ಅಂತರರಾಜ್ಯ ಬಸ್ ಸೇವೆ; ಕೆಎಸ್ಆರ್‌ಟಿಸಿ ಮಹತ್ವದ ಪ್ರಕಟಣೆ
ಬೆಂಗಳೂರು, ಜೂನ್ 15 : ಅಂತರರಾಜ್ಯ ಬಸ್ ಸೇವೆ ಆರಂಭಿಸುವ ಕುರಿತು ಕೆಎಸ್ಆರ್‌ಟಿಸಿ ಮಹತ್ವದ ಪ್ರಕಟಣೆ ಹೊರಡಿಸಿದೆ. ಜೂನ್ 17ರಿಂದ ಆಂಧ್ರಪ್ರದೇಶಕ್ಕೆ ಬಸ್ ಸೇವೆಯನ್ನು ಆರಂಭಿಸಲಾಗುತ್ತದೆ ಎಂದು ಘೋಷಣೆ ಮಾಡಿದೆ.
Recommended Video
ಸೋಮವಾರ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಈ ಕುರಿತು ಪ್ರಕಟಣೆ ಹೊರಡಿಸಿದೆ. ಹಂತ-ಹಂತವಾಗಿ ಆಂಧ್ರಪ್ರದೇಶ ರಾಜ್ಯಕ್ಕೆ ಬಸ್ ಸೇವೆಯನ್ನು ಆರಂಭಿಸಲಾಗುತ್ತದೆ. ಮೊದಲ ಹಂತದ ಸೇವೆ ಜೂನ್ 17ರ ಬುಧವಾರ ಆರಂಭವಾಗಲಿದೆ ಎಂದು ಹೇಳಿದೆ.
ಪ್ರಯಾಣಿಕರ ಅನುಕೂಲಕ್ಕಾಗಿ ಮುಂಗಡ ಟಿಕೆಟ್ ಬುಕ್ಕಿಂಗ್ ಸೌಲಭ್ಯವನ್ನು ಆರಂಭಿಸಲಾಗಿದೆ. ಕೆಎಸ್ಆರ್‌ಟಿಸಿ ವೆಬ್ ಸೈಟ್, ನಿಗಮದ ಕೌಂಟರ್‌ಗಳಿಗೆ ಭೇಟಿ ನೀಡಿ ಟಿಕೆಟ್ ಕಾಯ್ದಿರಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಮಾರ್ಚ್‌ನಲ್ಲಿ ಲಾಕ್ ಡೌನ್ ಘೋಷಣೆಯಾದಾಗ ಅಂತರರಾಜ್ಯ ಬಸ್ ಸೇವೆಯನ್ನು ಕೆಎಸ್ಆರ್‌ಟಿಸಿ ನಿಲ್ಲಿಸಿತ್ತು. ಮೂರು ತಿಂಗಳ ಬಳಿಕ ಪುನಃ ಹಂತ-ಹಂತವಾಗಿ ಅಂತರರಾಜ್ಯ ಬಸ್ ಸೇವೆಗಳನ್ನು ನಿಗಮ ಆರಂಭ ಮಾಡುತ್ತಿದೆ.

ಅಂತರರಾಜ್ಯ ಬಸ್ ಸೇವೆ
ಬೆಂಗಳೂರು ನಗರದಿಂದ ಅನಂತಪುರ, ಹಿಂದೂಪುರ, ಕದ್ರಿ, ಪುಟ್ಟಪರ್ತಿ, ಕಲ್ಯಾಣದುರ್ಗ, ರಾಯದುರ್ಗ, ಕಡಪ, ಪ್ರೂದತ್ತೂರು, ಮಂತ್ರಾಲಯ, ತಿರುಪತಿ, ಚಿತ್ತೂರು, ಮದನಪಲ್ಲಿ, ನೆಲ್ಲೂರು ಮತ್ತು ವಿಜಯವಾಡಕ್ಕೆ ಬಸ್ ಸಂಚಾರ ನಡೆಸಲಿವೆ.

ಜಿಲ್ಲೆಗಳಿಂದಲೂ ಬಸ್
ಬಳ್ಳಾರಿ ಜಿಲ್ಲೆಯಿಂದ ವಿಜಯವಾಡ, ಅನಂತಪುರ, ಕರ್ನೂಲ್ ಮತ್ತು ಮಂತ್ರಾಲಯಕ್ಕೆ ಬಸ್ ಸಂಚಾರ ನಡೆಸಲಿದೆ. ರಾಯಚೂರಿನಿಂದ ಮಂತ್ರಾಲಯಕ್ಕೆ ಬಸ್ ಸಂಚಾರ ನಡೆಸಲಿದೆ ಎಂದು ಕೆಎಸ್ಆರ್‌ಟಿಸಿ ಹೇಳಿದೆ. ಶಾಹಪುರದಿಂದ ಮಂತ್ರಾಲಯ ಮತ್ತು ಕರ್ನೂಲ್‌ಗೆ ಬಸ್ ಸಂಚಾರ ನಡೆಸಲಿದೆ.

ಆಂಧ್ರದಿಂದಲೂ ಬಸ್ ಸೇವೆ
ಅತ್ತ ಆಂಧ್ರಪ್ರದೇಶದ ಸಾರಿಗೆ ನಿಗಮ ಸಹ ಜೂನ್ 17ರಿಂದ ಅಂತರರಾಜ್ಯ ಬಸ್ ಸೇವೆ ಆರಂಭಿಸಲಾಗುತ್ತದೆ ಎಂದು ಘೋಷಣೆ ಮಾಡಿದೆ. ಕರ್ನೂಲ್, ಚಿತ್ತೂರು, ಅನಂತಪುರ ಸೇರಿದಂತೆ ಜಿಲ್ಲಾ ಕೇಂದ್ರಗಳಿಂದ ಕರ್ನಾಟಕಕ್ಕೆ ಬಸ್ ಸಂಚಾರ ಆರಂಭವಾಗಲಿದೆ.

ಪ್ರಯಾಣಿಕರಿಗೆ ಸೂಚನೆ
ಅಂತರರಾಜ್ಯ ಬಸ್‌ಗಳಲ್ಲಿ ಸಂಚಾರ ನಡೆಸುವಾಗಲೂ ಸಾಮಾಜಿಕ ಅಂತರ ಕಾಪಾಡಬೇಕು. ಬಸ್ ಹತ್ತುವಾಗ ಮತ್ತು ಇಳಿಯುವಾಗ ಸ್ಯಾನಿಟೈಸರ್‌ನಿಂದ ಕೈಗಳನ್ನು ಸ್ವಚ್ಛಗೊಳಿಸಿಕೊಳ್ಳಬೇಕು. ಬಸ್‌ನಲ್ಲಿ ಸಂಚಾರ ನಡೆಸುವಾಗಲೂ ಮಾಸ್ಕ ಬಳಕೆ ಕಡ್ಡಾಯವಾಗಿದೆ.












Click it and Unblock the Notifications