‘ಹೇ ಹುಚ್ಚು ನಾಯಿ ಕಡಿದಿದೆಯಾ ನಿನಗೆ?’ ವಿಧಾನಸಭೆ ಅಧಿವೇಶನದಲ್ಲಿ ಹಿಂಗೆ ಕೇಳಿದ್ಯಾರು?
ವಿಧಾನಸಭೆ ಅನ್ನೋದು ಪ್ರಜಾಪ್ರಭುತ್ವದ ದೇಗುಲ ಇದ್ದಂತೆ, ಆದರೆ ಆಧುನಿಕ ಕಾಲದಲ್ಲಿ ಈ ಮಾತಿಗೆ ಬೆಲೆ ಉಳಿದಿಲ್ಲ. ಅದ್ರಲ್ಲೂ ಕರ್ನಾಟಕದ ವಿಧಾನಸಭೆ ಅದೆಷ್ಟೋ ಸಲ ಹೀಗೆ ಭರ್ಜರಿ ಫೈಟಿಂಗ್‌ಗೂ ಸಾಕ್ಷಿಯಾಗಿದೆ. ಈಗ ಬೆಳಗಾವಿ ಅಧಿವೇಶನದಲ್ಲೂ ಗಡಿನಾಡಿನಲ್ಲಿರುವ ಸುವರ್ಣಸೌಧ ಇಂತಹ ಘಟನೆಗೆ ಸಾಕ್ಷಿಯಾಗಿದೆ. ಸದನದಲ್ಲಿಯೇ ಶಾಸಕರೊಬ್ಬರು, ವಿಪಕ್ಷ ಶಾಸಕರಿಗೆ 'ಹೇ ಹುಚ್ಚು ನಾಯಿ ಕಡಿದಿದೆಯಾ ನಿನಗೆ?' ಅಂತಾ ಪ್ರಶ್ನೆ ಕೇಳಿದ್ದಾರೆ!
5 ರಾಜ್ಯಗಳ ಫಲಿತಾಂಶದ ಬಳಿಕ ಬಿಜೆಪಿ & ಜೆಡಿಎಸ್ ನಾಯಕರು ಕರ್ನಾಟಕ ಕಾಂಗ್ರೆಸ್‌ನ ನಾಯಕರ ವಿರುದ್ಧ ವಾಗ್ದಾಳಿ ಜೋರಾಗಿಸಿದ್ದಾರೆ. ಈ ಪೈಕಿ ಕಾಂಗ್ರೆಸ್ ಸರ್ಕಾರದ ವಿರುದ್ಧ ದಿನಕ್ಕೊಂದು ಗಂಭೀರ ಆರೋಪ ಕೇಳಿಬರುತ್ತಿದೆ. ಇದೀಗ ವಿಧಾನಸಭೆ ಅಧಿವೇಶನ ಕೂಡ 3 ಪಕ್ಷಗಳ ಮಧ್ಯೆ ರಣಾಂಗಣಕ್ಕೆ ಕಾರಣವಾಗಿದೆ. ಇದೇ ರೀತಿ ಇಂದು ವಿಧಾನಸಭೆ ಅಧಿವೇಶನ ನಡೆಯುವಾಗ ಬಿಜೆಪಿ ನಾಯಕರು ರೊಚ್ಚಿಗೆದ್ದು ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಬಿಜೆಪಿ ಶಾಸಕರೆಲ್ಲಾ ಸದನದ ಬಾವಿಗೆ ಇಳಿದು ಪ್ರತಿಭಟನೆ ಮಾಡುವಾಗ ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ಮಾತು ಆರಂಭಿಸಿದ್ದರು. ಇನ್ನೊಂದ್ಕಡೆ ಬಿಜೆಪಿ ಶಾಸಕರು ಭಾರಿ ಘೋಷಣೆ ಕೂಗುತ್ತಾ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದರು. ಹೀಗಿದ್ದಾಗ ನೋಡಿ ಯುದ್ಧ ಶುರುವಾಗಿದ್ದು. ಶಾಸಕರು ಪರಸ್ಪರ ಏಕವಚನ ಬಳಸಿ ವಾಗ್ದಾಳಿ ನಡೆಸಿದ್ದು!
'ಹೇ ಹುಚ್ಚು ನಾಯಿ ಕಡಿದಿದೆಯಾ ನಿನಗೆ?'
