Monsoon ಮಳೆ ಅಭಾವ: 77 ಅಡಿಗೆ ಕುಸಿದ KRS ಅಣೆಕಟ್ಟೆ ನೀರಿನ ಮಟ್ಟ
ಮೈಸೂರು, ಜೂನ್ 26: ಕೃಷ್ಣರಾಜಸಾಗರ ಅಣೆಕಟ್ಟೆಯಲ್ಲಿ (KRS) ಗರಿಷ್ಠ 124.80 ಅಡಿ ಇದ್ದ ನೀರಿನ ಮಟ್ಟ 77.68 ಅಡಿಗೆ ಕುಸಿದಿದೆ. ಅಣೆಕಟ್ಟೆಗೆ ಒಳಹರಿವು 552 ಕ್ಯೂಸೆಕ್ ಇದೆ. ಸದ್ಯ ಈಗ ಕಾಲುವೆಗಳಿಗೆ ನೀರು ಬಿಡುವುದನ್ನು ನಿಲ್ಲಿಸಲಾಗಿದೆ.
ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳ ಪ್ರಕಾರ, ಅಣೆಕಟ್ಟಿನಲ್ಲಿ ನೀರು ಸಂಗ್ರಹಣೆ 74 ಅಡಿಗಿಂತ ಕಡಿಮೆಯಾದರೆ ಕುಡಿಯುವ ಅಗತ್ಯಕ್ಕೆ ಮಾತ್ರ ಬಳಸಲಾಗುತ್ತದೆ ಎಂದು ತಿಳಿಸಲಾಗಿದೆ. 2022ರಲ್ಲಿ ಇದೇ ಜೂನ್ ತಿಂಗಳಲ್ಲಿ ನೀರಿನ ಮಟ್ಟ 106.60 ಅಡಿಯಷ್ಟಿತ್ತು.

ರಾಜ್ಯದಲ್ಲಿ ಮುಂಗಾರು ಮಳೆ ಕುಂಠಿತವಾಗಿದ್ದು, ಸಾಕಷ್ಟು ಮಳೆ ಬೀಳದೆ ಇರುವುದರಿಂದ ನೀರಿನ ಕೊರತೆ ಸೃಷ್ಟಿಯಾಗುವ ಆತಂಕ ಎದುರಾಗಿದೆ. ಈ ನಿಟ್ಟಿನಲ್ಲಿ ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಕೊರತೆಯಿಂದಾಗಿ ಕೃಷ್ಣರಾಜಸಾಗರ ಅಣೆಕಟ್ಟೆಯಲ್ಲಿ ಗರಿಷ್ಠ 124.80 ಅಡಿ ಇದ್ದ ನೀರಿನ ಮಟ್ಟ 77.68 ಅಡಿಗೆ ಕುಸಿದಿದೆ.
ರಾಜ್ಯದ ಪ್ರಮುಖ ಜಲಾಶಯಗಳಾದ ಮಂಡ್ಯ ಜಿಲ್ಲೆಯ ಕೆಆರ್‌ಎಸ್ ಅಣೆಕಟ್ಟು ಮತ್ತು ವಿಜಯನಗರ ಜಿಲ್ಲೆಯ ತುಂಗಭದ್ರಾ ಜಲಾಶಯಗಳ ಒಳಹರಿವು ಕಡಿಮೆಯಾಗಿದೆ. ಕೆಆರ್ ಎಸ್ ನಲ್ಲಿ ಜೂನ್ 24ಕ್ಕೆ 9.93 ಟಿಎಂಸಿ ಸಂಗ್ರಹವಿದ್ದು, ಕಳೆದ ವರ್ಷ ಇದೇ ದಿನ 28.35 ಟಿಎಂಸಿ ಸಂಗ್ರಹವಾಗಿತ್ತು. ಅದೇ ರೀತಿ, ಕಳೆದ ವರ್ಷ 43.92 ಟಿಎಂಸಿಯಷ್ಟಿದ್ದ ತುಂಗಭದ್ರಾದಲ್ಲಿ ಪ್ರಸ್ತುತ 4.18 ಟಿಎಂಸಿ ನೀರು ಇತ್ತು.
