ಉಪ ಚುನಾವಣೆ ಬಳಿಕ ಯಡಿಯೂರಪ್ಪ ಮುಖ್ಯಮಂತ್ರಿ ಹಾದಿ ಸುಗಮ?
Recommended Video
ಬೆಂಗಳೂರು, ಮೇ 09 : ಲೋಕಸಭಾ ಚುನಾವಣೆ ಫಲಿತಾಂಶದ ಬಳಿಕ ಕರ್ನಾಟಕದ ಮೈತ್ರಿ ಸರ್ಕಾರ ಪತನವಾಗಲಿದೆ ಎಂದು ಪ್ರತಿಪಕ್ಷ ಬಿಜೆಪಿ ನಾಯಕರು ಭವಿಷ್ಯ ಹೇಳುತ್ತಿದ್ದಾರೆ. ನಿಜಕ್ಕೂ ಮೈತ್ರಿಕೂಟಕ್ಕೆ ಲೋಕಸಭೆ ಮತ್ತು ಎರಡು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಅಗ್ನಿ ಪರೀಕ್ಷೆಯಾಗಲಿದೆ.
ಮತ್ತೊಮ್ಮೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಬೇಕು ಎಂಬ ಕೂಗು, ಕಾಂಗ್ರೆಸ್ ಪಕ್ಷದ ಕೆಲವು ಶಾಸಕರ ಅಸಮಾಧಾನ, ಲೋಕಸಭಾ ಚುನಾವಣೆ ಫಲಿತಾಂಶ ಎಲ್ಲವೂ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ಭವಿಷ್ಯ ನಿರ್ಧರಿಸಲಿವೆ.
2018ರ ಚುನಾವಣೆಯಲ್ಲಿ 104 ಸ್ಥಾನಗಳಲ್ಲಿ ಜಯಗಳಿಸಿ, ಸರ್ಕಾರ ರಚನೆ ಮಾಡಿ ಎರಡು ದಿನದಲ್ಲಿ ಪದತ್ಯಾಗ ಮಾಡಿದ ಬಿ.ಎಸ್.ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿಯಾಗಲಿದ್ದಾರೆಯೇ?. ಎರಡೂ ಉಪ ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ ರಾಜ್ಯದಲ್ಲಿ ಕಮಲ ಅರಳುವ ಸಾಧ್ಯತೆ ಹೆಚ್ಚು ಎಂಬುದು ಸದ್ಯ ಹಬ್ಬಿರುವ ಸುದ್ದಿ.
ಸಿ.ಎಸ್.ಶಿವಳ್ಳಿ ಅವರ ನಿಧನದಿಂದಾಗಿ ಧಾರವಾಡ ಜಿಲ್ಲೆಯ ಕುಂದಗೋಳ, ಡಾ.ಉಮೇಶ್ ಜಾಧವ್ ಅವರ ರಾಜೀನಾಮೆಯಿಂದಾಗಿ ಕಲಬುರಗಿ ಜಿಲ್ಲೆಯ ಚಿಂಚೋಳಿ ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ಎದುರಾಗಿದೆ. ಇದರಲ್ಲಿ ಯಾರು ಗೆಲ್ಲುತ್ತಾರೆ? ಎಂಬುದು ಸದ್ಯ ಕುತೂಹಲ ಮೂಡಿಸಿರುವ ಪ್ರಶ್ನೆ.....
ಗ್ಯಾಲರಿ: ಡಾ. ಅವಿನಾಶ್ ಜಾಧವ್ ಪರ ವಿ ಸೋಮಣ್ಣ ಪ್ರಚಾರ

