ಒಂದು ದಿನದ ಸಂಬಳ ಕೊಡಗಿಗೆ ನೀಡಿದ ಕೆಎಸ್‌ಆರ್‌ಟಿಸಿ ಸಿಬ್ಬಂದಿ
ಬೆಂಗಳೂರು, ಆಗಸ್ಟ್ 20: ಪ್ರವಾಹ ಪೀಡಿತ ಕೊಡಗಿನ ಜನರ ನೋವಿಗೆ ಸ್ಪಂದಿಸಿರುವ ರಾಜ್ಯ ರಸ್ತೆ ಸಾರಿಗೆ ಸಿಬ್ಬಂದಿ ನೆರೆ ಪೀಡಿತ ಜನರಿಗಾಗಿ ಉದಾರ ನೆರವು ನೀಡಿದ್ದಾರೆ.
ಕೆಎಸ್‌ಆರ್‌ಟಿಸಿಯ ನಾಲ್ಕೂ ನಿಗಮಗಳ ಎಲ್ಲ ಸಿಬ್ಬಂದಿ ತಮ್ಮ ಒಂದು ದಿನದ ಸಂಬಳವನ್ನು ಕೊಡಗಿನ ಸಹಾಯಕ್ಕೆಂದು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿದ್ದಾರೆ.
ಕೆಎಸ್‌ಆರಿಟಿಸಿಯ 1.16 ಲಕ್ಷ ಸಿಬ್ಬಂದಿಯ ಒಂದು ದಿನದ ವೇತನದ ಒಟ್ಟು ಮೊತ್ತ 11.80 ಕೋಟಿ ಆಗಲಿದೆ. ಈ ಬೃಹತ್ ಮೊತ್ತವನ್ನು ಅವರು ಪ್ರವಾಹ ಪೀಡಿತ ಕೊಡಗಿನ ಜನರ ಉಪಯೋಗಕ್ಕಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿದ್ದಾರೆ.

ಇತ್ತೀಚೆಗಷ್ಟೆ ಬಿಬಿಎಂಪಿ ಸದಸ್ಯರು ಸಹ ತಮ್ಮ ಒಂದು ತಿಂಗಳ ಸಂಬಳವನ್ನು ಕೊಡಗಿಗಾಗಿ ಕೊಟ್ಟಿದ್ದರು. ಅಲ್ಲದೆ ಬಿಬಿಎಂಪಿ ಸಿಬ್ಬಂದಿ ಸಹ ತಮ್ಮ ಒಂದು ದಿನದ ಸಂಬಳವನ್ನು ಕೊಡಗಿಗೆ ನೀಡಿದ್ದರು. ಜೆಡಿಎಸ್ ರಾಷ್ಟ್ರಾಧ್ಯಕ್ಷ ದೇವೇಗೌಡ ಸಹ ತಮ್ಮ ಒಂದು ತಿಂಗಳ ಸಂಬಳವನ್ನು ಕೊಡಗಿಗೆ ನೀಡುವುದಾಗಿ ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷವು ದೇಶದಾದ್ಯಂತ ತನ್ನ ಪಕ್ಷದ ಶಾಸಕರ, ಸಂಸದರ, ಪರಿಷತ್, ರಾಜ್ಯಸಭಾ ಸದಸ್ಯರ ಒಂದು ತಿಂಗಳ ಸಂಬಳವನ್ನು ಕೇರಳಕ್ಕೆ ನೀಡುತ್ತಿದೆ.












Click it and Unblock the Notifications