ಕುಡಚಿ–ಬಾಗಲಕೋಟೆ ರೈಲು ಮಾರ್ಗ 2019ಕ್ಕೆ ಪೂರ್ಣ
ಬಾಗಲಕೋಟೆ, ಜುಲೈ 23 : ಕುಡಚಿ-ಬಾಗಲಕೋಟೆ ರೈಲ್ವೆ ಮಾರ್ಗದ ಭೂಮಿ ಹಸ್ತಾಂತರಿಸುವ ಪ್ರಕ್ರಿಯೆ ಪೂರ್ಣಗೊಂಡಿದ್ದು, 2012ರ ನವೆಂಬರ್‌ನಿಂದ ಕಾಮಗಾರಿ ಆರಂಭವಾಗಿದೆ ಎಂದು ಮೂಲ ಸೌಲಭ್ಯ ಅಭಿವೃದ್ಧಿ ಸಚಿವ ರೋಷನ್ ಬೇಗ್ ಅವರು ವಿಧಾನಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ಹೇಳಿದ್ದಾರೆ.
ಬುಧವಾರದ ವಿಧಾನಸಭೆ ಕಲಾಪದಲ್ಲಿ ಜಮಖಂಡಿ ಕ್ಷೇತ್ರದ ಶಾಸಕ ಸಿದ್ದು ಬಿ. ನ್ಯಾಮಗೌಡ (ಕಾಂಗ್ರೆಸ್) ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ ಸಚಿವ ರೋಷನ್ ಬೇಗ್ ಅವರು, 2019-20ಕ್ಕೆ ಈ ಯೋಜನೆ ಪೂರ್ಣಗೊಳ್ಳುವ ಸಾಧ್ಯತೆ ಇದೆ ಎಂದು ರೈಲ್ವೆ ಇಲಾಖೆ ಹೇಳಿದೆ ಎಂದು ಮಾಹಿತಿ ನೀಡಿದರು. [ರೈಲ್ವೆ ತತ್ಕಾಲ್ ಬುಕಿಂಗ್ ಗೆ ಐಡಿ ಪ್ರೂಫ್ ಬೇಕಾಗಿಲ್ಲ]

ಪ್ರತಿ ವರ್ಷ ರಾಜ್ಯ ಸರ್ಕಾರದ ಪಾಲಿನ ಮೊತ್ತ ಮತ್ತು ರೈಲ್ವೆ ಇಲಾಖೆಯಿಂದ ಹಣವನ್ನು ಬಿಡುಗಡೆ ಮಾಡಲಾಗುತ್ತಿದೆ. ಈ ಯೋಜನೆಗಾಗಿ ಕಳೆದ 5 ವರ್ಷಗಳಲ್ಲಿ ರೈಲ್ವೆ ಇಲಾಖೆಯು 47.58 ಕೋಟಿ ರೂ., ರಾಜ್ಯ ಸರ್ಕಾರವು 190.81 ಕೋಟಿ ರೂ. ಗಳನ್ನು ಬಿಡುಗಡೆ ಮಾಡಿದೆ ಎಂದು ಸಚಿವರು ತಿಳಿಸಿದರು. [ರೈಲಿನ ಮೇಲೆ ವಿಶ್ವಾಸವಿಟ್ಟು ಮೋಸ ಹೋದೆ ಅಂದ ಯೋಧ]
ಯೋಜನೆಗಾಗಿ ಭೂಸ್ವಾಧೀನ ಮಾಡಿಕೊಳ್ಳುವ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ಸೂಕ್ತ ಪರಿಹಾರ ಹಕ್ಕು, ಪುನರ್ ನಿರ್ಮಾಣ ಮತ್ತು ಪುರ್ನವಸತಿ ಕಾಯ್ದೆ ಜಾರಿಗೆ ಬಂದಿರುವ ಕಾರಣ ಭೂಸ್ವಾಧೀನ ಪ್ರಕ್ರಿಯೆ ವಿಳಂಬವಾಗುತ್ತಿದೆ ಎಂದು ಸಚಿವರು ಹೇಳಿದರು. [ಬೆಂಗಳೂರು-ರಾಮನಗರ ನಡುವೆ 'ಡೆಮು' ರೈಲು ಸಂಚಾರ]
816 ಕೋಟಿ ಯೋಜನೆ : ಅಂದಹಾಗೆ ಬಾಗಲಕೋಟೆಯಿಂದ ಬೆಳಗಾವಿ ಕುಡಚಿಗೆ ರೈಲು ಸೇವೆ ಆರಂಭಿಸಬೇಕು ಎಂಬುದು ಈ ಭಾಗದ ಜನರ ಬಹುದಿನದ ಬೇಡಿಕೆ. ಸಮೀಕ್ಷೆ ಪ್ರಕಾರ ಈ ಮಾರ್ಗದ ರೈಲು ಸಂಚಾರದಿಂದ ಶೇ 20 ಆದಾಯ ಬರುತ್ತದೆ ಎಂದು ಅಂದಾಜಿಸಲಾಗಿದೆ. ಕೇಂದ್ರ ಸರ್ಕಾರ 2010ರ ರೈಲ್ವೆ ಬಜೆಟ್‌ನಲ್ಲಿ ಈ ಮಾರ್ಗ ನಿರ್ಮಾಣಕ್ಕೆ 816 ಕೋಟಿ ರೂ.ಗಳ ಅಂದಾಜು ಯೋಜನೆಗೆ ಒಪ್ಪಿಗೆ ನೀಡಿದೆ.
ಕುಡಚಿ-ಬಾಗಲಕೋಟೆ ನಡುವಿನ ಅಂತರ ಸುಮಾರು 141 ಕಿ.ಮೀ.ಗಳು. ಈ ಮಾರ್ಗದಲ್ಲಿ 10ಕ್ಕೂ ಹೆಚ್ಚು ಸಕ್ಕರೆ ಮತ್ತು 7 ಸಿಮೆಂಟ್ ಕಾರ್ಖಾನೆಗಳಿವೆ. ಆದ್ದರಿಂದ, ವಾಣಿಜ್ಯ ಉದ್ದೇಶಕ್ಕೂ ಮಾರ್ಗ ಬಳಕೆಯಾಗಲಿದೆ.












Click it and Unblock the Notifications