ಬಿಜೆಪಿ ತೊರೆದಿದ್ದ ಎನ್. ವೈ. ಗೋಪಾಲಕೃಷ್ಣ ಕಾಂಗ್ರೆಸ್ ಸೇರ್ಪಡೆ
ಬೆಂಗಳೂರು, ಏಪ್ರಿಲ್ 03; ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆ ಆದ ಬಳಿಕ ಪಕ್ಷಾಂತರ ಪರ್ವ ಜೋರಾಗಿದೆ. ರಾಜ್ಯದ 224 ಕ್ಷೇತ್ರಗಳಿಗೆ ಮೇ 10ರ ಬುಧವಾರ ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಮೇ 13ರಂದು ಫಲಿತಾಂಶ ಪ್ರಕಟವಾಗಲಿದೆ. ಆಡಳಿತ ಪಕ್ಷ ಬಿಜೆಪಿ ತೊರೆಯುವ ಶಾಸಕರು ಸಹ ಇದ್ದಾರೆ.
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಕೂಡ್ಲಗಿಯ ಎನ್. ವೈ. ಗೋಪಾಲಕೃಷ್ಣ ಸೋಮವಾರ ಕಾಂಗ್ರೆಸ್ ಸೇರಿದರು. ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪಕ್ಷದ ಬಾವುಟ ನೀಡುವ ಮೂಲಕ ಎನ್. ವೈ. ಗೋಪಾಲಕೃಷ್ಣರನ್ನು ಬರಮಾಡಿಕೊಂಡರು.

ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಈ ಕುರಿತು ಟ್ವೀಟ್ ಮಾಡಿದ್ದು, 'ಕೂಡ್ಲಿಗಿ ಶಾಸಕರಾಗಿದ್ದ ಹಿರಿಯ ನಾಯಕರಾದ ಶ್ರೀ ಎನ್.ವೈ. ಗೋಪಾಲಕೃಷ್ಣ ಅವರು ಕಾಂಗ್ರೆಸ್ ತತ್ವ ಸಿದ್ಧಾಂತಗಳನ್ನು ನಂಬಿ ಇಂದು ಪಕ್ಷ ಸೇರ್ಪಡೆಯಾದರು. ಅವರನ್ನು ಆತ್ಮೀಯವಾಗಿ ಸ್ವಾಗತಿಸಿ, ಭವಿಷ್ಯದ ರಾಜಕೀಯ ಜೀವನ ಸುಖಮಯವಾಗಿರಲಿ ಎಂದು ಹಾರೈಸಿದೆ' ಎಂದು ಹೇಳಿದ್ದಾರೆ.
ಶಾಸಕ ಸ್ಥಾನಕ್ಕೆ ರಾಜೀನಾಮೆ; ಮಾರ್ಚ್ 31ರಂದು ಎನ್. ವೈ. ಗೋಪಾಲಕೃಷ್ಣ ಶಿರಸಿಯಲ್ಲಿ ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯನ್ನು ಗೃಹ ಕಚೇರಿಯಲ್ಲಿ ಭೇಟಿ ಮಾಡಿದ್ದರು. ಶಾಸಕ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಿದ್ದರು. ಮೊದಲು ಕಾಂಗ್ರೆಸ್ ಪಕ್ಷದಲ್ಲಿಯೇ ಇದ್ದ ಎನ್.ವೈ. ಗೋಪಾಲಕೃಷ್ಣ ನಾಲ್ಕು ಬಾರಿ ಶಾಸಕರಾಗಿದ್ದಾರೆ. 2018ರ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಕೈತಪ್ಪಿದ ಕಾರಣ ಬಿಜೆಪಿ ಸೇರ್ಪಡೆಯಾಗಿ ಟಿಕೆಟ್ ಪಡೆದು ಚುನಾವಣಾ ಕಣಕ್ಕಿಳಿದಿದ್ದರು. 50,085 ಮತಗಳನ್ನು ಪಡೆದು ಚುನಾವಣೆಯಲ್ಲಿ ಜಯಗಳಿಸಿದ್ದರು. ಈಗ ಪುನಃ ಕಾಂಗ್ರೆಸ್ ಸೇರಿದ್ದಾರೆ.

