ನಂದಿನಿ ಮೊಸರಿನ ಪ್ಯಾಕೇಟ್ ಮೇಲೆ ಹಿಂದಿಯ 'ದಹಿ' ಪದ ಮುದ್ರಣ ಆದೇಶ ವಾಪಾಸ್ : FSSAI
ಬೆಂಗಳೂರು ಮಾರ್ಚ್ 30: ನಂದಿನ ಪ್ರೋ ಬಯೋಟೆಕ್ ಮೊಸರಿನ ಪಾಕೇಟ್ ಮೇಲೆ ಹಿಂದಿ 'ದಹಿ' ಎಂದು ಬರೆದಿರುವುದರಿಂದ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟುವಿರೋಧ ವ್ಯಕ್ತವಾಗಿದೆ. ಇದು ಹಿಂದಿ ಹೇರಿಕೆ ಎಂದು ಆಕ್ಷೇಪ ವ್ಯಕ್ತವಾಗುತ್ತಿದ್ದಂತೆ ಮಹತ್ವದ ಆದೇಶವೊಂದು ಪ್ರಕಟವಾಗಿದೆ.
ಕನ್ನಡಿಗರ ಆಕ್ರೋಶ ಮಣಿದ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು (FSSAI) ಕರ್ನಾಟಕ ಹಾಲು ಉತ್ಪಾದನಾ ಒಕ್ಕೂಟಕ್ಕೆ (KMF)ಗೆ ನೀಡಿದ್ದ ಆದೇಶವನ್ನು ಗುರುವಾರ ಹಿಂಪಡೆದಿದೆ.

ನಂದಿನ ಪ್ರೋ ಬಯೋಟೆಕ್ ಮೊಸರಿನ ಪಾಕೇಟ್ ಮೇಲೆ ಹಿಂದಿ 'ದಹಿ' ಎಂದು ನಮೂದಿಸಲಾಗಿದೆ. ಪಾಕೇಟ್ ಮೇಲೆ ಕರ್ಡ್ ಜೊತೆಗೆ ಹಿಂದಿಯ 'ದಹಿ' ಪದ ಅಚ್ಚಾಗಿದೆ. ಇದರ ವಿರುದ್ಧ ಟೀಕೆ, ಖಂಡನೆಗಳು ವ್ಯಕ್ತವಾಗುತ್ತಿದ್ದಂತೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು (FSSAI) 'ಆಹಾರ ಸುರಕ್ಷತೆ ಮತ್ತು ಗುಣಮಟ್ಟಗಳು (ಆಹಾರ ಉತ್ಪನ್ನಗಳ ಗುಣಮಟ್ಟ ಮತ್ತು ಆಹಾರ ಸೇರ್ಪಡೆ) ನಿಯಮಗಳು 2011ರ ಅಡಿ ಪ್ಯಾಕೇಟ್ ಮೇಲಿನ 'ದಹಿ' ಪದ ಬಳಕೆ/ಅಚ್ಚು ನಿರ್ಧಾರವನ್ನು ಹಿಂಪಡೆದು ಆದೇಶಿಸಿದೆ.
ನಿಯಮಗಳು 2011ರ ನಿಯಮಗಳಲ್ಲಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಸಾಮಾನ್ಯ ಗುಣಮಟ್ಟ ಡೈರಿ ಉತ್ಪನ್ನಗಳ ನಾಮಕರಣದಲ್ಲಿ ಡೈರಿ ಪದ ಬಳಕೆ ಮಾರ್ಗಸೂಚಿಗಳ ಕುರಿತು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಅಲ್ಲದೇ ಡೈರಿ ಸಂಬಂಧಿವಲ್ಲದ ಉತ್ಪನ್ನಗಳ ಮೇಲೂ ಪದ ಬಳಕೆ ನಿಷಿದ್ಧ ಎಂದು ತಿಳಿಸಿದೆ.
ಈ ನಿಯಮಗಳ ಆಧಾರದಡಿ ಪ್ಯಾಕೇಟ್‌ನಲ್ಲಿ FPO ಲೇಬಲ್ ಜೊತೆಗೆ ಕನ್ನಡದ 'ಮೊಸರು' ಪದವನ್ನು ಬಳಸಬಹುದು. ದಹಿ ಪದ ಬಳಕೆ ಬೇಡ ಎಂದು ತಿಳಿಸುವ ಜೊತೆಗೆ ಕೆಂಎಫ್‌ಗೆ ನೀಡಿದ್ದ ಆದೇಶ ಹಿಂಪಡೆದಿದೆ.

