ಈ ಮಳೆಗಾಲದಲ್ಲೂ ಕುಕ್ಕೆ ಕ್ಷೇತ್ರ ಸುದ್ದಿಯಾಗುವುದು ಖಂಡಿತ
ಮುಜರಾಯಿ ಇಲಾಖೆ ಎನ್ನುವುದು ನಮ್ಮ ರಾಜಕಾರಣಿಗಳು ಇಷ್ಟಪಡದ ಖಾತೆ. ಹಾಗಾಗಿ, ಮುಜರಾಯಿ ಇಲಾಖಾ ವ್ಯಾಪ್ತಿಯ ದೇವಾಲಯಗಳಿಗೆ ಬರುವ ಭಕ್ತಾದಿಗಳಿಗೆ ಒದಗಿಸಬೇಕಾದ ಕನಿಷ್ಠ ಸೌಲಭ್ಯದ ಬಗ್ಗೆ ಉದಾಸೀನತೆ ತುಸು ಹೆಚ್ಚೇ. ಆದರೆ ಈ ದೇವಾಲಯಗಳಿಂದ ಬರುವ ಆದಾಯದ ಮೇಲೆ ಮಾತ್ರ ಹದ್ದಿನಕಣ್ಣು.
ರಾಜ್ಯದ ಮುಜರಾಯಿ ಇಲಾಖೆಯ ಅತ್ಯಂತ ಶ್ರೀಮಂತ ದೇವಾಲಯವೆಂದು ಹೆಸರುಗಳಿಸಿರುವುದು ನಾಡಿನ ಐತಿಹಾಸಿಕ ನಾಗಸನ್ನಿಧಿ ಕ್ಷೇತ್ರ ಕುಕ್ಕೆ ಸುಬ್ರಮಣ್ಯ. ವಾರ್ಷಿಕ ಆದಾಯದಲ್ಲಿ ಕಳೆದ ಕೆಲವು ವರ್ಷಗಳಿಂದ ನಂಬರ್ ಒನ್ ಸ್ಥಾನದಲ್ಲಿರುವ ಈ ಕ್ಷೇತ್ರಕ್ಕೆ ತಲುಪ ಬೇಕಾದರೆ ಕುಮಾರಧಾರಾ ನದಿ ಸೇತುವೆಯ ಮೂಲಕವೇ ಹಾದು ಬರಬೇಕು.

ಸದಾ ಜನಜಂಗುಳಿಯಿಂದ ಕೂಡಿರುವ ಈ ಕ್ಷೇತ್ರವನ್ನು ಜನರು ಮಳೆಗಾಲದಲ್ಲಿ ತಲುಪಬೇಕಾದಲ್ಲಿ ಪಡಬೇಕಾಗಿರುವ ಕಷ್ಟ ಅಷ್ಟಿಷ್ಟಲ್ಲ. ಇದು ಬರೀ ಯಾತ್ರಾಥಿಗಳ ತೊಂದರೆಯಲ್ಲ, ಅಲ್ಲಿನ ಗ್ರಾಮಸ್ಥರ, ಶಾಲಾಕಾಲೇಜು ವಿದ್ಯಾರ್ಥಿಗಳ ಪ್ರತೀ ಮಳೆಗಾಲದ ಸಮಸ್ಯೆ. (ರಾಜ್ಯದ ಶ್ರೀಮಂತ ದೇಗುಲಗಳ ಪಟ್ಟಿ)
ಕೊಲ್ಲಮೊಗ್ರ, ಹರಿಹರ ಪಲ್ಲತ್ತಡ್ಕ, ಬಾಳುಗೋಡು, ಐನೆಕಿದು, ಗುತ್ತಿಗಾರು, ಬಳ್ಪ, ಪಂಜ, ಬಿಳನೆಲೆ, ಕೈಕಂಬ ಮುಂತಾದೆ ಕುಕ್ಕೆ ಆಸುಪಾಸಿನ ಗ್ರಾಮದಲ್ಲಿ ಮಳೆ ಸತತವಾಗಿ ಸುರಿದರೆ ಸಾಕು, ಸೇತುವೆ ಜಲಾವೃತವಾಗುತ್ತದೆ. ಆ ಕಡೆ ಹೋಗಲಾದೆ, ಇತ್ತ ಬರಲಾಗದೇ ಜಿಲ್ಲಾಡಳಿತ ಪರ್ಯಾಯ ವ್ಯವಸ್ಥೆ (ಕಡಬ-ಪಂಜ -ಪುತ್ತೂರು ಮಾರ್ಗ) ಮಾಡುವ ತನಕ ಸ್ಥಳೀಯರು, ಯಾತ್ರಾರ್ಥಿಗಳು ಭಾರೀ ತೊಂದರೆಯನ್ನು ಅನುಭವಿಸುತ್ತಾರೆ.
