ಪೀಣ್ಯ ನಿಲ್ದಾಣ ಮೆಜೆಸ್ಟಿಕ್‌ಗೆ ಸ್ಥಳಾಂತರ : ಸಚಿವರು ಹೇಳುವುದೇನು?
ಬೆಂಗಳೂರು, ಫೆ.4 : ಪೀಣ್ಯದಲ್ಲಿ ನಿರ್ಮಿಸಿರುವ ಕೆಎಸ್ಆರ್‌ಟಿಸಿಯ ಬಸವೇಶ್ವರ ಬಸ್ ನಿಲ್ದಾಣವನ್ನು ಮೆಜೆಸ್ಟಿಕ್‌ಗೆ ಮರು ಸ್ಥಳಾಂತರ ಮಾಡಲಾಗುತ್ತದೆ. 'ಮೆಜೆಸ್ಟಿಕ್‌ನಿಂದಲೇ ಬಸ್ ಓಡಿಸುವಂತೆ ಸಾರಿಗೆ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರು ಮನವಿ ಮಾಡಿದ್ದು, ಶೀಘ್ರದಲ್ಲಿಯೇ ತೀರ್ಮಾನ ಕೈಗೊಳ್ಳಲಾಗುತ್ತದೆ' ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.
ಬಸವೇಶ್ವರ ಬಸ್ ನಿಲ್ದಾಣದಿಂದ ಉತ್ತರ ಕರ್ನಾಟಕ ಭಾಗದ ಬಸ್ಸುಗಳನ್ನು ಓಡಿಸಲಾಗುತ್ತಿದೆ. ಇದರಿಂದ ಕಳೆದ ಮೂರು ತಿಂಗಳಲ್ಲಿ ಈಶಾನ್ಯ, ವಾಯುವ್ಯ ಸಾರಿಗೆ ಸಂಸ್ಥೆ ಸೇರಿದಂತೆ ಕೆಎಸ್‌ಆರ್‌ಟಿಸಿಗೆ ಸುಮಾರು 6 ರಿಂದ 7 ಕೋಟಿ ರೂ. ನಷ್ಟ ಉಂಟಾಗಿದೆ. ಆದ್ದರಿಂದ, ಸ್ಥಳಾಂತರ ಮಾಡಲು ಚಿಂತಿಸಲಾಗುತ್ತಿದೆ ಎಂದು ಸಚಿವರು ಹೇಳಿದ್ದಾರೆ. [ಪೀಣ್ಯದ ಬಸವೇಶ್ವರ ಬಸ್ ನಿಲ್ದಾಣ ಹೇಗಿದೆ ಗೊತ್ತೆ?]
2014ರ ಸೆಪ್ಟೆಂಬರ್ 10ನಲ್ಲಿ ಪೀಣ್ಯದ ಬಸವೇಶ್ವರ ಬಸ್ ನಿಲ್ದಾಣ ಕಾರ್ಯರಂಭ ಮಾಡಿತ್ತು. ಉತ್ತರ ಕರ್ನಾಟಕದ ನಾನಾ ಪ್ರದೇಶಗಳಿಗೆ ಕೆಂಪೇಗೌಡ ಬಸ್ ನಿಲ್ದಾಣದಿಂದ (ಮೆಜೆಸ್ಟಿಕ್) ಸಂಚರಿಸುತ್ತಿದ್ದ ಸಾಮಾನ್ಯ ಬಸ್ಸುಗಳನ್ನು ಪೀಣ್ಯ ನಿಲ್ದಾಣಕ್ಕೆ ಸ್ಥಳಾಂತರ ಮಾಡಲಾಗಿತ್ತು. ಬಸವೇಶ್ವರ ಬಸ್ ನಿಲ್ದಾಣಕ್ಕೆ ತೆರಳಲು ಕೆಎಸ್‌ಆರ್‌ಟಿಸಿ ಮೆಜೆಸ್ಟಿಕ್‌ನಿಂದ ಪೀಣ್ಯಕ್ಕೆ ಸಂಪರ್ಕ ಸಾರಿಗೆ ಬಸ್ ವ್ಯವಸ್ಥೆಯನ್ನು ಮಾಡಿತ್ತು. ಈಗ ಪುನಃ ಸ್ಥಳಾಂತರ ಮಾಡಲು ಮುಂದಾಗಿದೆ. ಬಸ್ ನಿಲ್ದಾಣ ಸ್ಥಳಾಂತರ, ಇಲ್ಲಿದೆ ವಿವರ