ಎಚ್‌ಡಿ ಕುಮಾರಸ್ವಾಮಿ ಆಕ್ಷೇಪಣೆ: ಆಗಿದ್ದೇನು?
ನಂದಿನಿ ಪ್ರೋ ಬಯೋಟೆಕ್ ತಯಾರಿಸಿದ ಡೈರಿ ಉತ್ಪನ್ನವಾದ ಮೊಸರಿನ ಪ್ಯಾಕೇಟ್ ಮೇಲೆ ಇಂಗ್ಲಿಷ್‌ನ Curd ಜೊತೆಗೆ ಹಿಂದಿ ಪದ '(ದಹಿ)' ಎಂದು ಬರೆಯಲಾಗಿದೆ. ಇದರ ವಿರುದ್ಧ ಗುರುವಾರ ಬೆಳಗ್ಗೆ ಜೆಡಿಎಸ್ ನಾಯಕ ಮಾಜಿ ಸಿಎಂ ಎಚ್‌ಡಿ ಕುಮಾರ್ ಸ್ವಾಮಿಯವರು ಸರಣಿ ಟ್ವೀಟ್ ಮೂಲಕ ಬಿಜೆಪಿ ವಿರುದ್ಧ ಕೆಂಡ ಕಾರಿದ್ದರು.
ಸರಣಿ ಟ್ವೀಟ್‌ನಲ್ಲಿ ಕುಮಾರಸ್ವಾಮಿಯವರು, ಈ ನೆಲದಲ್ಲಿ ಹಿಂದಿ ಹೇರಿಕೆಗೆ ಕನ್ನಡಿಗರ ವಿರೋಧವಿದೆ ಎಂದು ಗೊತ್ತಿದ್ದರೂ ನಂದಿನಿ ಪ್ರೋ ಬಯೊಟಿಕ್ ಮೊಸರು ಪಾಕೆಟ್ ಮೇಲೆ ಹಿಂದಿಯ 'ದಹಿ' ಎಂದು ಮುದ್ರಿಸಿರುವುದು, ಅದನ್ನು ಕಡ್ಡಾಯವಾಗಿ ಮುದ್ರಿಸುವಂತೆ ಭಾರತೀಯ ಆಹಾರ ಸುರಕ್ಷತೆ, ಗುಣಮಟ್ಟ ಪ್ರಾಧಿಕಾರವು ಕೆಎಂಎಫ್ ಗೆ ಆದೇಶ ನೀಡಿರುವುದು ತಪ್ಪು. ಇದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಹೇಳಿದರು.
ನಂದಿನಿ ಎಂಬುದು ಈ ನೆಲದ ಕನ್ನಡಿಗರ ಆಸ್ತಿ, ಕನ್ನಡಿಗರ ಅಸ್ಮಿತೆ ಹಾಗೂ ಕನ್ನಡಿಗರ ಜೀವನಾಡಿ. ಇದೆಲ್ಲ ಗೊತ್ತಿದ್ದರೂ ಹಿಂದಿ ಹೇರಿಕೆಯ ಅಹಂ ಪ್ರದರ್ಶನವಾಗಿದೆ. ಈ ಹಿಂದೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಂಡ್ಯದ ಸಭೆಯಲ್ಲಿ ಗುಜರಾತಿನ ಅಮುಲ್ ಜತೆ ನಂದಿನಿಯನ್ನು ವಿಲೀನ ಮಾಡುವುದಾಗಿ ಹೇಳಿದ್ದರು. ಅಂದರೆ ಈಗ 'ದಹಿ'ಹಿಂದಿ ಪದ ಮುದ್ರಣ ನಂದಿನಿ ಹೈಜಾಕಿನ ಅರಂಭವೇ? ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಸರ್ಕಾರ ಆಹಾರ ಸುರಕ್ಷತಾ ಪ್ರಾಧಿಕಾರದ ಮೂಲಕ ಹಿಂಬಾಗಿಲಿನಿಂದ ಮೊಸರಿನ ಪಕ್ಕ 'ದಹಿ' ಮುದ್ರಿಸಿ ಕನ್ನಡಿಗರ ಸ್ವಾಭಿಮಾನಕ್ಕೆ ಸೆಡ್ಡು ಹೊಡೆದಿದೆ. ಇದು ಕನ್ನಡಿಗರ ಮೇಲೆ ಬಿಜೆಪಿಯ ದಮ್ಮು ತಾಕತ್ತಿನ ಪ್ರದರ್ಶನವೇ? ಎಂದು ಕಿಡಿ ಕಾರಿದ್ದಾರೆ. ನಿಧಾನವಾಗಿ ಹಿಂದಿ ಹೇರಿ ನಂದಿನಿ ಪದಾರ್ಥಗಳ ಹಳ್ಳ ಹಿಡಿಸುವ ಕೆಲಸವಾಗಲಿದೆ. ಬಳಿಕ ನಂದಿನಿ ಉತ್ಪನ್ನ ಮಾರಾಟವಾಗುತ್ತಿಲ್ಲ ಎಂದು ಹೇಳಿ ನಂದಿನಿಯನ್ನ ಅಮೂಲ್ ಜೊತೆಗೆ ಸಲೀಸಾಗಿ ಸೇರಿಸಿಕೊಳ್ಳುವ ಹುನ್ನಾರವೇ ಇದು ಎಂದು ದೂರಿದರು. ಈ ಕಾರಣದಿಂದ ಎಫ್‌ಎಸ್ಎಸ್ಎಐ ದಹಿ ಪದ ಮುದ್ರಣ ಕುರಿತು ನೀಡಿದ್ದ ಆದೇಶ ಹಿಂಪಡೆದಿದೆ.












Click it and Unblock the Notifications