ವಿಷ್ಣುವರ್ಧನ್ ಸ್ಮಾರಕ ನಿರ್ಮಾಣಕ್ಕೆ ಬದ್ಧ: ಕುಮಾರಸ್ವಾಮಿ
ಬೆಂಗಳೂರು, ನವೆಂಬರ್ 29: ವಿಷ್ಣುವರ್ಧನ್ ಸ್ಮಾರಕ ವಿಚಾರ ದಿನೇ ದಿನೇ ಬಿರುಸು ಪಡೆದುಕೊಳ್ಳುವುದು ಗಮನಿಸಿರುವ ಸಿಎಂ ಕುಮಾರಸ್ವಾಮಿ ಈ ಬಗ್ಗೆ ಇಂದು ಟ್ವೀಟ್ ಮಾಡಿ ಸ್ಪಷ್ಟನೆ ನೀಡಿದ್ದಾರೆ.
ವಿಷ್ಣುವರ್ಧನ್ ಅವರ ಸ್ಮಾರಕ ಕುರಿತ ವಿಚಾರದಲ್ಲಿ ಯಾವುದೇ ಗೊಂದಲ ಬೇಡ. ಡಾ ರಾಜಕುಮಾರ್, ವಿಷ್ಣುವರ್ಧನ್ ಹಾಗೂ ಅಂಬರೀಷ್ ರಂತಹ ಮಹನೀಯರನ್ನು ಸ್ಮರಿಸುವ ವಿಚಾರದಲ್ಲಿ ನಾನು ಬದ್ಧನಿದ್ದೇನೆ. ಎಂದು ಸಿಎಂ ಟ್ವೀಟ್ ಮೂಲಕ ಹೇಳಿದ್ದಾರೆ.
ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಅತಿ ಶೀಘ್ರದಲ್ಲಿ ವಿಷ್ಣುವರ್ಧನ್ ಅವರ ಸ್ಮಾರಕ ಕುರಿತು ನಿರ್ಧಾರ ಕೈಗೊಳ್ಳುತ್ತೇನೆ ಎಂದು ಸಹ ಕುಮಾರಸ್ವಾಮಿ ಭರವಸೆ ನೀಡಿದ್ದಾರೆ.
ಅಂಬರೀಶ್ ಅವರು ಕಾಲವಾದ ಬೆನ್ನಲ್ಲೆ ವಿಷ್ಣುವರ್ಧನ್ ಸ್ಮಾರಕ ಚರ್ಚೆ ಮುನ್ನೆಲೆಗೆ ಬಂದಿದ್ದು, ಭಾರಿ ಬಿರುಸು ಪಡೆದುಕೊಂಡಿದೆ. ಮೊನ್ನೆಯಷ್ಟೆ ಇದೇ ವಿಚಾರವಾಗಿ ವಿಷ್ಣುವರ್ಧನ್ ಅಳಿಯ, ನಟ ಅನಿರುದ್ ಅವರು ಕುಮಾರಸ್ವಾಮಿ ಅವರನ್ನು ಉಡಾಫೆ ಸಿಎಂ ಎಂದು ಕರೆದು ವಿವಾದ ಸೃಷ್ಟಿಸಿದ್ದರು. ಅದಕ್ಕೆ ಸಿಎಂ ಕೂಡಾ ಸಿಟ್ಟಿನ ಪ್ರತಿಕ್ರಿಯೆ ನೀಡಿದ್ದರು.
|
ಸಿಎಂ ಕುಮಾರಸ್ವಾಮಿ ಭರವಸೆ
ನಂತರ ರಂಗಕ್ಕೆ ವಿಷ್ಣು ಅವರು ಮಗಳು ಇಳಿದು ಸುದ್ದಿಗೋಷ್ಠಿ ನಡೆಸಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು. ಮಾಧ್ಯಮಗಳಲ್ಲಿ ಮತ್ತು ಅಭಿಮಾನಿಗಳಲ್ಲಿ ಸಹ ವಿಷ್ಣು ಸ್ಮಾರಕ ವಿಳಂಬದ ಬಗ್ಗೆ ಆಕ್ರೋಶ ಹೆಚ್ಚಾದ ಕಾರಣ ಸಿಎಂ ಅವರು ಇಂದು ಟ್ವೀಟ್ ಮೂಲಕ ಭರವಸೆ ನೀಡಿದ್ದಾರೆ.

