KSRTC: ಐರಾವತ ಸೇರಿ 1314 ಬಸ್ ಪುನಶ್ಚೇತನ: ₹250 ಕೋಟಿ ಉಳಿತಾಯ! ಪ್ರಶಸ್ತಿಗಳು ಮುಡಿಗೆ
ಬೆಂಗಳೂರು, ಮಾರ್ಚ್ 1: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು (KSRTC) ಹೊಸ ಉಪಕ್ರಮಗಳ ಮೂಲಕ ಆದಾಯ ಹೆಚ್ಚಿಸಿಕೊಳ್ಳುತ್ತಿದೆ. ಪ್ರಯಾಣಿಕರಿಗೆ ಅತ್ಯುತ್ತಮ ಸಾರಿಗೆ ಸೇವೆ ನೀಡುತ್ತಿದೆ. ಈ ಕಾರಣದಿಂದಲೇ ನಿಗಮಕ್ಕೆ ಅನೇಕ ಪ್ರಶಸ್ತಿಗಳು ಲಭಿಸಿವೆ. ಮುಂಬೈ, ದೆಹಲಿ ಸೇರಿದಂತೆ ಈಗಾಗಲೇ ವಿವಿಧ ಕಡೆಗಳಲ್ಲಿ ಪ್ರಶಸ್ತಿ ಸ್ವೀಕರಿಸಿರುವ ನಿಗಮವು ಬಸ್‌ಗಳ ಪುನಶ್ಚೇತನದಿಂದ ರೂ. 250 ಕೋಟಿಗೂ ಅಧಿಕ ಹಣ ಉಳಿತಾಯ ಮಾಡಿದೆ.
ಹೌದು, ಗವರ್ನೆನ್ಸ್ ನೌ 11th (PSU)ರಾಷ್ಟ್ರೀಯ ಸಾರ್ವಜನಿಕ ಉದ್ದಿಮೆಗಳ ಪ್ರಶಸ್ತಿ ಮತ್ತು ನಾಯಕತ್ವ ಪ್ರಶಸ್ತಿ-2025 ಯನ್ನು ಶುಕ್ರವಾರ ದೆಹಲಿಯಲ್ಲಿ ಸ್ವೀಕರಿಸಿದ ಶುಭ ಸಂದರ್ಭದಲ್ಲಿ ಅಧಿಕಾರಿಗಳು ಈ ಮಾಹಿತಿ ನೀಡಿದ್ದಾರೆ. ನಿಗಮಕ್ಕೆ ಅತ್ಯುತ್ತಮ ಸೇವೆ ಸಲ್ಲಿಸಿರುವ ವ್ಯವಸ್ಥಾಪಕ ನಿರ್ದೇಶಕರಾದ ಅನ್ಬುಕುಮಾರ್ ಅವರಿಗೆ PSU ಆತ್ಮನಿರ್ಭರ್ ನಾಯಕತ್ವ ಪ್ರಶಸ್ತಿಯನ್ನು ಕೇಂದ್ರ ಕಲ್ಲಿದ್ದಲು ಮತ್ತು ಗಣಿ ರಾಜ್ಯ ಸಚಿವ ಸತೀಶ್ ಚಂದ್ರ ದುಬೆ ಅವರು ನೀಡಿ ಗೌರವಿಸಿದರು.

