Get Updates
Get notified of breaking news, exclusive insights, and must-see stories!

Lakkundi: ಲಕ್ಕುಂಡಿ ಉತ್ಖನನ ಸ್ಥಗಿತಕ್ಕೆ ನಿರ್ಧಾರ: ಬಂಗಾರ ಸಿಗದಿದ್ದರೂ ಚಾಲುಕ್ಯ-ಹೊಯ್ಸಳರ ಕಾಲದ ಅವಶೇಷಗಳು ಪತ್ತೆ

ಕಳೆದ ಒಂದು ತಿಂಗಳಿನಿಂದ ದೇಶಾದ್ಯಂತ ಕುತೂಹಲ ಮೂಡಿಸಿದ್ದ ಗದಗ ಜಿಲ್ಲೆಯ ಲಕ್ಕುಂಡಿಯ ಪುರಾತತ್ವ ಉತ್ಖನನವು ಅಂತಿಮ ಹಂತ ತಲುಪಿದ್ದು, ಮುಂದಿನ 5-6 ದಿನಗಳಲ್ಲಿ ಮುಕ್ತಾಯಗೊಳ್ಳಲಿದೆ. ಲಕ್ಕುಂಡಿಯಲ್ಲಿ ಈ ಹಿಂದೆ ಮನೆ ನಿರ್ಮಾಣಕ್ಕಾಗಿ ಗುಂಡಿ ತೋಡುವಾಗ ಬಂಗಾರದ ಆಭರಣಗಳು ಪತ್ತೆಯಾದ ಬೆನ್ನಲ್ಲೇ ಈ ಉತ್ಖನನ ಆರಂಭವಾಗಿದ್ದರಿಂದ, ಇಲ್ಲಿ ಮತ್ತಷ್ಟು ಚಿನ್ನ ಸಿಗಬಹುದು ಎಂಬ ನಿರೀಕ್ಷೆ ಜನರಲ್ಲಿತ್ತು. ಆದರೆ ಇಲಾಖೆಯು ಈಗ ಉತ್ಖನನವನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ.

ಉತ್ಖನನವು ಈಗ ನೈಸರ್ಗಿಕ ಮಣ್ಣಿನ ಮಟ್ಟವನ್ನು ತಲುಪಿದೆ. ಸುಮಾರು 9ರಿಂದ 10 ಅಡಿ ಆಳದವರೆಗೆ ಅಗೆದ ನಂತರ ಮಣ್ಣಿನ ಮೂಲ ಸ್ತರ ಕಂಡುಬಂದಿದೆ. ಪುರಾತತ್ವ ಶಾಸ್ತ್ರದ ನಿಯಮದಂತೆ, ನೈಸರ್ಗಿಕ ಮಣ್ಣಿನ ಪದರ ಸಿಕ್ಕಿದ ಮೇಲೆ ಮುಂದಕ್ಕೆ ಅಗೆಯುವ ಅಗತ್ಯವಿರುವುದಿಲ್ಲ. ಪ್ರಸ್ತುತ ನಾಲ್ಕು ಬ್ಲಾಕ್‌ಗಳ ನಡುವಿನ 50 ಸೆಂಟಿಮೀಟರ್ ಹಾದಿಯನ್ನು ಅಗೆಯುವ ಕೆಲಸ ಬಾಕಿ ಇದ್ದು, ಅದು ಮುಗಿದ ನಂತರ ಚಟುವಟಿಕೆಗಳು ಸಂಪೂರ್ಣ ಸ್ಥಗಿತಗೊಳ್ಳಲಿವೆ ಎಂದು ಹಂಪಿ ಪುರಾತತ್ವ ಇಲಾಖೆಯ ನಿರ್ದೇಶಕ ಶೇಜೇಶ್ವರ ಹೇಳಿದ್ದಾರೆ.