ಸುಮಾರು 40 ಕೋಟಿ ವೆಚ್ಚದ ನಿಲ್ದಾಣ
ನಗರದಲ್ಲಿ ಸಂಚಾರ ದಟ್ಟಣೆ ತಪ್ಪಿಸಲು ಸುಮಾರು 40 ಕೋಟಿ ರೂ.ವೆಚ್ಚದಲ್ಲಿ ಪೀಣ್ಯದಲ್ಲಿ ಬಸವೇಶ್ವರ ಬಸ್ ನಿಲ್ದಾಣ ನಿರ್ಮಿಸಲಾಗಿತ್ತು. ಸೆಪ್ಟೆಂಬರ್ 10 ರಿಂದ ಬಸವೇಶ್ವರ ಬಸ್ ನಿಲ್ದಾಣ ಕಾರ್ಯರಂಭ ಮಾಡಿತ್ತು. ಉತ್ತರ ಕರ್ನಾಟಕದ ನಾನಾ ಪ್ರದೇಶಗಳಿಗೆ ಮೆಜೆಸ್ಟಿಕ್‌ನಿಂದ ಸಂಚರಿಸುತ್ತಿದ್ದ ಸಾಮಾನ್ಯ ಬಸ್ಸುಗಳನ್ನು ಇಲ್ಲಿಗೆ ಸ್ಥಳಾಂತರ ಮಾಡಲಾಗಿತ್ತು.

ಕೆಎಸ್ಆರ್‌ಟಿಸಿಗೆ ನಷ್ಟ, ನಷ್ಟ, ನಷ್ಟ
ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಹೇಳುವ ಪ್ರಕಾರ ಈಶಾನ್ಯ ರಸ್ತೆ ಸಾರಿಗೆ ಸಂಸ್ಥೆಯ 116, ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಯ 86, ಕೆಎಸ್‌ಆರ್‌ಟಿಸಿಯ 101 ಹಾಗೂ ಮಹಾರಾಷ್ಟ್ರಕ್ಕೆ ತೆರಳುವ ಒಂದು ಅಂತಾರಾಜ್ಯ ಬಸ್ ಅನ್ನು ಪೀಣ್ಯಕ್ಕೆ ಸ್ಥಳಾಂತರಿಸಲಾಗಿತ್ತು. ಇದರಿಂದ ಮೂರು ನಿಗಮಗಳಿಗೆ ಮಾಸಿಕ ತಲಾ 70 ಲಕ್ಷ ರೂ. ನಷ್ಟ ಉಂಟಾಗುತ್ತಿದೆ.

ಸ್ಥಳಾಂತರಕ್ಕೆ ಸಾರಿಗೆ ನಿಗಮಗಳ ಮನವಿ
ಪೀಣ್ಯಕ್ಕೆ ನಿಲ್ದಾಣ ಸ್ಥಳಾಂತರವಾದ ನಂತರ ಈಶಾನ್ಯ, ವಾಯುವ್ಯ, ಹಾಗೂ ಕೆಎಸ್‌ಆರ್‌ಟಿಸಿಗೆ ಸುಮಾರು 6ರಿಂದ 7 ಕೋಟಿ ರೂ. ನಷ್ಟ ಉಂಟಾಗಿದೆ. ಆದ್ದರಿಂದ ಸಾರಿಗೆ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರು ಮೆಜೆಸ್ಟಿಕ್‌ಗೆ ಬಸ್ ನಿಲ್ದಾಣವನ್ನು ಸ್ಥಳಾಂತರ ಮಾಡುವಂತೆ ಕೋರಿದ್ದಾರೆ ಎಂದು ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.