ಮಳೆಗಾಲದ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಈ ಸೇತುವೆಯ ಬದಲಾಗಿ, ನದಿಗೆ ಇನ್ನೂ ಎತ್ತರವಾಗಿ ಇನ್ನೊಂದು ಸೇತುವೆ ನಿರ್ಮಿಸಬೇಕು ಎನ್ನುವ ಮನವಿಯನ್ನು ಸ್ಥಳೀಯರು, ದೇವಾಲಯಕ್ಕೆ ಸಂಬಂಧ ಪಟ್ಟವರು, ಜನಪ್ರತಿನಿಧಿಗಳು ಲೋಕೋಪಯೋಗಿ ಇಲಾಖೆಗೆ ಸಲ್ಲಿಸುತ್ತಲೇ ಬಂದಿದ್ದರು.

ಈ ಭಾಗದ ಜನರ ಮನವಿಗೆ ಕೊನೆಗೂ ಸ್ಪಂಧಿಸಿದ್ದ ನಮ್ಮ ಘನ ಸರಕಾರ ಸೇತುವೆ ಮೇಲ್ದರ್ಜೇಗಿರಿಸುವ ಕಾಮಗಾರಿಗೆ ವರ್ಷದ ಹಿಂದೆ ಚಾಲನೆ ನೀಡಿತ್ತು. ಕಳೆದ ಜನವರಿ 2014ರಲ್ಲಿ 'ಗುದ್ದಲಿಪೂಜೆ' ಭಾಗ್ಯ ಪಡೆದುಕೊಂಡಿದ್ದ ಈ ಯೋಜನೆಗೆ ಸರಕಾರದಿಂದ ಮಂಜೂರಾದ ಮೊತ್ತ 6.25 ಕೋಟಿ.
ಸೇತುವೆಗೆ ಬೃಹತ್ ಪಿಲ್ಲರ್ , ಕಾಂಕ್ರೀಟ್ ಸ್ಲ್ಯಾಬ್ ಅಳವಡಿಸುವ ಕಾರ್ಯ ತೀವ್ರಗತಿಯಲ್ಲಿ ಸಾಗುತ್ತಿದ್ದಾಗ ಮಳೆಗಾಲ ಆರಂಭವಾಯಿತು, ಹಾಗಾಗಿ ಕಾಮಗಾರಿ ಸಂಪೂರ್ಣ ಸ್ಥಗಿತಗೊಂಡಿತ್ತು. ಈಗ ಮತ್ತೆ ಇದರ ಕಾಮಗಾರಿ ಮರುಜೀವ ಪಡೆದುಕೊಂಡಿದೆ, ಆದರೆ ನಿರೀಕ್ಷಿತ ಮಟ್ಟದಲ್ಲಿ ಸೇತುವೆ ಕಾಮಗಾರಿ ನಡೆಯದೇ ಇರುವುದು ಅಸಮಾಧಾನಕರ ಸಂಗತಿ.