Lakkundi Excavation

ಉತ್ಖನನದಲ್ಲಿ ಪತ್ತೆಯಾದ ಮಹತ್ವದ ಅವಶೇಷಗಳು

ಬಂಗಾರ ಸಿಗದಿದ್ದರೂ, ಇತಿಹಾಸ ಪ್ರೇಮಿಗಳಿಗೆ ಮತ್ತು ಸಂಶೋಧಕರಿಗೆ ಲಕ್ಕುಂಡಿಯು ಅಮೂಲ್ಯವಾದ ಕಲಾಕೃತಿಗಳನ್ನು ನೀಡಿದೆ. ಏಳು ಹೆಡೆಯ ಆದಿಶೇಷ, ದ್ವಾರಪಾಲಕರ ವಿಗ್ರಹಗಳು ಮತ್ತು ಅಲಂಕಾರಿಕ ಶಿಲಾಖಂಡಗಳು, ಪ್ರಾಚೀನ ಶಿಲಾಶಾಸನಗಳು ಮತ್ತು ದಾನಶಾಸನದ ಫಲಕಗಳು ಉತ್ಖನನದ ವೇಳೆ ಪತ್ತೆಯಾಗಿವೆ. ಇಲ್ಲಿ ದೊರೆತ ಕೆತ್ತನೆಗಳು ಕಲ್ಯಾಣ ಚಾಲುಕ್ಯ, ಹೊಯ್ಸಳ ಮತ್ತು ಬಾದಾಮಿ ಚಾಲುಕ್ಯರ ಕಾಲಕ್ಕೆ ಸೇರಿವೆ ಎಂಬುದು ದೃಢಪಟ್ಟಿದೆ. ಉತ್ಖನನದ ವೇಳೆ ಮಾನವ ಅಸ್ಥಿಪಂಜರದ ಅವಶೇಷಗಳೂ ಪತ್ತೆಯಾಗಿವೆ.

ಉತ್ಖನನ ಬಂಗಾರಕ್ಕಾಗಿ ನಡೆದಿದ್ದಲ್ಲ

ಈ ಉತ್ಖನನವು ಬಂಗಾರಕ್ಕಾಗಿ ನಡೆದಿದ್ದಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ. ನಾವು ಇತಿಹಾಸ ಮತ್ತು ಕಲಾಕೃತಿಗಳನ್ನು ಹೊರತೆಗೆಯಲು ಈ ಯೋಜನೆಯನ್ನು ಮೊದಲೇ ರೂಪಿಸಿದ್ದೆವು. ಮನೆ ಕಟ್ಟುವಾಗ ಚಿನ್ನ ಸಿಕ್ಕಿದ್ದಕ್ಕೂ ಈ ಉತ್ಖನನಕ್ಕೂ ಸಂಬಂಧವಿಲ್ಲ ಎಂದು ನಿರ್ದೇಶಕರು ತಿಳಿಸಿದ್ದಾರೆ. ಆರಂಭದಲ್ಲಿ 3-4 ತಿಂಗಳು ಉತ್ಖನನ ನಡೆಯಲಿದೆ ಎಂದು ಹೇಳಲಾಗಿತ್ತು. ಆದರೆ ಈಗ ಹಠಾತ್ ಸ್ಥಗಿತಗೊಳಿಸಿರುವುದು ಸಾರ್ವಜನಿಕರಲ್ಲಿ ಕೆಲವು ಪ್ರಶ್ನೆಗಳನ್ನೂ ಮೂಡಿಸಿದೆ.

Lakkundi Excavation

ಈಗಾಗಲೇ ಉತ್ಖನನ ಪ್ರದೇಶದ ಸಂಪೂರ್ಣ ಚಿತ್ರಣವನ್ನು ಡ್ರೋನ್ ಕ್ಯಾಮೆರಾಗಳ ಮೂಲಕ ದಾಖಲಿಸಲಾಗಿದೆ. ಶೀಘ್ರದಲ್ಲೇ ಇಲಾಖೆಯು ಸರ್ಕಾರಕ್ಕೆ ಸಮಗ್ರ ವರದಿಯನ್ನು ಸಲ್ಲಿಸಲಿದೆ. ಮತ್ತೊಂದು ಜಾಗದಲ್ಲಿ ಉತ್ಖನನ ಆರಂಭಿಸಬೇಕಾದರೆ ಪ್ರವಾಸೋದ್ಯಮ ಇಲಾಖೆ ಮತ್ತು ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರವು ಹೊಸ ತೀರ್ಮಾನ ಕೈಗೊಳ್ಳಬೇಕಿದೆ. ಲಕ್ಕುಂಡಿಯು ಕೇವಲ ಚಿನ್ನದ ಗಣಿಯಲ್ಲ, ಬದಲಾಗಿ ಅದೊಂದು ಶಿಲ್ಪಕಲೆಯ ಮಹಾನ್ ಭಂಡಾರ ಎಂಬುದು ಈ ಉತ್ಖನನದಿಂದ ಸಾಬೀತಾಗಿದೆ. ಸಿಕ್ಕಿರುವ ಶಾಸನಗಳು ಮತ್ತು ವಿಗ್ರಹಗಳು ಉತ್ತರ ಕರ್ನಾಟಕದ ಇತಿಹಾಸದ ಮೇಲೆ ಹೊಸ ಬೆಳಕು ಚೆಲ್ಲಲಿವೆ.