ಪೀಣ್ಯ ನಿಲ್ದಾಣದ ಬಳಕೆ ಹೇಗೆ?
ಬಸವೇಶ್ವರ ಬಸ್ ನಿಲ್ದಾಣವನ್ನು ಬಳಕೆ ಮಾಡಿಕೊಳ್ಳಲಾಗುತ್ತದೆ. ಉತ್ತರ ಕರ್ನಾಟಕದ ಭಾಗಗಳಿಗೆ ಹೋಗುವ ಬಸ್ಸುಗಳು ಮೆಜೆಸ್ಟಿಕ್‌ನಿಂದಲೇ ಹೊರಟು ಪೀಣ್ಯ ನಿಲ್ದಾಣದ ಮೂಲಕ ತೆರಳಲಿವೆ. ಆ ಕಡೆಯಿಂದ ಬರುವ ಬಸ್‌ಗಳು ಕೂಡ ಪೀಣ್ಯ ನಿಲ್ದಾಣದ ಮೂಲಕ ಮೆಜೆಸ್ಟಿಕ್‌ನ ಪ್ರವೇಶಿಸಲಿವೆ. ನಿಲ್ದಾಣವನ್ನು ಸೂಕ್ತ ರೀತಿಯಲ್ಲಿ ಬಳಕೆ ಮಾಡಿಕೊಳ್ಳಲಾಗುತ್ತದೆ ಎಂದು ಸಚಿವರು ಹೇಳಿದ್ದಾರೆ.

ಖಾಸಗಿ ಬಸ್ಸುಗಳನ್ನು ಸ್ಥಳಾಂತರಿಸಿ
ಕೆಎಸ್‌ಆರ್‌ಟಿಸಿಯಂತೆ ಮೆಜೆಸ್ಟಿಕ್‌ನಿಂದ ಸಂಚರಿಸುವ ಖಾಸಗಿ ಬಸ್‌ಗಳನ್ನು ಸ್ಥಳಾಂತರ ಮಾಡಿ. ಇಲ್ಲವಾದಲ್ಲಿ ಸರ್ಕಾರಿ ಬಸ್‌ಗಳನ್ನು ಮೆಜೆಸ್ಟಿಕ್‌ಗೆ ಸ್ಥಳಾಂತರ ಮಾಡಲು ಅವಕಾಶ ಕೊಡಿ ಎಂದು ಸಾರಿಗೆ ಸಂಸ್ಥೆಯ ಅಧಿಕಾರಿಗಳು ಸಚಿವರಿಗೆ ಮನವಿ ಮಾಡಿದ್ದರು. ಈ ಬಗ್ಗೆ ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳುವುದಾಗಿ ಸಚಿವರು ಹೇಳಿದ್ದಾರೆ.

ಸಂಪರ್ಕ ಸಾರಿಗೆ ವ್ಯವಸ್ಥೆ ಮಾಡಲಾಗಿತ್ತು
ಬಸವೇಶ್ವರ ಬಸ್ ನಿಲ್ದಾಣಕ್ಕೆ ತೆರಳಲು ಕೆಎಸ್‌ಆರ್‌ಟಿಸಿ ಮೆಜೆಸ್ಟಿಕ್‌ನಿಂದ ಪೀಣ್ಯಕ್ಕೆ ಸಂಪರ್ಕ ಸಾರಿಗೆ ಬಸ್ ವ್ಯವಸ್ಥೆಯನ್ನು ಮಾಡಿತ್ತು. ಬೆಳಗ್ಗೆ 6 ಗಂಟೆಯಿಂದ ರಾತ್ರಿ 10ರ ತನಕ ಪ್ರತಿ 10-15 ನಿಮಿಷಕ್ಕೊಮ್ಮೆ ಬಸ್ ಮೆಜೆಸ್ಟಿಕ್‌ನಿಂದ ಪೀಣ್ಯಕ್ಕೆ ತೆರಳುತ್ತಿದೆ. 15 ರೂ. ಟಿಕೆಟ್ ದರ ನಿಗದಿಪಡಿಸಲಾಗಿದೆ.