ಕೆಆರ್‌ಎಸ್ ಜಲಾಶಯದಲ್ಲಿರುವ ನೀರು ಜುಲೈ 2ನೇ ವಾರದವರೆಗೆ ಕುಡಿಯಲು ಬಳಕೆಯಾಗುತ್ತದೆ. ಒಂದು ವೇಳೆ ಉತ್ತಮ ಮಳೆಯಾಗದಿದ್ದಲ್ಲಿ ಕಾವೇರಿ ನೀರು ಅವಲಂಬಿತ ಜನರಿಗೆ ಕುಡಿಯುವ ನೀರಿಗೂಸಮಸ್ಯೆ ಎದುರಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

124.80 ಗರಿಷ್ಠ ಮಟ್ಟದ ಡ್ಯಾಂನಲ್ಲಿ 77.005 ಅಡಿಯಷ್ಟೇ ನೀರಿದೆ. ಕೆಆರ್‌ಎಸ್ ಡ್ಯಾಂ 49.452 ಟಿಎಂಸಿ ಗರಿಷ್ಠ ಸಾಮರ್ಥ್ಯ ಹೊಂದಿದ್ದರೂ ಈಗ ಇರೋದು 9.808 ಟಿಎಂಸಿ ನೀರು ಮಾತ್ರ. ಈ ಪೈಕಿ 2.808 ಟಿಎಂಸಿ ಮಾತ್ರ ಬಳಕೆಗೆ ಯೋಗ್ಯವಾಗಿದೆ. ಉಳಿದ 7 ಟಿಎಂಸಿ ನೀರು ಡೆಡ್ ಸ್ಟೋರೇಜ್ ಆಗಿದೆ. ಸದ್ಯ ಜಲಾಶಯಕ್ಕೆ 514 ಕ್ಯೂಸೆಕ್ ನೀರು ಒಳಹರಿವು ಇದೆ.
ಮುಂಗಾರು ಮಳೆ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಕಳೆದ ವಾರ ಮಳೆಗಾಗಿ ಕೆಆರ್‍ಎಸ್ ಜಲಾಶಯದ ಕಾವೇರಿ ಪ್ರತಿಮೆ ಬಳಿ ವರುಣ ಕೃಪೆಯ ಪರ್ಜನ್ಯ ಹೋಮ ನಡೆದಿತ್ತು. ಶ್ರೀರಂಗಪಟ್ಟಣ ಕ್ಷೇತ್ರದ ಶಾಸಕ ರಮೇಶ್ ಬಂಡಿಸಿದ್ದೇಗೌಡ ಕಾವೇರಿ ಮಾತೆಗೆ ಪೂಜೆ ಸಲ್ಲಿಸಿ ಮಳೆರಾಯನಿಗಾಗಿ ಪ್ರಾರ್ಥನೆ ಸಲ್ಲಿಸಿ ಪೂಜಾ ಕೈಂಕರ್ಯಗಳ ಮಹಾಗಣಪತಿ ಪೂಜೆ, ಸಂಕಲ್ಪ ಬಳಿಕ ಜಪ ಮಾಡುವ ಮೂಲಕ ವೈದಿಕರು ಆರಂಭಿಸಿದ್ದರು.