ರಾಜ್‌ಕುಮಾರ್, ಅಂಬಿ ಪಕ್ಕದಲ್ಲೇ ವಿಷ್ಣು?
ರಾಜಕುಮಾರ್ ಸ್ಮಾರಕವಿರುವ ಕಂಠೀರವ ಸ್ಟುಡಿಯೋದಲ್ಲಿಯೇ ಅಂಬರೀಶ್ ಅಂತ್ಯಕ್ರಿಯೆಯಾಯಿತು. ಅಲ್ಲಿಯೇ ಅವರ ಸ್ಮಾರಕ ನಿರ್ಮಾಣ ಮಾಡುವುದಾಗಿ ಸಿಎಂ ಹೇಳಿದ್ದರು. ಅಲ್ಲದೆ ಅದೇ ಜಾಗದಲ್ಲಿ ವಿಷ್ಣು ಅವರ ಸ್ಮಾರಕ ನಿರ್ಮಾಣ ಮಾಡುವುದಾಗಿಯೂ ಹೇಳಿದ್ದರು ಆದರೆ ಇದಕ್ಕೆ ವಿಷ್ಣು ಅವರ ಕುಟುಂಬ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಅಭಿಮಾನ್ ಸ್ಟುಡಿಯೋದ ಕಾನೂನು ಸಮಸ್ಯೆ
ವಿಷ್ಣುವರ್ಧನ್ ಅವರ ಸ್ಮಾರಕವನ್ನು ಅಭಿಮಾನ್ ಸ್ಟುಡಿಯೋದಲ್ಲಿ ಮಾಡಲಾಗುತ್ತದೆ ಎಂಬ ಆಶಾವಾಧ ಇತ್ತು. ಆದರೆ ಅಲ್ಲಿ ಜಮೀನು ತಕಾರರಾದ ಕಾರಣ ಆ ಜಾಗದಲ್ಲಿ ಸ್ಮಾರಕ ಮಾಡಲಾಗದು ಎಂಬ ಸುದ್ದಿಯಿದೆ. ಪರ್ಯಾಯವಾಗಿ ಐದು ಸ್ಥಳಗಳನ್ನು ನಾವು ಸರ್ಕಾರಕ್ಕೆ ತೋರಿಸಿದ್ದೀವಿ ಆದರೆ ಯಾರೂ ಸಹ ಇದಕ್ಕೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿಲ್ಲ ಎಂಬುದು ವಿಷ್ಣು ಕುಟುಂಬದ ಆಕ್ರೋಶ.

ಕಂಠೀರವ ಸ್ಟುಡಿಯೋದಲ್ಲಿ ಬೇಡ
ಮೈಸೂರಿನಲ್ಲಿ ಸ್ಮಾರಕ ಮಾಡಿ ಅಥವಾ ನಾವು ತೋರಿಸಿದ ಐದು ಕಡೆಗಳಲ್ಲಿ ಸ್ಮಾರಕ ಮಾಡಿ ಎಂದು ವಿಷ್ಣುವರ್ಧನ್ ಕುಟುಂಬದವರು ಒತ್ತಾಯ ಮಾಡುತ್ತಿದ್ದಾರೆ. ಕಂಠೀರವ ಸ್ಟುಡಿಯೋದಲ್ಲಿ ಸ್ಮಾರಕ ನಿರ್ಮಿಸಿದರೆ ಕುಟುಂಬ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಎಂದು ಅನಿರುದ್ ಸ್ಪಷ್ಟಪಡಿಸಿದ್ದಾರೆ.











Click it and Unblock the Notifications