ಯಾವ ಬಸ್ಸುಗಳು ಪೀಣ್ಯದಿಂದ ಸಂಚಾರ?
ಮೊದಲ ಹಂತದಲ್ಲಿ ಚಿತ್ರದುರ್ಗ, ಸಿರಿಗೆರೆ, ದಾವಣಗೆರೆ, ಹರಿಹರ, ಹರಪನಹಳ್ಳಿ, ಹೂವಿನಹಡಗಲಿ, ರಾಣೆಬೆನ್ನೂರು, ಹಿರೇಕೆರೂರು, ಬ್ಯಾಡಗಿ, ಹಾವೇರಿ ಮುಂತಾದ ಕಡೆ ಸಾಗುವ ಬಸ್ಸುಗಳನ್ನು ಸ್ಥಳಾಂತರ ಮಾಡಲಾಗಿತ್ತು. ನಂತರ
ಬಳ್ಳಾರಿ, ಹೊಸಪೇಟೆ, ಗಜೇಂದ್ರಗಡ, ಬೀಳಗಿ, ಮಂತ್ರಾಲಯ, ರಾಯದುರ್ಗ, ದೇವದುರ್ಗ, ಕುಷ್ಠಗಿ, ರಾಯಚೂರು ಮುಂತಾದ ಕಡೆ ಸಾಗುವ ಬಸ್ ಸ್ಥಳಾಂತರಿಸಲಾಗಿತ್ತು.

ಸಾಮಾನ್ಯ ಬಸ್ಸುಗಳು ಮಾತ್ರ ಸಂಚಾರ
ಪೀಣ್ಯದಲ್ಲಿನ ಬಸವೇಶ್ವರ ಬಸ್ ನಿಲ್ದಾಣಕ್ಕೆ ಸಾಮಾನ್ಯ ಬಸ್ಸುಗಳನ್ನು ಮಾತ್ರ ಸ್ಥಳಾಂತರ ಮಾಡಲಾಗಿತ್ತು. ರಾಜಹಂಸ, ಐರಾವತ ಮುಂತಾದ ಬಸ್ಸುಗಳು ಮೆಜೆಸ್ಟಿಕ್‌ನಿಂದಲೇ ಸಂಚರಿಸುತ್ತಿದ್ದವು. ಈ ಬಸ್ಸುಗಳು ಪೀಣ್ಯ ನಿಲ್ದಾಣಕ್ಕೂ ತೆರಳದೇ ನೇರವಾಗಿ ಸಾಗುತ್ತಿದ್ದವು.

ವಾಹನ ದಟ್ಟಣೆ ತಪ್ಪಿಸುವ ಉದ್ದೇಶ
ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಹೆಚ್ಚುತ್ತಿರುವ ವಾಹನದಟ್ಟಣೆ ತಪ್ಪಿಸಲು ಶಾಂತಿನಗರ, ಮೈಸೂರು ರಸ್ತೆಯ ಸ್ಯಾಟಲೈಟ್ ನಿಲ್ದಾಣದಂತೆ ಪೀಣ್ಯದಲ್ಲಿ ಬಸವೇಶ್ವರ ಬಸ್ ನಿಲ್ದಾಣ ನಿರ್ಮಿಸಲಾಗಿತ್ತು. ಸುಮಾರು 6 ಎಕರೆ ಪ್ರದೇಶದಲ್ಲಿ ಇದು ನಿರ್ಮಾಣಗೊಂಡಿದ್ದು 40 ಕೋಟಿ ವೆಚ್ಚವಾಗಿದೆ.

ಪೀಣ್ಯ ನಿಲ್ದಾಣ ಹೇಗಿದೆ ಗೊತ್ತಾ?
ಮೂರು ಮಹಡಿಯ ಪೀಣ್ಯದ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಅಗತ್ಯ ಮೂಲಭೂತ ಸೌಕರ್ಯ ಒದಗಿಸಲಾಗಿದೆ. ಮಾಲ್, ಅಂಗಡಿಗಳು ಇನ್ನು ತೆರೆಯುತ್ತಿವೆ. ಶೌಚಾಲಯ, ಕುಡಿಯುವ ನೀರು ಸೇರಿದಂತೆ ಪ್ರತಿಯೊಂದು ಸೌಲಭ್ಯಗಳು ಪ್ರಯಾಣಿಕರಿಗೆ ಲಭ್ಯವಿದೆ. ಆದರೆ, ಮುಖ್ಯ ರಸ್ತೆಯಿಂದ ದೂರವಿದೆ ಎಂಬುದು ಆರೋಪವಾಗಿದೆ. [ಪೀಣ್ಯ ಬಸ್ ನಿಲ್ದಾಣಕ್ಕೆ ಹೋಗುವುದು ಅನಿವಾರ್ಯ]












Click it and Unblock the Notifications