ಬಿಜೆಪಿಗೆ ತಡರಾತ್ರಿ ಜ್ಞಾನೋದಯ: 'ನರಹಂತಕ' ರಾಜಕಾರಣ ಬಿಡಿ ಎಂದ ಎಚ್‌ಡಿಕೆ
ಬೆಂಗಳೂರು ಜುಲೈ 28: ಸಾವುಗಳನ್ನೇ ಸಾಧನೆ ಮಾಡಿಕೊಂಡು, ಅವುಗಳನ್ನು ರಾಜಕೀಯ ಅಧಿಕಾರ ಏಣಿ ಮಾಡಿಕೊಂಡಿದ್ದ ಬಿಜೆಪಿ ಮಧ್ಯರಾತ್ರಿ ಪಾಪಪ್ರಜ್ಞೆ ಕಾಡಿದೆ. ಹೀಗಾಗಿ ಜನೋತ್ಸವವನ್ನು ರಾತ್ರೋ ರಾತ್ರೋ ರದ್ದುಗೊಳಿಸಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ.
ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಕೊಲೆ ಆಗಿದೆ. ಎಲ್ಲೆಡೆ ಸೂತಕ ವಾತಾವರಣ ನಿರ್ಮಾಣವಾಗಿದೆ. ಈ ಸಂದರ್ಭದಲ್ಲಿ ಸ್ವಪಕ್ಷದವನನ್ನು ಕಳೆದುಕೊಂಡ ಬಿಜೆಪಿ ವರ್ಷದ ಸಂಭ್ರಮಾಚರಣೆಗೆ ಮುಂದಾಗಿತ್ತು. ಜನೋತ್ಸವ ಬೇಡ ಎಂದು ನಾನು ಮೊದಲೇ ಹೇಳಿದ್ದೆ. ಆದರೆ ಆಗ ಅರ್ಥ ಮಾಡಿಕೊಳ್ಳದ ಬಿಜೆಪಿಗೆ ತಡರಾತ್ರಿ ಜ್ಞಾನೋದಯವಾಗಿದೆ. ಹೀಗಾಗಿ ಬಿಜೆಪಿ ತಟ್ಟುತ್ತಿದ್ದ ಸಂಭವನೀಯ ಮುಖಭಂಗ ತಪ್ಪಿದಂತಾಗಿದೆ. ಬಡ ಕಂಡವರ ಮಕ್ಕಳನ್ನು ಸಾವಿನ ದವಡೆಗೆ ನೂಕಿ ಮತ ಫಸಲು ತೆಗೆಯುವ ಬಿಜೆಪಿಯ 'ನರಹಂತಕ ರಾಜಕಾರಣ' ನಿಲ್ಲಲಿ ಎಂದು ಕುಮಾರಸ್ವಾಮಿ ಸರಣಿ ಟ್ವಿಟ್ ಮೂಲಕ ಬಿಜೆಪಿ ಸಾಧನೆ ಬಗ್ಗೆ ವ್ಯಂಗ್ಯವಾಡಿದ್ದಾರೆ.
ಬಿಜೆಪಿ ಬಡ ಯುವಕರ ಸಾವುಗಳನ್ನೇ ಸಾಧನೆಗಳನ್ನಾಗಿ ಮಾಡಿಕೊಂಡಿದೆ. ಅದರಿಂದಲೆ ಅಧಿಕಾರದ ಏಣಿ ಏರಿದೆ. ಸರ್ಕಾರದ ಕಾಳಜಿಯಲ್ಲಿ ಸಾಚಾತನವಿಲ್ಲ. ಸಾವಿನಲ್ಲೂ ಸಿಂಪತಿ' ಗಿಟ್ಟಿಸುವ ವ್ಯರ್ಥ ಪ್ರಯತ್ನ ವಾಕರಿಕೆ ತರಿಸುತ್ತದೆ. ಸಾಧನಾ ಸಮಾವೇಶ ರದ್ದಾಯಿತಲ್ಲ ಎಂಬ ಹತಾಶೆಯೇ ಬಿಜೆಪಿ ನಾಯಕರಲ್ಲಿ ಕಾಡುತ್ತಿರುವುದು ಎದ್ದು ಕಾಣುತ್ತಿದೆ. ರಾಜ್ಯದಲ್ಲಿ ಸರಣಿ ಸಾವುಗಳ ಮೆರವಣಿಗೆಯೇ ಬಿಜೆಪಿ ಸರಕಾರದ ವರ್ಷದ ಸಾಧನೆ ಎಂದು ಅವರು ದೂರಿದರು.
