ಭೂ ಪರಿವರ್ತನೆ ಈಗ ಸರಳ: ಸಿ.ಎಂ ಸಿದ್ದರಾಮಯ್ಯ ಅಪ್ಡೇಟ್ಸ್
ಕರ್ನಾಟಕ ಸರ್ಕಾರವು ಭೂ ಪರಿವರ್ತನೆ ಪ್ರಕ್ರಿಯೆಯನ್ನು ಸರಳೀಕರಣ ಮಾಡಿದೆ. ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭರ್ಜರಿ ಗುಡ್‌ನ್ಯೂಸ್ ಕೊಟ್ಟಿದ್ದಾರೆ. ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ತಿದ್ದುಪಡಿಗೆ ಡಿಸೆಂಬರ್ 23 ರಂದು ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ. ಕರ್ನಾಟಕ ಭೂ ಕಂದಾಯ ಕಾಯ್ದೆ 1964 ಕಲಂ 95ರ ತಿದ್ದುಪಡಿಗೆ ಹೊರಡಿಸಲಾಗಿರುವ ಅಧಿಸೂಚನೆಯಲ್ಲಿ ಸೇರಿಸಿರುವ ಕಳೆದ 2-3 ವರ್ಷಗಳಲ್ಲಿ ತರಲಾದ ಕಾನೂನಿನ ತಿದ್ದುಪಡಿಗಳನ್ನು ಸಂವಾದಿಯಾಗಿ ಕೆಲ ನಿಯಮಗಳನ್ನು ರಚಿಸಲಾಗಿದೆ ಎಂದು ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಕಳೆದ 2 ವರ್ಷದಲ್ಲಿ ಭೂ ಕಂದಾಯ ಕಾಯ್ದೆ 1964ರ ವಿವಿಧ ಕಲಂಗಳಿಗೆ ತಿದ್ದುಪಡಿ ತಂದು ಕರ್ನಾಟಕ ರಾಜ್ಯದಲ್ಲಿ ಪ್ರಗತಿ ಪಥದತ್ತ ಹಾಗೂ ಸಾರ್ವಜನಿಕರಿಗೆ ಜನಸ್ನೇಹಿ ಆಡಳಿತಕ್ಕೆ ನಾಂದಿ ಹಾಡಲು ಪ್ರಯತ್ನಿಸಲಾಗಿದ್ದು, 47 ಕಲಂಗಳಿಗೆ 9 ತಿದ್ದುಪಡಿ ತರಲಾಗಿದೆ.

ಕರ್ನಾಟಕ ಭೂ ಕಂದಾಯ ನಿಯಮಗಳು 1966 ಅನ್ನುಸಮಗ್ರವಾಗಿ 56 ವರ್ಷಗಳ ತರುವಾಯ 44 ನಿಯಮಗಳಿಗೆ ತಿದ್ದುಪಡಿ ತರಲಾಗಿದ್ದು, 1974ರಲ್ಲಿ ದೇವರಾಜು ಅರಸು ಭೂ ಸುಧಾರಣಾ ಕಾಯ್ದೆ 1961ಕ್ಕೆ 145 ಕಡೆ ತಿದ್ದುಪಡಿ ತಂದು ಕಾನೂನಿಗೆ ಸ್ವಾತಂತ್ರ್ಯ ನೀಡಲಾಗಿತ್ತು. ಅದಾದ ಬಳಿಕ ಸಮಗ್ರ ತಿದ್ದುಪಡಿ ತಂದಿರುವುದು ಇದೇ ಮೊದಲು. ಈ ತಿದ್ದುಪಡಿ ಮೂಲಕ ಕಂದಾಯ ನ್ಯಾಯಾಲಯಗಳನ್ನು ಪಾರದರ್ಶಕವಾಗಿ, ನಿಯಮಬದ್ಧವಾಗಿ ನಡೆಸಲು ಹಾಗೂ ಸಾರ್ವಜನಿಕರಿಗೆ ಸರಳ- ಸುಲಲಿತ ನ್ಯಾಯದಾನ ನೀಡಲು ಬದ್ಧವಾಗಿದೆ.
