Lakshmi Hebbalkar: ಸುದ್ದಿಗೋಷ್ಠಿಯಲ್ಲಿ ಕಣ್ಣೀರು ಹಾಕಿದ ಲಕ್ಷ್ಮೀ ಹೆಬ್ಬಾಳ್ಕರ್
ಬೆಳಗಾವಿ ಡಿಸೆಂಬರ್ 20: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಅವಾಚ್ಯ ಪದ ಬಳಕೆ ಮಾಡಿದ ಪ್ರಕರಣ ಸದ್ಯ ರಾಜ್ಯ ರಾಜಕೀಯದಲ್ಲಿ ಕೋಲಾಹಲವನ್ನೇ ಸೃಷ್ಟಿ ಮಾಡಿದೆ. ಈ ವಿಚಾರದಲ್ಲಿ ವಿಧಾನ ಪರಿಷತ್‌ನ ಬಿಜೆಪಿ ಸದಸ್ಯ ಸಿಟಿ ರವಿ ಅವರ ವಿರುದ್ಧ ದೂರು ದಾಖಲಾಗಿದ್ದರೆ, ಇದಕ್ಕೆ ಪ್ರತಿಯಾಗಿ ಸಿಟಿ ರವಿ ಕೂಡ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ದೂರು ಕೊಟ್ಟಿದ್ದಾರೆ. ಈ ಬೆಳವಣಿಗೆಗಳ ನಡುವೆ ಸಿಟಿ ರವಿ ಅವರ ತಲೆಗೆ ಗಾಯವಾಗಿದ್ದು ವಿಷಯ ಮತ್ತಷ್ಟು ಗಂಭೀರ ಸ್ವರೂಪ ಪಡೆದುಕೊಂಡಿದೆ. ಈ ಬಗ್ಗೆ ಇಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕಣ್ಣೀರು ಹಾಕಿದ್ದಾರೆ.
ಬೆಳಗಾವಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಲಕ್ಷ್ಮೀ ಹೆಬ್ಬಾಳ್ಕರ್ ಅವರು,'ನಾನು ಸಿಟಿ ರವಿ ಅವರಿಗೆ ಕೊಲೆಗಡುಕ ಅಂದಿದ್ದು ನಿಜ, ಆದರೆ ಅವರು ನನಗೆ ಬಳಸಬಾರದ ಪದ ಬಳಸಿದರು' ಎಂದು ದುಃಖದಿಂದ ಮಾತನಾಡಿದ್ದಾರೆ. ಸಂವಿದಾನ ಶಿಲ್ಪಿ ಡಾ.ಬಿಆರ್ ಅಂಬೇಡ್ಕರ್ ಅವರಿಗೆ ಅವಮಾನವಾಗುವ ರೀತಿ ಗೃಹ ಕೇಂದ್ರ ಸಚಿವ ಅಮಿತ್ ಶಾ ಮಾತನಾಡಿದ್ದರು. ಅದನ್ನು ನಾವು ಖಂಡಿಸಿದೆವು. ಯಾಕೆಂದರೆ ಅವರಿಂದಲೇ ನಮಗೆ ಎಂಎಲ್‌ಎ ಮಂತ್ರಿ ಸ್ಥಾನ ಸಿಕ್ಕಿದೆ. ರಾಜಕೀಯದಲ್ಲಿ ರೋಷಾವೇಶ ಇರುತ್ತದೆ. ಆದರೆ ಇಷ್ಟೊಂದು ಕೆಟ್ಟ ಪದಗಳನ್ನು ಅವರು ಬಳಕೆ ಮಾಡಿದ್ದು ಸರಿ ಅಲ್ಲ. ನನಗೆ ಆ ಪದ ಬಳಕೆ ಮಾಡಲು ಕೂಡ ಅಸಯ್ಯವಾಗುತ್ತಿದೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಬೇಸರ ವ್ಯಕ್ತಪಡಿಸಿದರು.

'ಸಿಟಿ ರವಿ ಅವರು ಇದ್ದಕ್ಕಿದ್ದಂತೆ ಬಂದು ರಾಹುಲ್ ಗಾಂಧಿಗೆ ಡ್ರಗ್ ಎಡಿಕ್ಟ್ ಅಂದರು. ಆಗ ಸಹಜವಾಗಿ ಎಲ್ಲರಿಗೂ ಕೋಪ ಬಂತು. ಆಗ ನಾನು ಮಾತನಾಡಿದೆ. ತಾವು ಕೂಡ ಆಕ್ಸಿಡೆಂಟ್ ಮಾಡಿದ್ದೀರಿ ನೀವು ಕೊಲೆಗಾರರಾಗ್ತಿರಿ ಎಂದು ನಾನೂ ಅವರನ್ನು ಬೈದೆ. ಆಗ ಅವರು ನನಗೆ ಹೇಳಬಾರದ ಮಾತುಗಳನ್ನು ಪದೇ ಪದೇ ಹೇಳಿದರು. ಇದು ನನ್ನ ಮನಸ್ಸಿಗೆ ತುಂಬಾ ಘಾಸಿ ಮಾಡಿದೆ' ಎನ್ನುವಾಗ ಲಕ್ಷ್ಮೀ ಅವರು ಕಣ್ಣೀರು ಹಾಕಿದರು.