ಎನ್.ವೈ. ಗೋಪಾಲಕೃಷ್ಣ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದಂತೆಯೇ ಅವರು ಕಾಂಗ್ರೆಸ್ ಸೇರಲಿದ್ದಾರೆ ಎಂಬ ಸುದ್ದಿಗಳು ಹಬ್ಬಿದ್ದವು. ಆದರೆ ಅವರು ಕಾಂಗ್ರೆಸ್ ಸೇರಲು ವಿರೋಧ ವ್ಯಕ್ತವಾಗಿತ್ತು. ಈ ಬಾರಿಯ ಚುನಾವಣೆಯ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಬಿ. ಯೋಗೇಶ್ ಬಾಬು ಬೆಂಬಲಿಗರು ಸಿದ್ದರಾಮಯ್ಯ ನಿವಾಸದ ಮುಂದೆ ಪ್ರತಿಭಟನೆ ನಡೆಸಿದ್ದರು. ಎನ್.ವೈ. ಗೋಪಾಲಕೃಷ್ಣಗೆ ಟಿಕೆಟ್ ನೀಡಬಾರದು. ನಿರಂತರವಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿರುವ ಬಿ. ಯೋಗೇಶ್ ಬಾಬುಗೆ ಟಿಕೆಟ್ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದರು.
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರೂ ಅವರು ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರಲಿಲ್ಲ. ಬಳಿಕ ಮಾತನಾಡಿದ್ದ ಎನ್. ವೈ. ಗೋಪಾಲಕೃಷ್ಣ, "ನನಗೆ ವಯಸ್ಸಾಗಿದೆ ನಿವೃತ್ತಿ ಅವಶ್ಯಕ ಎಂದು ರಾಜೀನಾಮೆ ನೀಡಿದ್ದೇನೆ" ಎಂದು ಹೇಳಿದ್ದರು. ಆದರೆ ಅವರ ಸ್ವಗ್ರಾಮ ರಾಂಪುರದಲ್ಲಿ ಶಾಸಕರ ಬೆಂಬಲಿಗರು ಪಟಾಕಿ ಸಿಡಿಸಿ ಸಂಭ್ರಮಿಸಿದ್ದರು. ಈ ನಡೆ ಅವರು ಕಾಂಗ್ರೆಸ್ ಸೇರಲಿದ್ದಾರೆ ಎಂಬ ಸುದ್ದಿಗಳಿಗೆ ಪುಷ್ಠಿ ನೀಡಿತ್ತು.
ಕೂಡ್ಲಗಿ ಕ್ಷೇತ್ರದಲ್ಲಿ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ನಡೆದಿತ್ತು. ಆದ್ದರಿಂದ ಕ್ಷೇತ್ರವನ್ನು ಕಾಂಗ್ರೆಸ್ ಪ್ರತಿಷ್ಠೆಯಾಗಿ ತೆಗೆದುಕೊಂಡಿತ್ತು. ಈ ಬಾರಿಯ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಗೆಲ್ಲಲೇಬೇಕು ಎಂದು ಪಣತೊಟ್ಟಿತ್ತು. ಆದ್ದರಿಂದ ಟಿಕೆಟ್ ಘೋಷಣೆಯನ್ನು ತಡ ಮಾಡಿತ್ತು. ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಮಾಜಿ ಶಾಸಕ ನೇರ್ಲಗುಂಟೆ ತಿಪ್ಪೇಸ್ವಾಮಿ ಕೆಲವು ದಿನಗಳ ಹಿಂದೆ ಪಕ್ಷ ಬಿಟ್ಟಿದ್ದರು. ಬಳಿಕ ಕಾಂಗ್ರೆಸ್ ಟಿಕೆಟ್‌ಗೆ ಯೋಗೇಶ್ ಬಾಬು ಮತ್ತು ವಿ. ಎಸ್. ಉಗ್ರಪ್ಪ ಹೆಸರು ಕೇಳಿಬಂದಿತ್ತು.
ಕಾಂಗ್ರೆಸ್‌ನ ಟಿಕೆಟ್ ಸ್ಥಳೀಯರಿಗೆ ನೀಡಬೇಕು ಎಂಬ ಕೂಗು ಕೇಳಿ ಬಂದಿತ್ತು. ಆದ್ದರಿಂದ ಯೋಗೇಶ್ ಬಾಬುಗೆ ಟಿಕೆಟ್ ಸಿಗಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಎನ್. ವೈ. ಗೋಪಾಲಕೃಷ್ಣ ರಾಜೀನಾಮೆ ಎಲ್ಲಾ ಲೆಕ್ಕಾಚಾರಗಳನ್ನು ತಲೆಕೆಳಗು ಮಾಡಿದೆ. ಕಾಂಗ್ರೆಸ್ ಟಿಕೆಟ್ ಎನ್. ವೈ. ಗೋಪಾಲಕೃಷ್ಣಗೆ ಸಿಗಲಿದೆಯೇ? ಎಂದು ಕಾದು ನೋಡಬೇಕಿದೆ.











Click it and Unblock the Notifications