ಕಳೆದ ಎರಡು ದಿನಗಳ ಹಿಂದೆ ಮಳೆಗಾಗಿ ಕಪ್ಪೆಗಳು ಹಾಗೂ ಕತ್ತೆಗಳಿಗೆ ಮದುವೆ ಮಾಡಿಸುವ ರೂಢಿಯಂತೆ ಮಂಡ್ಯದ ಗಂಗೇನಹಳ್ಳಿ ಗ್ರಾಮಸ್ಥರು ಮಳೆಗಾಗಿ ಪ್ರಾರ್ಥನೆ ಮಾಡಿ ಇಬ್ಬರು ಹುಡುಗರಿಗೆ ಮದುವೆಯನ್ನು ಮಾಡಿದ್ದಾರೆ. ಅಲ್ಲದೆ ವರುಣ ದೇವರನ್ನು ಸಮಾಧಾನಪಡಿಸಲು ಮತ್ತು ರಾಜ್ಯಕ್ಕೆ ಉತ್ತಮ ಮಳೆ ತರಲು ಸಾಂಕೇತಿಕವಾಗಿ ಹಬ್ಬವನ್ನು ಸಹ ಏರ್ಪಡಿಸಿದ್ದರು.
ನೀರು ಕಡಿಮೆಯಾದ ಬೆನ್ನಲ್ಲೇ ಕೆ.ಆರ್.ಸಾಗರ ಅಣೆಕಟ್ಟೆಯ ಹಿನ್ನೀರಿನಲ್ಲಿ ಅಕ್ರಮವಾಗಿ ಟನ್‌ಗಟ್ಟಲ್ಲೆ ಕೆಂಪು ಮಣ್ಣು ತೆಗೆದು ಇಟ್ಟಿಗೆ ಕಾರ್ಖಾನೆಗೆ ಸಾಗಿಸಲಾಗುತ್ತಿದೆ. ಅಣೆಕಟ್ಟೆಯಲ್ಲಿ ನೀರಿನ ಮಟ್ಟ ಕುಸಿಯುತ್ತಿದಂತೆಯೇ ಅಕ್ರಮ ಮಣ್ಣುಗಾರಿಕೆ ಜೋರಾಗಿ ನಡೆಯುತ್ತಿದ್ದು, ಅಧಿಕಾರಿಗಳಿಗೂ ಹೆದರದೆ ಹಿನ್ನೀರಿನಲ್ಲಿ ಹಲವು ಕಡೆ ಮಣ್ಣು ತೆಗೆದು ಗುಂಡಿಯಾಗಿದೆ ಎಂದು ವರದಿಗಳು ತಿಳಿಸಿವೆ.
ಕೆ.ಆರ್.ಸಾಗರ ಹಿನ್ನೀರಿನ ಪ್ರದೇಶಗಳಾದ ಬೋರೆ ಆನಂದೂರು, ಮೀನಾಕ್ಷಿಪುರ, ಎಡಹಳ್ಳಿ, ಹೊಸಕೋಟೆ, ಮೂಲೆಪೆಟ್ಲು ಸೇರಿದಂತೆ ಇತರೆಡೆ ನೀರು ಸಂಗ್ರಹ ಕಡಿಮೆಯಾದ ಹಿನ್ನೀರಿನ ಒಳಗಡೆ ಪ್ರದೇಶಗಳಲ್ಲಿ ಜೆಸಿಬಿ ಬಳಸಿ ಲಕ್ಷಾಂತರ ಟನ್ ಕೆಂಪುಮಣ್ಣು ತೆಗೆದು ಸಾಗಣೆ ಮಾಡಲಾಗುತ್ತಿದೆ. ಮಾಹಿತಿ ಮೇರೆಗೆ ಸ್ಥಳಕ್ಕೆ ಕೆ.ಆರ್.ಸಾಗರ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಭೇಟಿ ನೀಡಿ ಮಣ್ಣು ತೆಗೆಯದಂತೆ ತಿಳಿಸಿದ್ದರೂ ಅವರ ಮಾತಿಗೂ ಬೆಲೆ ಕೊಡದೆ ಪ್ರಭಾವ ಬಳಸಿ ಮಣ್ಣು ತೆಗೆಯಲಾಗುತ್ತಿದೆ.












Click it and Unblock the Notifications