಾರವು ಹಠಮಾರಿತನ ತೋರುತ್ತಿದೆ. ಜೈನಮುನಿಗಳ ಕೊಲೆಯನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ. ಹಗುರವಾಗಿ ಪರಿಗಣಿಸಿದ್ದಾರೆ.
ಜೈನಮುನಿಗಳ ಹತ್ಯೆಯ ಸಿಬಿಐ ತನಿಖೆಯ ನಮ್ಮ ಬೇಡಿಕೆಯನ್ನು ತಿರಸ್ಕರಿಸಿದ್ದಾರೆ. ಈ ಬಗ್ಗೆ ಗವರ್ನರ್ ಗೆ ಎಲ್ಲ ಮಾಹಿತಿ ಕೊಟ್ಟಿದ್ದೇವೆ. ಕಲಬುರ್ಗಿ, ಜೇವರ್ಗಿ, ಬೆಳಗಾವಿ, ಸಕಲೇಶಪುರ, ಹಾಸನ, ಮೈಸೂರು, ಚಾಮರಾಜನಗರ, ನಂಜನಗೂಡಿನಲ್ಲಿ ಸೇರಿ ಎಲ್ಲ ಕಡೆ ಆದ ದುರ್ಘಟನೆಗಳ ವಿವರ ಕೊಟ್ಟಿದ್ದೇವೆ. ರಾಜ್ಯಪಾಲರು ತಮ್ಮಲ್ಲಿರುವ ಅಧಿಕಾರ ಬಳಸಿ ಡಿಜಿಪಿ, ರಾಜ್ಯ ಮುಖ್ಯ ಕಾರ್ಯದರ್ಶಿಯನ್ನು ಕರೆಸಿಕೊಂಡು ಕಾನೂನು, ಸುವ್ಯವಸ್ಥೆಯನ್ನು ಮರಳಿ ಸ್ಥಾಪಿಸಲು ಸೂಚಿಸಬೇಕು. ಸಿಬಿಐ ತನಿಖೆಗೆ ನಿರ್ದೇಶನ ಕೊಡಬೇಕೆಂದು ಕೋರಿರುವುದಾಗಿ ತಿಳಿಸಿದರು.
ಇಲ್ಲಿನ ಕಾನೂನು- ಸುವ್ಯವಸ್ಥೆ ಕುಸಿತದ ಬಗ್ಗೆ ಕೇಂದ್ರ ಸರಕಾರಕ್ಕೆ ಮಾಹಿತಿ ಕೊಡಲು ಕೋರಿದ್ದೇವೆ. ಡಿಜಿಪಿ, ಮುಖ್ಯ ಕಾರ್ಯದರ್ಶಿಯನ್ನು ಕರೆಸಿಕೊಂಡು ಮಾಹಿತಿ ಪಡೆದು ಸೂಕ್ತ ನಿರ್ದೇಶನ ಕೊಡುವುದಾಗಿ ರಾಜ್ಯಪಾಲರು ತಿಳಿಸಿದ್ದಾಗಿ ವಿವರ ನೀಡಿದರು. ಕಾನೂನು- ಸುವ್ಯವಸ್ಥೆ ಕಾಪಾಡುವುದು ಸರಕಾರದ ಆದ್ಯ ಕರ್ತವ್ಯ. ಅಮಾಯಕರಿಗೆ ತೊಂದರೆ ಆಗಬಾರದು. ಭಯದ ವಾತಾವರಣ ಇರಬಾರದು ಎಂದ ಅವರು, ಕಾನೂನಿನಡಿ ಸೂಕ್ತ ನಿರ್ದೇಶನ ಕೊಡುವುದಾಗಿ ಹೇಳಿದ್ದಾರೆ ಎಂದರು.












Click it and Unblock the Notifications