ಭೂ ಪರಿವರ್ತನೆಯನ್ನು ಸರಳೀಕೃತವಾಗಿ ಪ್ರಕ್ರಿಯೆಗೊಳಪಡಿಸಿ ರಾಜ್ಯವನ್ನು ಅಭಿವೃದ್ಧಿ ಪಥದತ್ತ ಸಾಗಿಸಲು ಹಾಗೂ ಬಂಡವಾಳ ಹೂಡಿಕೆಗೆ ಹೂಡಿಕೆದಾರರ ಸ್ನೇಹಿಯಾಗಿ ಖರೀದಿಸಲಾದ ಭೂಮಿಗೆ ಭೂ ಪರಿವರ್ತನೆ ನೀಡಲು ಈ ತಿದ್ದುಪಡಿ ತರಲಾಗಿದೆ ಎಂದು ಸರ್ಕಾರ ತಿಳಿಸಿದೆ.
ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ತಿದ್ದುಪಡಿಗೆ ಡಿಸೆಂಬರ್ 23 ರಂದು ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ.
ಇನ್ನು ಮುಂದೆ ಇವೆಲ್ಲವೂ ಸರಳೀಕರಣ
1. ಮಾಸ್ಟರ್ ಪ್ಲಾನ್ ಪ್ರಕಾರ ಭೂ ಬಳಕೆಗೆ ಪರಿವರ್ತನೆ ಅವಶ್ಯಕತೆ ತೆಗೆದು ಹಾಕಲಾಗಿದೆ. ಇಂತಹ ಪ್ರಕರಣಗಳಲ್ಲಿ ನೇರವಾಗಿ ಪ್ಲಾನ್ ಅಪ್ರೂವಲ್‌ಗೆ ಹೋಗಬಹುದು.
2. ಮಾಸ್ಟರ್ ಪ್ಲಾನ್ ಹೊರಗಿನ ಹಾಗೂ ಪರಿಭಾವಿತ ಭೂ ಪರಿವರ್ತನೆ (ಡೀಮ್ಡ್ ಕನ್ವರ್ಷನ್) ಈ ಹಿಂದೆ ಮೂರು ನಾಲ್ಕು ತಿಂಗಳು ಸಮಯ ತೆಗೆದುಕೊಳ್ಳುತ್ತಿತ್ತು. ಆದರೆ ಪ್ರಸ್ತುತ 30 ದಿನಗಳಲ್ಲಿ ಭೂ ಪರಿವರ್ತನೆ ಕಡ್ಡಾಯಗೊಳಿಸಲಾಗಿದೆ.
3. ಪರಿವರ್ತನೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.
4. ಜಿಲ್ಲಾಧಿಕಾರಿಗಳು 30ದಿನಗಳ ಒಳಗಾಗಿ ಸಂಬಂಧಿತ ಯಾವುದೇ ಇಲಾಖೆಯ ಜೊತೆಗೆ ಚರ್ಚಿಸಿ ಭೂ ಪರಿವರ್ತನೆಗೆ ಅವಕಾಶ ನೀಡಬಹುದು ಅಥವಾ ತಿರಸ್ಕರಿಸಬಹುದು.
5. 30 ದಿನಗಳ ಒಳಗಾಗಿ ಜಿಲ್ಲಾಧಿಕಾರಿಗಳು ಯಾವ ನಿರ್ಧಾರವೂ ತೆಗೆದುಕೊಳ್ಳದಿದ್ದಲ್ಲಿ, ಸ್ವಯಂ ಚಾಲಿತವಾಗಿ ಭೂ ಪರಿವರ್ತನೆಗೆ ಅವಕಾಶ ಲಭ್ಯವಾಗುತ್ತದೆ.
6. ಸಣ್ಣ ಕೈಗಾರಿಕೆಗಳು ಎರಡು ಎಕರೆವರೆಗೆ ಕೈಗಾರಿಕಾ ಉದ್ದೇಶಕ್ಕಾಗಿ ಭೂ ಪರಿವರ್ತನೆ ಅಗತ್ಯ ಇಲ್ಲ.












Click it and Unblock the Notifications