'ನನಗೆ ಇದ್ಯಾವ ಪದಗಳ ತಟ್ಟುವುದಿಲ್ಲ. ಆದರೆ ನಾನೊಬ್ಬ ಮಹಿಳೆ, ನಾನೊಬ್ಬ ತಾಯಿ, ಅತ್ತೆ ಕೂಡ ಹೌದು.. ನನಗೆ ಈ ರೀತಿ ಮಾತನಾಡಿದ್ದು ಅಪಮಾನವಾಗಿದೆ. ಇಲ್ಲಿವರೆಗೂ ನಾನು ಇರುವೆಗೂ ಕಾಟ ಕೊಟ್ಟವಳಲ್ಲ. ಕೆಟ್ಟವರಿಂದ ದೂರ ಇರೋಳು.. ನನಗೆ ಆ ವೇದಿಕೆಯಲ್ಲಿ ಸಿಟಿ ರವಿ ತುಂಬಾ ಕೆಟ್ಟದಾಗಿ ಮಾತನಾಡಿದರು. ಅಲ್ಲಿ ಎಲ್ಲರೂ ಧೃತರಾಷ್ಟ್ರರಾದರು. ನಮ್ಮ ಪಕ್ಷದವರು ಮಾತ್ರ ನನ್ನ ಬೆನ್ನಿಗೆ ನಿಂತರು' ಎಂದು ಕಣ್ಣೀರು ಹಾಕಿದರು ಲಕ್ಷ್ಮೀ ಹೆಬ್ಬಾಳ್ಕರ್.
'ಕೆಟ್ಟ ಪದ ಬಳಕೆ ಮಾಡಿ ನಂತರ ಇಲ್ಲ ಎಂದು ಸಿಟಿ ರವಿ ವಾದಿಸುತ್ತಿದ್ದಾರೆ. ಅಂಬೇಡ್ಕರ್ ಗೆ ಅವಮಾನ ಮಾಡಿರುವುದನ್ನು ಪ್ರಶ್ನೆ ಮಾಡಿದ್ದಕ್ಕೆ ರಾಹುಲ್ ಗಾಂಧಿ ಅವರಿಗೆ ಮಾತಾಡ್ತಾರೆ, ನನ್ನ ಬಗ್ಗೆ ಕೂಡ ಮಾತಾಡಿದ್ರು. ಇದರ ಅರ್ಥ ಏನು? ಎಂದು ಲಕ್ಷ್ಮೀ ಅವರು ಪ್ರಶ್ನೆ ಮಾಡಿದ್ದಾರೆ.
ಸಿಟಿ ರವಿ ಜಾಮೀನು ಅರ್ಜಿ ವಿಚಾರಣೆ
ಘಟನೆ ಬಳಿಕ ಸಿಟಿ ರವಿ ಅವರನ್ನು ಬಂಧಿಸಲಾಗಿದೆ. ಪ್ರಸ್ತುತ ಬೆಳಗಾವಿಯ JMFC ಕೋರ್ಟ್‌ಗೆ ಸಿಟಿ ರವಿ ಅವರನ್ನು ಹಾಜರುಪಡಿಸಲಾಯಿತು. ಈ ವೇಳೆ ಸಿಟಿ ರವಿ ಬೇಲ್ ಆದೇಶವನ್ನು ಕಾಯ್ದಿರಿಸಲಾಗಿದೆ. ಮಧ್ಯಾಹ್ನ ಮೂರು ಗಂಟೆಗೆ ಜಾಮೀನು ಅರ್ಜಿ ವಿಚಾರಣೆಯನ್ನು ನಡೆಸುವ ಸಾಧ್ಯತೆ ಇದೆ. ಬಳಿಕವಷ್ಟೇ ಸಿಟಿ ರವಿ ಅವರಿಗೆ ಜೈಲಾ? ಅಥವಾ ಬೇಲಾ? ಎನ್ನುವುದು ಗೊತ್ತಾಗಲಿದೆ.
ಚಿಕ್ಕಮಗಳೂರಿನಲ್ಲಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ
ಇನ್ನೂ ಸಿಟಿ ರವಿ ಬಂಧನವನ್ನು ಖಂಡಿಸಿ ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ಮಾಡುತ್ತಿದ್ದಾರೆ. ಸರ್ಕಾರ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ಅವರ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ. ಸಿಟಿ ರವಿ ಅವರು ಯಾವ ಹೆಣ್ಣಿಗೂ ಏಕ ವಚನದಲ್ಲಿ ಮಾತನಾಡಿದ ವ್ಯಕ್ತಿ ಅಲ್ಲ. ಹೀಗಿರುವಾಗ ಕೆಟ್ಟ ಪದ ಬಳಕೆ ಮಾಡಲು ಹೇಗೆ ಸಾಧ್ಯ? ಅದಕ್ಕೆ ಸಾಕ್ಷಿ ಎಲ್ಲಿದೆ? ಅದನ್ನು ತೋರಿಸಿ ಎಂದು ಪ್ರತಿಭಟನಾಕಾರರು ಆಕ್ರೋಶಗೊಂಡಿದ್ದಾರೆ. ಜೊತೆಗೆ ಗದಗ, ದಕ್ಷಿಣ ಕನ್ನಡ, ಮೈಸೂರಿನಲ್ಲೂ ಬಿಜೆಪಿ ಕಾರ್ಯಕರ್ತರು ಸಿಟಿ ರವಿ ಬಂಧನವನ್ನು ಖಂಡಿಸಿ ಪ್ರತಿಭಟನೆ ಮಾಡುತ್ತಿದ್ದಾರೆ.












Click it and Unblock the Notifications