ಇತ್ತೀಚೆಚೆಗೆ KSRTC ಉಪ ಮುಖ್ಯ ಮೆಕಾನಿಕಲ್ ಇಂಜಿನಿಯರ್ ನಾಗರಾಜ ಮೂರ್ತಿ ಅವರಿಗೆ 5ನೇ ಗ್ರೀನ್ ಊರ್ಜಾ ಮತ್ತು ಎನರ್ಜಿ ಎಫಿಷಿಯನ್ಸಿ ಪ್ರಶಸ್ತಿ 2025 ನೀಡಿ ಗೌರವಸಿಸಲಾಗಿದೆ. ಇನ್ನೂ ಮುಂಬೈನಲ್ಲಿ ನಡೆದ ಸಮಾರಂಭದಲ್ಲಿ ನಿಗಮದ ವಿವಿಧ ಉಪಕ್ರಮಗಳಿಗೆ ''ಅತ್ಯುತ್ತಮ ಉದ್ಯೋಗದಾತ ಬ್ರಾಂಡ್, ಕಂಪನಿಯಲ್ಲಿ ಆರೋಗ್ಯ ನಿರ್ವಹಣೆಗೆ ಅತ್ಯುತ್ತಮ ಪ್ರಶಸ್ತಿ, ವ್ಯಾಪಾರ ನಾಯಕತ್ವ ಪ್ರಶಸ್ತಿ ವಿಶ್ವ ಆರೋಗ್ಯ ಸೇವಾ ಪ್ರಶಸ್ತಿ, ವಿಶ್ವ ನಾವೀನ್ಯತೆ ಪ್ರಶಸ್ತಿ, ಜಾಗತಿಕ ಉತ್ಪಾದನಾ ನಾಯಕತ್ವ ಪ್ರಶಸ್ತಿ ಮತ್ತು ಡಿಜಿಟಲ್ ತಂತ್ರಜ್ಞಾನ ಪ್ರಶಸ್ತಿ'' ಎಂಬ ಒಟ್ಟು 07 ಪ್ರಶಸ್ತಿಗಳು ಲಭಿಸಿವೆ.
KSRTC ಒಟ್ಟು 1314 ಬಸ್ಸುಗಳು ಪುನಶ್ಚೇತನ
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು (KSRTC) ಎಲೆಕ್ಟ್ರಿಕ್ ಸೇರಿದಂತೆ ಸಾವಿರಾರು ಬಸ್ ಖರೀದಿಸುತ್ತಿದೆ. ಈ ಮಧ್ಯೆ ಒಟ್ಟು 1314 ಬಸ್ಸುಗಳು ಪುನಶ್ಚೇತನಗೊಳಿಸಿದೆ. ಕರ್ನಾಟಕ ಸಾರಿಗೆ 1184 ಬಸ್‌ಗಳು, ನಗರ ಸಾರಿಗೆ 115, ಐರಾವತ ಕ್ಲಬ್ ಕ್ಲಾಸ್ 15 ಬಸ್ಸುಗಳನ್ನು ಸಹ ಪುನಶ್ಚೇತನಗೊಳಿಸಲಾಗಿದೆ. ಇದರಿಂದ ನಿಗಮಕ್ಕೆ ಬರೋಬ್ಬರಿ 250 ಕೋಟಿಗೂ ಹೆಚ್ಚು ಹಣ ನಿಗಮಕ್ಕೆ ಉಳಿತಾಯವಾಗಿದೆ.

ಸೂಕ್ತ ಬಸ್‌ಗಳಿಗೆ ಹೊಸ ರೂಪ
ಸದರಿ ಈ ಬಸ್‌ಗಳ ಪುನಶ್ಚೇತನ ಉಪಕ್ರಮವು ಆತ್ಮನಿರ್ಭರ್ ಭಾರತ್ ಪರಿಕಲ್ಪನೆಯಡಿ ಸ್ವಾವಲಂಬನೆಯನ್ನು ಉತ್ತೇಜಿಸುವ ಯೋಜನೆಯಾಗಿದೆ. ಸೂಕ್ತ ಬಸ್‌ಗಳ ಪುನಶ್ಚೇತನದಿಂದ ನಿಗಮಕ್ಕೆ ಆದಾಯ ಉಳಿಸಬಹುದಾಗಿದೆ ಎಂದು ನಿಗಮದ ಉಪಮುಖ್ಯ ಯಾಂತ್ರಿಕ ಅಭಿಯಂತರರು ಬಿ.ಎಸ್ ನಾಗರಾಜ ಮೂರ್ತಿ ಅವರು ತಿಳಿಸಿದ್ದಾರೆ. ಈಗಾಗಲೇ ಪುನಶ್ಚೇತನಗೊಂಡ ಕೆಲವು ಬಸ್‌ಗಳು ಹೊಸ ರೂಪದಲ್ಲಿ ರಸ್ತೆಗಿಳಿದಿವೆ. ಅವುಗಳಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಚಾಲನೆ ನೀಡಿದ್ದಾರೆ.












Click it and Unblock the Notifications