ವಿಧಾನಸಭೆ ನಂಬರ್ ಗೇಮ್
ಕರ್ನಾಟಕ ವಿಧಾನಸಭೆಯಲ್ಲಿ ಪ್ರಸ್ತುತ ಕಾಂಗ್ರೆಸ್ 75 ಸದಸ್ಯ ಬಲ ಹೊಂದಿದೆ (ಸ್ಪೀಕರ್ ಹೊರತುಪಡಿಸಿ). ಜೆಡಿಎಸ್‌ನ 37 ಸದಸ್ಯರಿದ್ದಾರೆ. ಬಿಎಸ್‌ಪಿ, ಕೆಪಿಜೆಪಿಯ ಬೆಂಬಲ ಸಹ ಮೈತ್ರಿ ಸರ್ಕಾರಕ್ಕೆ ಇದೆ. ಮೈತ್ರಿಕೂಟದ ಒಟ್ಟು ಬಲ 114. ಪ್ರತಿಪಕ್ಷ ಬಿಜೆಪಿ 104 ಸದಸ್ಯ ಬಲವನ್ನು ಹೊಂದಿದೆ.

ಉಪ ಚುನಾವಣೆ ಲೆಕ್ಕಾಚಾರ
ಮೇ 19ರಂದು ನಡೆಯಲಿರುವ ಕುಂದಗೋಳ, ಚಿಂಚೋಳಿ ಉಪ ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ ಸದಸ್ಯ ಬಲ 106ಕ್ಕೆ ಏರಿಕೆಯಾಗಲಿದೆ. ಕಾಂಗ್ರೆಸ್ ನಾಯಕರ ವಿರುದ್ಧ ಅಸಮಾಧಾನಗೊಂಡಿರುವ ಮೂವರಕ್ಕೂ ಹೆಚ್ಚು ಶಾಸಕರಿದ್ದಾರೆ. ಇವರೆಲ್ಲಾ ಬಿಜೆಪಿ ಜೊತೆ ಕೈ ಜೋಡಿಸಿದರೆ ಸರ್ಕಾರ ರಚನೆ ಹಾದಿ ಸುಗಮ.

ಶಾಸಕರ ಬಲ ಕಡಿಮೆಯಾಗಲಿದೆ
ಕಾಂಗ್ರೆಸ್ ಶಾಸಕರಾದ ಕೃಷ್ಣ ಬೈರೇಗೌಡ (ಬೆಂಗಳೂರು ಉತ್ತರ), ಈಶ್ವರ ಖಂಡ್ರೆ (ಬೀದರ್), ರಾಘವೇಂದ್ರ ಹಿಟ್ನಾಳ್ (ಕೊಪ್ಪಳ) ಅವರು ಲೋಕಸಭಾ ಅಖಾಡದಲ್ಲಿದ್ದಾರೆ. ಮೇ 23ರಂದು ಫಲಿತಾಂಶ ಪ್ರಕಟವಾಗಲಿದೆ. ಒಂದು ವೇಳೆ ಮೂವರು ಗೆದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಆಗ ಮೈತ್ರಿಕೂಟದ ಬಲ ಮತ್ತೆ ಕಡಿಮೆಯಾಗಲಿದೆ.

ಕರ್ನಾಟಕ ಟಾರ್ಗೆಟ್
ಕೇಂದ್ರ ಬಿಜೆಪಿ ಪಾಲಿಗೆ ಈಗ ಕರ್ನಾಟಕ ಟಾರ್ಗೆಟ್. ಒಂದು ವೇಳೆ ಕೇಂದ್ರದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ರಾಜ್ಯ ಸರ್ಕಾರ ಕೆಡವಲು ತಂತ್ರ ಸಿದ್ಧವಾಗುವುದು ಖಚಿತ. ಆಪರೇಷನ್ ಕಮಲಕ್ಕೆ ಪುನಃ ಚಾಲನೆ ಸಿಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಮೈತ್ರಿಕೂಟ ಕೆಲವು ಶಾಸಕರು ಪ್ರತಿಪಕ್ಷದ ಪಾಳಯಕ್ಕೆ ಜಿಗಿದರೆ ರಾಜ್ಯ ಸರ್ಕಾರಕ್ಕೆ ಸಂಕಷ್ಟ ಎದುರಾಗಲಿದೆ.












Click it and Unblock the Notifications