|
ಬಿಜೆಪಿಯ ನಿಜವಾದ ಸಾಧನೆ
ಬಿಜೆಪಿ ಸರ್ಕಾರ ತನ್ನ ಆಡಳಿದಲ್ಲಿ ರಾಜ್ಯವನ್ನು ಜಾತಿ, ಧರ್ಮ, ಆಚಾರ, ವಿಚಾರ, ಆಹಾರ, ವ್ಯಾಪಾರ, ಉಡುಗೆ-ತೊಡುಗೆ ನೆಪದಲ್ಲಿ ಭಾವನಾತ್ಮಕವಾಗಿ ಛಿದ್ರ ಛಿದ್ರ ಮಾಡಿತು. ತಿನ್ನುವ ಅನ್ನದಲ್ಲಿ, ಕಲಿಯುವ ಅಕ್ಷರದಲ್ಲಿ, ಉರಿಯುವ ಮನೆಯಲ್ಲಿ, ಕೋಮುಗಳ ಮಧ್ಯೆ ವೋಟ್ ಬ್ಯಾಂಕ್ ರಾಜಕಾರಣ ಮಾಡುವುದು ನಿಜವಾದ ಸಾಧನೆಯೇ? ಎಂದು ಅವರು ಪ್ರಶ್ನಿಸಿದರು. ಸಾಧನೆ ಹೆಸರಿನ ಗುಂಗಲ್ಲಿರುವ ಬಿಜೆಪಿಗರಿಗೆ ಕನಿಷ್ಠ ನಾಚುವ ಸೂಕ್ಷ್ಮತೆಯೂ ಇಲ್ಲದಾಗಿದೆ ಎಂದರು ಜನೋತ್ಸವ ಹಮ್ಮಿಕೊಂಡಿದ್ದರ ಕುರಿತು ಕುಮಾರಸ್ವಾಮಿ ಕಿಡಿ ಕಾರಿದ್ದಾರೆ.

ಇನ್ನೆಷ್ಟು ಮನೆಗಳ ದೀಪ ಆರಬೇಕು?
ರಾಜ್ಯದಲ್ಲಿ ಇನ್ನಷ್ಟು ಬಡ ಕುಟುಂಬದ ಯುವಕರ ಕಗ್ಗೊಲೆ ಆಗಬೇಕು? ಅದೆಷ್ಟು ಬಡಮನೆಗಳ ದೀಪಗಳು ಆರಬೇಕು?. ಇನ್ನು ಎಷ್ಟುಹೆತ್ತ ಕರುಗಳು ಮಕ್ಕಳನ್ನು ಕಣ್ಣೆದುರೆ ಕಳೆದುಕೊಂಡು ಕಣ್ಣೀರು ಹಾಕಬೇಕು?. ಶಿವಮೊಗ್ಗದ ಹರ್ಷ, ಚಂದ್ರು ತಾಯಿಯಂದಿರ ಆರ್ತನಾದ ಸರ್ಕಾರಕ್ಕೆ ಕೇಳಿದ್ದರೆ ಪ್ರವೀಣ್ ನೆಟ್ಟಾರು ಅಮ್ಮನ ಆರ್ತನಾದ ಕೇಳುವ ಸ್ಥಿತಿ ಬರುತ್ತಿತ್ತಾ?. ಕೊಲೆ ತಡೆಯಲಾಗದವರು ಬಿಜೆಪಿ ಸರ್ಕಾರ ಈಗ ಕೃತಕ ಸಾಂತ್ವನ ಹೇಳುತ್ತಿದೆ. ಅದರಿಂದ ಏನು ಪ್ರಯೋಜನೆ ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಬಿಜೆಪಿ ಬಗ್ಗೆ ಜನರಿಗೆ ಗೊತ್ತಾಗುತ್ತಿದೆ
ಮಕ್ಕಳನ್ನು ಕಳೆದುಕೊಂಡ ಬಡ ಕುಟುಂಬಗಳ ಪೋಷಕರ ಆರ್ತನಾದ ಬಿಜೆಪಿ ಇಂಪಾದ ನಾದದಂತೆ ಕೇಳುತ್ತಿದೆ ಎಂದು ಅನ್ನಿಸುತ್ತದೆ. ಅಧಿಕಾರಕ್ಕಾಗಿ, ಮತಗಳಿಗಾಗಿ ಬಿಜೆಪಿ ಮಾಡುವ ಕೃತಕ ಸಾಂತ್ವನ, ಬಿಜೆಪಿ ಯೋಚನೆಯ ಆಳ ಅಗಲ ಈಗೀನ ಜನರಿಗೆ ಅರ್ಥವಾಗುತ್ತಿದೆ. ಇದಕ್ಕೆ ಬುಧವಾರ ಬೆಳ್ಳಾರೆಯಲ್ಲಿ ಬಿಜೆಪಿ ಅಧ್ಯಕ್ಷರು ಸೇರಿದಂತೆ ಇಬ್ಬರು ಸಚಿವರಿಗೆ ಕಾರಿಗೆ ಮುತ್ತಿಗೆ ಹಾಕಿ ಪ್ರತಿರೋಧ ವ್ಯಕ್ತಪಡಿಸಿದ ಜನರ ಆಕ್ರೋಶವೇ ಸಾಕ್ಷಿಯಾಗಿದೆ ಎಂದು ಎಚ್.ಡಿ.ಕುಮಾರಸ್ವಾಮಿ ಬಿಜೆಪಿ ಕಾಲೆಳೆದರು.