ತಜ್ಞರ ಸಮಿತಿ ರಚನೆ

ಗದಗ ಜಿಲ್ಲೆಯ ಲಕ್ಕುಂಡಿಯ ಇತಿಹಾಸ ಪ್ರಸಿದ್ಧ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಇತ್ತೀಚೆಗೆ ನಡೆದ ಉತ್ಖನನದ ವೇಳೆ ಪತ್ತೆಯಾದ ಮಹತ್ವದ ಅವಶೇಷಗಳ ವೈಜ್ಞಾನಿಕ ಅಧ್ಯಯನಕ್ಕಾಗಿ ಸರ್ಕಾರವು ಈಗ ಉನ್ನತ ಮಟ್ಟದ ತಜ್ಞರ ಸಮಿತಿಯನ್ನು ರಚಿಸಿದೆ. ಖ್ಯಾತ ಪುರಾತತ್ವ ಶಾಸ್ತ್ರಜ್ಞ ಎಂ.ಎಸ್. ಕೃಷ್ಣಮೂರ್ತಿ ಅವರ ಅಧ್ಯಕ್ಷತೆಯಲ್ಲಿ ಈ ಸಮಿತಿ ರಚನೆಯಾಗಿದ್ದು, ಇತಿಹಾಸ ತಜ್ಞರಾದ ಡಾ. ರಾಘವೇಂದ್ರ ರಾವ್ ಎಚ್. ಕುಲಕರ್ಣಿ, ಪ್ರೊ. ಚೂಡಾಮಣಿ ನಂದಗೋಪಾಲ, ಹನುಮಾಕ್ಷಿ ಗೋಗಿ ಮತ್ತು ರತ್ನಶಾಸ್ತ್ರಜ್ಞ ಪ್ರಭು ಕುಮಾರ ಅವರು ಸದಸ್ಯರಾಗಿ ಕಾರ್ಯನಿರ್ವಹಿಸಲಿದ್ದಾರೆ. ಹಂಪಿಯ ಪುರಾತತ್ವ ಇಲಾಖೆಯ ನಿರ್ದೇಶಕ ಡಾ. ಆರ್. ಶೇಜೇಶ್ವರ ಅವರನ್ನು ಈ ಸಮಿತಿಯ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿದೆ.

ಈ ವಿಶೇಷ ಸಮಿತಿಯು ಉತ್ಖನನದಲ್ಲಿ ದೊರೆತಿರುವ ಕಲಾಕೃತಿಗಳು ಹಾಗೂ ಅವಶೇಷಗಳ ನಿಖರವಾದ ಕಾಲಗಣನೆ, ಅವುಗಳ ಅಂದಿನ ಕಾಲದ ಬಳಕೆ ಮತ್ತು ಮೌಲ್ಯಮಾಪನದ ಕುರಿತು ಆಳವಾದ ಸಂಶೋಧನೆ ನಡೆಸಲಿದೆ. ವಿಶೇಷವಾಗಿ ಲಕ್ಕುಂಡಿಯಲ್ಲಿ ಈ ಹಿಂದೆ ಪತ್ತೆಯಾದ ಚಿನ್ನದ ಆಭರಣಗಳು ಮತ್ತು ಈಗಿನ ಉತ್ಖನನದಲ್ಲಿ ದೊರೆತ ಆದಿಶೇಷ, ದ್ವಾರಪಾಲಕ ವಿಗ್ರಹಗಳು ಹಾಗೂ ಶಾಸನಗಳ ಐತಿಹಾಸಿಕ ಸಂಬಂಧವನ್ನು ಈ ಸಮಿತಿ ವಿಶ್ಲೇಷಿಸಲಿದೆ. ಸಮಿತಿಯು ತನ್ನ ಅಧ್ಯಯನವನ್ನು ಪೂರ್ಣಗೊಳಿಸಿ ಮುಂದಿನ 15 ದಿನಗಳ ಒಳಗಾಗಿ ಸರ್ಕಾರಕ್ಕೆ ಸಮಗ್ರ ವರದಿಯನ್ನು ಸಲ್ಲಿಸಬೇಕೆಂದು ಸೂಚಿಸಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+