ಸ್ಥಳೀಯ ಶಾಸಕ ಅಂಗಾರ (ಸುಳ್ಯ ಕ್ಷೇತ್ರ) ಅವರ ವಿಶೇಷ ಪರಿಶ್ರಮದಿಂದ ಕಾಮಗಾರಿ ಯೋಜನೆಗೆ ಸರಕಾರ ಅಸ್ತು ಎಂದಿತ್ತು. ಆದರೆ ಈಗ ಸಾಗುತ್ತಿರುವ ವೇಗದಲ್ಲಿ ಕಾಮಗಾರಿ ಮುಂದುವರಿದರೆ ವಾಹನಸಂಚಾರಕ್ಕೆ ಸೇತುವೆ ಮುಕ್ತವಾಗಲು ಇನ್ನೂ 10-12 ತಿಂಗಳು ತಗಲುವುದು ಖಂಡಿತ. (ಕುಕ್ಕೇ ದೇಗುಲಕ್ಕೆ ISO ಸ್ಥಾನಮಾನ)
ಮಳೆಗಾಲ ಆರಂಭವಾಗಲು ಇನ್ನು ನಾಲ್ಕೈದು ತಿಂಗಳು ಇದೆ. ಈ ಐದು ತಿಂಗಳಲ್ಲಿ ಈ ಸೇತುವೆ ನಿರ್ಮಾಣ ಕಾರ್ಯ ಮುಕ್ತಾಯವಾಗುವುದು ಮೇಲ್ನೋಟಕ್ಕೆ ಕಷ್ಟ. ಹಾಗಾಗಿ, ಈ ಮಳೆಗಾಲದಲ್ಲೂ ಒಂದೆರಡು ದಿನ ಮಳೆ ಸುರಿಯುತ್ತಲೇ ಇದ್ದರೆ, ಕುಮಾರಧಾರ ಸೇತುವೆ ಮತ್ತೆ ಮುಳುಗಿ ಸುದ್ದಿಯಾಗುವುದು ಖಂಡಿತ.

ಸ್ಥಳೀಯ ಶಾಸಕ ಅಂಗಾರ ಅವರನ್ನು 'ಒನ್ ಇಂಡಿಯಾ' ಸಂಪರ್ಕಿಸಿದಾಗ ಅವರು ಹೇಳಿದಿಷ್ಟು, " ಈ ಕಾಮಗಾರಿ ಈ ವರ್ಷಾಂತ್ಯದಲ್ಲಿ ಮುಗಿಯಬಹುದು. ಸೇತುವೆ ಕೆಲಸವನ್ನು ಇನ್ನೂ ವೇಗವಾಗಿ ಮಾಡಲು ಸೂಚಿಸಿದ್ದೇನೆ. ಏಪ್ರಿಲ್ - ಮೇ ತಿಂಗಳಲ್ಲಿ ಸೇತುವೆ ಕೆಲಸ ಮುಗಿಸಿ ಕೊಡುತ್ತೇವೆಂದು ಗುತ್ತಿಗೆದಾರರು ಭರವಸೆ ನೀಡಿದ್ದಾರೆ. ಆದರೂ ವರ್ಷಾಂತ್ಯದಲ್ಲಿ ಸೇತುವೆ ವಾಹನ ಸಂಚಾರಕ್ಕೆ ಮುಕ್ತವಾಗಬಹುದು ಎನ್ನುವುದು ನನ್ನ ಖಚಿತ ಭರವಸೆಯ ಮಾತು' ಎಂದಿದ್ದಾರೆ.
ಈ ಬಾರಿಯ ಮಳೆಗಾಲದಲ್ಲೂ ಕುಕ್ಕೇ ಸುಬ್ರಮಣ್ಯ ಕ್ಷೇತ್ರಕ್ಕೆ ತೆರಳುವ ಭಕ್ತಾದಿಗಳಿಗೆ ತೊಂದರೆ ತಪ್ಪಿದ್ದಲ್ಲ ಎಂದು ಸದ್ಯ ಸಾಗುತ್ತಿರುವ ಕಾಮಗಾರಿಯ ವೇಗವನ್ನು ಉಲ್ಲೇಖಿಸಿ ಹೇಳಬಹುದಾಗಿದೆ.












Click it and Unblock the Notifications