KSRTC Bus: ಟಿಕೆಟ್ ಇಲ್ಲದೇ ಸಂಚಾರ, ಪುರುಷ ಪ್ರಯಾಣಿಕರಿಂದ ಲಕ್ಷ ಲಕ್ಷ ದಂಡ ವಸೂಲಿ
ಬೆಂಗಳೂರು, ಜುಲೈ 23: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC)ಯು ರಾಜ್ಯದ ಮೂಲೆ ಮೂಲೆಗಳಲ್ಲಿ ಸಾರಿಗೆ ಸೇವೆ ನೀಡುತ್ತಿದೆ. ಕರ್ನಾಟಕ ಮಾತ್ರವಲ್ಲದೇ ಹೊರ ರಾಜ್ಯದವರೆಗೆ ಉತ್ತಮ ಸೇವೆ ನೀಡುವಲ್ಲಿ ಹೆಸರಾಗಿದೆ. ರಾಜ್ಯದಲ್ಲಿ ಶಕ್ತಿ ಯೋಜನೆ ಜಾರಿ ಇರುವ ಪ್ರಯುಕ್ತ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಇದೆ. ಆದರೆ ಪುರುಷರಿಗೆ ಆ ಸೌಲಭ್ಯ ಇಲ್ಲ. ಕೆಲವರು ಟಿಕೆಟ್ ಇಲ್ಲದೇ ಪ್ರಯಾಣಿಸಿ ಇದೀಗ ದಂಡ ತೆತ್ತಿದ್ದಾರೆ.
ಈ ಸಾರಿಗೆ ಬಸ್‌ನಲ್ಲಿ ಟಿಕೆಟ್ ರಹಿತ ಪ್ರಯಾಣ, ಕಳ್ಳತನದಂತೆ ಪ್ರಕರಣಗಳು ವರದಿ ಆಗಿವೆ. ಈ ಸಂಬಂಧ ಸಾರಿಗೆ ಇಲಾಖೆ ಅಧಿಕಾರಿಗಳು ನಿಗದಿತ ಮಾರ್ಗದ ಸಾವಿರಾರು ಬಸ್‌ಗಳನ್ನು ಜೂನ್ ತಿಂಗಳಲ್ಲಿ ಪರಿಶೀಲಿಸಿದ್ದಾರೆ. ಕಳೆದ ಒಂದೇ ತಿಂಗಳಲ್ಲಿ ಬರೋಬ್ಬರಿ 43126 ಬಸ್‌ಗಳನ್ನು ಅಧಿಕಾರಿಗಳು ಪರಿಶೀಲಿಸಿದ್ದ ಸೂಕ್ತ ಕ್ರಮ ಜರುಗಿಸಿದ್ದಾರೆ.

ಕೆಎಸ್‌ಆರ್‌ಟಿಸಿ ರಾಜ್ಯ ಮತ್ತು ನೆರೆಯ ರಾಜ್ಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ತನ್ನ ಸೇವೆಗಳ ಪರಿಶೀಲನೆ ವೇಳೆ 3522 ಕಳ್ಳತನ ಪ್ರಕರಣಗಳನ್ನು ಪತ್ತೆ ಮಾಡಲಾಗಿದೆ. ಬರೋಬ್ಬರಿ 3610 ಟಿಕೆಟ್ ಇಲ್ಲದೇ ಪ್ರಯಾಣಿಕರು ಸಂಚಾರ ಮಾಡುತ್ತಿರುವುದು ಇದೇ ವೇಳೆ ಪತ್ತೆ ಆಗಿದೆ.
ಈ ಟಿಕೆಟ್ ಇಲ್ಲದೇ ಪ್ರಯಾಣಿಸುವುದು ಕಾನೂನು ಬಾಹೀರ ಎಂದು ತಿಳಿ ಹೇಳಿರುವ ಅಧಿಕಾರಿಗಳು ಮುಂದೆ ಈ ರೀತಿ ಮಾಡದಂತೆ ಎಚ್ಚರಿಕೆ ಕೊಟ್ಟಿದ್ದಾರೆ. ಟಿಕೆಟ್ ಪಡೆಯದೇ ಪ್ರಯಾಣ ಮಾಡಿದ್ದಕ್ಕಾಗಿ ಆ ಪ್ರಯಾಣಿಕರಿಂದ ಒಟ್ಟು 5,97,517/- ರೂಪಾಯಿ ದಂಡ ಸಂಗ್ರಹಿಸಲಾಗಿದೆ.
ಇನ್ನೂ ಒಟ್ಟು 3522 ಕಳ್ಳತನ ಪ್ರಕರಣಳಿಂದ ರೂ.82,946/ ಮೊತ್ತವನ್ನು ಪತ್ತೆಹಚ್ಚಲಾಗಿದೆ. ತಪ್ಪಿತಸ್ಥ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗಿದೆ. ಸಾರ್ವಜನಿಕ ಬಸ್‌ಗಳಲ್ಲಿ ಪ್ರಯಾಣಿಕರು ಪ್ರಯಾಣಿಸುವಾಗ ಕಡ್ಡಾಯವಾಗಿ ಟಿಕೆಟ್ ಇಲ್ಲವೇ ಪಾಸ್ ಪಡೆಯಬೇಕು ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC)ಯು ಪ್ರಕಟಣೆ ಮೂಲಕ ಮನವಿ ಮಾಡಿಕೊಂಡಿದೆ.












Click it and Unblock the Notifications