ಅಷ್ಟಕ್ಕೂ ಮೊದಲೇ ಸಮಯ ನಿಗದಿ ಆಗಿದ್ದಂತೆ ಬೆಳಗಾವಿ ಶಾಸಕರೇ ಆಗಿರುವ ಲಕ್ಷ್ಮಣ ಸವದಿ ಅವರು ಕಬ್ಬು ಬೆಳೆಗಾರರ ಸಮಸ್ಯೆ ಬಗ್ಗೆ ಚರ್ಚೆ ಮಾಡಬೇಕಿತ್ತು. ಆದ್ರೆ ಈ ವೇಳೆ ಬಿಜೆಪಿ, ಕಾಂಗ್ರೆಸ್ ನಡುವೆ ಜಟಾಪಟಿ ಶುರುವಾಗಿತ್ತು. ಆಗ ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ಪದೇ ಪದೆ ಬಿಜೆಪಿ ಶಾಸಕರನ್ನ ಸುಮ್ಮನೆ ಇರುವಂತೆ ವಿನಂತಿ ಮಾಡಿಕೊಂಡರು. ಆಗ ಬಿಜೆಪಿಯ ಶಾಸಕರು ಮಾತು ಕೇಳಲಿಲ್ಲ. ಕೊನೆಗೆ, ನಿಮಗೆಲ್ಲಾ ಉತ್ತರ ಕರ್ನಾಟಕದ ರೈತರ ಬದುಕಿನ ಬಗ್ಗೆ ಕಾಳಜಿ ಇಲ್ಲ ಎಂದು ಬಿಜೆಪಿ ಶಾಸಕರ ವಿರುದ್ಧ ಲಕ್ಷ್ಮಣ ಸವದಿ ಆರೋಪಿಸಿದರು. ಈ ವೇಳೆ ಕಿತ್ತಾಟ ಮತ್ತಷ್ಟು ಜೋರಾಯ್ತು. ಆಗ ಲಕ್ಷ್ಮಣ ಸವದಿ ಏನ್ ಹೇಳಿದ್ರು ಗೊತ್ತಾ?

ಹೌದು, ಉತ್ತರ ಕರ್ನಾಟಕ ಭಾಗದ ಕಬ್ಬು ಬೆಳೆಗಾರರ ಸಮಸ್ಯೆ ಬಗ್ಗೆ ಲಕ್ಷ್ಮಣ ಸವದಿ ತಮ್ಮ ಮಾತು ಆರಂಭಿಸಿದ ನಂತರ ಜಗಳ ಜೋರಾಗಿತ್ತು. ಪ್ರಮುಖವಾಗಿ ಬೆಳಗಾವಿ ಜಿಲ್ಲೆಯ ಸ್ಥಿತಿ ಬಗ್ಗೆ ಮತ್ತು ಕಬ್ಬು ಬೆಳೆಗಾರರ ಸಂಕಷ್ಟದ ಬಗ್ಗೆ ಲಕ್ಷ್ಮಣ ಸವದಿ ಮಾತನ್ನ ಆರಂಭಿಸಿದ್ದರು. ಈ ಸಮಯದಲ್ಲಿ, ಬಿಜೆಪಿ ಶಾಸಕರು ಜೋರಾಗಿ ಘೋಷಣೆ ಕೂಗುತ್ತಿದ್ದರು. ತಕ್ಷಣ ಲಕ್ಷ್ಮಣ ಸವದಿ ಕೂಡ ಗರಂ ಆಗಿ 'ಹೇ ಹುಚ್ಚು ನಾಯಿ ಕಡಿದಿದೆಯಾ ನಿನಗೆ?' ಅಂತಾ ಬಿಜೆಪಿಯ ಶಾಸಕರ ಕಡೆ ಕೈ ತೋರಿಸಿ ಬೈದರು. ಆಗ ಎರಡೂ ಕಡೆ ಏಕವಚನ ಪ್ರಯೋಗ ಆಗಿದೆ.
ಸಾಮಾನ್ಯ ಜನರ ಬಗ್ಗೆ ಚರ್ಚೆ ನಡೆಯಲ್ವಾ?
ಒಟ್ನಲ್ಲಿ ಸಾಮಾನ್ಯರ ಸಮಸ್ಯೆ ಚರ್ಚೆಗೆ ಮೀಸಲಾಗಬೇಕಿದ್ದ ವಿಧಾನಸಭೆ ಸಂಪೂರ್ಣ ಈಗ ರಾಜಕೀಯ ರಣರಂಗವಾಗಿದೆ. ಇನ್ನೂ ಕೆಲವು ದಿನಗಳ ಕಾಲ ಬಿಜೆಪಿ & ಕಾಂಗ್ರೆಸ್ ನಡುವೆ ಈ ಕಿತ್ತಾಟ ಹಾಗೂ ತಿಕ್ಕಾಟ ಮತ್ತಷ್ಟು ಜೋರಾಗುವ ಮುನ್ಸೂಚನೆ ಇದೆ. ಆದರೆ ಜನಗಳ ಸಮಸ್ಯೆ ಬಗ್ಗೆ ಯಾವಾಗ ಚರ್ಚೆ ಮಾಡ್ತಾರೆ? ಅಂತಾ ಕನ್ನಡಿಗರು ಪ್ರಶ್ನೆ ಕೇಳುತ್ತಿದ್ದಾರೆ. ಈ ಪ್ರಶ್ನೆಗೆ ಉತ್ತರ ಈ ಅಧಿವೇಶನದಲ್ಲಿ ಸಿಗುತ್ತೋ, ಅಥವಾ ಮುಂದಿನ ಅಧಿವೇಶನಕ್ಕೆ ಉತ್ತರ ಮುಂದೂಡಿಕೆ ಆಗುತ್ತೋ ಗೊತ್ತಿಲ್ಲ!












Click it and Unblock the Notifications