ಸದ್ಯ ಕರಾವಳಿ ಕೆರಳಿದ್ದು, ಕರ್ನಾಟಕ ಕೆರಳಲಿದೆ
ಸಾವಿನ ಸೂತಕದ ಮಧ್ಯದಲ್ಲೂ ಜನೋತ್ಸವ ಸಂಭ್ರಮಕ್ಕೆ ಮುಂದಾಗಿದ್ದ ಬಿಜೆಪಿ ತಾನು ಏನು ಸಾಧನೆ ಮಾಡಿದೆ ಎಂದು ಜನರಿಗೆ ಹೇಳಲು ಹೊರಟಿದೆ. ಕೋವಿಡ್ ಹೆಸರಿನಲ್ಲಿ ಸಾಕಷ್ಟು ಕೊಳ್ಳೆ ಹೊಡೆದಿದೆ. ಸರ್ಕಾರ 40ಪರ್ಸೆಂಟ್ ಕಮಿಷನ್ ದಂಧೆ ಬಯಲಾಗಿದೆ. ಅಧಿಕಾರಿಗಳ ವರ್ಗದಲ್ಲಿ ಪೇಮೆಂಟ್ ಕೋಟಾ ನಡೆಸಿದ್ದು, ಪಿಎಸ್ಐ ನೇಮಕಾತಿಯಲ್ಲೂ ಹಣಕ್ಕೆ ಬೇಡಿಕೆ ಇಟ್ಟು ಅಕ್ರಮ ವೆಸಗಿದೆ. ಸಹಾಯಕ ಪ್ರಾಧ್ಯಾಕರ ನೇಮಕದಲ್ಲೂ ಬಿಜೆಪಿಯ ನೋಟಿನ ಆಟ ನಡೆದಿದೆ. ಕೇವಲ ಜೇಬು ತುಂಬಿಸಿಕೊಳ್ಳುವ ಧನದಾಹಿ ಆಟ ಬಿಟ್ಟರೆ, ಜನರಿಗೆ, ನಾಡಿಗಾಗಿ ಸರ್ಕಾರ ಮಾಡಿದ್ದಾರೂ ಏನು. ಇದು ಸರ್ಕಾರದ ಸಾಧನೆಯೇ?. ಬಿಜೆಪಿಯ ಈ ಆಟಗಳ ಹೀಗೆ ಮುಂದುವರಿದರೆ ಕರ್ನಾಟಕ ಜನರೆಲ್ಲರು ತಿರುಗಿ ಬೀಳುತ್ತಾರೆ ಎಂದು ಎಚ್ಚರಿಸಿದ್ದಾರೆ.

ಬಿಜೆಪಿ ನರಹಂತಕ ರಾಜಕಾರಣ ನಿಲ್ಲಿಸಲಿ
ಸದ್ಯ ಮಂಗಳವಾರ ಬೆಳ್ಳಾರೆಯಲ್ಲಿ ಅಮಾನವೀಯ ಕೃತ್ಯ ನಡೆದಿದೆ. ನಡುರಸ್ತೆಯಲ್ಲೇ ಪ್ರವೀಣ್ ನೆಟ್ಟಾರು ನೆತ್ತರು ಹರಿದಿದೆ. ಇದು ನಾಡಿನ ಆತ್ಮಸಾಕ್ಷಿಯನ್ನು ಕಲಕಿದೆ. ಒಂದೇ ಊರಿನಲ್ಲಿ ಕೇವಲ ಎಂಟೇ ದಿನದಲ್ಲಿ ಎರಡು ಕೊಲೆಗಳು ನಡೆದಿವೆ ಎಂದರೆ ರಾಜ್ಯದಲ್ಲಿ ಸರ್ಕಾರ ಬದುಕಿದೆಯಾ? ಅಥವಾ ಜೀವ ಕಳೆದುಕೊಂಡಿದೆಯಾ? ಎಂಬ ಅನುಮಾನಗಳು ಕಾಡುತ್ತವೆ.
ಜೀವವಿಲ್ಲ ಈ ಸರ್ಕಾರದ ಸಾಹುಕಾರನಿಗೆ ಸಂಭ್ರಮಾಚರಣೆಯ ಚಿಂತೆ. ಆಗದ ಸಾಧನೆ ಹೇಳಿಕೊಳ್ಳುವ ಅನಿವಾರ್ಯತೆ. ಇನ್ನು ಮುಂದೆಯಾದರೂ ಬಡ ಕಂಡವರ ಮಕ್ಕಳನ್ನು ಸಾವಿನ ದವಡೆಗೆ ನೂಕಿ ಮತ ಫಸಲು ತೆಗೆಯುವ 'ನರಹಂತಕ ರಾಜಕಾರಣ' ನಿಲ್ಲಲಿ ಎಂದು ಅವರು ಒತ್ತಾಯಿಸಿದರು.












Click it and Unblock the Notifications