ತಿಮ್ಮಣ್ಣ ಹಟ್ಟಿ ಶವದ ತುಣುಕಿಗೆ ಅಂತ್ಯ ಸಂಸ್ಕಾರ
ಬಾಗಲಕೋಟೆ, ಆ.11 : ಬಾದಾಮಿ ತಾಲೂಕಿನ ಸೂಳಿಕೇರಿಯಲ್ಲಿ ಕೊಳವೆ ಬಾವಿಗೆ ಬಿದ್ದಿದ್ದ ತಿಮ್ಮಣ್ಣ ಹಟ್ಟಿಯ ಶವದ ಕೆಲವು ಭಾಗಗಳನ್ನು ಹೊರತೆಗೆದು ಭಾನುವಾರ ರಾತ್ರಿ ಕುಟುಂಬ ವರ್ಗದವರಿಗೆ ಹಸ್ತಾಂತರಿಸಲಾಗಿದ್ದು, ಮುಂಜಾನೆ 2.30ರ ವೇಳೆಗೆ ಜಮೀನಿನಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ.
ಆ.3ರಂದು ಕೊಳವೆ ಬಾವಿಗೆ ಬಿದ್ದಿದ್ದ ತಿಮ್ಮಣ್ಣ ಹಟ್ಟಿಯನ್ನು ಅಲ್ಲಿಯೇ ಮಣ್ಣು ಮಾಡುವುದಕ್ಕೆ ಕಾನೂನಿನ ತೊಡಕಿದೆ. ಆದ್ದರಿಂದ ಇಡೀ ದೇಹವಲ್ಲದಿದ್ದರೂ ದೇಹದ ಭಾಗವನ್ನಾದರೂ ಹೊರತೆಗೆದು ಶವಪರೀಕ್ಷೆ ನಡೆಸಲೇಬೇಕು ಎಂದು ಅಡ್ವೋಕೇಟ್ ಜನರಲ್ ಸಲಹೆ ನೀಡಿರುವುದರಿಂದ ಶವದ ಕೆಲವು ಭಾಗಗಳನ್ನು ಹೊರತೆಗೆಯಲಾಯಿತು.

ಆ.10ರ ಭಾನುವಾರ ಮಧ್ಯಾಹ್ನ ಕೊಳವೆ ಬಾವಿಗೆ ಗಾಳಿ ಹಾಯಿಸಿ ಬಾಲಕನ ದೇಹ ತೆಗೆಯುವ ಕಾರ್ಯಾಚರಣೆ ವಿಫಲವಾಯಿತು. ನಂತರ ಬೋರ್ ವೆಲ್ ರಿಗ್ಗಿಂಗ್ ಮೂಲಕ ಕಾರ್ಯಾಚರಣೆ ನಡೆಸಿ, ಶವದ ಕೆಲವು ಭಾಗಗಳನ್ನು ಹೊರತೆಗೆದು, ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬದವರಿಗೆ ಜಿಲ್ಲಾಡಳಿತ ಶವವನ್ನು ಹಸ್ತಾಂತರ ಮಾಡಿತು. [ತಿಮ್ಮಣ್ಣ ರಕ್ಷಣೆ ಕಾರ್ಯಾಚರಣೆ ಸಂಪೂರ್ಣ ಸ್ಥಗಿತ]
ಸೋಮವಾರ ಮುಂಜಾನೆ 2.30ರ ಸುಮಾರಿಗೆ ಶವದ ತುಣುಕಿರುವ ಪೆಟ್ಟಿಗೆ ತಿಮ್ಮಣ್ಣ ಹಟ್ಟಿ ಕುಟುಂಬದವರ ಕೈ ಸೇರಿದ ಬಳಿಕ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು. ತಕ್ಷಣವೇ ಜಿಲ್ಲಾಡಳಿತ ಮತ್ತು ತಿಮ್ಮಣ್ಣ ಹಟ್ಟಿ ಕುಟುಂಬದವರು ಸೇರಿ ಜಮೀನಿನ ಪಕ್ಕದಲ್ಲಿರುವ ಬನ್ನಿ ಮರದ ಕೆಳಗೆ ಶವದ ಅಂತ್ಯ ಸಂಸ್ಕಾರವನ್ನು ನೆರವೇರಿಸಿದರು. [ತಿಮ್ಮಣ್ಣ ಹಟ್ಟಿ ಕಾರ್ಯಾಚರಣೆ ವಿವರಗಳು]
ತಿಮ್ಮಣ್ಣನ ತಂದೆ ಹನುಮಂತ ಹಟ್ಟಿ ಶವದ ಚಿತೆಗೆ ಅಗ್ನಿ ಸ್ವರ್ಶ ಮಾಡುವ ಮೂಲಕ ಅಂತಿಮ ಸಂಸ್ಕಾರವನ್ನು ನೆರವೇರಿಸಿದರು. ಇದರಿಂದಾಗಿ ಕಳೆದ 180 ಗಂಟೆಗಳಿಂದ ನಡೆಸುತ್ತಿದ್ದ ಕಾರ್ಯಾಚರಣೆ ಅಂತ್ಯಗೊಂಡಿತು. ಕೊಳವೆ ಬಾವಿಗೆ ಬಿದ್ದ ಬಾಲಕ ತಿಮ್ಮಣ್ಣ ಶವವಾಗಿ ಪತ್ತೆಯಾದ.












Click it and Unblock the Notifications